ಬಾಲ್ಯದಲ್ಲಿ ಬುದ್ದಿಬಂದಾಗಿನಿಂದ ಹಿಡಿದು ಇಂದಿನವರೆಗೂ ನಮ್ಮಂತಹ ಎಂಬತ್ತು-ತೊಂಬತ್ತರ ದಶಕದಲ್ಲಿನ ಮನಸ್ಸುಗಳಿಗೆ ಗೊತ್ತು ಸ್ವಾತಂತ್ರ್ಯ ದಿನಾಚರಣೆಯ ನಿಜವಾದ ಸಂಭ್ರಮ?! ಹೇಗಿತ್ತೆಂದು! ಈ ಕಾಲದವರಿಗೇನು ಗೊತ್ತು ಆ ಕಾಲದ ಸ್ವಾತಂತ್ರ್ಯೋತ್ಸವು.. ಅದೆಷ್ಟು ಸಂಭ್ರಮದಲ್ಲಿತ್ತೆಂದು!! ? ಇಂದು ನಾವು ಅದೆಷ್ಟು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರೂ ನಮ್ಮ ಬಾಲ್ಯದಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮತ್ತು ಸಡಗರಕ್ಕೆ ಸಾಟಿಯಾಗಲಾರದು ಈ ದಿನಗಳ ಆಚರಣೆ- ಸಂಭ್ರಮ !! ಆ ಕಾಲದ ಧ್ವಜ ಪ್ರೀತಿಗೂ ಈ ಕಾಲದ ಸಂಭ್ರಮದ ದಿನದ ಪ್ರೀತಿಗೂ ತುಂಬ ವೈರುಧ್ಯಗಳಿವೆ.
ಹೇಳಿ-ಕೇಳಿ ನಾವು ‘ಹಳ್ಳಿಗರು’ ಹಳ್ಳಿ ಅಂದ್ರೆ ಹಾಗೇನೆ ಸಂಭ್ರಮಕ್ಕೇನೂ ಕಡಿಮೆಯಿಲ್ಲ !! ಹಳ್ಳಿಯಲ್ಲಿ ನಾವೆಲ್ಲ ಕಲಿತ ದೇಶಭಕ್ತಿಯ ಪಾಠಕ್ಕೆ ಕೊರತೆಯಿರಲಿಲ್ಲ. ತೋರಿಕೆ , ಇನ್ನೊಬ್ಬರ ಮೆಚ್ಚುಗೆಗಾಗಿ ನಮ್ಮಲ್ಲಿ ದೇಶಭಕ್ತಿ ಕಂಡಿತ ಸುಳಿಯಲೇ ಇಲ್ಲ. ಆ ದಿನದ ಮನೆಯ ಸಂಸ್ಕೃತಿ ,ಮಣ್ಣು ,ಗಾಳಿ, ನೀರು, ಹಿರಿಯರ ಒಡನಾಟಗಳ ಸಂಸ್ಕಾರವೇ ಈ ದೇಶದ ಸಂಸ್ಕೃತಿಯಾಗಿ ನಮ್ಮಲ್ಲಿ ನಮ್ಮದೇಶ ಎಂಬ ಅಭಿಮಾನ, ದೇಶಭಕ್ತಿಯ ರೀತಿ ಪ್ರೀತಿಯಾಗಿ ಬಂದಿರಬಹುದು. ಬಾಯಲ್ಲಿ ರಾಷ್ಟ್ರ ನಾಯಕರನ್ನು ಸ್ಮರಣಿಸುತ್ತಾ ;ಅದರೊಂದಿಗೆ ಸ್ವಾತಂತ್ರವೀರರ ತ್ಯಾಗ-ಬಲಿದಾನವನ್ನು ನೆನೆಯುತ್ತಾ ಹೆಮ್ಮೆಯಿಂದ ಭಾರತ್ ಮಾತಾಕೀ ಜೈ ಎಂದು ಸಾಗುತ್ತಿತ್ತು ನಮ್ಮ ಪುಟ್ಟ ದಂಡು.
ಸ್ವಾತಂತ್ರ್ಯೋತ್ಸವ ಶುರುವಾಗುವ ಅದೆಷ್ಟೋ ದಿನಗಳ ಮೊದಲೇ ನಮ್ಮನ್ನು ನಾವೇ ಅಣಿಯಾಗೊಳಿಸುತ್ತಿದ್ದೆವು. ಶಾಲೆಯಲ್ಲಿ ಯಾವಾಗ ನಮ್ಮನ್ನು ಧ್ವಜಸ್ತಂಭವನ್ನು ಸ್ವಚ್ಛಗೊಳಿಸಲು ಕರೆಯಬಹುದು !? ಎಂದು ಕಾದು ಕುಳಿತುಕೊಳ್ಳುವ ರೀತಿ !! ಸ್ವಾತಂತ್ರ್ಯ ದಿನಾಚರಣೆಯ ಭಾಷಣವು ಸಿಗದೇ ಹೋದಾಗ ಸಹಪಾಠಿಯ ಭಾಷಣದಲ್ಲಿ ತಪ್ಪುಗಳನ್ನು ಹುಡುಕಿ ಭಾಷಣಗಳನ್ನು ನಾನೇ ಮಾಡುತ್ತೇನೆ ಟೀಚರ್ ! ಅಂತ ಹೇಳಿ…ಭಾಷಣವನ್ನು ಮಾಡುತ್ತಿದ್ದ ದಿನಗಳು !!… ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬೆಳಗ್ಗೆ ಬೇಗನೆ .ಧ್ವಜವನ್ನು ಕಟ್ಟಲು ಬೆಳಿಗ್ಗೆ ಬಂದು ಧ್ವಜಸ್ತಂಬದಲ್ಲಿನ ಕಂಬಕ್ಕೆ ಹತ್ತಲು ನಾ ಮುಂದೆ ತಾ ಮುಂದೆನ್ನುತ್ತಾ ಕಾದದ್ದು!! ಎಲ್ಲ ಘಟನೆಗಳು ಸ್ಮರಣೆಯ ಕತೆಗಳಾಗಿ ಇಂದು ನಮ್ಮೆಲ್ಲರ ಜೀವನದಲ್ಲಿ ಸುಂದರ ನೆನಪಾಗಿ ರೋಮಾಂಚನವನ್ನು ನೀಡಿದೆ.ಬಾಲ್ಯದಲ್ಲಿನ ನಮ್ಮ ಸ್ವಾತಂತ್ರೋತ್ಸವ ಮತ್ತು ಧ್ವಜ ಪ್ರೀತಿ ಬಹುದೊಡ್ಡದು!.
ಇಂದು ದೇಶ- ದೇಶಭಕ್ತಿಯನ್ನು ಕಲಿಯಲು, ಕಲಿಸಲು ನಾನಾ ರೀತಿಯ ಮಾರ್ಗಗಳಿವೆ, ಪಠ್ಯಗಳಿವೆ ದಾರಿಗಳಿವೆ.ಆದರೆ ನಾವು ಮಾತ್ರ ದೇಶಭಕ್ತಿಯನ್ನು ಕಲಿತದ್ದು ನಮ್ಮ ಹಿರಿಯರಿಂದ!! ನಮ್ಮ ಹಳ್ಳಿಯ ಪರಿಸರ , ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಧ್ವಜ ತೆಗೆದುಕೊಳ್ಳಲು ನಾವು ಪಟ್ಟ ಕಷ್ಟ !! ಈಗಿನ ಕಾಲದ ಮಕ್ಕಳಿಗೆ / ಮನಸ್ಸುಗಳಿಗೆ ಇದೆಲ್ಲ ಕಟ್ಟು ಕತೆಯಾಗಿ ಕಾಣಬಹುದು!. ಅಂದಿನ ಸ್ವಾತಂತ್ರ್ಯ ದಿನಾಚರಣೆಯಾಗಲಿ ಅಥವಾ ದೇಶಕ್ಕೆ ಸಂಬಂಧಿಸಿದ ಯಾವುದೇ ಆಚರಣೆಗಳಿರಲಿ ಅದರಲ್ಲಿ ಬೆಟ್ಟದಷ್ಟು ಅರ್ಥಗಳಿತ್ತು.ದೇಶಭಕ್ತಿಯ ಮೌಲ್ಯವನ್ನು ಸಹಜವಾಗಿ ಕಲಿಯುತ್ತಿದ್ದೇವು. ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕಾಗಿ ಧ್ವಜದ ಮಧ್ಯದಲ್ಲಿ ಹಾಕಲು ಮನೆ ,ಪಕ್ಕದ್ಮನೆ ,ಬೇಲಿಯ ಹತ್ತಿರ ಹುಡುಕಿ ತರುತ್ತಿದ್ದ ರಥ ಹೂವು ,ದಾಸವಾಳ , ಕಾಕಡ, ಗೊಂಡೆ ಹೂವುಗಳನ್ನು ಚಿಕ್ಕ ತೊಟ್ಟೆಯಲ್ಲಿ ಹಿಡಿದುಕೊಂಡು ಬೇಗನೆ ಮಾಷ್ಟ್ರು ಹತ್ತಿರ ನೀಡಿ ಶಭಾಷ್ ಪಡೆದುಕೊಳ್ಳುವುದು… ಗೆಳೆಯರ ಹತ್ತಿರ ನಾ ತಂದ ಹೂವು ಮತ್ತೆ ಧ್ವಜಾರೋಹಣ ಮಾಡುವಾಗ ಮೇಲಿನಿಂದ ಬಿಳ್ತದೆ ನೋಡು ಎಂದು ಡಂಗುರ ಸಾರುವುದು !!…ಧ್ವಜಾರೋಹಣ ಸಮಯದಲ್ಲಿ ನಾವು ತಂದ ಹೂವಿನ ಎಸಳು ಧ್ವಜದಿಂದ ಮೇಲೆನಿಂದ ಬಿದ್ದಾಗ ಆಗುವ ಸಂತೋಷ ಹೇಳತೀರದು.
ಅಂದು ನಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲು ಕಾಯುವ ದಿನಗಳು ! ಮತ್ತು ಸಂಭ್ರಮದ ಕ್ಷಣಗಳಿಗೆ ಬೆಲೆ ಕಟ್ಟಲಾದೀತೆ ಇಂದಿನ ಸಂಭ್ರಮ!! ಸ್ವಾತಂತ್ರ್ಯ ದಿನಾಚರಣೆಯ ದಿನದಂದು ರಜೆ ಹಾಕಿ ಮನೆಯಲ್ಲಿ ಕೂರುವ ಈಗೀನ ಕಾಲದ ಮಕ್ಕಳು /ಶಿಕ್ಷಕರಿಗೇನು ಗೊತ್ತು!? ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ !! ಬಾಲ್ಯದ ದಿನದಿಂದ ಹಿಡಿದು ಇಂದಿನವರೆಗೂ ಸ್ವಾತಂತ್ರ ದಿನಾಚರಣೆಯಂದು ಅಥವಾ ರಾಷ್ಟ್ರೀಯ ಹಬ್ಬಗಳಂದು ಬಾನೆತ್ತರಕ್ಕೆ ತ್ರಿವರ್ಣ ಧ್ವಜ ಹಾರಿದಾಗ ಕಣ್ಣಿನಲ್ಲಿ ಜಿನುಗುವ ಕಣ್ಣೀರಿನ ಬೆಲೆಯು ಹೃದಯದಲ್ಲಿನ ನಮ್ಮ ದೇಶಭಕ್ತಿಯ ಸಂಕೇತ ; ಕಣ್ಣಿರು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೀತಿ ಗೌರವದ ಅಶ್ರುತರ್ಪಣಾವಾಗಿದೆ.
–ಪ್ರದೀಪ್ ಡಿ.ಎಮ್.ಹಾವಂಜೆ
ಕನ್ನಡ ಉಪನ್ಯಾಸಕರು
ದುರ್ಗಾಪರಮೇಶ್ವರಿ ದೇವಳ ಪದವಿ ಕಾಲೇಜು ಕಟೀಲು.
ಕವಿ, ಬರಹಗಾರರು, ಆಕಾಶವಾಣಿ ಮಂಗಳೂರು ನಿರೂಪಕ
9902277784 /[email protected]