Sunday, January 19, 2025
Sunday, January 19, 2025

ನಿರಾಸೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿದಾಯ ಹೇಳಿದ ಭಾರತೀಯ ತಂಡ

ನಿರಾಸೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವಿದಾಯ ಹೇಳಿದ ಭಾರತೀಯ ತಂಡ

Date:

ಕ್ರೀಡೆಗಳಿಗೆ ಸಂಬಂಧಿಸಿ ಜಗತ್ತಿನ ಸಾಮರ್ಥ್ಯ ಅಳೆಯುವ ಏಕೈಕ ಪ್ರತಿಷ್ಠಿತ ಕ್ರೀಡಾಕೂಟವೆಂದರೆ ಅದು ಒಲಿಂಪಿಕ್ಸ್ ಕ್ರೀಡಾಕೂಟ. ಈ ಬಾರಿಯ 2024 ರ ಒಲಿಂಪಿಕ್ಸ್ ಕ್ರೀಡಾಕೂಟ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದು ಮುಕ್ತಾಯಗೊಂಡಿದೆ. ಸುಮಾರು 206 ದೇಶಗಳು ಈ ಬಹು ಪ್ರತಿಷ್ಠಿತ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವುದು ಒಂದು ವಿಶೇಷ ಸಂದರ್ಭವೂ ಹೌದು.

ಇದರಲ್ಲಿ ಭೌಗೋಳಿಕತೆ ಜನಸಂಖ್ಯೆ ಮತ್ತು ಆರ್ಥಿಕವಾಗಿ ಶ್ರೀಮಂತ ದೇಶಗಳಿಂದ ಹಿಡಿದು ಅತಿ ಚಿಕ್ಕ ರಾಷ್ಟ್ರಗಳು ಕೂಡ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಲು ಮುಂದಾಗಿದ್ದವು. ಒಟ್ಟಿನಲ್ಲಿ ಅಂತಿಮವಾಗಿ ಪ್ರಕಟಿತ ಕ್ರೀಡಾ ಪದಕಗಳ ಅಂಕೆ ಸಂಖ್ಯೆಗಳ ಫಲಿತಾಂಶ ನೇೂಡಿ ವಿಶ್ಲೇಷಿಸುವಾಗ ಕೆಲವೊಂದು ಪ್ರಮುಖ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುವುದು ಸಹಜ.

ಒಟ್ಟು ಪದಕ ಗಳಿಕೆಯಲ್ಲಿ ವಿಶ್ವದ ಅತೀ ಶ್ರೀಮಂತ ರಾಷ್ಟ್ರಗಳೇ ಮುಂದೆ ಇದ್ದಾವಾ? ಅಥವಾ ಚಿಕ್ಕ ಪುಟ್ಟ ರಾಷ್ಟ್ರಗಳ ಸಾಧನೆಯ ಪಟ್ಟಿಯೂ ಹೇಗಿದೆ? ಇಲ್ಲಿ ಬರೇ ಆರ್ಥಿಕ ಪರಿಸ್ಥಿತಿ ಒಂದೇ ದೇಶದ ಕ್ರೀಡಾ ಶಕ್ತಿಗೆ ಕಾರಣವಾಗಿದೆಯಾ? ಅಥವಾ ಅಲ್ಲಿನ ಪರಿಸರ ಪರಿಕರ ತರಬೇತಿ ಸವಲತ್ತುಗಳು ಪ್ರಮುಖ ಕಾರಣವಾಗಿರಬಹುದೇ ಅನ್ನುವುದನ್ನು ನಾವು ಆಳವಾಗಿ ಪರಿಶೀಲಿಸಬೇಕಾದ ಅನಿವಾರ್ಯತೆ ಭಾರತೀಯರ ಪಾಲಿಗೆ ಬಂದಿರುವುದಂತು ನಿಜ. ಅದೇ ರೀತಿ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಸಾಧನೆ ನಮಗೆ ತೃಪ್ತಿ ತಂದಿದೆಯಾ? ತೃಪ್ತಿ ತರದಿದ್ದರೆ ಈ ಸಾಧನೆಯ ಹಿನ್ನಡೆಗೆ ಕಾರಣಗಳೇನು? ಇದನ್ನು ಕೂಡಾ ಆತ್ಮಾವಲೇೂಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ನಮ್ಮ ಮುಂದಿದೆ.

ಒಟ್ಟಿನಲ್ಲಿ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಒಟ್ಟಾರೆ ಪದಕ ಗಳಿಕೆಯ ಗರಿಷ್ಠ ಸಾಧನೆಯಲ್ಲಿ ಯು.ಎಸ್.ಎ.126 ಪದಕಗಳನ್ನು ಮುಡಿಗೇರಿಸಿ ಕೊಳ್ಳುವುದರ ಮೂಲಕ ಮೊದಲ ಸ್ಥಾನದಲ್ಲಿ ನಿಂತಿದೆ ಅನ್ನುವುದು ಸ್ವಷ್ಟ. ಅದೇ ರೀತಿ ಚೀನಾ ಕೂಡಾ 91 ಪದಕಗಳನ್ನು ಗಳಿಸಿಕೊಂಡು ದ್ವಿತೀಯ ಸ್ಥಾನದಲ್ಲಿ ಬಂದು ನಿಂತಿದೆ. ಅಮೇರಿಕಾ ಅಂದ ತಕ್ಷಣವೇ ನಮಗೆ ನೆನಪಿಗೆ ಬರುವುದು ಆ ದೇಶದ ಆರ್ಥಿಕತೆ ತಾಂತ್ರಿಕತೆಯಲ್ಲಿ ಮುಂದಿರುವ ದೇಶವಾದರೆ, ದ್ವಿತೀಯ ಸ್ಥಾನದಲ್ಲಿರುವ ಚೀನಾ ಅಂದ ತಕ್ಷಣವೇ ನೆನಪಿಗೆ ಬರುವುದು ಅಲ್ಲಿನ ಜನಸಂಖ್ಯೆ ಪ್ರಮಾಣ ಮತ್ತು ಆರ್ಥಿಕತೆ ಜೊತೆಗೆ ತಾಂತ್ರಿಕತೆಯಲ್ಲೂ ಮುಂದುವರಿದ ದೇಶವೆಂದೇ ಬಿಂಬಿಸಲಾಗಿದೆ. ಆದರೆ ನಾವು ಇಲ್ಲಿ ಕ್ರೀಡಾ ಸಾಧನೆಯನ್ನು ಲೆಕ್ಕಾಚಾರ ಮಾಡುವಾಗ ಬರೇ ಆ ದೇಶಗಳಲ್ಲಿನ ಆರ್ಥಿಕ ವ್ಯವಸ್ಥೆಯಾಗಲಿ, ಜನಸಂಖ್ಯೆಯಾಗಲಿ ಪ್ರಾಮುಖ್ಯವಾದ ಅಳತೆಗೇೂಲು ಅನ್ನಿಸುವುದಿಲ್ಲ. ಇದಕ್ಕೆ ಕಾರಣವಿಷ್ಟೇ. ಭೌಗೋಳಿಕವಾಗಿ ಜನಸಂಖ್ಯೆ ಹಾಗೂ ಆರ್ಥಿಕವಾಗಿ ತೀರ ಹಿಂದುಳಿದ ರಾಷ್ಟ್ರಗಳು ಕೂಡಾ ಒಲಿಂಪಿಕ್ಸ್ ಕ್ರೀಡಾ ಸಾಧನೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಪಟ್ಟಿ ನಮ್ಮ ಮುಂದೆ ಇರುವುದನ್ನು ನಾವು ಗಮನಿಸಬಹುದು.ಉದಾ- ಇಟಲಿ 40, ನೆದರ್‌ಲ್ಯಾಂಡ್ಸ್ 34, ಇರಾನ್, ಯುಕ್ರೇನ್ 12.

ಹೀಗೆ ವಿವಿಧ ರಾಷ್ಟ್ರಗಳ ಸಾಧನೆಯನ್ನು ನೇೂಡುವಾಗ ನಾವು ಗಮನಿಸಬೇಕಾದದ್ದು ಆಯಾಯ ರಾಷ್ಟ್ರಗಳ ಜನರ ದೈಹಿಕ, ಮಾನಸಿಕ ಸಾಮರ್ಥ್ಯ ಗುಣಮಟ್ಟದ ಜೊತೆಗೆ ಅನುಗುಣವಾಗಿ ಅವರಿಗೆ ಸಿಕ್ಕಿದ ಸವಲತ್ತುಗಳು ಪರಿಸರ ಪರಿಕರಗಳು ಮತ್ತು ತರಬೇತಿ. ಇದರ ಜೊತೆಗೆ ಆ ದೇಶದ ಜನರಲ್ಲಿ ಹುದುಗಿರುವ ಕ್ರೀಡಾಸಕ್ತಿ ಮತ್ತು ಸ್ಪೂರ್ತಿ. ಇದಕ್ಕೆಲ್ಲ ಪೂರಕವಾಗಿ ಅಲ್ಲಿನ ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳ ಬೆಂಬಲ ಇದು ಕೂಡಾ ಅಷ್ಟೇ ಪ್ರಮುಖವಾದ ಪಾತ್ರ ವಹಿಸಿರುವುದಂತು ನಿಜ.

ಅಮೇರಿಕಾದಂತಹ ದೇಶದಲ್ಲಿ ಶಿಕ್ಷಣ ಅಂದರೆ ಬರೇ ತರಗತಿಯ ಒಳಗಿನ ಪಠ್ಯ ಪ್ರವಚನ ಮಾತ್ರವಲ್ಲ ಒಂದು ಮಗು ತನ್ನ ಆಸಕ್ತಿಗೆ ಪೂರಕವಾಗಿ ಬೆಳೆಸಿಕೊಳ್ಳುವ ಯಾವುದೇ ಒಂದು ರಂಗದ ಪ್ರತಿಭೆಗೆ ಕೂಡಾ ಸರಿ ಸಮಾನವಾದ ಆದ್ಯತೆ ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುತ್ತಾರೆ ಅನ್ನುವುದನ್ನು ಕೇಳಿದ್ದೇನೆ. ಅದಕ್ಕೆ ಪೂರಕವಾದ ಶಿಕ್ಷಣ ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳಿಂದ ಸಿಗುವ ಕಾರಣ ಕ್ರೀಡಾ ಪ್ರತಿಭೆಗಳು ಆತ್ಮವಿಶ್ವಾಸದಲ್ಲಿ ಬೆಳೆಯಲು ಸಾಧ್ಯ. ಇಂತಹ ಪರಿಸ್ಥಿತಿ ನಮ್ಮಲ್ಲಿ ಇದೆಯಾ ಅನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ನಿರಾಶದಾಯಕವಾಗಿದೆ. ಇದಕ್ಕೇನು ಕಾರಣ ಅನ್ನುವುದನ್ನು ಕೂಡ ವಿಶ್ಲೇಷಣೆ ಮಾಡಲೇಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ 117 ಮಂದಿ ಕ್ರೀಡಾಳುಗಳು 16 ವಿಭಾಗಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ 6 ಪದಕಗಳನ್ನು ಗಳಿಸುವುದರಲ್ಲಿ ನಮ್ಮ ಕ್ರೀಡಾಪಟುಗಳು ಸಫಲರಾಗಿದ್ದರು ಅನ್ನುವುದು ನಮಗೂ ಹೆಮ್ಮೆ ಖಂಡಿತವಾಗಿಯೂ ನಮ್ಮ ಕ್ರೀಡಾ ಸಾಧಕರನ್ನು ಗೌರವಿಸಲೇಬೇಕು. ನಾವು ಗಳಿಸಿರುವ ಒಟ್ಟು ಪದಕಗಳು ಕೇವಲ 6 ಅದರಲ್ಲಿ 5 ಕಂಚು 1 ಬೆಳ್ಳಿ. ಕಳೆದ ಬಾರಿ ಟೇೂಕಿಯೋ ಒಲಿಂಪಿಕ್ಸ್ ನಲ್ಲಿ ಒಟ್ಟು 7 ಪದಕಗಳ ಜೊತೆಗೆ ಒಂದು ಚಿನ್ನದ ಪದಕ ನಮ್ಮ ಪಾಲಿಗೆ ಬಂದಿತ್ತು. ಆದರೆ ಈ ಬಾರಿ ಭಾರತೀಯರ ಪಾಲಿಗೆ ಚಿನ್ನ ತುಂಬಾ ದುಬಾರಿ ಎಂದೇ ಹೇಳಬಹುದು.

ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೂ ಭಾರತಕ್ಕಿರುವ ಸಂಬಂಧ ನೆನಪಿಸುವುದಾದರೆ 1952 ರಲ್ಲಿಯೇ ಒಂದು ಕಂಚಿನ ಪದಕ ಗಳಿಸಿಕೊಂಡ ಹೆಗ್ಗಳಿಕೆ ನಮಗಿದೆ. ಬಹುಮುಖ್ಯವಾಗಿ ನಾವು ಇಲ್ಲಿ ಗಮನಿಸಬೇಕಾದದ್ದು ನಮ್ಮ ಕ್ರೀಡಾಪಟುಗಳು ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಅಂದರೆ ಕೆಲವೇ ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಉದಾ: ಪಿಸ್ತೂಲ್, ರೈಫಲ್; ಶೂಟಿಂಗ್ ಜಾವಲೀನ್ ಪುರುಷರ ಹಾಕಿ ಅಂದರೆ ಇನ್ನೂ ಹಲವಾರು ಕ್ಷೇತ್ರಗಲ್ಲಿ ಇನ್ನೂ ನಾವು ಪಳಗಿಲ್ಲ ಅಥವಾ ಆಸಕ್ತಿಯನ್ನು ತೇೂರಿಸಿಲ್ಲವೋ, ತರಬೇತಿ ಸಾಲದೋ ಗೊತ್ತಿಲ್ಲ.. ಓಟ ಜಿಗಿತದಂತಹ ರಂಗದಲ್ಲಿ ಅಮೇರಿಕಾ ಚೀನಾದಂತಹ ದೇಶಗಳು ಸಾಕಷ್ಟು ಮುಂದಿರುವ ಕಾರಣ ಅತೀ ಹೆಚ್ಚಿನ ಪದಕಗಳು ಅವರ ಪಾಲಾಗುತ್ತಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಪದಕಗಳ ಪಟ್ಟಿಯೇ ಸಾರಿ ಹೇಳುತ್ತಿದೆ. ಹಾಗಾದರೆ ನಮ್ಮ ದೇಶದ ಕ್ರೀಡಾ ಕ್ಷೇತ್ರಗಳಲ್ಲಿನ ಸಾಧನೆಗೆ ಬಂದಿರುವ ತೊಡಕುಗಳೇನು? ಅನ್ನುವ ಕುರಿತಾಗಿ ವಿಶೇಷ ಅಧ್ಯಯನ ಮತ್ತು ಕಾರ್ಯೋನ್ಮುಖರಾಗಬೇಕಾದ ಕಾಲ ಕೂಡಿ ಬಂದಿದೆ.

ನಮ್ಮೆಲ್ಲರ ಮನಸ್ಥಿತಿ ಹೇಗಿದೆ ಅಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಕ್ರೀಡೆ ಅಂದರೆ ಎರಡನೆಯ ಸ್ಥಾನ. ಅಂಕ ಗಳಿಕೆಗೆ ಮೊದಲಿನ ಪ್ರಾಶಸ್ತ್ಯ. ಸರ್ಕಾರವು ಅಷ್ಟೇ ಹೆತ್ತವರು ಅಷ್ಟೇ ಶಾಲೆ ಕಾಲೇಜಿನಲ್ಲೂ ಅಷ್ಟೇ ಬಿಡುವುವಿದ್ದರೆ ಮಾತ್ರ ಆಟ. ಇಲ್ಲವಾದರೆ ಜೀವನಪೂರ್ತಿ ನಾಲ್ಕು ಗೇೂಡೆಯೊಳಗಿನ ಪಾಠ. ಅದೆಷ್ಟೋ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಇಂದಿಗೂ ಆಟದ ಮೈದಾನಗಳೇ ಇಲ್ಲ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೈದಾನಗಳು ಎಕ್ರೆಗಟ್ಟಲೆ ಇದೆ ಆದರೆ ಮಕ್ಕಳಿಲ್ಲ ಅನ್ನುವುದು ಇನ್ನೊಂದು ಕೊರತೆ. ಒಂದು ಸಮೀಕ್ಷೆ ಪ್ರಕಾರ ಕ್ರೀಡಾ ಪ್ರತಿಭೆಗಳು ಹೆಚ್ಚು ಹುಟ್ಟಿಕೊಳ್ಳುತ್ತಿರುವುದು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಆದರೆ ಅಲ್ಲಿನ ಪ್ರತಿಭೆಗಳಿಗೆ ಸರಿಯಾದ ತರಬೇತಿಯೂ ಇಲ್ಲ. ಸಹಾಯ ಹಸ್ತ ಇಲ್ಲದೆ ಗ್ರಾಮೀಣ ಕ್ರೀಡಾ ಪ್ರತಿಭೆಗಳು ಸೊರಗಿ ಹೇೂಗುವಂತಾಗಿದೆ.

ಪ್ರತಿ ಶಾಲಾ ಕಾಲೇಜುಗಳಲ್ಲಿ ನುರಿತ ದೈಹಿಕ ಶಿಕ್ಷಕರೇ ಇಲ್ಲ. ಇದಕ್ಕೆ ಸರ್ಕಾರದ ಅಸಡ್ಡೆಯೂ ಕಾರಣ.
ನಮ್ಮ ಪರಿಸ್ಥಿತಿ ಯಾರೋ ಒಬ್ಬ ಅಪ್ಪಿತಪ್ಪಿ ಸಾಧನೆ ಮಾಡಿ ಬಂದ ಮೇಲೆ ಅವರಿಗೆ ಸ್ಥಾನ ಸಂಮಾನವೇನು ಪ್ರಚಾರವೇನು ಮುಖ್ಯ ಮಂತ್ರಿಗಳಿಂದ ಹಿಡಿದು ಪ್ರಧಾನಮಂತ್ರಿಗಳ ತನಕ ಸೆಲ್ಫೀ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದೇನು ಕಾಣಬೇಕು. ಇಂತಹ ಕ್ರೀಡಾ ಪ್ರತಿಭೆಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಗುಣಮಟ್ಟದ ತರಬೇತಿ ಹಣಕಾಸು ಉತ್ತಮ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರಕಾರಗಳು ಎಷ್ಟು ಆಸಕ್ತಿ ವಹಿಸುತ್ತಿದ್ದಾವೆ ಅನ್ನುವುದು ಅಷ್ಟೇ ಮುಖ್ಯ. ಸಾಧನೆ ಮಾಡಿಬಂದ ಮೇಲೆ ಪ್ರೇೂತ್ಸಾಹಿಸುವುದು ಮುಖ್ಯವಲ್ಲ. ಕ್ರೀಡಾ ಪ್ರತಿಭೆಗಳಿಗೆ ಮೊಳಕೆಯಲ್ಲಿಯೇ ಗುರುತಿಸಿ ಪ್ರೇೂತ್ಸಾಹ ನೀಡಬೇಕಾದದ್ದು ಅತೀ ಮುಖ್ಯ. ನಮ್ಮೆಲ್ಲ ರಾಜ್ಯಗಳಲ್ಲಿ ಅದೆಷ್ಟೋ ಶ್ರೀಮಂತ ಕಂಪನಿಗಳು ಇದ್ದಾವೆ ಅವುಗಳು ಕೂಡಾ ಇಂತಹ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಮುಂದಾಗಬೇಕು. ಸರ್ಕಾರ ಮತ್ತು ಸರಕಾರೇತರ ಸಂಸ್ಥೆಗಳ ಪ್ರತಿಭಾವಂತ ಕ್ರೀಡಾಗಳನ್ನು ಗುರುತಿಸಿ ಬೆಳಸಬೇಕಾದ ಜವಾಬ್ದಾರಿ ಇದೆ. ಸರ್ಕಾರ ಈ ನಿಟ್ಟಿನಲ್ಲಿ ಇಂತಹ ಕಂಪನಿಗಳಿಗೆ ಲೈಸೆನ್ಸ್ ನೀಡುವಾಗಲೇ ಷರತ್ತು ಹಾಕಬೇಕು.

ಇಂದಿನ ಜಾಗತಿಕರಣ ಯುಗದಲ್ಲಿ ಭಾರತ ಆರ್ಥಿಕವಾಗಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ. ಅನ್ನುವ ಸಂದರ್ಭದಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ 71ನೇ ಸ್ಥಾನದಲ್ಲಿ ತೃಪ್ತಿಪಡುವುದು ಅತ್ಯಂತ ಬೇಸರದ ಬೆಳವಣಿಗೆ ಎಂದೇ ಭಾವಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಕ್ರೀಡಾ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾದ ಅನಿವಾರ್ಯತೆಯೂ ಬಂದಿದೆ. ಇನ್ನಾದರೂ ನಮ್ಮ ಸರಕಾರಗಳು ಕಣ್ಣು ತೆರೆದು ನೇೂಡಲಿ ಅನ್ನುವುದು ನಮ್ಮೆಲ್ಲರ ಒತ್ತಾಸೆಯೂ ಹೌದು.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!