Sunday, January 19, 2025
Sunday, January 19, 2025

ವಿಧಾನ ಪರಿಷತ್ ಚುನಾವಣೆ ಮತ್ತು ಮತದಾರರ ಪಟ್ಟಿ ತಯಾರಿ ಅತ್ಯಂತ ಅವೈಜ್ಞಾನಿಕ ಕ್ರಮ!

ವಿಧಾನ ಪರಿಷತ್ ಚುನಾವಣೆ ಮತ್ತು ಮತದಾರರ ಪಟ್ಟಿ ತಯಾರಿ ಅತ್ಯಂತ ಅವೈಜ್ಞಾನಿಕ ಕ್ರಮ!

Date:

ವಿಧಾನ ಪರಿಷತ್ ಅನ್ನುವ ಮೇಲ್ಮನೆ ಬೇಕೋ ಬೇಡವೋ ಅನ್ನುವ ಚರ್ಚೆಯ ಕಾಲಘಟ್ಟದಲ್ಲಿ ಇರುವಾಗಲೇ ಇಂದಿನ ವಿಧಾನ ಪರಿಷತ್ ಮತದಾರರ ನೊಂದಾಣಿ ಅಂಕೆ ಸಂಖ್ಯೆ ನೇೂಡುವಾಗ ಇಂತಹ ಕನಿಷ್ಠ ಸಂಖ್ಯೆಯಲ್ಲಿರುವ ಮತದಾರರಿಗೂ ಸದನದಲ್ಲಿ ಪ್ರಾತಿನಿಧ್ಯ ನೀಡಬೇಕೇ ಅನ್ನುವ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುವಂತಾಗಿದೆ. ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದಲ್ಲಿ ತೀರ ಕಡಿಮೆ ಅಂದರೆ 20 ಸಾವಿರದಿಂದ 25 ಸಾವಿರದೊಳಗೆ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಅಂದರೆ ಇಲ್ಲಿ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಹಾಗಾದರೆ ಸರಿ ಸುಮಾರು 32 ವಿಧಾನಸಭಾ ವ್ಯಾಪ್ತಿಯಲ್ಲಿ ಅಂದರೆ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೇವಲ ಇಪ್ಪತ್ತೈದು ಸಾವಿರ ಅರ್ಹ ಶಿಕ್ಷಕರು ಮಾತ್ರ ಅರ್ಹ ಮತದಾರರೇ? ಅಥವಾ ಉಳಿದ ಸಾವಿರಾರು ಶಿಕ್ಷಕರು ಅಥವಾ ಪದವೀಧರರು ಹೆಸರು ನೊಂದಾಯಿಸಿಕೊಂಡಿಲ್ಲವೇ? ಹಾಗಾದರೆ ಇವರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬೇಕಾದ ಜವಾಬ್ದಾರಿ ಯಾರದು? ಚುನಾವಣಾ ಆಯೇೂಗದ ಜವಾಬ್ದಾರಿಯೇ? ಅಥವಾ ಇಂದು ನಡೆಯುತ್ತಿರುವ ಹಾಗೆ ಯಾರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೋ ಅವರ ಜವಾಬ್ದಾರಿಯೇ? ಈ ರೀತಿಯಲ್ಲಿ ಮತದಾರರ ಪಟ್ಟಿ ತಯಾರಿಸಿ ಅವರವರ ಅನುಕೂಲದ ದೃಷ್ಟಿಯಿಂದ ಮತದಾರರ ಪಟ್ಟಿ ತಯಾರಿಸಿ ಮತದಾರರನ್ನು ಮತ ಕಟ್ಟೆಗೆ ಅವರೇ ಎಳೆದು ತಂದು ಮತದಾನ ಮಾಡಬೇಕಾಗಿದೆ ಅನ್ನುವ ಪರಿಸ್ಥಿತಿ ಬರುವುದಾದರೆ ಇಂತಹ ಚುನಾವಣೆಯಾಗಲಿ ವಿಧಾನ ಪರಿಷತ್ ಆಗಲಿ ನಮಗೆ ಬೇಕಾ?

ಗೆದ್ದು ಬಂದು ಸಕಲ ಸವಲತ್ತುಗಳು ಅನುಭವಿಸಲು ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಅವರ ಅನುಕೂಲಕ್ಕೆ ಮಾಡಿಕೊಂಡಿರುವ ಸದನ ಅನ್ನುವ ಅಪಖ್ಯಾತಿಗೆ ಒಳಗಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಪದವೀಧರರ ಮತದಾರರ ಪಟ್ಟಿಯನ್ನು ಪ್ರತಿ ಐದು ವರ್ಷಕ್ಕೊಮ್ಮೆ ಹೊಸದಾಗಿ ತಯಾರಿಸುವ ಕ್ರಮವಿದೆಯೇ ಹೇಗೆ? ಗೊತ್ತಿಲ್ಲ? ಯಾಕೆಂದರೆ ಕಳೆದ ಚುನಾವಣಾ ಕಾಲದಲ್ಲಿ ನೊಂದಾಯಿಸಿಕೊಂಡ ಪದವೀಧರರ ಹೆಸರು ಈ ಬಾರಿ ಇಲ್ಲ ಅಂದರೆ ಕಥೆ ಏನು? ಶಿಕ್ಷಕರ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆ ಬರಬಹುದು ನಿವೃತ್ತರಾಗುವವರ ಸಂಖ್ಯೆ ಜಾಸ್ತಿ ಇರುವ ಕಾರಣ. ಹಾಗಾಗಿ ಪರಿಷ್ಕರಣೆ ಮಾಡಬೇಕಾದ ಅನಿವಾರ್ಯತೆಯಿದೆ. ಇದಕ್ಕೂ ವ್ಯವಸ್ಥೆ ಮಾಡಬಹುದು ಆದರೆ ನಮ್ಮ ಚುನಾವಣಾ ಆಯೇೂಗಕ್ಕೆ ಚುನಾವಣೆ ಮಾಡುವಷ್ಟು ಇರುವ ಸೀರಿಯಸ್ನೆಸ್ ಮತದಾರರ ಪಟ್ಟಿ ತಯಾರಿಸುವಲ್ಲಿ ಇಲ್ಲ ಅನ್ನುವುದು ಮೊದಲಿನಿಂದಲೂ ಕೇಳಿ ಬಂದ ಟೀಕೆಯೂ ಹೌದು. ಆದರೆ ಇಲ್ಲಿ ಒಬ್ಬ ಪದವೀಧರ ಮತದಾರ ಪದವಿಗಳಿಸಿದ ಅರ್ಹತೆಯಲ್ಲಿ ಮತದಾರರ ಪಟ್ಟಿಗೆ ಸೇರಿರುವಾಗ ಮತ್ತೆ ಪದೇ ಪದೇ ಆತ ನೊಂದಾಯಿಸಿಕೊಳ್ಳುವ ಅಗತ್ಯತೆ ಏನಿದೆ? ಗಳಿಸಿದ ಡಿಗ್ರಿ ಬದಲಾಗುವುದಿಲ್ಲ ತಾನೆ? ಹೊಸದಾಗಿ ಸೇರಿಸಿಕೊಳ್ಳುವ ಪದವೀಧರರಿಗೆ ಆಯಾಯ ಕಾಲೇಜುಗಳಲ್ಲಿ ಕೂಡಾ ಇದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬಹುದು ಅದನ್ನು ಕೂಡಾ ಚುನಾವಣಾ ಆಯೇೂಗ ಮಾಡಬಹುದು. ಆದರೆ ಮಾಡುವುದಿಲ್ಲ. ಇದನ್ನು ಕೂಡ ಚುನಾವಣೆಗೆ ನಿಂತ ಅಭ್ಯರ್ಥಿಗಳ ಕೈಯಿಂದಲೇ ಮಾಡುವ ಚಿಂತನೆಯಲ್ಲಿ ಚುನಾವಣಾ ಆಯೇೂಗವಿದೆ. ಇದು ನಮ್ಮ ಪ್ರಜಾಪ್ರಭುತ್ವದ ದುರಂತ.

ಅದೇ ರೀತಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಾಗುವ ಎಲ್ಲಾ ಅರ್ಹತೆಯನ್ಮು ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಯಾಕೆ ಅರ್ಹತೆ ನೀಡಬಾರದು? ಕೇವಲ ಹೈಸ್ಕೂಲು, ಪದವಿಪೂರ್ವ, ಪದವಿ ಕಾಲೇಜು, ತಾಂತ್ರಿಕ ಕಾಲೇಜಿನ ಶಿಕ್ಷಕರಿಗೆ ಮಾತ್ರ ಮತದಾರರಾಗುವ ಅವಕಾಶ ಕೊಟ್ಟಿರುವ ಹಿಂದಿನ ಗುಟ್ಟಿನ ಕಥೆ ಏನು? ನಾನು ತಿಳಿದ ಪ್ರಕಾರ ಇದರ ಹಿಂದೊಂದು ರಾಜಕಾರಣಿಗಳ ಬುದ್ಧಿವಂತಿಕೆಯೂ ಇದೆ. ಅದೇನೆಂದರೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮತದಾರರಾಗಿ ಸೇರಿಸಿ ಬಿಟ್ಟರೆ ಅವರೇ ಚುನಾವಣೆಗೆ ಸ್ಪರ್ಧಿಸಿದರೆ ತಮಗೆ ಸುಲಭವಾಗಿ ಸಿಗುವ ಅವಕಾಶ ಕೈ ತಪ್ಪಿಹೇೂಗುವ ಪರಿಸ್ಥಿತಿ ಖಂಡಿತವಾಗಿಯೂ ಬರುತ್ತದೆ ಅನ್ನುವ ಭೀತಿ ನಮ್ಮ ಎಲ್ಲಾ ರಾಜಕೀಯ ಪಕ್ಷಗಳ ಧುರೀಣರಲ್ಲೂ ಇದೆ. ಆದ ಕಾರಣ ಕಡಿಮೆ ಸಂಖ್ಯೆಯಲ್ಲಿ ಇರುವ ಕಾಲೇಜಿನ ಶಿಕ್ಷಕರನ್ನೇ ಮತದಾರರನ್ನಾಗಿ ಬಿಟ್ಟರೆ ನಿರಾಯಾಸವಾಗಿ ಪರಿಷತ್ತಿನಲ್ಲಿ ಶಾಸಕರಾಗಿ ಸಂಬಳ, ಸಾರಿಗೆ ಭತ್ಯೆ, ಪಿಂಚಣಿ ಒಂದೇ ಎರಡೇ. ಅದೃಷ್ಟ ಖುಲಾಯಿಸಿದರೆ ಸಚಿವರೂ ಆಗಬಹುದು ಅನ್ನುವ ಮಹಾದಾಸೆಯಲ್ಲಿರುವ ರಾಜಕಾರಣಿಗಳನ್ನು ಪ್ರಬುದ್ಧ ಮತದಾರರು ಅನ್ನುವ ಪೀಠ ಅಲಂಕರಿಸಿರುವ ಶಿಕ್ಷಕರಿಗಾಗಲಿ ಪದವೀಧರರಿಗಾಗಲಿ ಕಟ್ಟಿ ಹಾಕಲು ಸಾಧ್ಯವಿಲ್ಲ ಅನ್ನುವುದೇ ಪರಿಷತ್ತಿಗೆ ನಡೆಯುವ ಮಹಾ ಪವಿತ್ರ ಚುನಾವಣಾ ನೀತಿ ಅಂದರೂ ತಪ್ಪಾಗಲಾರದು.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!