Monday, January 20, 2025
Monday, January 20, 2025

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕಶಾ

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕಶಾ

Date:

ಲವತ್ತು ವರ್ಷಗಳಲ್ಲಿ ಐದು ಯುದ್ಧಗಳಲ್ಲಿ ಅವರು ಭಾಗವಹಿಸಿದ್ದರು. ಭಾರತದ ಮೊತ್ತಮೊದಲ ಫೀಲ್ಡ್ ಮಾರ್ಷಲ್ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ವಿಷಯಗಳನ್ನು ಹರವಿಕೊಂಡು ಇಂದು ನಿಮ್ಮ ಮುಂದೆ ಬಂದಿದ್ದೇನೆ. ಅವರ ಮಿಲಿಟರಿ ಸಾಹಸಗಳ ಬಗ್ಗೆ, ರಾಷ್ಟ್ರಪ್ರೇಮದ ಬಗ್ಗೆ ಎಷ್ಟು ನಾನು ಬರೆದರೂ ಅದು ಮುಗಿದು ಹೋಗುವುದಿಲ್ಲ.

ಹದಿನೆಂಟನೇ ವಯಸ್ಸಿಗೇ ಸೈನಿಕರಾದವರು ಮಾನೆಕಶಾ. 1914 ಏಪ್ರಿಲ್ 3ರಂದು ಪಂಜಾಬಿನ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ ಸ್ಯಾಮ್ ಮಾನೆಕಶಾ ಅವರ ತಂದೆ ವೈದ್ಯರಾಗಿದ್ದರು. ಅಪ್ಪನ ಹಾಗೆ ವೈದ್ಯನಾಗುವ ಕನಸು ಮಗನಿಗೆ. ಲಂಡನ್ನಿಗೆ ಕಳುಹಿಸಿಕೊಡಿ ಎಂದು ಅಪ್ಪನಿಗೆ ಹೇಳಿದಾಗ ವಯಸ್ಸು ಕಡಿಮೆ ಎಂಬ ಕಾರಣಕ್ಕೆ ಅಪ್ಪ ನಿರಾಕರಿಸಿದರು. ಅದಕ್ಕಾಗಿ ಸಿಟ್ಟು ಮಾಡಿಕೊಂಡ ಮಗ ಮಿಲಿಟರಿ ಪರೀಕ್ಷೆ ಬರೆದು 1932ರಲ್ಲಿ ಸೈನ್ಯಕ್ಕೆ ಆಯ್ಕೆಯಾದರು. ಆಗ ಅವರಿಗೆ ಬರೇ 18 ವರ್ಷ. ಮುಂದೆ ಮಾನೆಕಶಾ 40 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ವಿವಿಧ ಸ್ತರಗಳಲ್ಲಿ ದುಡಿದರು. ಐದು ಯುದ್ಧಗಳಲ್ಲಿ ಪ್ರತ್ಯಕ್ಷ ಭಾಗವಹಿಸಿದರು! ಭಾರತವನ್ನು ಗೆಲ್ಲಿಸುತ್ತಾ ಹೋದರು.

ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಸಾಮ್ ಯುದ್ಧ: ಅವರ ಮೊದಲ ಯುದ್ಧವು ಬ್ರಿಟಿಷ್ ಇಂಡಿಯಾ ಸೈನ್ಯದ ಪರವಾಗಿತ್ತು. ಅದು ಎರಡನೇ ವಿಶ್ವಯುದ್ಧ. ಪಾಗೊಡ ಗುಡ್ಡವನ್ನು ರಕ್ಷಿಸಲು ಜೀವದ ಹಂಗು ತೊರೆದು ಹೋರಾಡುತ್ತಿರುವ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡರು. ಬದುಕುವ ಅವಕಾಶ ಇಲ್ಲ ಎಂದು ವೈದ್ಯರು ಭರವಸೆ ಬಿಟ್ಟು ಕೂತಾಗ ಸಾಮ್ ಮಾನೆಕಶಾ ಮತ್ತೆ ಬದುಕಿ ಬಂದರು. ಅವರಿಗೆ ಸೈನ್ಯವು ಮಿಲಿಟರಿ ಕ್ರಾಸ್ ಎಂಬ ಗೌರವ ಪ್ರದಾನ ಮಾಡಿತು.

ಮಿಂಚು ಹರಿಸಿದ ಕಾಶ್ಮೀರ ವಿಮೋಚನಾ ಯುದ್ದ: ಮಾನೆಕಶಾ ಅವರ ಎರಡನೇ ಯುದ್ಧವು ಭಾರತವು ಸ್ವಾತಂತ್ರ್ಯ ಪಡೆದಾಗ ನಡೆದ ಕಾಶ್ಮೀರ ವಿಮೋಚನಾ ಯುದ್ಧ. ಪಾಕ್ ಆಕ್ರಮಿತ ಕಾಶ್ಮೀರ ಬಿಡುಗಡೆಗಳಿಸಲು ಸೈನ್ಯ ಮುಂದುವರೆದಾಗ ಮಾನೆಕ್ ಶಾ ಮತ್ತೆ ದಿಟ್ಟವಾಗಿ ಹೋರಾಡಿದರು. ಹೈದರಾಬಾದ್ ವಿಮೋಚನಾ ಯುದ್ಧದಲ್ಲೂ ಅವರು ಭಾಗವಹಿಸಿದ್ದರು.

ನೆಹರೂ ವಿರುದ್ಧ ಸಿಟ್ಟಾದರು ಮಾನೆಕಶಾ: ಮೂರನೇ ಬಾರಿ ಸಾಮ್ ಅವರು ಹೋರಾಡಿದ್ದು ಭಾರತ ಚೀನಾ ಯುದ್ಧದಲ್ಲಿ. ಇಡೀ ಸೇನೆಯು ವೀರತೆಯಿಂದ ಹೋರಾಡಿದರೂ ಭಾರತವು ರಾಜಕೀಯದ ಕಾರಣಕ್ಕೆ ಆ ಯುದ್ಧವನ್ನು ಸೋತಿತು! ಆಗ ಮಾನೇಕಶಾ ಸಿಟ್ಟಿನಿಂದ ಕುದಿದು ಹೋದರು. ರಾಜಕೀಯ ವ್ಯಕ್ತಿಗಳು ಸೈನ್ಯದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನೇರವಾಗಿ ಹೇಳಿದರು. ನೆಹರೂ ಮೇಲೂ ಸಿಟ್ಟಾದರು. ಆಗಿನ ರಕ್ಷಣಾಮಂತ್ರಿ ಮೆನನ್ ಜೊತೆಗೆ ಖಾರವಾಗಿ ಮಾತನಾಡಿದರು.

ಎರಡು ಪಾಕ್ ಯುದ್ಧಗಳನ್ನು ಶಾ ಭಾರತಕ್ಕೆ ಗೆಲ್ಲಿಸಿಕೊಟ್ಟರು: 1965 ಮತ್ತು 1971ರ ಭಾರತ ಪಾಕಿಸ್ತಾನ ಯುದ್ಧಗಳಲ್ಲಿ ಭಾರತವನ್ನು ಗೆಲ್ಲಿಸಿ ಕೊಡುವುದರಲ್ಲಿ ಅತೀ ಮಹತ್ವದ ಪಾತ್ರ ವಹಿಸಿದವರು ಮಾನೆಕಶಾ ಅವರು. ಅದರಲ್ಲೂ 1971ರ ಯುದ್ಧವನ್ನು ಭಾರತವು ಮರೆಯಲು ಸಾಧ್ಯವೇ ಇಲ್ಲ. ಏಕೆಂದರೆ ಅದರಲ್ಲಿ ಮಾನೇಕಶಾ ಅವರು ಆರ್ಮಿ ಮುಖ್ಯಸ್ಥರಾಗಿ ಭಾರತವನ್ನು ಗೆಲ್ಲಿಸಿದ್ದು ಮಾತ್ರವಲ್ಲ ಬಾಂಗ್ಲಾ ಎಂಬ ರಾಷ್ಟ್ರದ ಸ್ಥಾಪನೆಗೆ ಕಾರಣರಾದರು. ಇದನ್ನೆಲ್ಲ ನಾವು ಮರೆಯುವುದು ಹೇಗೆ? ಕೇವಲ 18 ದಿನಗಳ ಅವಧಿಯಲ್ಲಿ ಪಾಕಿಸ್ತಾನದ ಸೈನ್ಯವನ್ನು ಭಾರತೀಯ ಸೈನಿಕರು ಹೆಡೆಮುರಿ ಕಟ್ಟಿದ್ದರು! ಆ ಗೆಲುವಿನಲ್ಲಿ ಮಾನೆಕಶಾ ಪಾತ್ರವು ಬಹಳ ದೊಡ್ಡದು.

ನೇರ ನಡೆ, ದಿಟ್ಟ ನುಡಿ.. ಅದು ಸಾಮ್ ಸ್ಟೈಲ್: ಅವರ ದಿಟ್ಟತನ, ನೇರ ನಡೆ ನುಡಿ ಮತ್ತು ಹಾಸ್ಯ ಪ್ರವೃತ್ತಿಗಳ ಬಗ್ಗೆ ನೂರಾರು ಕಥೆಗಳು ನಮಗೆ ದೊರೆಯುತ್ತವೆ. ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು 1971 ಮಾರ್ಚಿನಲ್ಲಿ ಪಾಕ್ ವಿರುದ್ಧ ಯುದ್ಧ ಶುರುಮಾಡಲು ಹೇಳಿದಾಗ ಆರ್ಮಿ ಚೀಫಾಗಿ ಅವರು “ಇಲ್ಲ, ನನ್ನ ಸೈನ್ಯ ಸಿದ್ಧವಾಗಿಲ್ಲ. ಆರು ತಿಂಗಳು ಸಮಯ ಕೊಡಿ. ಭಾರತವನ್ನು ಗೆಲ್ಲಿಸಿಕೊಡುತ್ತೇನೆ” ಎಂದು ನೇರವಾಗಿ ಹೇಳುವಷ್ಟು ಧೈರ್ಯ ತೋರಿದ್ದರು. ಇನ್ನೊಮ್ಮೆ ಹೇಡಿತನ ತೋರುತ್ತಿದ್ದ ಮಿಜೋರಾಂ ಬೆಟಾಲಿಯನ್ ಸೈನಿಕರಿಗೆ ‘ಬಳೆ ತೊಟ್ಟು ಕೊಳ್ಳಿ’ ಎಂದು ಬಳೆಗಳನ್ನು ಪೋಸ್ಟ್ ಮಾಡಿ ಸುದ್ದಿಯಾಗಿದ್ದರು. ತನಗೆ ಅನ್ನಿಸಿದನ್ನು ನೇರವಾಗಿ, ದಿಟ್ಟವಾಗಿ ಹೇಳುವ ಗಟ್ಸ್ ಅವರು ಕೊನೆಯವರೆಗೆ ಹೊಂದಿದ್ದರು.

ಭಾರತದ ಮೊಟ್ಟಮೊದಲ ಫೀಲ್ಡ್ ಮಾರ್ಷಲ್: 1973ರಲ್ಲಿ ಅವರನ್ನು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಆಗಿ ಸರಕಾರ ನೇಮಕ ಮಾಡಿತು. ಅದು ಭಾರತೀಯ ಸೇನೆಯ ಅತೀ ಉನ್ನತವಾದ ಗೌರವ ಆಗಿತ್ತು. ಫೀಲ್ಡ್ ಮಾರ್ಷಲ್ ಆದವರು ಜೀವನಪೂರ್ತಿ ನಿವೃತ್ತಿ ಆಗುವುದೇ ಇಲ್ಲ. ಅವರು ಕೊನೆಯವರೆಗೆ ಆರ್ಮಿಯ ಸಮವಸ್ತ್ರವನ್ನು ಧರಿಸಬಹುದು. ಅವರ ವಾಹನದಲ್ಲಿ ಐದು ನಕ್ಷತ್ರಗಳು ಇರುತ್ತವೆ ಮತ್ತು ಅವರಿಗೆ ಆರ್ಮಿ ಯಾವಾಗಲೂ ಗೌರವ ರಕ್ಷೆ ನೀಡುತ್ತದೆ. ಈ ಗೌರವವನ್ನು ಪಡೆದ ಮೊದಲ ಭಾರತೀಯ ಸೈನಿಕ ಅಂದರೆ ಅದು ಮಾನೆಕಶಾ. ಅವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಕೂಡ ದೊರೆತಿವೆ. 2008ರಲ್ಲಿ ನಿಧನರಾದಾಗ ಅವರಿಗೆ 94 ವರ್ಷ ಆಗಿತ್ತು.

ಅವರ ಬಯೋಪಿಕ್ ಬರ್ತಾ ಇದೆ: ಅಂದ ಹಾಗೆ ಫೀಲ್ಡ್ ಮಾರ್ಷಲ್ ಅವರ ಜೀವನ ಆಧಾರಿತ ಹಿಂದೀ ಸಿನೆಮಾ ತಯಾರಾಗುತ್ತಿದ್ದು ವಿಕ್ಕಿ ಕೌಶಲ್ ಅವರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಸಿನೆಮಾ ಬಿಡುಗಡೆ ಆಗ್ತಾ ಇದೆ. ನಾನು ಆ ಸಿನೆಮಾಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದೇನೆ. ಜೈ ಹಿಂದ್.

-ರಾಜೇಂದ್ರ ಭಟ್ ಕೆ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!