ಇದೊಂದು ನಮ್ಮ ಚುನಾವಣಾ ಸುಧಾರಣೆಯ ಹೊಸ ಅವಿಷ್ಕಾರ. ಇದು ಯಾಕೆ ಬಂತು? ಇದರ ಅಗತ್ಯತೆ ಏನು? ಈ NOTA ಕ್ಕೆ ಮತ ಹಾಕಿದರೆ ಏನಾದರೂ ಪ್ರಯೇೂಜನ ಉಂಟಾ? ಇಂತಹ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚುನಾವಣಾ ಸಂದರ್ಭದಲ್ಲಿ ಬಳಸುವ ಮತ ಯಂತ್ರ ಅರ್ಥಾತ್ ಇಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ ಕೆಳಗಿರುವ ಕೊನೆಯ ಬಟನ್ NOTA ಬಟನ್. NOTA means ‘None Of The Above’. ಈ ಮೇಲಿನ ಯಾರೂ ಯೇೂಗ್ಯರಲ್ಲ ಅನ್ನುವುದೇ ಇದರ ಅರ್ಥ.
ಕೆಲವೊಂದು ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ಹೇೂರಾಟಗಾರರು NOTA ಚಳುವಳಿ ಶುರು ಮಾಡಿದ್ದಾರೆ. ಇಂತಹ ಪ್ರತಿಭಟನಾಕಾರರ ಈ ಚಳುವಳಿಯಿಂದ ಯಾವುದೇ ಪ್ರಯೇೂಜನ ಸಿಗಲಾರದು. NOTA ದ ಮುಖ್ಯ ಉದ್ದೇಶ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಾಗಲಿ ಪಕ್ಷಗಳಾಗಲಿ ನಮ್ಮ ದೃಷ್ಟಿಯಲ್ಲಿ ಅನರ್ಹರು ಅಸಮರ್ಥರು ಅಯೇೂಗ್ಯರು ಎಂದು ಕಂಡುಬಂದರೆ ಮತ ಹಾಕದೆ ಮನೆಯಲ್ಲಿ ಸುಮ್ಮನೆ ಕೂರಬಾರದು. ಬದಲಾಗಿ ತಮ್ಮ ಮನದಾಳದ ವೇದನೆಯ ಅಭಿಪ್ರಾಯವನ್ನು ಈ NOTA ಗುಂಡಿ ಒತ್ತುವುದರ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ {ಅನುಚ್ಛೇದ 19(A)} ಈ ಕೊನೆಯ ಬಟನ್. ಇದು ಕೊನೆಯ ಅಸ್ತ್ರವಾಗಬೇಕು.
ಹಾಗಾದರೆ ಈ NOTA ಕ್ಕೆ ಚಲಾಯಿಸಿದ ಮತಕ್ಕೇನಾದರೂ ಬೆಲೆ ಇದೆಯೇ? ಮತ ಎಣಿಕೆಯ ಸಂದರ್ಭದಲ್ಲಿ ಇದನ್ನು ಲೆಕ್ಕ ಹಾಕುತ್ತಾರೆ. ಆದರೆ ಇದುವರೆಗೂ ಈ ನೇೂಟಾದ ಮೇಲೆ ಯಾವುದೇ ಗಂಭೀರವಾದ ಚರ್ಚೆ ನಡೆಸದೇ ಇರುವುದು ವಿಷಾದನೀಯ. ಉದಾ: ಒಟ್ಟು ಒಂದು ನೂರು ಮತದಾನವಾಗಿದೆ ಅಂತ ಇಟ್ಟುಕೊಳ್ಳಿ. ಅದರಲ್ಲಿ ಒಬ್ಬನಿಗೆ 30 ಓಟು. ಇನ್ನೊಬ್ಬನಿಗೆ 32 ಓಟು ಬಿದಿದ್ದೆ ಅಂತ ಇಟ್ಟುಕೊಳ್ಳಿ. ಅದೇ ನಿಮ್ಮ ಹೇೂರಾಟದ ಪರವಾಗಿ 38 ಮತಗಳು NOTA ಕ್ಕೆ ಬಿದ್ದಿದೆ ಅಂತ ಇಟ್ಟುಕೊಳ್ಳಿ. ಇಲ್ಲಿ ನಿಮ್ಮ NOTA ಕ್ಕೆ ಯಾವುದೇ ಅಧಿಕೃತವಾದ ಮನ್ನಣೆ ಇಲ್ಲ. ನೇೂಟಾಕ್ಕಿಂತ ಕಡಿಮೆ ಮತಗಳಿಸಿದ ಅಭ್ಯರ್ಥಿಯನ್ನೆ ಚುನಾಯಿತ ಅಭ್ಯರ್ಥಿ ಎಂದು ಘೇೂಷಿಸಿ ಬಿಡುತ್ತಾರೆ. ಈ ಕುರಿತಾಗಿ ಚುನಾವಣಾ ಆಯೇೂಗ ಇದುವರೆಗೂ ಯಾವುದೇ ಸ್ವಷ್ಟ ಉತ್ತರ ನೀಡಿಲ್ಲ. ಎರಡು ದಿನ ಮಾಧ್ಯಮಗಳಲ್ಲಿ ಚರ್ಚೆ ಆಗುವುದು ಬಿಟ್ಟರೆ ಮತ್ತೇನು ಆಗುವುದಿಲ್ಲ. ಇಲ್ಲಿ 32 ಮತ ಗಳಿಸಿದವನನ್ನು ಚುನಾಯಿತ ಅಭ್ಯರ್ಥಿ ಎಂದು ಘೇೂಷಿಸಿ ಬಿಡುತ್ತಾರೆ ಅಷ್ಟೇ. ನಿಮ್ಮ ಹೇೂರಾಟದಿಂದ ಯಾರಿಗೆ ನಷ್ಟವಾಗಬೇಕಿತ್ತೋ ಅವನಿಗೆ ಲಾಭವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಹಾಗಾಗಿ ನೇೂಟಾ ಹೇೂರಾಟಗಾರರು ಸುಮ್ಮನೆ ನೆಟ್ಟಗೆ ಕೂತು ನೇೂಟಾದ ಬಗ್ಗೆ ಕಿರು ನೋಟ ಬೀರುವುದು ಸೂಕ್ತ ಅಲ್ಲವೇ?
ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ