ಪ್ರಧಾನಿ ಮೇೂದಿಯವರು ಕೆಲವು ವರ್ಷಗಳ ಹಿಂದೆಯೇ ಬಹುಚರ್ಚೆಗೆ ತೆಗೆದುಕೊಂಡ ವಿಷಯವೆಂದರೆ ಏಕ ರಾಷ್ಟ್ರ ಏಕ ಚುನಾವಣೆ. ಈ ಕುರಿತಾಗಿ ಸಂಸತ್ತು ಮತ್ತು ರಾಜ್ಯದ ವಿಧಾನ ಸಭೆಯಲ್ಲಿಯೂ ಪರ ವಿರೇೂಧ ವಿಷಯಗಳು ಮಂಡನೆಯಾಗಿದೆ. ಮಾತ್ರವಲ್ಲ ಈ ಕುರಿತಾಗಿ ಅಧ್ಯಯನಕ್ಕಾಗಿಯೇ ಮಾಜಿ ರಾಷ್ಟ್ರಪತಿ ರಾಮನಾಥ್ ಕೇೂವಿಂದರ ಹಿರಿತನದಲ್ಲೂ ಸಮಿತಿ ರಚನೆಯಾಗಿ ಅಧ್ಯಯನ ವರದಿ ಸಲ್ಲಿಸುವ ಹಂತದಲ್ಲಿ ಇದೆ. ಈ ವಿಷಯದ ಕುರಿತಾಗಿ ರಾಜ್ಯಸಭೆಯ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅತೀ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ‘ಇದೊಂದು ಸಂವಿಧಾನ ವಿರೇೂಧಿ ಮಾತ್ರವಲ್ಲ ಸಂಸದೀಯ ಪ್ರಜಾಪ್ರಭುತ್ವ ನಡೆಗೆ ವಿರುದ್ಧವಾದ ಚಿಂತನೆ’ ಅನ್ನುವ ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ ಇದೇ ವಿಚಾರದ ಕುರಿತಾಗಿ ಭಾರತದ ಸಂವಿಧಾನದ ಚೌಕಟ್ಟಿನ ಹಿನ್ನೆಲೆಯಲ್ಲಿ ಮತ್ತು ಭಾರತದ ಪ್ರಜಾಪ್ರಭುತ್ವದ ತಳಹದಿಯಲ್ಲಿ ನಮ್ಮ ದೇಶದ ರಾಜಕೀಯ ಸಾಂಸ್ಕೃತಿಕ ಸಾಮಾಜಿಕ ಹಾಗೂ ಬೌಗೋಳಿಕತೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಏಕ ರಾಷ್ಟ್ರ ಏಕ ಚುನಾವಣೆ ಎಷ್ಟು ಹಿತಕರ? ಎಷ್ಟು ಅಹಿತಕರ? ಅನ್ನುವುದನ್ನು ಈ ದೇಶದ ಪ್ರತಿಯೊಬ್ಬ ಮತದಾರ ಪಕ್ಷ, ವ್ಯಕ್ತಿ, ಜಾತಿ, ಮತ, ಪ್ರಾದೇಶಿಕತೆಯನ್ನು ಮೀರಿ ಗಂಭೀರವಾಗಿ ಮರುಚಿಂತನೆ ಮಾಡಬೇಕಾದ ಕಾಲ ಪರಿಪಕ್ವಾಗಿದೆ.
ಇತ್ತೀಚಿನ ರಾಜಕೀಯ ಕಾಲಘಟ್ಟದಲ್ಲಿ ‘ಏಕ ಏಕ ‘ ಅನ್ನುವ ವ್ಯವಸ್ಥೆಯ ಪದ ಹೆಚ್ಚು ಹೆಚ್ಚು ವಿಜ್ರಂಭಿಸುತ್ತಿದೆ. ಈ ಏಕ ಅನ್ನುವ ಪರಿಕಲ್ಪನೆ ಎಲ್ಲಿಯ ತನಕ ಅನ್ನುವುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ನಾಯಕತ್ವ ಧಾಟಿಯನ್ನೆ ನಂಬಿಕೊಂಡು ಭವಿಷ್ಯದ ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಲ್ಪಿಸಿ ಕೊಂಡುಬೆಳೆಸುವುದು ಅತೀ ಅಪಾಯಕಾರಿ ಬೆಳವಣಿಗೆಯೂ ಹೌದು. ಯಾವುದೇ ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಶಾಶ್ವತವಾಗಿ ಬಹುಕಾಲ ಗಟ್ಟಿಯಾಗಿ ನಿಲ್ಲಬೇಕಾದರೆ ಆರೋಗ್ಯಪೂರ್ಣವಾದ ರಾಜಕೀಯ ವ್ಯವಸ್ಥೆಯನ್ನು ಬೆಳೆಸಬೇಕೇ ಹೊರತು ವ್ಯಕ್ತಿಗಳ ತಾತ್ಕಾಲಿಕ ಆಡಳಿತ ವೈಖರಿಯನ್ನು ನಂಬಿಕೊಂಡು ಇಡಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಮುಂದಾಗುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೊಂದು ಹಿತಕರವಾದ ಬೆಳವಣಿಗೆ ಆಗಲಾರದು ನನ್ನ ಅಭಿಪ್ರಾಯವೂ ಹೌದು.
ಏಕ ರಾಷ್ಟ್ರ ಏಕ ಚುನಾವಣೆ ಕುರಿತಾಗಿ ಚಿಂತನೆ ಮಾಡುವ ಮೊದಲು ನಮ್ಮ ಸಂಸದೀಯ ವ್ಯವಸ್ಥೆಯ ಒಳನೇೂಟದ ಕಡೆಗೂ ದೃಷ್ಟಿ ಹಾರಿಸಬೇಕಾದ ಅನಿವಾರ್ಯತೆ ಇದೆ. ನಮ್ಮಲ್ಲಿ ಅಮೇರಿಕಾದ ತರದಲ್ಲಿ ಇಡಿ ರಾಷ್ಟ್ರ ಕ್ಕೆ ಅನ್ವಯಿಸುವಂತಹ ಒಬ್ಬ ರಾಷ್ಟ್ರಾಧ್ಯಕ್ಷ ಮಾತ್ರವಲ್ಲ ಸರ್ಕಾರದ ಮುಖ್ಯಸ್ಥನ್ನು ಹೌದು ನಮ್ಮಲ್ಲಿ ಇಂತಹ ವ್ಯವಸ್ಥೆ ಇಲ್ಲ. ಅಮೇರಿಕಾದ ಅಧ್ಯಕ್ಷನು ನೇರವಾಗಿ ಸಂಸತ್ತಿಗೆ ಹೊಣೆಗಾರನು ಅಲ್ಲ ಉತ್ತರ ಧಾವಿತ್ವವೂ ಇಲ್ಲ. ಮಾತ್ರವಲ್ಲ ಅವನ ಆಯ್ಕೆಯಲ್ಲಿ ಕೂಡಾ ಸಂಸತ್ತಿಗೆ ಯಾವುದೇ ಸಂಬಂಧವೂ ಇಲ್ಲ. ಹಾಗಾಗಿ ಅಮೇರಿಕಾದಲ್ಲಿ ಅಧ್ಯಕ್ಷ ತನ್ನ ನಾಲ್ಕು ವರುಷಗಳ ಅವಧಿಯನ್ನು ಖಂಡಿತವಾಗಿಯೂ ಪೂರೈಸುತ್ತಾನೆ ಅನ್ನುವ ಗ್ಯಾರಂಟಿ ಕೊಡಬಹುದು. ಆದರೆ ನಮ್ಮದು ಹಾಗಲ್ಲ.ನಮ್ಮದು ಸಂಸದೀಯ ವ್ಯವಸ್ಥೆ.ಇದೇ ಮಾದರಿ ಕೇಂದ್ರದಲ್ಲಿಯೂ ಇದೇ ಮಾದರಿ ರಾಜ್ಯಗಲ್ಲೂಇದೇ. ಹಾಗಾಗಿ ನಮ್ಮಲ್ಲಿ ಸಂಸದೀಯ ಮಾದರಿ ಸರ್ಕಾರ. ಇಲ್ಲಿನ ಚುನಾಯಿತ ಸರ್ಕಾರಗಳಿಗೆ ಯಾವುದೇ ನಿರ್ಧಿಷ್ಟವಾದ ಕಾಲಾವಧಿಯಲ್ಲಿ ಅಧಿಕಾರ ನಡೆಸಲು ಗ್ಯಾರಂಟಿ ನಾವು ನೀಡಿಲ್ಲ. ಸರ್ಕಾರದ ಮುಖ್ಯಸ್ಥನಾದ ಪ್ರಧಾನಿ ಅಥವಾ ರಾಜ್ಯದ ಮುಖ್ಯ ಮಂತ್ರಿಗಳು ಹತ್ತು ಹಲವು ಕಾರಣಗಳಿಂದಾಗಿ ಅಧಿಕಾರ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಹಾಗಾಗಿ ಪ್ರತಿಯೊಂದು ಸರ್ಕಾರಕ್ಕೆ ಐದು ವರುಷಗಳ ಅವಧಿಯನ್ನು ನಿದಿ೯ಷ್ಟ ಪಡಿಸಲು ಸಾಧ್ಯನೇ ಇಲ್ಲ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ಮಧ್ಯಾವಧಿ ಚುನಾವಣೆಗೆ ಹೇೂಗಲೇಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಇದಕ್ಕೇನು ಪರಿಹಾರ ಅನ್ನುವುದನ್ನು ಏಕ ರಾಷ್ಟ್ರ ಏಕ ಚುನಾವಣೆ ಪರ ವಾದಿಸುವವರು ಮೊದಲು ಉತ್ತರಿಸಬೇಕಾದ ಪ್ರಶ್ನೆ. ಇಲ್ಲವಾದರೆ ‘ಆಪರೇಷನ್’ ಮಾಡಿ ಸರ್ಕಾರ ರಚನೆ ಮಾಡಬಹುದು ಅನ್ನುದನ್ನು ಸಂವಿಧಾನ ಬದ್ದಗೊಳಿಸುವ ತಂತ್ರಗಾರಿಕೆಯನ್ನು ಕಾನುಾನು ಬದ್ದಗೊಳಿಸುತ್ತೀರಾ ಹೇಗೆ?
ಭಾರತ ಒಂದು ಬಹು ವೈವಿಧ್ಯಮಯ ಭೌಗೋಳಿಕತೆಯ ಹಿನ್ನೆಲೆಯಲ್ಲಿ ಇರುವ ದೇಶ. ಸಾಂಸ್ಕೃತಿಕವಾಗಿ ಆರ್ಥಿಕವಾಗಿಯೂ ವೈವಿಧ್ಯತೆ ಇರುವ ದೇಶ. ಇವೆಲ್ಲವನ್ನೂ ಒಂದೇ ಕಾನೂನಿನಲ್ಲಿ ಕಟ್ಟಿ ಹಾಕುವುದು ಕೂಡಾ ಅಷ್ಟೇ ಅಪಾಯಕಾರಿ. ನಮ್ಮನ್ನು ಆಳಿದ ರಾಷ್ಟ್ರೀಯ ಪಕ್ಷಗಳ ಮಲತಾಯಿ ಧೇೂರಣೆಯಿಂದಾಗಿಯೇ ಈ ದೇಶದ ಮೂಲೆ ಮೂಲೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಹುಟ್ಟಿಕೊಳ್ಳಲು ಇದೇ ಕಾರಣವಾಯಿತು ಅನ್ನುವ ಸತ್ಯ ನಮ್ಮ ರಾಜಕೀಯ ಇತಿಹಾಸ ಹೇಳುವ ಕಥೆಯೂ ಹೌದು. ಹಾಗಾಗಿ ಈ ಎಲ್ಲಾ ವೈವಿಧ್ಯತೆಯ ಬದುಕನ್ನು ಏಕತೆ ಅನ್ನುವ ಹಗ್ಗದಿಂದ ಕಟ್ಟಿ ಹಾಕಿ ಬಲಿಷ್ಠವಾದ ಕೇಂದ್ರೀಕೃತ ಆಡಳಿತ ನೀಡುತ್ತೇವೆ ಅಂದರೆ ದೇಶದ ಮುಂದಿನ ಭವಿಷ್ಯದ ಭದ್ರತೆಯ ಬಗ್ಗೆಯೂ ಈಗಲೇ ಗಂಭೀರವಾಗಿ ಚಿಂತನೆ ಮಾಡಬೇಕಾದ ಪರಿಸ್ಥಿತಿ ಪರಿಪಕ್ವಾಗಿ ಬಂದಿದೆ ಅನ್ನಿಸುತ್ತದೆ.
ಮುಂದಿನ ದಿನಗಳಲ್ಲಿ ಇದೇ ರೀತಿಯ ನಾಯಕತ್ವ ಬರಬಹುದು ಅನ್ನುವ ಗ್ಯಾರಂಟಿ ಏನಿದೆ ಅನ್ನುವುದನ್ನು ಪ್ರಸ್ತುತ ಸರ್ಕಾರರೂಢ ಪಕ್ಷಗಳು ಗಂಭೀರವಾಗಿ ಆಲೇೂಚಿಸಬೇಕಾದ ಕಾಲ ಘಟದಲ್ಲಿ ನಾವಿದ್ದೇವೆ. ಏಕ ರಾಷ್ಟ್ರ ಏಕ ಚುನಾವಣೆ; ಏಕ ರಾಷ್ಟ್ರ ಏಕ ತೆರಿಗೆ ಇವೆಲ್ಲವೂ ಪ್ರಾದೇಶಿಕ ಅಸಮಾನತೆಯನ್ನು ರಾಜಕೀಯವಾಗಿ ಆರ್ಥಿಕವಾಗಿ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿಸಬಹುದಾದ ವಿಷ ಪದಾರ್ಥಗಳು ಅನ್ನುವುದನ್ನು ಯಾರು ಅಲ್ಲಗಳೆಯುವಂತೆ ಇಲ್ಲ. ತಾತ್ಕಾಲಿಕ ಸುಖವನ್ನೆ ಶಾಶ್ವತ ಸುಖವೆಂದು ಭಾವಿಸುವುದು ಪ್ರಜಾಪ್ರಭುತ್ವ ದೇಶದ ಭವಿಷ್ಯದ ಹಿತದೃಷ್ಟಿಯಿಂದ ಹಿತಕರ ಚಿಂತನೆ ಆಗಲಾರದು ಅನ್ನುವುದು ನನ್ನ ಖಚಿತವಾದ ಅಭಿಪ್ರಾಯವೂ ಹೌದು. ಇದು ರಾಜಕೀಯ ಇತಿಹಾಸ ಹೇಳುವ ವಾಸ್ತವಿಕತೆಯ ಕಥೆಯೂ ಹೌದು.
– ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.