ಹದಿನೆಂಟನೇ ಲೇೂಕಸಭಾ ಚುನಾವಣೆಯ ಒಳಗುಟ್ಟು ರಾಷ್ಟ್ರಮಟ್ಟದಲ್ಲಿ ಯಾರು ಗೆಲ್ಲುತ್ತಾರೆ ಯಾರು ಅಧಿಕಾರ ಹಿಡಿಯುತ್ತಾರೆ ಅನ್ನುವ ಕುರಿತಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಲೆ ಬಿಸಿ ಇಲ್ಲ. ಇದು ಈಗಾಗಲೇ ಪೂರ್ವ ನಿರ್ಧರಿತ ಫಲಿತಾಂಶ. ಆದರೆ ಈ ಎರಡು ಪಕ್ಷಗಳ ಮುಂದೆ ಉಳಿದಿರುವ ಬಹು ದೊಡ್ಡ ಸವಾಲಿನ ಪ್ರಶ್ನೆ ಅಂದರೆ ರಾಜ್ಯದಲ್ಲಿ ಯಾರು ಅತಿ ಹೆಚ್ಚಿನ ಸ್ಥಾನ ಗಳಿಸುತ್ತಾರೆ ಅನ್ನುವುದೇ ಈ ಬಾರಿಯ ಕರ್ನಾಟಕ ಲೇೂಕಸಭಾ ಕದನದ ಕುತೂಹಲಕಾರಿ ಫಲಿತಾಂಶ. ಬಿಜೆಪಿಗರಿಗೆ ಕೇಂದ್ರದಲ್ಲಿ ನಾವೇ ಅತೀ ಹೆಚ್ಚಿನ ಸ್ಥಾನ ಗಳಿಸಿ ಅಧಿಕಾರ ಹಿಡಿಯುತ್ತೇವೆ ಅನ್ನುವ ಆತ್ಮವಿಶ್ವಾಸ ಇದೆ. ಇದು ಮುನ್ನೂರಕ್ಕೆ ನಿಲ್ಲುತ್ತಾ ನಾನೂರಕ್ಕೆ ಹೇೂಗುತ್ತಾ ಅನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಯ ಹೈಕಮಾಂಡ್ ಬ್ಯೂಸಿ ಆಗಿದ್ದರೆ, ಬಿಜೆಪಿಯ ಸ್ಥಳೀಯ ನಾಯಕರಿಗೆ ನಮ್ಮ ಪರಿಸ್ಥಿತಿ ಏನಾಗಬಹುದು ಅನ್ನುವ ಚಿಂತೆ ಕಾಡುತ್ತಿದೆ.
ಕಳೆದ ಬಾರಿ ಅಂದರೆ 2019ರಲ್ಲಿ ಪರಿಸ್ಥಿತಿ ಎಲ್ಲವೂ ಚೆನ್ನಾಗಿತ್ತು, ಹಾಗಾಗಿ 28 ರಲ್ಲಿ 25 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಲು ಸಾಧ್ಯವಾಯಿತು. ಆದರೆ ಈ ಬಾರಿ ವಾತಾವರಣ ಹಿಂದಿನ ಹಾಗಿಲ್ಲ ಅನ್ನುವ ಸ್ಥಿತಿ ಬಿಜೆಪಿಯ ಸ್ಥಳೀಯ ನಾಯಕರಿಗೂ ಅರ್ಥವಾಗಿದೆ. ಕೇಂದ್ರದ ನಾಯಕರಿಗೂ ಗೊತ್ತಾಗಿದೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆ ಏನು ಇಲ್ಲ. 2023 ರ ವಿಧಾನಸಭೆಯ ಚುನಾವಣೆಯಲ್ಲಿ ನಾವು ನೂರಕ್ಕೆ ನೂರು ಗೆದ್ದೆ ಬಿಡುತ್ತೇವೆ ಅನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗರಿಗೆ ರಾಜ್ಯದಲ್ಲಿ ದಕ್ಕಿದ್ದು ಕೇವಲ 36 ಸೀಟುಗಳು ಮಾತ್ರ. ಅದೂ ಕೂಡಾ ಪ್ರಧಾನಿ ಮೇೂದಿಯವರ ಸರಣಿ ಸರಣಿ ಭಾಷಣ ರೇೂಡ್ ಶೋಗೆ ಜನ ಸೇರಿದರೂ ಕೊನೆಗೂ ಪ್ರಾಪ್ತವಾಗಿದ್ದು ಅತೀ ಕನಿಷ್ಠ ಸಂಖ್ಯೆ 36. ಹಾಗೆನ್ನುವಾಗ ಈ ಮತದಾರರನ್ನು ನಂಬುವುದಾದರೂ ಹೇಗೆ ಅನ್ನುವ ಬಹುದೊಡ್ಧ ಸವಾಲಿನ ಪ್ರಶ್ನೆ ಈಗಲೂ ಬಿಜೆಪಿಯಲ್ಲಿ ಮೇಲೆ ಕೂತವರಿಗೂ ಕೆಳಗೆ ಕೂತವರಿಗೂ ದಿನನಿತ್ಯವೂ ಕಾಡುತ್ತಿದೆ.
ಒಂದು ವೇಳೆ ಕಳೆದ ಬಾರಿ ಗೆದ್ದ 25 ಸೀಟುಗಳಲ್ಲಿ ಕಡಿಮೆ ಅಂದರೆ 20 ಉಳಿಸಿಕೊಳ್ಳಲೇ ಬೇಕೆನ್ನುವ ತಾಕೀತು ಹೈಕಮಾಂಡಿನಿಂದ ಬಂದೆ ಬಂದಿರುತ್ತದೆ. ಇಲ್ಲವಾದರೆ ಬಿಜೆಪಿಗೆ ಕರ್ನಾಟಕದ ಮಟ್ಟಿಗೆ ಅಳಿವು ಉಳಿವಿನ ಪ್ರಶ್ನೆ ಮಾತ್ರವಲ್ಲ ಮರ್ಯಾದೆಯ ಪ್ರಶ್ನೆ ಕೂಡ ಹೌದು. ಮೇೂದಿ ಅಮಿತ್ ಶಾಗೆ ಮುಖ ತೇೂರಿಸುವುದಾರೂ ಹೇಗೆ? ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮೊದಲು ಬಾಗಿಲು ತೆರೆದಿರುವುದೇ ಕರ್ನಾಟಕದಲ್ಲಿ ಅಲ್ವೇ? ಅದೇ ಕಾಂಗ್ರೆಸ್ ನವರಿಗೆ ರಾಷ್ಟ್ರಮಟ್ಟದಲ್ಲಿ ತಾವು ಅಧಿಕಾರಕ್ಕೆ ಬರಬೇಕು ಅನ್ನುವ ಕನಸು ಸದ್ಯಕ್ಕಂತೂ ಇಲ್ಲ.ಇದು ಕಾಂಗ್ರೆಸ್ ಹೈಕಮಾಂಡಿಗೂ ತಿಳಿದಿದೆ, ರಾಜ್ಯದ ನಾಯಕರಿಗೂ ಗೊತ್ತಿದೆ. ಹಾಗಾಗಿ ಅವರಿಗೆ ಉಳಿದಿರುವುದು ಕರ್ನಾಟಕದ ಮಟ್ಟಿಗೆ ಕನಿಷ್ಠ 15 ರಿಂದ 20 ಸೀಟುಗಳನ್ನು ಮರಳಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಹಾಗೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರು ಕಾಣುತ್ತಿದ್ದಾರೆ. ಇದು ಅನಿವಾರ್ಯ ಕೂಡಾ. ಏಕೆಂದರೆ ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್ ಸೇೂಲು ಅನುಭವಿಸುವ ಸಂದರ್ಭದಲ್ಲಿ, ಹೊಸದೊಂದು ಭರವಸೆ ಮೂಡಿಸಿದ ರಾಜ್ಯವೆಂದರೆ ಕರ್ನಾಟಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ 136 ಸ್ಥಾನ ಪಡೆದಿರುವುದೇ ಅತಿ ದೊಡ್ಡ ಹ್ಯಾಟ್ರಿಕ್. ಈ ಹ್ಯಾಟ್ರಿಕ್ ನ್ನು ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗಾದರೂ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ರಾಜ್ಯ ಕಾಂಗ್ರೆಸ್ ಗೆ ಇದೆ.
ಇಷ್ಟೆಲ್ಲಾ ಗ್ಯಾರಂಟಿ ಗಳನ್ನು ಕೊಟ್ಟು ತಾವೇ ಅಧಿಕಾರದಲ್ಲಿದ್ದು ಕನಿಷ್ಠ ಹದಿನೈದರಿಂದ ಇಪ್ಪತ್ತು ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಅಂದರೆ ರಾಜ್ಯದಲ್ಲಿ ಮುಂದಿನ ಕಾಲಮಾನದಲ್ಲಿ ಕಾಂಗ್ರೆಸ್ ನ ಅಸ್ತಿತ್ವದ ಪ್ರಶ್ನೆ ಖಂಡಿತವಾಗಿಯೂ ಬಂದೇ ಬರುತ್ತದೆ. ಹಾಗಾಗಿ ಕಾಂಗ್ರೆಸ್ ಗೆ ಲೇೂಕಸಭೆಯಲ್ಲಿ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಮೊದಲು ರಾಜ್ಯದಲ್ಲಿ ಸೀಟ್ ಗಳನ್ನು ಗಡಿ ದಾಟಿಸುವುದೇ ಬಹುದೊಡ್ಡ ಸವಾಲಿನ ಪ್ರಶ್ನೆ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.