Monday, November 25, 2024
Monday, November 25, 2024

ಹೊಂಬಾಳೆ ಬೆಳೆದ ‘ಬೆಳೆ’ ಚಿತ್ರ ಮಂದಿರಗಳಿಗೆ ಜೀವಕಳೆ!

ಹೊಂಬಾಳೆ ಬೆಳೆದ ‘ಬೆಳೆ’ ಚಿತ್ರ ಮಂದಿರಗಳಿಗೆ ಜೀವಕಳೆ!

Date:

ಕೋವಿಡ್ ನಂತರ ವ್ಯವಹಾರ, ಉದ್ಯಮಗಳು ಚೇತರಿಕೆ ಕಾಣುತ್ತಿರುವ ನಡುವೆ ಕನ್ನಡ ಚಿತ್ರೋದ್ಯಮಕ್ಕೆ ಟಾನಿಕ್ ಕೊಟ್ಟಿದ್ದು ಕೆ.ಜಿ.ಎಫ್೨, ವಿಕ್ರಾಂತ್ ರೋಣ, ಚಾರ್ಲಿ, ಗರುಡಗಮನ ವೃಷಭವಾಹನ ಮೊದಲಾದ ಚಿತ್ರಗಳು. ಕನ್ನಡದ ಪಾನ್ ಇಂಡಿಯಾ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ್ದು ಇದೇ ಚಿತ್ರಗಳು. ಅಲ್ಲಿಯ ತನಕ ಚಿತ್ರರಂಗ ಹಾಗೂ ಚಿತ್ರ ಮಂದಿರಗಳಿಗೆ ಇದೇ ಒಂದು ಇತಿಹಾಸ ಆಗಿತ್ತು.

ಈ ಚಿತ್ರಗಳು ಕನ್ನಡ ನಿರ್ಮಾಪಕರಿಗೆ, ವಿತರಕರಿಗೆ, ಥೀಯೇಟರ್ ಮಾಲಿಕರಿಗೆ ಒಂದಷ್ಟು ಜೇಬು ತುಂಬಿಸಿತ್ತು! ಆದರೆ ಅದರ ನಂತರ ಬಂದ ‘ಕಾಂತಾರ’ ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಯಾವುದೇ ಪ್ರಚಾರ ಗಿಮಿಕ್ ಇಲ್ಲದೆ ಪಾನ್ ಇಂಡಿಯಾ ಲೆವೆಲಿನಲ್ಲಿ ಸದ್ದು ಮಾಡುತ್ತಿದೆ.

ನಮ್ಮ ಕುಂದಾಪುರದ ಪ್ರತಿಭೆ ರಿಷಭ್ ಶೆಟ್ಟರು ರಾತೋರಾತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಆಗಿ ಮಿಂಚಿ ಬಿಟ್ಟರು. ಕನ್ನಡಕ್ಕೊಂದು ಮೆರುಗು ತಂದುಕೊಟ್ಟರು. ಜೊತೆಗೆ ಈ ಚಿತ್ರ ಸರ್ಕಾರದ ಕಣ್ಣು ತೆರೆಸಿ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ತಿಂಗಳಿಗೆ ರೂ. 2000 ಮಾಶಾಸನ ಸಿಗುವುದಕ್ಕೂ ಕಾರಣವಾಗಿ ಹೋಯಿತು.

ಅಲ್ಲದೆ ಚಿತ್ರದಲ್ಲಿ ನಟಿಸಿದ ಸಣ್ಣ ಸಣ್ಣ ಪಾತ್ರಗಳು ಗಮನ ಸೆಳೆದು ಒಂದಷ್ಟು ಕಲಾವಿದರಿಗೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬಲ್ಲ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ನಡುವೆ ನಮ್ಮ ಕುಂದಾಪುರ, ಬೈಂದೂರಿನ ಜನ ಚಿತ್ರಮಂದಿರಗಳತ್ತ ಮುಖ ಮಾಡುವುದೇ ಕಮ್ಮಿ.

ನಾನು ಕಂಡಂತೆ ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ ಶುಕ್ರವಾರ ಯಾವುದೋ ಒಬ್ಬ ಸ್ಟಾರ್ ನಟನ ಚಿತ್ರ ತೆರೆಕಂಡರೆ ವಾರದ ಶನಿವಾರ ಭಾನುವಾರ ಎರಡೇ ದಿನ ಜನ ಜಂಗುಳಿಯ ಪ್ರದರ್ಶನ ಕಂಡು ಎರಡನೆ ವಾರಕ್ಕೆ ಎತ್ತಂಗಡಿಯಾಗುತ್ತಿತ್ತು! ಕನ್ನಡ ಸಿನಿಮಾ ಪ್ರೇಮಿಗಳಾಗಿ ಇದು ನಾವು ಕಂಡ ಸತ್ಯ. ಅದು ಕೂಡ ಬೈಂದೂರಿನ ಶಂಕರ್ ಚಿತ್ರ ಮಂದಿರದಲ್ಲಿ ಚಿತ್ರ ವೀಕ್ಷಿಸಲು ಬರುವವರು ಬೈಂದೂರಿನಿಂದ ಮರವಂತೆ ತನಕದ ಆಸುಪಾಸಿನ ಬೆರಳೆಣಿಕೆಯಷ್ಟು ಜನರು ಜೊತೆಗೆ ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಂದ ಮಧ್ಯಾಹ್ನ ಹಾಗೂ ಸಂಜೆಯ ಶೋಗಳು ಒಂದಷ್ಟು ಪ್ರದರ್ಶನ ಕಾಣುತ್ತದೆ. ಆದರೆ ಯಾವುದೇ ಸ್ಟಾರ್ ನಟರುಗಳಿಲ್ಲದೆ ನಾಯಕ ನಟ ರಿಷಭ್ ಶೆಟ್ಟಿ ಸೇರಿದಂತೆ ಬಹುತೇಕ ಸ್ಥಳೀಯರೇ ನಟಿಸಿರುವ ಕಾಂತಾರ ಚಿತ್ರ ಬಿಡುಗಡೆ ಆಗಿದ್ದೇ ಆಗಿದ್ದು ಬೈಂದೂರಿನ ಶಂಕರ್ ಚಿತ್ರ ಮಂದಿರಕ್ಕೊಂದು ಕಳೆ ಬಂದಿದೆ!

ಖಾಲಿ ಹೊಡೆಯುತ್ತಿದ್ದ ಚಿತ್ರಮಂದಿರದ ಕುರ್ಚಿ ಭರ್ತಿಯಾಗಿವೆ! ಚಿತ್ರ ಮಂದಿರದ ಅಂಗಳಗಳು ವಾಹನ ಹಾಗೂ ಜನಜಂಗುಳಿಯಿಂದ ತುಂಬಿದೆ! ಚಿತ್ರ ಮಂದಿರಗಳತ್ತ ಮುಖವನ್ನೇ ಮಾಡದ ಅದೆಷ್ಟೋ ಹಿರಿಯ ಜೀವಗಳು ಇಪ್ಪತ್ತು, ಮೊವತ್ತು ವರ್ಷಗಳ ನಂತರ ಮತ್ತೆ ಸಿನಿಮಾ ನೋಡುವುದಕ್ಕೆ ಮುಗಿಬಿದ್ದು ಬಂದಿದ್ದಾರೆ.

ಕುಂದಾಪುರದ ಚಿತ್ರಮಂದಿರಗಳು ಈಗಾಗಲೇ ಬಹುತೇಕ ಬುಕ್ಕಿಂಗ್ ಆಗಿರುವುದರಿಂದ ಜನ ದೂರದ ಕೊಲ್ಲೂರು, ಕೆರಾಡಿ, ವಂಡ್ಸೆ, ಹೆಮ್ಮಾಡಿ ಭಾಗಗಳಿಂದಲ್ಲೂ ಬಸ್ಸಿನಲ್ಲಿ ಆಗಮಿಸಿ ಚಿತ್ರ ನೋಡಿ ಖುಷಿಪಡುತ್ತಿದ್ದಾರೆ. ಇದೆಲ್ಲ ನಡೆದು ಒಂದು ತಿಂಗಳು ಕಳೆಯುತ್ತಿದೆ ಈಗಲೂ ಚಿತ್ರಮಂದಿರ ಅದೇ ಹುರುಪಿನಲ್ಲಿದೆ! ಇಂತದ್ದೊಂದು ಸನ್ನಿವೇಶ ಬೈಂದೂರು ಕಾಣುತ್ತಿರುವುದು ಇದೇ ಮೊದಲು.

ರಾಜಕುಮಾರ್, ವಿಷ್ಣುವರ್ಧನ್ ಕಾಲದಲ್ಲಿ ಹಳೆಯ ಚಿತ್ರ ಮಂದಿರ ಸಿನಿ ಪ್ರೇಮಿಗಳಿಂದ ಒಂದಷ್ಟು ತುಂಬಿ ತುಳುಕುತ್ತಿತ್ತು. ಈ ಚಿತ್ರ ಮಂದಿರ ಹೊಸದಾಗಿ ನವೀಕರಣಗೊಂಡ ನಂತರ ಮುಂಗಾರು ಮಳೆ ಒಂದಷ್ಟು ದಿನ ಯಶಸ್ವಿ ಪ್ರದರ್ಶನ ಕಂಡಿತ್ತು. ತದನಂತರದಲ್ಲಿ ನಷ್ಟದಲ್ಲೇ ಸಾಗಿದ್ದ ಈ ಚಿತ್ರ ಮಂದಿರ ಹಲವಾರು ಏಳು ಬೀಳುಗಳನ್ನು ಕಂಡಿದೆ.

ಅಲ್ಲದೆ ಇತ್ತೀಚೆಗೆ ತೆರೆಕಂಡ ಕೆ.ಜಿ.ಎಫ್, ವಿಕ್ರಾಂತ್ ರೋಣ 2 ವಾರಗಳ ಪ್ರದರ್ಶನ ಕಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಕುಂದಗನ್ನಡದ ಸ್ಥಳೀಯ ಕೆಲ ಚಿತ್ರಗಳು ಕೂಡ ಒಂದು ವಾರದ ಪ್ರದರ್ಶನ ಕಂಡಿದ್ದೆ ಹೆಚ್ಚು, ಈಗ ಚಿತ್ರಮಂದಿರ ಒಂದಷ್ಟು ಚೇತರಿಕೆ ಕಂಡಿದೆ. ತುಂಬಾ ವರ್ಷಗಳ ಹಳೆಯ ಇತಿಹಾಸ ಹೊಂದಿರುವ ಈ ಚಿತ್ರಮಂದಿರಕ್ಕೆ ಇಲ್ಲಿನ ಜನರ ಭಾವನಾತ್ಮಕ ನಂಟಿದೆ. ಚಿತ್ರಮಂದಿರದ ಆಸನಗಳು, ಸೌಂಡ್ ಸಿಸ್ಟಮ್ ಒಂದಷ್ಟು ಸುಧಾರಿಸಬೇಕು ಎನ್ನುವುದು ಇಲ್ಲಿನ ಚಿತ್ರರಸಿಕರ ಮಾತು. ಇದು ಬೈಂದೂರಿನ ಶಂಕರ್ ಮಂದಿರವಷ್ಟೇ ಅಲ್ಲ ರಾಜ್ಯದ ಬಹುತೇಕ ಚಿತ್ರಮಂದಿರಗಳಿಗೆ ಹೊಸ ಹುರುಪು ಬಂದಿದೆ. ಇದೇ ರೀತಿ ಕನ್ನಡದಲ್ಲಿ ಇಂತಹ ಸದಭಿರುಚಿಯ ಚಿತ್ರಗಳು ಆಗಾಗ ತೆರೆಕಂಡು ಜನರನ್ನು ಚಿತ್ರಮಂದಿರಗಳತ್ತ ಸೆಳೆದರೆ ಥೀಯೇಟರ್ಗಳಿಗೊಂದು ಜೀವಕಳೆ ಬಂದಂತೆ.

ವರ್ಷಕ್ಕೊಂದೆರಡು ಉತ್ತಮ ಚಲನಚಿತ್ರಗಳು ತೆರೆ ಕಂಡರೆ ಚಿತ್ರ ರಸಿಕರಿಗೆ ಹಬ್ಬದ ವಾತಾವರಣ, ಚಿತ್ರ ಮಂದಿರ ಹಾಗೂ ಚಿತ್ರ ಮಂದಿರದಲ್ಲಿ ಕಾರ್ಯನಿರ್ವಹಿಸುವವರಿಗೆ ಒಂದು ಉತ್ಸಾಹ ತುಂಬಿದಂತೆ. ಜೊತೆಗೆ ಇದನ್ನೇ ನಂಬಿ ಜೀವನ ಕಂಡುಕೊಂಡವರ ಜೀವನಕ್ಕೊಂದು ಬೆಳಕು ಬಂದಂತೆ. ಈ ಮಣ್ಣಿನ ದಂತಕಥೆ ‘ಕಾಂತಾರ’ ವಿಶ್ವದೆಲ್ಲೆಡೆ ಇನ್ನಷ್ಟು ದಿನ ಯಶಸ್ವಿ ಪ್ರದರ್ಶನ ಕಂಡು 100 ದಿನ ಪೂರೈಸಲಿ ಎಂಬುದು ಚಿತ್ರ ರಸಿಕರ ಆಶಯ. ಹೀಗೆ ಕಾಂತಾರ ಹಲವು ಅಚ್ಚರಿಗಳಿಗೆ ಕಾರಣವಾಗಿರುವುದಂತು ಸುಳ್ಳಲ್ಲ. ಇದೆಲ್ಲ ದೈವ ಲೀಲೆಯಲ್ಲದೆ ಬೇರೇನೂ ಅಲ್ಲ ಎಂದು ಚಿತ್ರ ನೋಡಿ ಹೊರಬಂದ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

– ರವಿರಾಜ್ ಬೈಂದೂರು
(ಯುವ ಬರಹಗಾರ)

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!