ನೀವು ಈ ವಿಕ್ಟರಿಯನ್ನು ಹೇಗೆ ಬೇಕಾದರೂ ಕರೆಯಬಹುದು! ಇದನ್ನು ಭಾರತೀಯ ಸಿನೆಮಾದ ವಿಜಯ ಅನ್ನುವವರೂ ಇದ್ದಾರೆ. ದಕ್ಷಿಣ ಭಾರತದ ವಿಜಯ, ತೆಲುಗು ಸಿನೆಮಾರಂಗದ ವಿಜಯ, ಕೀರವಾಣಿ ಗೆಲುವು, ರಾಜಮೌಳಿ ಗೆಲುವು ನೀವು ಹೇಗೆ ಬೇಕಾದರೂ ಕರೆಯಬಹುದು! ಆದರೆ ಅಮೆರಿಕಾದ ಲಾಸ್ ಏಂಜಲೀಸ್ ನಗರದ ವೈಭವೋಪೇತವಾದ ಸಭಾಂಗಣದಲ್ಲಿ ನಾಟು ನಾಟು ನಾಟು ಹಾಡು ಸಮುದ್ರದ ಅಲೆಗಳನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ! ಇದು ಅಂತಿಮವಾಗಿ ಭಾರತೀಯ ಸಿನಿಮಾರಂಗದ ಗೆಲುವು ಎಂಬ ಷರಾ ಬರೆದು ಭಾರತೀಯರು ಖುಷಿಯಿಂದ ಸಂಭ್ರಮಪಟ್ಟದ್ದು ಮಾತ್ರ ಕಣ್ಣ ಮುಂದಿರುವ ದೃಶ್ಯ!
ಭಾರತಕ್ಕೆ ಅಕಾಡೆಮಿ ಪ್ರಶಸ್ತಿಗಳು ಹೊಸತಲ್ಲ: ಪ್ರತೀ ವರ್ಷವೂ ಒಂದಲ್ಲ ಒಂದು ಸಿನೆಮಾಗಳು ಅಕಾಡೆಮಿ ಪ್ರಶಸ್ತಿಗಳಿಗೆ ನಾಮಕರಣ ಆಗುವುದು ಮತ್ತೆ ಅಷ್ಟೇ ವೇಗದಲ್ಲಿ ಡ್ರಾಪ್ ಆಗುವುದು ಹಿಂದೆ ಹಲವು ಬಾರಿ ನಡೆದಿದೆ. ಆದರೆ ಭಾರತೀಯ ಸಿನಿಮಾದ ಹೆಮ್ಮೆಯ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಜೀವಮಾನದ ಸಾಧನೆ ಪರಿಗಣಿಸಿ ಈ ಪ್ರಶಸ್ತಿಯ ಗೌರವ ದೊರೆತಿತ್ತು. ಅದಕ್ಕಿಂತಲೂ ಮೊದಲು ಭಾನು ಅಥೆಯ್ಯ ಎಂಬ ಮಹಿಳೆಯು ವಸ್ತ್ರ ವಿನ್ಯಾಸದ ವಿಭಾಗದಲ್ಲಿ ( ಗಾಂಧಿ ಸಿನೆಮಾ) ಅಕಾಡೆಮಿ ಪ್ರಶಸ್ತಿ ಗೆದ್ದರು. ಮುಂದೆ ‘ಸ್ಲಂ ಡಾಗ್ ಮಿಲಿಯನೇರ್’ ಎಂಬ ಬ್ರಿಟಿಷ್ ಸಿನೆಮಾದ ಜೈ ಹೋ ಹಾಡಿಗೆ ಮತ್ತು ಅದರ ಹಿನ್ನೆಲೆ ಸಂಗೀತಕ್ಕೆ ರೆಹಮಾನ್ ಎರಡು ಅಕಾಡೆಮಿ ಪ್ರಶಸ್ತಿ ಗೆದ್ದರು! ಗುಲ್ಜಾರ್ ಆ ಹಾಡಿನ ಸಾಹಿತ್ಯಕ್ಕೆ ಇದೇ ವಿಶ್ವಮಟ್ಟದ ಪ್ರಶಸ್ತಿ ಪಡೆದರು. ಅದೇ ಸಿನೆಮಾದ ಸೌಂಡ್ ಇಂಜಿನಿಯರ್ ರಸೆಲ್ ಫುಕುಟ್ಟಿ ಅವರು ಕೂಡ ಅಕಾಡೆಮಿ ಪ್ರಶಸ್ತಿ ಪಡೆದರು.
ಇದೀಗ ನಾಟು ನಾಟು ಸರದಿ: ಇದೀಗ ನಾಟು ನಾಟು ಹಾಡು ಅದೇ ಪ್ರಶಸ್ತಿಯ ವೇದಿಕೆಯಲ್ಲಿ ಸದ್ದು ಮಾಡಿದೆ. ಆ ಹಾಡಿಗೆ ಮ್ಯೂಸಿಕ್ ಕೊಟ್ಟ ಲೆಜೆಂಡ್ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಆ ಹಾಡು ಬರೆದ ಚಂದ್ರ ಬೋಸ್ ಜೊತೆಯಾಗಿ ಆಸ್ಕರ್ ಪ್ರಶಸ್ತಿಯ ವೇದಿಕೆಯೇರಿ ಪ್ರಶಸ್ತಿ ಪಡೆದಾಗ ಜಗತ್ತಿನಾದ್ಯಂತ ಭಾರತೀಯರ ಖುಷಿಗೆ ಪಾರವೇ ಇರಲಿಲ್ಲ! ಆ ಹಾಡನ್ನು ಸಿನೆಮಾದಲ್ಲಿ ಹಾಡಿದ್ದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಾ ಭೈರವ (ಕೀರವಾಣಿ ಮಗ) ಆ ಪ್ರಶಸ್ತಿ ವೇದಿಕೆಯಲ್ಲಿ ಮತ್ತೆ ಆ ಹಾಡನ್ನು ಹಾಡಿ ರೋಮಾಂಚನಗೊಳಿಸಿದರು! ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯು ಘೋಷಣೆ ಆಗಿದ್ದು ಆ ವಿಭಾಗದಲ್ಲಿ ಭಾರತವು (ಮಾತ್ರವಲ್ಲ ಏಷಿಯಾದಲ್ಲಿ ಕೂಡ) ಗೆದ್ದ ಮೊದಲ ಅಕಾಡೆಮಿ ಪ್ರಶಸ್ತಿ ಇದಾಗಿದೆ! ಆ ಸಿನೆಮಾ ನಿರ್ದೇಶನ ಮಾಡಿದ್ದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ, ಕತೆ ಬರೆದ ಅವರ ತಂದೆ ವಿಜಯೇಂದ್ರ ಪ್ರಸಾದ್, ನೃತ್ಯ ನಿರ್ದೇಶನ ಮಾಡಿದ ಪ್ರೇಮ್ ರಕ್ಷಿತ್ ಇವರೆಲ್ಲ ಈ ಯಶಸ್ಸಿನ ಪಾಲುದಾರರು!
RRR ಒಂದು ಲೆಜೆಂಡ್ ಫಿಲ್ಮ್: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಆಂಧ್ರಪ್ರದೇಶದಲ್ಲಿ ಕಿಡಿ ಹಚ್ಚಿದ್ದ ಇಬ್ಬರು ಯುವಕರ ಕತೆಯನ್ನು ಆಧರಿಸಿ ಈ ಸಿನೆಮಾವನ್ನು ಮಾಡಲಾಗಿತ್ತು. ಅವರಿಬ್ಬರೂ ತಮ್ಮ ಜೀವನದಲ್ಲಿ ಎಂದಿಗೂ ಭೇಟಿ ಮಾಡಿರಲಿಲ್ಲ! ಆದರೆ ಆ ಸಿನೆಮಾದಲ್ಲಿ ಅವರನ್ನು ಅತ್ಯುತ್ತಮ ಗೆಳೆಯರಾಗಿ ಚಿತ್ರೀಕರಿಸಲಾಗಿದೆ! ಫ್ಯಾ0ಟಸಿ, ರೋಮಾನ್ಸ್, ರಾಷ್ಟ್ರಪ್ರೇಮ, ರೋಮಾಂಚಕ ಹೋರಾಟಗಳು, ಭಾರತೀಯ ಪುರಾಣಗಳ ಟಚ್ ಈ ಸಿನೆಮಾದಲ್ಲಿ ಇದೆ. ರಾಜಮೌಳಿ ತಮ್ಮದೇ ಅದ್ಭುತ ಶೈಲಿಯಲ್ಲಿ ಈ ಸಿನೆಮಾವನ್ನು ದೃಶ್ಯಕಾವ್ಯ ಆಗಿ ಕಟೆದು ನಿಲ್ಲಿಸಿದ್ದಾರೆ! ಅವರ ಬಾಹುಬಲಿ ಸರಣಿಯ ಸಿನಿಮಾಗಳಿಗಿಂತ ಹೆಚ್ಚು ರೋಚಕವಾಗಿ ಈ ಸಿನೆಮಾ ಮೂಡಿ ಬಂದಿದೆ ಎಂದು ವಿಮರ್ಶೆಗಳು ಬಂದಿವೆ.
ನಾಲ್ಕು ವರ್ಷಗಳ ದೀರ್ಘ ಕಾಲ ಶೂಟ್ ಆದ ಸಿನೆಮಾ ಇದು! 550 ಕೋಟಿ ರೂಪಾಯಿ ವೆಚ್ಚದ ಈ ಸಿನೆಮಾ 1800ಕೋಟಿ ರೂಪಾಯಿಗಿಂತ ಹೆಚ್ಚು ದುಡ್ಡು ಮಾಡಿತು. ವಿದೇಶದಲ್ಲಿ ಕೂಡ ಈ ಸಿನೆಮಾ ತುಂಬಿದ ಗೃಹಗಳಿಗೆ ಪ್ರದರ್ಶನ ಆಗಿದೆ ಅಂದರೆ ಅದರ ಜನಪ್ರಿಯತೆಯು ನಮಗೆ ಅರ್ಥ ಆಗುತ್ತದೆ! ಇಡೀ ಸಿನೆಮಾವನ್ನು ಆವರಿಸಿರುವ ರಾಮಚರಣ ತೇಜ ಮತ್ತು ಜ್ಯೂನಿಯರ್ ಎನ್ಟಿ ಆರ್ ಅವರ ಅಭಿನಯವೂ ಕ್ಲಾಸ್ ಇದೆ. ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನೆಮಾಗಳಲ್ಲಿ ಇದಕ್ಕೆ ಮೂರನೇ ಸ್ಥಾನ!
ಎಂ ಎಂ ಕೀರವಾಣಿ ಎಂಬ ಸಂಗೀತ ಮಾಂತ್ರಿಕ! ಕೊಡುರಿ ಮರತಮಣಿ ಕೀರವಾಣಿ ಎನ್ನುವುದು ಅವರ ಪೂರ್ಣ ಹೆಸರು. ಸಂಬಂಧದಲ್ಲಿ ಅವರು ರಾಜಮೌಳಿ ಅವರ ಕಸಿನ್. ವರ್ಷ 61. ಸಿನೆಮಾ ಕ್ಷೇತ್ರಕ್ಕೆ ಬಂದು ಇಪ್ಪತ್ತು ವರ್ಷ ಆಗಿದೆ. ಸಂಗೀತ ಕೊಟ್ಟ ಸಿನೆಮಾಗಳ ಸಂಖ್ಯೆ ಅಂದಾಜು ಆರುವತ್ತು ಮಾತ್ರ! ಆದರೆ ಎಲ್ಲ ಸಿನೆಮಾ, ಎಲ್ಲ ಹಾಡುಗಳೂ ಹಿಟ್! ಬಾಹುಬಲಿ ಸರಣಿ ಸಿನೆಮಾಗಳಿಗೆ ಮ್ಯೂಸಿಕ್ ಕೊಟ್ಟವರು ಇದೇ ಕೀರವಾಣಿ! ಅವರಿಗೆ ಈಗಾಗಲೇ ಒಂದು ರಾಷ್ಟ್ರಪ್ರಶಸ್ತಿ, ಆರು ಫಿಲ್ಮಫೇರ್ ಪ್ರಶಸ್ತಿ, ಎಂಟು ತೆಲುಗಿನ ನಂದಿ ಪ್ರಶಸ್ತಿಗಳು ಲಭಿಸಿವೆ!
ಇಂದಿನ ಯುವಜನತೆಗೆ ಏನು ಬೇಕು ಎಂದು ಅವರಿಗೆ ಸರಿಯಾಗಿ ಗೊತ್ತಿದೆ. ಹಾಗೆ ಹುಟ್ಟಿದ್ದು ಈ ಮುತ್ತಿನಂತಹ ಹಾಡು! ಈ ಹಾಡಿನ ವೇಗವೇ ಅದರ ಯಶಸ್ಸು. ಬ್ರಿಟಿಷ್ ಅರಸೊತ್ತಿಗೆಗೆ ಸಡ್ಡು ಹೊಡೆಯುವ ಇಬ್ಬರು ಯುವಕರು ರಾಜಕುಮಾರಿಯ ಮುಂದೆ ಅದ್ಭುತ ಕುಣಿಯುವ ಹಾಡು ಇದು. ಈ ಹಾಡಿನ ಅಸಾಧಾರಣವಾದ ವೇಗಕ್ಕೆ ಅಷ್ಟೇ ಅದ್ಭುತವಾದ ಹಿನ್ನೆಲೆಯ ಸಂಗೀತ ಇದೆ. ಅಷ್ಟೇ ಅದ್ಭುತವಾದ ಕೊರಿಯೋಗ್ರಫಿಯು ಇದೆ. ಅಷ್ಟೇ ವೇಗವಾಗಿ ಚಲಿಸುವ ಸಿನಿಮಾಟೋಗ್ರಫಿ ಇದೆ. ಆ ಹಾಡು ಸಿನೆಮಾದಲ್ಲಿ ಬಂದಾಗಲೆಲ್ಲ ಇಡೀ ಥಿಯೇಟರ್ ಒಳಗಿರುವ ಕಾಲೇಜು ಹೈಕಳು ಸೀಟಿನಿಂದ ಎದ್ದು ಕುಣಿಯಲು ತೊಡಗಿದ್ದು ಈ ಹಾಡಿನ ಸಕ್ಸಸ್! ಇದೀಗ ಅಕಾಡೆಮಿ ಪ್ರಶಸ್ತಿ ಕೂಡ ದೊರೆತದ್ದು ಇನ್ನೂ ದೊಡ್ಡ ಸಕ್ಸಸ್! ಈ ವರ್ಷದ ಜನವರಿ ತಿಂಗಳಲ್ಲಿ ಇದೇ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ದೊರೆತಿರುವುದು ಉಲ್ಲೇಖನೀಯ ಭರತವಾಕ್ಯ.
ಈ ಜಾಗತಿಕ ಮಟ್ಟದ ಪ್ರಶಸ್ತಿ ಗೆದ್ದ ಕೀರವಾಣಿ ಮತ್ತವರ ತಂಡಕ್ಕೆ ಖಂಡಿತವಾಗಿ ನಮ್ಮ ಅಭಿನಂದನೆ ಇರಲಿ. ಅದರ ಜೊತೆಗೆ ಎಲಿಫೆಂಟ್ ವಿಸ್ಪರ್ ಎಂಬ ತಮಿಳು ಭಾಷೆಯ ಸಾಕ್ಷ್ಯಚಿತ್ರಕ್ಕೆ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಇನ್ನೊಂದು ಅಕಾಡೆಮಿ ಪ್ರಶಸ್ತಿ ಬಂದಿದೆ. ಅವರನ್ನೂ ಅಭಿನಂದನೆ ಮಾಡೋಣ ಆಯ್ತಾ.
-ರಾಜೇಂದ್ರ ಭಟ್ ಕೆ