ಕಾಶ್ಮೀರದ ಅತೀ ದೊಡ್ಡ ಜಿಲ್ಲೆ ಎಂದೇ ಕರೆಸಿಕೊಂಡ ಅನಂತನಾಗ್ ನಿಂದ ಸುಮಾರು 15 ಕಿ.ಮೀ.ದೂರ ಹಾಗೂ ಕಾಶ್ಮೀರದ ಪ್ರಧಾನ ಕೇಂದ್ರ ಶ್ರೀನಗರ ದಿಂದ 88 ಕಿ.ಮೀ.ದೂರದಲ್ಲಿ ಕಾಣಸಿಗುವ ಅತ್ಯಂತ ಸೊಗಸಾದ ಅದರಲ್ಲೂ ಮಕ್ಮಳ ಆಟೇೂಟಗಳಿಗೆ ಹೇಳಿ ಮಾಡಿಸಿದ ಪ್ರೇಕ್ಷಣೀಯ ತಾಣವೆಂದರೆ ಪಾಹಲ್ ಗಮ್. ಇದಕ್ಕೆ ‘ಬೇತಾಬ್ ವ್ಯಾಲ್ಯೂ’ ಎಂದು ಕರೆಯುವುದು ವಾಡಿಕೆ. ಬೇತಾಬ್ ಬಾಲಿವುಡ್ ಸಿನಿಮಾ ಚಿತ್ರೀಕರಣವಾದ ಕಾರಣ ಇದಕ್ಕೆ ಈ ಹೆಸರು ಅಂಟಿಕೊಂಡಿದೆ ಅಂತೆ. ಇಡೀ ಪ್ರದೇಶ ಹಿಮದಿಂದ ಆವರಿಸಿದ್ದರೂ ಕೂಡ ಹಿಮ ಕರಗಿ ನದಿ ರೂಪದಲ್ಲಿ ಹರಿಯುತ್ತಿರುವುದನ್ನು ಚಳಿಗಾಲದಲ್ಲಿ ನೇೂಡಬಹುದು. ಅದೇ ಬೇಸಿಗೆಯಲ್ಲಿ ಈ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತದೆ, ಮಾತ್ರವಲ್ಲದೇ ಮರಗಿಡ ನೆಲ ಎಲ್ಲವೂ ಹಸಿರಿನಿಂದ ಕಂಗೊಳಿಸುವ ರಮಣೀಯ ನೇೂಟ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುತ್ತದೆ. ಅಂದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರನ್ನು ಆಮಂತ್ರಿಸುವ ಸೌಂದರ್ಯತೆ ಈ ಪ್ರದೇಶದ ಇನ್ನೊಂದು ವೈಶಿಷ್ಟ್ಯ. ಹೆಚ್ಚೇನು ಹಿಮಗಡ್ಧೆಯಿಂದ ಕೂಡಿರದ ಸಮತಟ್ಟಾದ ವಿಸ್ತಾರವಾದ ಪ್ರದೇಶವಿರುವ ಕಾರಣ ಮಕ್ಕಳಿಗೆ, ಹಿರಿಯರಿಗೆ ಕೂತು ಆಟವಾಡಲು ಇರುವ ಯೇೂಗ್ಯ ಪ್ರವಾಸಿ ಧಾಮ. ಇದಕ್ಕೆ ತಾಗಿಕೊಂಡಿರುವ ಬೈಸಾರಾನ ಕಣಿವೆಯ ಪ್ರದೇಶವನ್ನೇ ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಕರೆಯುತ್ತಾರೆ.
ಈ ಪಾಹಲ್ ಗಮ್ ಸುತ್ತಮುತ್ತ ಸಾಕಷ್ಟು ಹಳ್ಳಿಗಳಿದ್ದಾವೆ. ಅಲ್ಲಿನ ರೈತರು ದನ ಕರುಗಳನ್ನು ಸಾಕುವುದರ ಮೂಲಕ ಹಾಲು ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿದೆ. ಈ ಜಾನುವಾರುಗಳು ಬೇಸಿಗೆಯಲ್ಲಿ ಮೇಯಲು ಇದೇ ಪ್ರದೇಶಗಳಲ್ಲಿಗೆ ಬರುತ್ತವೆ ಅಂತೆ. ಈಗ ಚಳಿ ಹಿಮದ ಕಾರಣ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಬೆಚ್ಚಗೆ ಸಾಕಬೇಕೆಂತೆ. ಹಾಗಾಗಿ ಒಂದೂ ಜಾನುವಾರುಗಳನ್ನು ಈಗ ಬೀದಿ ಬದಿಯಲ್ಲಿ ಕಾಣಲು ಸಾಧ್ಯವಿಲ್ಲ. ಪಾಹಲ್ ಗಮ್ ಪ್ರವೇಶ ಮಾಡುವಾಗ ಮೊದಲು ಗಮನಸೆಳೆಯುವುದು ಅಮರನಾಥ ಯಾತ್ರಿಕರ ನೆನಪು. ಈ ಸ್ಥಳದಿಂದಲೇ ಅಮರನಾಥ ಯಾತ್ರೆಯ ಪೂರ್ವ ತಯಾರಿ ನಡೆಯುತ್ತದೆ ಅಂತೆ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ‘welcome to Amaranath yathra’ ಅನ್ನುವ ಸ್ವಾಗತದ ಕಮಾನಗಳು ಕಾಣಬಹುದು. ಇದೇ ಪ್ರದೇಶಕ್ಕೆ ತಾಗಿಕೊಂಡು ಸುಮಾರು ನೂರಾರು ಎಕರೆಯಷ್ಟು ಮೈದಾನ ಪ್ರದೇಶ. ಅದುವೆ ಪಾಹಲ್ ಗಮ್ ಗಾಲ್ಫ್ ಕೇೂರ್ಸ್ ಆಟದ ಮೈದಾನ. ಬೇಸಿಗೆಯಲ್ಲಿ ಕಾಶ್ಮೀರದ ಶ್ರೀಮಂತರ ಆಟದ ತಾಣ. ಇಲ್ಲಿ ಪ್ರವೇಶಕ್ಕೆ ಕ್ಲಬ್ ಮೆಂಬರ್ಸ್ ಗಳಿಗೆ ಮಾತ್ರ ಅವಕಾಶ. ಆದರೆ ನಮಗೆ ಅಲ್ಲಿನ ಆಡಳಿತ ಮಂಡಳಿ ಅನುಮತಿ ನೀಡಿತ್ತು. ಬಹು ಸುಂದರವಾದ ಪ್ರಕೃತಿ ವೀಕ್ಷಣಾ ಸ್ಥಳ. ಕಾಶ್ಮೀರಕ್ಕೆ ಹೇೂದವರು ಮಿನಿ ಸ್ವಿಟ್ಜರ್ಲ್ಯಾಂಡ್ ‘ಪಾಹಲ್ ಗಮ್’ ನೇೂಡಲು ಮರೆಯದಿರಿ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.