Sunday, January 19, 2025
Sunday, January 19, 2025

ಜಾಗತಿಕ ಯೋಗ ಗುರು – ಬಿಕೆಎಸ್ ಅಯ್ಯಂಗಾರ್

ಜಾಗತಿಕ ಯೋಗ ಗುರು – ಬಿಕೆಎಸ್ ಅಯ್ಯಂಗಾರ್

Date:

ಭಾರತೀಯ ಯೋಗವನ್ನು ಜಗದಗಲ ಹರಡಿದ ಮಹಾ ಗುರು. (ಇಂದು ವಿಶ್ವ ಯೋಗದಿನದ ಪ್ರಯುಕ್ತ ಈ ಲೇಖನ) ಪತಂಜಲಿ ಪ್ರಣೀತವಾದ ಮತ್ತು ಭಾರತದ ಹೆಮ್ಮೆಯ ಯೋಗವನ್ನು ಜಗದಗಲ ಹರಡಿದ ಭಾರತದ ಯೋಗ ಗುರುಗಳಲ್ಲಿ ಅಗ್ರಪಂಕ್ತಿಯ ಹೆಸರು ಡಾ. ಬಿಕೆಎಸ್ ಅಯ್ಯಂಗಾರ್. ಇನ್ನೂ ವಿವರವಾಗಿ ಹೇಳಬೇಕು ಅಂತಾದರೆ ಬೆಳ್ಳೂರು ಕೃಷ್ಣಮಾಚಾರ ಸುಂದರರಾಜ್ ಅಯ್ಯಂಗಾರ್. ಅವರು ಕನ್ನಡಿಗರು ಎಂಬ ಹೆಮ್ಮೆ ನಮಗಿರಲಿ.

ಬಾಲ್ಯದಲ್ಲಿ ಅಮರಿದ ಹಲವು ಕಾಯಿಲೆಗಳನ್ನು ಗೆದ್ದ ಮಗು: 1918ರಲ್ಲಿ ಕರ್ನಾಟಕದ ಬೆಳ್ಳೂರು ಎಂಬ ಊರಲ್ಲಿ ಜನಿಸಿದ ಅಯ್ಯಂಗಾರರು ಬಾಲ್ಯದಲ್ಲಿ ಹಲವಾರು ಕಾಯಿಲೆಗಳಿಗೆ ತುತ್ತಾಗಿ ಬದುಕುವುದು ಸಾಧ್ಯವೇ ಇಲ್ಲ ಎಂದು ವೈದ್ಯರಿಂದ ಕರೆಸಿಕೊಂಡವರು. ಮಲೇರಿಯ, ವಿಷಮ ಶೀತಜ್ವರ ಮತ್ತು ಕ್ಷಯ ಅವರ ದೇಹವನ್ನು ಭಾರೀ ಘಾಸಿ ಮಾಡಿತ್ತು. ಅದರಿಂದ ಅವರ ದೇಹವು ಸಂಪೂರ್ಣವಾಗಿ ಕೃಶ ಆಗಿತ್ತು. ಅದಕ್ಕಾಗಿ ಅವರು ಮೈಸೂರಿಗೆ ಬಂದು ಎರಡು ವರ್ಷ ತನ್ನ ಬಾವ ಮೈದ ಮತ್ತು ಯೋಗಗುರು ಆದ ಟಿ ಕೃಷ್ಣಮಾಚಾರಿ ಅವರಿಂದ ಯೋಗವನ್ನು ಕಲಿತರು. ಅವರೋ ಹಿಮಾಲಯದಲ್ಲಿ ಯೋಗವನ್ನು ಕಲಿತುಬಂದ ಯೋಗ ಗುರು ಆಗಿದ್ದರು. ಅದರಿಂದಾಗಿ ಉತ್ತಮ ಯೋಗ ಗುರುವಿನ ಮೂಲಕ ಯೋಗ ಶಿಕ್ಷಣ ಪಡೆಯುವ ಅವಕಾಶವು ಅಯ್ಯಂಗಾರ್ ಅವರಿಗೆ ದೊರೆಯಿತು. ಅಯ್ಯಂಗಾರರು ಹಠಯೋಗ ಪರಿಣತರಾಗಿ ಬೆಳೆಯುತ್ತಾರೆ. ಆ ಅವಧಿಯಲ್ಲಿ ದಿನಕ್ಕೆ 12-14 ಘಂಟೆಗಳ ಅವಧಿ ಯೋಗ ಸಾಧನೆಯನ್ನು ಅವರು ಮಾಡುತ್ತಿದ್ದರು. ಅದರಿಂದಾಗಿ ಅವರ ದೇಹವು ಹುರಿಗೊಂಡಿತು. ಯಾವ ಕೋನದಲ್ಲಾದರೂ ಅವರ ದೇಹವು ಸುಲಭವಾಗಿ ಬಾಗುತ್ತಿತ್ತು.

ಪೂನಾ ಅವರ ಕರ್ಮಭೂಮಿ ಆಯಿತು: ಎರಡು ವರ್ಷಗಳ ಕಾಲ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಯೋಗ ತರಗತಿ ಮಾಡಿದ ಅಯ್ಯಂಗಾರರು ಮುಂದೆ ಒಬ್ಬ ವೈದ್ಯರ ಸಲಹೆ ಪಡೆದು 1937ರಲ್ಲಿ ಪೂನಾಕ್ಕೆ ಬಂದು ಅಲ್ಲಿ ನೆಲೆನಿಂತರು. ತಮ್ಮ ಮಗ ಸನ್ಯಾಸಿ ಆಗಬಾರದು ಎಂದು ಅವರ ಹೆತ್ತವರು ಅವರಿಗೆ ಹದಿನಾರರ ವಯಸ್ಸಿನಲ್ಲಿ ರಮಾಮಣಿ ಎಂಬ ಹುಡುಗಿಯ ಜೊತೆಗೆ ಮದುವೆ ಮಾಡಿದ್ದರು.

ಜಗತ್ಪ್ರಸಿದ್ದ ಸಂಗೀತಗಾರ ಏಹೂದಿ ಮೆನುಹಿನ್ ಕಾಯಿಲೆಯು ಗುಣವಾಯಿತು: ಖ್ಯಾತ ವಯಲಿನ್ ವಾದಕರಾದ ಮೆನುಹಿನ್ ಅವರು ತೀವ್ರವಾದ ಕುತ್ತಿಗೆ ಮತ್ತು ಬಲಭುಜದ ನೋವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಭಾರತಕ್ಕೆ ಬಂದು ಯೋಗಗುರು ಅಯ್ಯಂಗಾರ್ ಅವರನ್ನು ಭೇಟಿ ಆಗುತ್ತಾರೆ. ಅವರ ಸಲಹೆಯಂತೆ ಕೆಲವು ಆಸನಗಳನ್ನು ಮೂರು ತಿಂಗಳ ಪ್ರಾಕ್ಟೀಸ್ ಮಾಡಿದ ನಂತರ ಮೆನುಹಿನ್ ಅವರ ನೋವುಗಳು ಪೂರ್ತಿ ಮಾಯವಾದವು. ಮೆನುಹಿನ್ ಅಯ್ಯಂಗಾರರನ್ನು ತನ್ನ ಗುರುವಾಗಿ ಸ್ವೀಕಾರ ಮಾಡಿದರು. ಅವರನ್ನು ಸ್ವಿಜರ್ಲ್ಯಾಂಡಿಗೆ ಕರೆದುಕೊಂಡು ಹೋಗಿ ಗ್ರೇಟ್ ವ್ಯಕ್ತಿಗಳನ್ನು ಭೇಟಿ ಮಾಡಿಸಿದರು. ಅವರ ಕೈಯಿಂದ LIGHT ON YOGA ಎಂಬ ಪುಸ್ತಕವನ್ನು ಬರೆಸಿ ಅದಕ್ಕೆ ಅವರೇ ಮುನ್ನುಡಿ ಬರೆದರು. ಆ ಪುಸ್ತಕವು 600 ಆಸನಗಳನ್ನು ಪರಿಚಯ ಮಾಡುತ್ತಿದ್ದು ಇಂದಿಗೂ ಯೋಗದ ಅದ್ಭುತ ಪಠ್ಯ ಆಗಿದೆ ಮತ್ತು ಜಗತ್ತಿನ 22 ಭಾಷೆಗಳಿಗೆ ಅದು ಅನುವಾದ ಆಗಿದೆ. ಯೋಗ ಗುರು ಅಯ್ಯಂಗಾರರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಯೋಗವನ್ನು ಹೆಗಲ ಮೇಲೆ ಹೊತ್ತುಕೊಂಡು ಜಗದಗಲ ಸುತ್ತಿದರು. ಅಮೆರಿಕ, ರಷ್ಯಾ, ಚೀನಾ, ಜಪಾನ್, ಬೆಲ್ಜಿಯಂ, ರೋಮ್ ಮೊದಲಾದ ಕಡೆ ಯೋಗ ಪ್ರದರ್ಶನ ನೀಡಿದರು. ಬೆಲ್ಜಿಯಂ ರಾಣಿ ಎಲಿಜೆಬೆತ್, ಆರನೇ ಪೋಪ್ ಪಾಲ್ ಅವರಿಗೆ ಯೋಗವನ್ನು ಕಲಿಸಿ ಜಗದ್ವಿಖ್ಯಾತಿ ಪಡೆದರು. ಸಾವಿರಾರು ಕಡೆ ಯೋಗ ತರಗತಿ, ಪ್ರಾತ್ಯಕ್ಷಿಕೆ ನೀಡಿದರು. ಅಪಾರ ಸಂಖ್ಯೆಯ ಶಿಷ್ಯರನ್ನು ಬೆಳೆಸಿದರು.

ಭಾರತದ ಯೋಗ ಮಹಾಗುರು: ಭಾರತದಲ್ಲಿ ಅವರನ್ನು ಪ್ರೇರಣೆಯಾಗಿ ಪಡೆದು ಗುರುವಾಗಿ ಸ್ವೀಕಾರ ಮಾಡಿದವರು ಮಹಾ ವ್ಯಕ್ತಿಗಳು. ನೆಹರೂ, ಬಾಬು ರಾಜೇಂದ್ರ ಪ್ರಸಾದ, ಜಯಪ್ರಕಾಶ್ ನಾರಾಯಣ್, ಆರ್ ಕೆ ಲಕ್ಷ್ಮಣ್, ಜಿಡ್ಡು ಕೃಷ್ಣಮೂರ್ತಿ, ದಿಲೀಪ್ ಕುಮಾರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸಂಗೀತಗಾರ ಅಮ್ಜಾದ್ ಆಲಿ ಖಾನ್, ಜಹೀರ್ ಖಾನ್ ಇವರೆಲ್ಲರೂ ಅವರ ತರಗತಿಯಲ್ಲಿ ಕುಳಿತು ಯೋಗವನ್ನು ಕಲಿತವರು. LIGHT ON YOGA, LIGHT ON PRANAYAMA, ART OF YOGA, LIGHT ON YOGA SOOTHRAS of PATHANJALI ಇವುಗಳು ಅವರ ಅತ್ಯಂತ ಜನಪ್ರಿಯ ಪುಸ್ತಕಗಳು.

‘ಅಯ್ಯಂಗಾರ್’ ಯೋಗದ ಆದ್ಯ ಪ್ರವರ್ತಕ: ಯೋಗದಲ್ಲಿ ‘ಅಯ್ಯಂಗಾರ್ ಯೋಗ ‘ಎಂಬ ಹೊಸ ಶಾಖೆಯನ್ನು ಆರಂಭ ಮಾಡಿದ್ದೇ ಈ ಅಯ್ಯಂಗಾರ ಮಹಾ ಗುರುಗಳು. ‘ಯೋಗವು ಆತ್ಮಸಾಕ್ಷಾತ್ಕಾರದ ಸಾಧನ’ ಎಂದು ಕರೆದವರು ಅವರು. ಸ್ವತಃ 200 ವಿವಿಧ ಆಸನ ಭಂಗಿಗಳು, 14 ವಿಧವಾದ ಪ್ರಾಣಾಯಾಮಗಳನ್ನು ಅವರು ಸಾವಿರಾರು ವೇದಿಕೆಗಳಲ್ಲಿ ಡೆಮೋ ಮಾಡಿ ತೋರಿಸಿದ್ಧಾರೆ. ಯೋಗವನ್ನು ಉಪಯೋಗಿಸಿ ವಿವಿಧ ಗುಣ ಮಾಡಲಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಪೂನಾದಲ್ಲಿ ತನ್ನ ಮೃತರಾದ ಹೆಂಡತಿಯ ಹೆಸರಿನಲ್ಲಿ ‘ರಮಾಮಣಿ ಅಯ್ಯಂಗಾರ್ ಮೆಮೋರಿಯಲ್ ಯೋಗಾ ಇನ್ಸಟಿಟ್ಯೂಟ್’ ಅವರು 1973ರಲ್ಲಿ ಸ್ಥಾಪನೆ ಮಾಡಿದರು. ಅದು ಇಂದು ಬಹಳ ದೊಡ್ಡ ಜಾಗತಿಕ ಯೋಗ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಅದರಲ್ಲಿ ಸಾವಿರಾರು ಯೋಗ ಶಿಕ್ಷಕರು ಇದ್ದು ಅದು ಇಂದು 40ದೇಶಗಳಲ್ಲಿ 1800 ಶಾಖೆಗಳನ್ನು ಹೊಂದಿದೆ. ಅಯ್ಯಂಗಾರ್ ಗುರುಗಳಿಂದ ನೇರವಾಗಿ ಯೋಗವನ್ನು ಕಲಿತವರ ಸಂಖ್ಯೆಯು ಹಲವು ಸಾವಿರ ಇದ್ದು ಪರೋಕ್ಷವಾಗಿ ಕಲಿತವರ ಸಂಖ್ಯೆಯು ಕೋಟಿ ದಾಟಿದೆ.

ವಿಸ್ತರಿಸಿದ ಯೋಗ ಗುರುವಿನ ಧವಳ ಕೀರ್ತಿ: ಜಾಗತಿಕ ಯೋಗಗುರು ಆಗಿ ಕೀರ್ತಿ ಪಡೆದ ಅಯ್ಯಂಗಾರ್ ಗುರುಗಳು ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಆವಿಷ್ಕಾರವಾದ ಹೊಸ ನಕ್ಷತ್ರಕ್ಕೆ ಅವರ ಹೆಸರನ್ನು ಇಡಲಾಗಿದೆ. ಚೀನಾ ಮತ್ತು ಭಾರತ ಸರಕಾರಗಳು ಅವರ ಹೆಸರಿನಲ್ಲಿ ಸ್ಟಾಂಪ್ ಬಿಡುಗಡೆ ಮಾಡಿವೆ. ಟೈಮ್ಸ್ ಪತ್ರಿಕೆಯು ಅವರನ್ನು ಶತಮಾನದ ನೂರು ಶ್ರೇಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಎತ್ತರದಲ್ಲಿ ಕೂರಿಸಿದೆ. ಯೋಗ ಗುರು ಅಯ್ಯಂಗಾರರ ಜನ್ಮ ಶತಮಾನೋತ್ಸವವನ್ನು ಹತ್ತಕ್ಕೂ ಹೆಚ್ಚು ದೇಶಗಳು ಆಚರಣೆ ಮಾಡಿವೆ.

2014ರ ಆಗಸ್ಟ್ 20ರಂದು ಅವರು ನಮ್ಮನ್ನು ಅಗಲಿದಾಗ ಅವರಿಗೆ 95 ವರ್ಷ ಆಗಿತ್ತು. ಯೋಗ ಮತ್ತು ಮನಸ್ಸಿನ ಅವಿನಾಭಾವ ಸಂಬಂಧವನ್ನು ಇಡೀ ಜಗತ್ತಿಗೆ ಪಸರಿಸಿದ ಯೋಗಗುರು ಡಾ. ಬಿ ಕೆ ಎಸ್ ಆಯ್ಯಂಗಾರರಿಗೆ ನಮ್ಮ ಶ್ರದ್ಧಾಂಜಲಿ.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!