Thursday, September 19, 2024
Thursday, September 19, 2024

ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್

ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್

Date:

ಪುಣೆ ರೈಲು ನಿಲ್ದಾಣದಲ್ಲಿ 50 ವರ್ಷಗಳ ಹಿಂದೆ ಹಾಡುತ್ತ, ಭಿಕ್ಷೆ ಬೇಡುತ್ತಿದ್ದ ಒಬ್ಬ ಅನಾಥ ಮಹಿಳೆ ಇಂದು 1400 ಬೀದಿ ಬದಿಯ ಮಕ್ಕಳ ಮಹಾತಾಯಿ ಆದ ಕಥೆಯು ತುಂಬಾ ರೋಚಕವಾದದ್ದು! ಆಕೆಯ ಬದುಕು ಒಂದು ಅದ್ಭುತವಾದ ಯಶೋಗಾಥೆ.

ಸಿಂಧೂತಾಯಿ ಹುಟ್ಟಿದ್ದು ಒಂದು ಅತ್ಯಂತ ಬಡತನದ ಕುಟುಂಬದಲ್ಲಿ. ಅವರು ದನಗಾಹಿಗಳು. ಸಿಂಧೂ ಹುಟ್ಟಿದಾಗ ಹೆಣ್ಣು ಮಗು ಅವಳ ಹೆತ್ತವರಿಗೆ ಹೊರೆ ಆಗಿತ್ತು. ಬಡತನದ ಕಾರಣಕ್ಕೆ ನಾಲ್ಕನೇ ತರಗತಿಗೆ ಅವಳ ವಿದ್ಯಾಭ್ಯಾಸ ನಿಂತು ಹೋಯಿತು.

10ನೆಯ ವಯಸ್ಸಿಗೆ ಮದುವೆ ಆಯಿತು. ಅವಳ ಗಂಡನಿಗೆ ಆಗ 30 ವರ್ಷ! ಆಕೆಗೆ ತನ್ನ ಗಂಡನ ಮನೆಯಲ್ಲಿಯೂ ಬಡತನದ ಬವಣೆ ತಪ್ಪಲಿಲ್ಲ. ಮುಂದೆ 10 ವರ್ಷಗಳಲ್ಲಿ ಮೂರು ಗಂಡು ಮಕ್ಕಳು ಆಕೆಗೆ ಹುಟ್ಟಿದರು. ಆಕೆ ನಾಲ್ಕನೇ ಬಾರಿ ಗರ್ಭಿಣಿ ಆದಾಗ ಗಂಡ ಆಕೆಯನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ. ಆಗ ಅವಳಿಗೆ ಕೇವಲ 20 ವರ್ಷ. ಅಳುವುದು ಮಾತ್ರ ಆಕೆಗೆ ಗೊತ್ತಿತ್ತು.

ದನದ ಕೊಟ್ಟಿಗೆಯಲ್ಲಿ ಅವಳು ತನ್ನ ನಾಲ್ಕನೆಯ ಮಗುವಿಗೆ ಜನ್ಮ ನೀಡಿದರು. ಅದು ಹೆಣ್ಣು ಮಗು. ಅವಳಿಗೆ ಮಮತಾ ಎಂದು ಹೆಸರಿಟ್ಟರು. ಹಸಿವು ನೀಗಿಸಲು ಮೈಲುಗಟ್ಟಲೆ ದೂರ ನಡೆದರು. ರೈಲು ನಿಲ್ದಾಣಗಳಲ್ಲಿ ಹಾಡುತ್ತ ಭಿಕ್ಷೆ ಬೇಡಿದರು. ರಾತ್ರಿ ಚಳಿಯಲ್ಲಿ ಭದ್ರತೆಗಾಗಿ ಸ್ಮಶಾನದಲ್ಲಿ ಗೋರಿಗಳ ಮಧ್ಯೆ ಮಲಗಿದರು. ಬದುಕು ಭಾರವಾಗಿ ಒಮ್ಮೆ ಆತ್ಮಹತ್ಯೆ ಕೂಡ ಮಾಡಲು ನಿರ್ಧಾರ ಕೂಡ ಮಾಡಿದ್ದರು.

ರೈಲಿಗೆ ತಲೆ ಕೊಟ್ಟು ಸಾಯಲು ನಿರ್ಧಾರ ಮಾಡಿ ಅವರು ಒಂದು ರಾತ್ರಿಯ ಹೊತ್ತು ರೈಲ್ವೆ ಸ್ಟೇಷನ್ನಿಗೆ ಬರುತ್ತಾರೆ ಮತ್ತು ರೈಲಿಗಾಗಿ ಕಾಯುತ್ತಾರೆ. ಅಷ್ಟು ಹೊತ್ತಿಗೆ ಒಂದು ಮಗುವಿನ ಅಳುವಿನ ಧ್ವನಿ ಕೇಳುತ್ತದೆ. ಅಲ್ಲಿ ಒಂದು ಅನಾಥ ಮಗು ಹಸಿವೆಯಿಂದ ಜೋರಾಗಿ ಅಳುತ್ತಿತ್ತು.

ತನ್ನ ಸೆರಗಿನ ತುದಿಯಲ್ಲಿದ್ದ ಗಂಟು ತೆರೆದು ರೊಟ್ಟಿಯ ಚೂರು ಮಗುವಿನ ಬಾಯಿಗೆ ಕೊಟ್ಟಾಗ ಮಗು ಅಳುವುದನ್ನು ನಿಲ್ಲಿಸಿತು. ಎಷ್ಟೋ ಹೆತ್ತವರು ಬಿಟ್ಟು ಹೋದ ಅನಾಥ ಮಕ್ಕಳು ಅಲ್ಲಿ ಇರುವುದನ್ನು ನೋಡಿದಾಗ ಅವರೊಳಗೆ ಇದ್ದ ಅದ್ಭುತ ತಾಯಿಯು ಜಾಗೃತವಾದಳು. ಆ ಮಕ್ಕಳನ್ನು ಸಾಕಬೇಕು ಎಂದು ಅವರು ನಿರ್ಧಾರ ಮಾಡಿದರು. ಆತ್ಮಹತ್ಯೆ ಮಾಡುವ ನಿರ್ಧಾರ ಕೈಬಿಟ್ಟರು!

ಸ್ವತಃ ಅನಾಥೆಯಾದ ಮತ್ತು ನಿಲ್ಲಲು ಆಶ್ರಯವಿಲ್ಲದ ಸಿಂಧೂತಾಯಿ ಆ ಮಕ್ಕಳನ್ನು ಸಾಕಬೇಕು ಎಂದು ನಿರ್ಧಾರವನ್ನು ಮಾಡಿಯಾಗಿತ್ತು. ಆದರೆ ಹೇಗೆ? ಹೆಚ್ಚು ಹಾಡು, ಹೆಚ್ಚು ಭಿಕ್ಷೆ ಬೇಡುತ್ತಾರೆ. ದಾನಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತಾರೆ. ಎಲ್ಲೋ ಒಂದಿಬ್ಬರು ಸ್ಪಂದಿಸಿದರು. ಉಳಿದವರು ಬಾಗಿಲು ಹಾಕಿದರು.

ಹಲವರ ಸಲಹೆಗಳನ್ನು ಪಡೆದು ಆಕೆ ಒಂದು ಸರಕಾರೇತರ ಸಂಸ್ಥೆಯನ್ನು ತೆರೆಯುತ್ತಾರೆ. ಪೈಸೆ ಪೈಸೆಯನ್ನು ಒಟ್ಟು ಮಾಡುತ್ತಾರೆ. ಹಸಿವನ್ನು ಮರೆಯುತ್ತಾರೆ. ಚಪ್ಪಲಿ ಹರಿದರೂ ಲೆಕ್ಕಿಸದೆ ಕಾಲ್ನಡಿಗೆಯಲ್ಲಿ ಬಿಸಿಲಿಗೆ, ಮಳೆಗೆ ಓಡಾಡುತ್ತಾರೆ.

ಮಹಾರಾಷ್ಟ್ರದ ಹಡಪ್ಸಾರ್ ಎಂಬ ಸ್ಥಳದಲ್ಲಿ ‘ಸನ್ಮತಿ ಬಾಲನಿಕೇತನ್’ಎಂಬ ಮೊದಲ ಬೀದಿಯ ಮಕ್ಕಳ ಅನಾಥಾಶ್ರಮ ತೆರೆಯುತ್ತಾರೆ. ಪ್ರೀತಿಯಲ್ಲಿ ಪಕ್ಷಪಾತದ ನೆರಳು ಬೀಳಬಾರದು ಎಂಬ ಕಾರಣಕ್ಕೆ ತನ್ನ ಸ್ವಂತ ಮಗಳನ್ನು ಬೇರೆ ಒಬ್ಬರ ಅನಾಥಾಶ್ರಮಕ್ಕೆ ಸೇರಿಸಿ ಬರುತ್ತಾರೆ. ಸರಕಾರದ ಯಾವ ಅನುದಾನವನ್ನೂ ಕಾಯದೆ ಕೇವಲ ಸೇವಾಸಕ್ತ ದಾನಿಗಳ ನೆರವಿನಿಂದ ಆಶ್ರಮವನ್ನು ನಡೆಸುತ್ತಾರೆ.

ಅವರ ಹೋರಾಟಕ್ಕೆ 50 ವರ್ಷ ತುಂಬಿತು. ಈಗ ಮಹಾರಾಷ್ಟ್ರದ ನಾಲ್ಕು ನಗರಗಳಲ್ಲಿ ಆರು ಅನಾಥಾಶ್ರಮಗಳನ್ನು ಮುನ್ನಡೆಸಿ 1400 ಅನಾಥ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ತಾಯಿ ಆಗಿದ್ದಾರೆ! ಅವರ ಆಶ್ರಮದಲ್ಲಿ ಓದುತ್ತಿರುವ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಿದ್ದಾರೆ.

ಡಾಕ್ಟರ್, ಪ್ರೊಫೆಸರ್, ಇಂಜಿನಿಯರ್, ವಕೀಲ, ಶಿಕ್ಷಕ, ಉದ್ಯಮಿ ಮೊದಲಾದ ಹಲವರು ಅವರ ಆಶ್ರಮದಿಂದ ಮೂಡಿ ಬಂದಿದ್ದಾರೆ. ಅವರಿಗೆ ಸರಳವಾಗಿ ಮದುವೆ ಮಾಡಿಸುತ್ತಾರೆ.

ಈವರೆಗೆ 207 ಅಳಿಯಂದಿರು, 36 ಸೊಸೆಯರು, 1000ಕ್ಕಿಂತ ಹೆಚ್ಚು ಮೊಮ್ಮಕ್ಕಳು ಅವರಿಗಿದ್ದಾರೆ! ಅವರೆಲ್ಲರೂ ಆಕೆಯನ್ನು ಆಯಿ ಎಂದೇ ಕರೆಯುತ್ತಾರೆ. ಅವರ ಆಶ್ರಮದ ಒಬ್ಬ ಹುಡುಗ ಪದವಿ ಪಡೆದು ಅವರ ಬದುಕಿನ ಮೇಲೆಯೇ ಪಿಹೆಚ್.ಡಿ ಮಾಡಿದ್ದಾನೆ!

ಸಿಂಧೂತಾಯಿ ದೊಡ್ಡ ವೇದಿಕೆಗಳಲ್ಲಿ ತನ್ನ ಬದುಕಿನ ಹೋರಾಟದ ಕಥೆಯನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ತುಂಬಾ ಪ್ರಭಾವಶಾಲಿಯಾಗಿ ವರ್ಣನೆ ಮಾಡುತ್ತಾರೆ. “ಮಂಜಿಲ್ ಬಹುತ್ ದೂರ ಹೈ. ಜಾನಾ ವಹಾನ್ ಜರೂರಿ ಹೈ! ರಾಸ್ತಾ ಮುಷ್ಕಿಲ್ ಹೈ. ಹಮೆ ಮರನಾ ಮಂಜೂರು ಹೈ “ಎಂದು ಹೇಳಿ ಮಾತು ಮುಗಿಸುತ್ತಾರೆ. ಬಂದವರ ಮುಂದೆ ಸೆರಗು ಹಿಡಿದು ಭಿಕ್ಷೆ ಬೇಡುತ್ತಾರೆ. ಬಂದ ಹಣವನ್ನೆಲ್ಲ ತನ್ನ ಆಶ್ರಮಕ್ಕೆ ತಂದು ಸುರಿಯುತ್ತಾರೆ.

ಸಿಂಧೂತಾಯಿಗೆ ಈವರೆಗೆ 273 ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರೆತಿವೆ. 2016ರಲ್ಲಿ ಒಂದು ವಿವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಭಾರತ ಸರಕಾರವು ಆಕೆಗೆ ಮಹೋನ್ನತ ‘ನಾರಿ ಶಕ್ತಿ’ ಪ್ರಶಸ್ತಿಯನ್ನು ರಾಷ್ಟ್ರಪತಿಗಳ ಮೂಲಕ ( 2017) ನೀಡಿ ಗೌರವಿಸಿದೆ.

ಪ್ರಶಸ್ತಿಗಳಿಂದ ಬಂದ ಅಷ್ಟೂ ಹಣವನ್ನು ಅವರು ತನ್ನ ಆಶ್ರಮದ ಖರ್ಚಿಗೆ ವಿನಿಯೋಗಿಸಿದ್ದಾರೆ. ಆಕೆಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರವು ಆಕೆಗೆ ಬಸವ ಶ್ರೀ ಪ್ರಶಸ್ತಿ ನೀಡಿದೆ.

ಸಿಂಧೂ ತಾಯಿ ಸಪ್ಕಲ್ ಅವರ ಬದುಕಿನ ಕಠಿಣ ಹೋರಾಟದಿಂದ ಸ್ಫೂರ್ತಿಯನ್ನು ಪಡೆದು ಮರಾಠಿ ಭಾಷೆಯಲ್ಲಿ ‘ಮೀ ಸಿಂಧುತಾಯ್ ಸಪಕಾಲ್’ ಎಂಬ ಸಿನಿಮಾ ಬಂದಿದ್ದು ಅದು ಪ್ರಶಸ್ತಿ ಪಡೆದಿದೆ. ಸಿಂಧೂ ತಾಯಿ ಬದುಕು ಸಾವಿರಾರು ಮಂದಿಗೆ ಸ್ಫೂರ್ತಿ ನೀಡಿದೆ.

ಅವರು ಜನವರಿ 4, 2022 ರಂದು ನಿಧನರಾದರು. ಆಕೆ ನಿಜವಾದ ಅರ್ಥದಲ್ಲಿ ಅನಾಥ ಮಕ್ಕಳ ಮಹಾಮಾತೆಯೇ ಸರಿ.

ರಾಜೇಂದ್ರ ಭಟ್ ಕೆ. (ಜೇಸಿಐ ರಾಷ್ಟ್ರೀಯ ತರಬೇತುದಾರರು)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...

ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ಉಡುಪಿ, ಸೆ.19: ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಅಕ್ಟೋಬರ್ 30 ರಿಂದ ನವೆಂಬರ್...

ಪವರ್ ಲಿಫ್ಟಿಂಗ್: ವೈಷ್ಣವಿ ಖಾರ್ವಿಗೆ ಬೆಳ್ಳಿ ಪದಕ

ಉಡುಪಿ, ಸೆ.19: ರಾ ಫಿಟ್ನೆಸ್ ಸಾಲಿಗ್ರಾಮ ಇವರ ವತಿಯಿಂದ ಸಾಲಿಗ್ರಾಮದ ಮೊಗವೀರ...
error: Content is protected !!