ತೊಂಬತ್ತು ಸಂವತ್ಸರದ ಹೆಜ್ಜೆಯಿಟ್ಟು ಮುನ್ನೆಡೆಯುತ್ತಿರುವ ಸ.ಹಿ.ಪ್ರಾ. ಶಾಲೆ ಸಾಯ್ಬ್ರಕಟ್ಟೆ ವಿಶೇಷ ಕಾರ್ಯಕ್ರಮದ ಜೊತೆಗೆ ಹಲವಾರು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿ ಗುರುತಿಸಿಕೊಂಡು ಜೊತೆಗೆ ಅಭಿವೃದ್ಧಿ ಮುಖೇನ ಹಳ್ಳಿ ಭಾಗದ ಸರಕಾರಿ ಶಾಲೆಯಾದರೂ ವಿಭಿನ್ನವಾಗಿ ಗುರುತಿಕೊಳ್ಳುತ್ತಿದೆ. ದಿ. ಮಹಾಬಲ ಶೆಟ್ಟಿ ಅವರ ಮನೆಯಲ್ಲಿ 06-10-1932 ರಂದು ಆರಂಭಗೊಂಡು ಯಶಸ್ವಿಯಾಗಿ ತೊಂಬತ್ತರ ಶೈಕ್ಷಣಿಕ ವರುಷ ಪೂರೈಸಿ ಶತಕದಂಚಿನಲ್ಲಿ ಸಾಗುತ್ತಿದೆ. ಶೈಕ್ಷಣಿಕ ಕ್ರಾಂತಿ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ವಿಭಾಗದಲ್ಲಿಯೂ ಮಕ್ಕಳನ್ನು ಸಿದ್ದಪಡಿಸಿ ಹಲವಾರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾಗಿದೆ. ಕೇವಲ ವಿದ್ಯಾರ್ಥಿಗಳನ್ನು ಶಿಕ್ಷಣದ ಕಲಿಕೆಗೆ ಒತ್ತು ಕೊಡದೆ ಸೃಜನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವಂತಹ ಪ್ರಯೋಗಗಳನ್ನು ಶಿಕ್ಷಕ ವೃಂದದವರು ವಿದ್ಯಾರ್ಥಿಗಳನ್ನು ತಯಾರಿಗೊಳಿಸುತ್ತಿದ್ದಾರೆ.
ಸ.ಹಿ.ಪ್ರಾ ಶಾಲೆ ಸಾಯ್ಬ್ರಕಟ್ಟೆ ಇಂದು ದಾನಿಗಳು, ಹಳೆವಿದ್ಯಾರ್ಥಿಗಳು, ಪೋಷಕರ ಸಹಕಾರದಿಂದ ಅಭಿವೃದ್ಧಿಗೊಂಡು ಮಕ್ಕಳ ಕಲಿಕೆಗೆ ಪೂರಕವಾದ ವಾತವರಣ ನಿರ್ಮಿಸುವಲ್ಲಿ ಸಹಕಾರಿಯಾಗುತ್ತಿದೆ. ವಿದ್ಯಾರ್ಥಿಗಳ ತಂತ್ರಜ್ಞಾನ ಆಧಾರಿತ ಕಲಿಕೆಗೆ ಅಂತರ್ಜಾಲ ವಿಸ್ಮಯ ಸುಸಜ್ಜಿತ ಕಂಪ್ಯೂಟರ್ ಕೊಠಡಿ, ಮಕ್ಕಳ ಸಂತಸದಾಯಕ ಆಟದೊಂದಿಗೆ ಕಲಿಕೆಗೆ ಬಾಲವನ, ಗೌರವ ಶಿಕ್ಷಕರ ನೇಮಕ, ಸ್ಮಾರ್ಟ ಕ್ಲಾಸ್, ಶಾಲಾ ಸುರಕ್ಷತೆಗೆ ಸಿ.ಸಿ ಕ್ಯಾಮರ, ಮಕ್ಕಳ ಜ್ಞಾನಾರ್ಜನೆಗೆ ವ್ಯವಸ್ಥಿತವಾದ ಗ್ರಂಥಾಲಯ, ಶುದ್ದ ಕುಡಿಯುವ ನೀರಿನ ಘಟಕ, ಕೊಠಡಿಯ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಾಣ, ಭಾಷ ಪ್ರಯೋಗಾಲಯ ಸೇರಿದಂತೆ ಜೊತೆಗೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಮಾದರಿ ಶಾಲೆಯಾಗಿ ರೂಪುಗೊಂಡು ತನ್ಮೂಲಕ ದಾಖಲಾತಿ ಪ್ರಮಾಣ ಹೆಚ್ಚಿಸಿಕೊಂಡಿರುವುದು ಶಾಲೆಯ ಶೈಕ್ಷಣಿಕ ಪರಿಗೆ ಸಾಕ್ಷಿಯಾಗಿದೆ.
ಕನಸುಗಳು ನೂರಾರು: ತಾವು ಕಲಿತು ಶಿಕ್ಷಿತರು ಎನ್ನುವ ಬಿರುದು ನೀಡಿದ ಶಾಲೆಗೆ ಏನಾದರೂ ನೀಡಬೇಕು ಎನ್ನುವ ಹಳೆ ವಿದ್ಯಾರ್ಥಿಗಳ ತಂಡ, ಎಸ್.ಡಿ.ಎಮ್.ಸಿ ಬಳಗ, ಪೋಷಕರು ಹಾಗೂ ಜೊತೆಗೆ ಮಕ್ಕಳ ಪ್ರತಿ ಹೆಜ್ಜೆಯಲ್ಲೂ ಹುರಿದುಂಬಿಸಿ ಶಿಕ್ಷಣದ ದಾಹ ನೀಗಿಸುತ್ತಿರುವ ಪ್ರಬುದ್ಧ ಶಿಕ್ಷಕ ವೃಂದದಿಂದ ಹಲವಾರು ಕನಸು ಮುಂದಿದ್ದು ನನಸಾಗಿಸಲು ಶತಸಿದ್ಧ ಪ್ರಯತ್ನ ಈಗಾಗಲೇ ಜಾರಿಯಲ್ಲಿದೆ. ತೊಂಬತ್ತರ ಸಂಭ್ರಮದಲ್ಲಿ ಈಗಾಗಲೇ ಶಾಲೆಯ ಗೋಡೆಗೆ ರೈಲು ಬಂಡಿ ಚಿತ್ತಾರದ ಸ್ಪರ್ಶ ನೀಡಿ ಎಲ್ಲರನ್ನು ಆಕರ್ಷಿಸುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟೂ ಶೈಕ್ಷಣಿಕ ಪ್ರಗತಿ ಜಾರಿಗೊಳಿಸಿ ಮಕ್ಕಳಲ್ಲಿನ ಅಭಿರುಚಿಗೆ ತಕ್ಕಂತೆ ಅವರನ್ನು ಸನ್ನದ್ದುಗೊಳಿಸುವ ನಿಟ್ಟಿನಲ್ಲಿ ಇಂಗ್ಲೀಷ್, ಹಿಂದಿ, ಕನ್ನಡ ಭಾಷಾ ಶಿಕ್ಷಣಕ್ಕೆ ಒತ್ತು ನೀಡುವ ಮಹಾದಾಸೆಯಿಂದ ಭಾಷಾಲಯ ನಿರ್ಮಾಣ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಕಲಿಕೆಗೆ ಕೋರ್ಸ್ ಸಬ್ಜಟ್‌ಗಳ ಕರ‍್ಲ್ ಲ್ಯಾಬ್, ಹೊಸ ಕಟ್ಟಡದ ಮೇಲ್ಭಾಗದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬೆಂಚ್ ಡೆಸ್ಕ್ ಪೂರೈಕೆ, ಮಕ್ಕಳು ನಲಿಯುತ ಕಲಿಯಲು ಆಧುನಿಕ ಸ್ಪರ್ಶ ನೀಡುವ ಸ್ಮಾರ್ಟ್ ಕ್ಲಾಸ್, ಹೊರಾಂಗಣದಲ್ಲಿ ಇಂಟರ್‌ಲಾಕ್ ವ್ಯವಸ್ಥೆ, ಪರಿಸರ ಕಾಳಜಿ ಮೂಡಿಸುವ ದಿಸೆಯಲ್ಲಿ ಶಾಲಾ ಕೈ ತೋಟ, ಹೀಗೆ ಹತ್ತು ಹಲವು ಯೋಜನೆಗಳ ಯೋಚನೆ ಮನದಲ್ಲಿದೆ.
ತೊಂಬತ್ತರ ತೋರಣಕ್ಕೆ ವೇದಿಕೆ ಸಜ್ಜು: ತೊಂಬತ್ತರ ಹೆಜೆಯನ್ನಿಟ್ಟು ಶತಕದತ್ತ ದಾಪುಗಾಲು ಇಡುತ್ತಿರುವ ಶಾಲೆ ಸಂಭ್ರಮಕ್ಕೆ ಇಮ್ಮಡಿಗೊಳ್ಳುವ ಉದ್ದೇಶದಿಂದ ಜನವರಿ 5, 6 ರಂದು ಬಾಂಧ್ಯವ್ಯ ಬೆಸುಗೆಯೊಡನೆ ನೆನಪಿನ ತೇರು ಎಳೆಯಲು ಶಾಲಾ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬ್ರಹ್ಮಾವರ, ಹಳೆ ವಿದ್ಯಾರ್ಥಿ ಸಂಘ ಎಸ್ ಡಿ ಎಮ್ ಸಿ ಹಾಗೂ ಪೋಷಕರು ಉತ್ಸುಹಕರಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನವರಿ 5 ರಂದು ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, ಸಂಜೆ 5.30ಕ್ಕೆ ಅಂಗನವಾಡಿ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವಿವಿಧ ವಿನೋದಾವಳಿ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ‘ಬರ್ಬರಿಕ’ ಹಾಗೂ ‘ಅಮ್ಮಾ…ನಿನ್ ಬಿಟ್ಟು ಹೋಗಲ್ಲ’ ನಾಟಕ ಪ್ರದರ್ಶನವಿದೆ. ಜನವರಿ 6 ರಂದು ಸಂಜೆ 6 ಗಂಟೆಗೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದ್ದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿ ಶಾಲೆಯ ಹೆಸರನ್ನು ಬೆಳಗಿಸಿದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲ್ಲಿದ್ದು ನಂತರ ಸ್ಥಳಿಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಹಾಗೂ ಹಳೆ ವಿದ್ಯಾರ್ಥಿಗಳಿಂದ ‘ಎಂತಾ ಆತ್ ಕಾಂಬ’ ನಾಟಕ ಪ್ರದರ್ಶನಗೊಳ್ಳಲಿದೆ.


ಹಳೆ ವಿದ್ಯಾರ್ಥಿಗಳು ನಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಇಟ್ಟುಗೊಂಡು ಏನಾದರೂ ಶಾಲೆಯಲ್ಲಿ ನಡೆಯುವ ಅಭಿವೃದ್ಧಿ ಜೊತೆಗೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಹಾಯ ನೀಡಬೇಕು. ಈ ದೃಷ್ಟಿಯಿಂದ ಶಾಲೆಯ ಉನ್ನತಿಕರಣದ ಬಗ್ಗೆ ಈಗಾಗಲೇ ತೊಡಗಿಸಿಗೊಂಡಿದ್ದು ಇನ್ನಷ್ಟೂ ಆಧುನೀಕರಣಗೊಳಿಸುವ ಹಂಬಲದೊಂದಿಗೆ ಯೋಜನೆ ರೂಪಿಸಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಶೋಕ್ ಪ್ರಭು ಹೇಳಿದ್ದಾರೆ.
ಹಳೆ ವಿದ್ಯಾರ್ಥಿಗಳ ಸಹಕಾರ, ಎಸ್‌ಡಿಎಮ್‌ಸಿ ಅವರ ಪ್ರೋತ್ಸಾಹದಿಂದ ಶಾಲೆಯು ಹಲವಾರು ಅಭಿವೃದ್ಧಿ ಕಾಣುತ್ತಿದ್ದು ಈಗಾಗಲೇ 245 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯು ಸದೃಢ ಸಮಾಜ ಕಟ್ಟುವ ಒಂದು ಭಾಗವಾಗಿದ್ದು ಎಲ್ಲರ ಸಹಕಾರದಿಂದ ಇನ್ನಷ್ಟು ಹೊಸ ಯೋಜನೆ ರೂಪಿಸಲು ಸಾಧ್ಯ ಎಂದು ಮುಖ್ಯೋಪಾಧ್ಯಾಯಿನಿ ಜಯಂತಿ ಅಭಿಪ್ರಾಯಪಟ್ಟಿದ್ದಾರೆ.
-ಪ್ರಶಾಂತ್ ಸೂರ್ಯ ಸಾಯ್ಬ್ರಕಟ್ಟೆ