Monday, January 20, 2025
Monday, January 20, 2025

ತುಳುನಾಡಿನ ಅಪರೂಪದ ಮಾಣಿಕ್ಯ ಮುದ್ದು ಮೂಡುಬೆಳ್ಳೆ

ತುಳುನಾಡಿನ ಅಪರೂಪದ ಮಾಣಿಕ್ಯ ಮುದ್ದು ಮೂಡುಬೆಳ್ಳೆ

Date:

ಖ್ಯಾತ ಕವಿ, ಕಥೆಗಾರ, ವಿಮರ್ಶಕ, ಜಾನಪದ ಸಂಶೋಧಕ, ನಾಟಕಕಾರ, ಕಾದಂಬರಿಕಾರ ಹಾಗೂ ತುಳು ಭಾಷೆಯ ಬೆಳವಣಿಗೆಗೆ ಕೆಲಸ ಮಾಡಿದ ಶ್ರೀಯುತ ಮುದ್ದು ಮೂಡುಬೆಳ್ಳೆ ಇವರು ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಕಪ್ಪಂದಕರ್ಯ ಊರಿನವರು.

ಬಾಲ್ಯ ಮತ್ತು ಶಿಕ್ಷಣ: ದಿ.ಕುಪ್ಪ ಪೂಜಾರಿ ಮತ್ತು ತುಂಬೆಕ್ಕ ಅವರ ಆರು ಮಕ್ಕಳಲ್ಲಿ ಕೊನೆಯ ಕುವರನಾಗಿ ಕಪ್ಪಂದಕರ್ಯ ನದಿ ದಡದಲ್ಲಿದ್ದ ಮುಳಿ ಹುಲ್ಲಿನ ಮನೆಯಲ್ಲಿ ಇವರು ಜನಿಸಿದರು. ತಂದೆ – ತಾಯಿ ಅನಕ್ಷರಸ್ಥ ಕೃಷಿ ಕಾರ್ಮಿಕರಾಗಿದ್ದರೂ, ತಾಯಿ ತುಂಬೆಕ್ಕ ಮಾತ್ರ ನಾಟಿ ಗದ್ದೆಗಳಲ್ಲಿ ಪಾಡ್ದನ ಹಾಡುಗಾರ್ತಿಯಾಗಿ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದರು.

ತಮ್ಮ ಬಾಲ್ಯವನ್ನು ಬೆಳ್ಳೆ ಕಟ್ಟಿಂಗೇರಿ ಪ್ರದೇಶದಲ್ಲಿ ಕಳೆದಿರುವ ಇವರು ಪ್ರಾಥಮಿಕ ಶಿಕ್ಷಣವನ್ನು ಬೆಳ್ಳೆ ಚರ್ಚ್ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಸಂತ ಲಾರೆನ್ಸ್ ಹೈಸ್ಕೂಲ್ ಮೂಡುಬೆಳ್ಳೆ, ಪದವಿ ಪೂರ್ವ ಶಿಕ್ಷಣವನ್ನು ಎಂ.ಜಿ.ಎಂ ಕಾಲೇಜು ಉಡುಪಿ ಹಾಗೂ ಪಿ.ಪಿ.ಸಿ (ಸಂಧ್ಯಾ ಕಾಲೇಜು)ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಶಾಲಾ‌ ರಜಾ‌ ದಿನಗಳ‌ ಸಂದರ್ಭದಲ್ಲಿ ಬೆಳ್ಳೆ ಅಂಚೆ ಕಚೇರಿಯಿಂದ ಟಪ್ಪಾಲು ತರುವುದು, ಟೆಲಿಗ್ರಾಂ ವಿತರಿಸುವುದು ಹೀಗೆ ಹಂಗಾಮಿ ನೌಕರನಾಗಿ‌ ಕಾರ್ಯನಿರ್ವಹಿಸಿದ್ದು ಮಾತ್ರವಲ್ಲದೇ ಉಡುಪಿ, ಕಟಪಾಡಿ,‌ ಕಾರ್ಕಳ, ಹುಬ್ಬಳ್ಳಿ, ಮುಂಬಯಿ ಇನ್ನೂ ಮುಂತಾದೆಡೆ ಸುಮಾರು 4 ವರ್ಷಗಳ ಕಾಲ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನೋಪಾಯ ಮತ್ತು ಮನೆಯ ನಿರ್ವಹಣೆಗೆ ನೆರವಾದರು. ಮುಂದೆ ಕರ್ನಾಟಕ ಸರಕಾರ ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ದೊರೆತ ಸಂದರ್ಭದಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸಿದರು.

ತಮ್ಮ 14ನೇ ವಯಸ್ಸಿನಲ್ಲಿ ನಂದಾದೀಪ ಎಂಬ ಕಥೆಯನ್ನು ಬರೆಯುವ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವ ಇವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಎಂ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪೂರ್ಣಗೊಳಿಸಿದ್ದು ಮಾತ್ರವಲ್ಲದೇ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮತ್ತು ಕೊಂಕಣಿ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿಯನ್ನು ಪಡೆದಿರುತ್ತಾರೆ.

ಮುದ್ದು ಮೂಡುಬೆಳ್ಳೆಯವರು ಎಸ್ಸೆಸ್ಸೆಲ್ಸಿ ಯಲ್ಲಿ ಪ್ರಥಮ ಶ್ರೇಣಿ ಅಂಕ ಗಳಿಸಿದ್ದರಿಂದ 1976 ರಲ್ಲಿ ಕರ್ನಾಟಕ ಸರಕಾರ ನ್ಯಾಯಾಂಗ ಇಲಾಖೆಯಲ್ಲಿ ನೌಕರಿ ದೊರೆತು 9 ವರ್ಷಗಳ ಕಾಲ ಸೇವೆಗೈದರು. 1984ರಲ್ಲಿ ಕೇಂದ್ರ ಪ್ರಸಾರ ಇಲಾಖೆಯ ಆಕಾಶವಾಣಿಗೆ ಆಯ್ಕೆಗೊಂಡು ಮಂಗಳೂರು ಆಕಾಶವಾಣಿಯಲ್ಲಿ ಹಿರಿಯ ಶ್ರೇಣಿಯ ಪ್ರಸಾರಕನಾಗಿ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತರಾದರು. ತದನಂತರ ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲಾಡಳಿತದ ಮಂಗಳೂರು ದರ್ಶನ ಗ್ರಂಥ ಸಂಪುಟದ ಉಪಸಂಪಾದಕರಾಗಿದ್ದು ನಂತರ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣಗುರು ಅಧ್ಯಯನ ಪೀಠದ ಪ್ರಥಮ ನಿರ್ದೇಶಕರಾಗಿಯೂ‌ ಸೇವೆ ಸಲ್ಲಿಸಿರುತ್ತಾರೆ.

ತಮ್ಮ ಎಳೆವಯಸ್ಸಿನಲ್ಲಿಂದಲೂ ಸಾಹಿತ್ಯ, ಸಂಗೀತ, ರಂಗಭೂಮಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಛಾಪು ಮೂಡಿಸಿರುವ ಇವರು ಕನ್ನಡ ಮತ್ತು ತುಳು ಭಾಷೆಯಲ್ಲಿ 8 ಕಥಾ ಸಂಕಲನ, 4 ಕವನ ಸಂಕಲನ ಮತ್ತು 3 ಕಾದಂಬರಿ ಸೇರಿದಂತೆ ಸುಮಾರು 40 ವಿವಿಧ ಪ್ರಕಾರದ ಸಂಶೋಧನಾ ಕೃತಿ ಹಾಗೂ ಅಧ್ಯಯನ ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ 65ಕ್ಕೂ ಹೆಚ್ಚಿನ ಕೃತಿಗಳ ಸಂಪಾದಕೀಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿ ಪ್ರಸಾರಕ್ಕಾಗಿ ಸುಮಾರು 150ರಷ್ಟು ಕನ್ನಡ, ತುಳು ನಾಟಕ ರೂಪಕಗಳನ್ನು ನಿರ್ಮಿಸಿದ್ದಾರೆ.

ಪ್ರಮುಖ ಕೃತಿಗಳು: ‘ಉದಿಪು’, ‘ಒಸಯೋ’, ‘ಜಾನಪದ ಇನೆರೂಪಕೊಲು’, ‘ನಮ ಎಡ್ಡೆನಾ ಊರೆಡ್ದೆ’, ‘ಪೂವರಿ’, ‘ಸತ್ಯದ ಸುರಿಯ ಸಾಯದ ಪಗರಿ, ‘ಪದ್ದೆಯಿ’, “ಕನ್ನೆಗ”, “ಮೂಲ್ಕಿ ಸೀಮೆಯ ಅವಳಿ ವೀರರು ಕಾಂತಬಾರೆ ಬೂದಬಾರೆ”, “ತುಳು ರಂಗಭೂಮಿ”, ‘ಬಜಿಲ್-ಬನ್ನಂಗಾಯಿ’ ಪ್ರಮುಖ ಕೃತಿಗಳಾಗಿದ್ದು, ತುಳು ಸಂಪಾದಿತಗಳಾದ- ‘ಪರ್ವ ಪರ್ಬದ ಪೊರ್ಲು ಕಬಿತೆಲು’, ‘ಅಪ್ಪೋದಡ್ಯೆ’, ಸಾಹಿತ್ಯ ಸಿರಿ ಮುಂತಾದವು ಪ್ರಮುಖವಾಗಿವೆ. ಕನ್ನಡ ಕೃತಿಗಳಾದ ‘ಚೆರಾನ್ ರಹಸ್ಯ’, ‘ಗೂಢ ಮತ್ತು ಇತರ ಕಥೆಗಳು’, ‘ಮೆಟ್ಟಿಲುಗಳು’ ‘ಮೂಡುಬೆಳ್ಳೆ ಕಥೆಗಳು’ ಮುಂತಾದವು ಪ್ರಸಿದ್ಧವಾಗಿವೆ.

ಹಲವು ಭಾಷೆಗಳಲ್ಲಿ ಪರಿಣತಿಯೊಂದಿಗೆ ಉತ್ತಮ ಅನುವಾದಕರೂ ಆಗಿದ್ದು ಕೊಂಕಣಿ, ಕನ್ನಡ, ಹಿಂದಿ ಭಾಷೆಗಳಿಂದ ಯು. ಶ್ರೀನಿವಾಸ ಮಲ್ಯ ಮುಂತಾದ ಹಲವು ಕೃತಿಗಳು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಡಾ. ಸಿದ್ಧಲಿಂಗಯ್ಯ ಆತ್ಮಕಥನ ‘ಊರು ಕೇರಿ’ ಯನ್ನು ತುಳುವಿಗೆ ಅನುವಾದಿಸಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಶಿವದೂತೆ ಗುಳಿಗೆ ನಾಟಕದ ಕನ್ನಡ ಅನುವಾದಕರಾಗಿರುವ ಇವರು ದಿ|ವಿಶು ಕುಮಾರರ ಕೋಟಿ ಚೆನ್ನಯ ಚಿತ್ರ ಹಾಗೂ 2 ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

2002-2004ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಸಾಹಿತ್ಯ ಸಂಸ್ಕೃತಿ ವೇದಿಕೆ-ಬೆಳ್ಳೆ ಇದರ ಸ್ಥಾಪಕರಾಗಿದ್ದು, 2010-12ರಲ್ಲಿ ಕೇಂದ್ರೀಯ ವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ನವರಂಗ ಯುವಕ ಮಂಡಲ ಕಟ್ಟಿಂಗೇರಿಯ ಮಾಜಿ ಕಾರ್ಯದರ್ಶಿಯಾಗಿದ್ದರು ಹಾಗೂ ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇದರ ಜೊತೆ ಕಾರ್ಯದರ್ಶಿಯಾಗಿದ್ದ ಇವರು ಮೂಡುಬೆಳ್ಳೆ ಗೀತಾ ಮಂದಿರದ ಸ್ಥಾಪಕ ಕಾಲದ ಸದಸ್ಯರಾಗಿದ್ದರು. 2018ರಲ್ಲಿ ಉಡುಪಿ ಜಿಲ್ಲಾ ಕಾಪು ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯದ ಅಧ್ಯಕ್ಷರಾಗಿದ್ದರು.

ಪ್ರಶಸ್ತಿ ಪುರಸ್ಕಾರಗಳು: ಶ್ರೀಯುತರಿಗೆ ‘ಭಾರತೀಯ ಜೇಸಿಸ್ ಪ್ರಶಸ್ತಿ’, ‘ಮಾಸ್ತಿ ಕಥಾ ಪ್ರಶಸ್ತಿ’, ‘ಗೊರೂರು ಸಾಹಿತ್ಯ ಪುರಸ್ಕಾರ’, ‘ತುಳು ಅಕಾಡೆಮಿ ಗೌರವ ಪ್ರಶಸ್ತಿ, ಪಣಿಯಾಡಿ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ‘ಆಕಾಶವಾಣಿ ರಾಜ್ಯ ಮತ್ತು ರಾಷ್ಟ್ರೀಯ’ ಪ್ರಶಸ್ತಿ ಲಭಿಸಿದೆ. ಹಾಗೆಯೇ ಇವರಿಂದ ರಚಿತವಾದ ತುಳು ಮೂಲದ ರೂಪಕ ‘ಪದ ಪಾಡ್ದನ ಪನ್ಪನಾ’ ರಚನೆ – ನಿರೂಪಣೆ – ನಿರ್ಮಾಣಕ್ಕೆ 2013ರಲ್ಲಿ ‘ರಾಷ್ಟ್ರೀಯ’ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಅನೇಕ ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಸಹಕಾರ ನೀಡಿರುವ ಮುದ್ದು ಮೂಡುಬೆಳ್ಳೆಯವರು ಸಾಮಾನ್ಯರಂತೆ ಕಂಡರೂ ಅಗಾಧ ಜ್ಞಾನ ಹೊಂದಿರುವ ಇವರು ತುಳುನಾಡಿನ ಮಾಣಿಕ್ಯವೇ ಸರಿ.

ಶ್ರಾವ್ಯಾ ಆಚಾರ್ಯ, ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ

ಉಡುಪಿ, ಜ.20: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರು ಜಿಲ್ಲಾ...

ಸಂಸ್ಕಾರಭರಿತ ಶಿಕ್ಷಣಕ್ಕೆ ಸೇವಾ ಸಂಗಮದ ಕಾರ್ಯ ಶ್ಲಾಘನೀಯ: ಕೆ.ಅನಂತಪದ್ಮನಾಭ ಐತಾಳ್

ಕೋಟ, ಜ.20: ಸೇವಾ ಸಂಗಮ ಶಿಶು ಮಂದಿರ ಸಂಸ್ಕಾರಭರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ....

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...
error: Content is protected !!