ನಾವೇ ಒಂದು ಗಳಿಗೆ ಕಣ್ಣು ಮುಚ್ಚಿ ಆ ಪರಿಸ್ಥಿತಿಯನ್ನು ಅನುಭವಿಸಿ ನೇೂಡೇೂಣ. ಕೇವಲ ಎರಡು ನಿಮಿಷ ಲಿಫ್ಟ್ ಕೈಕೊಟ್ಟು ನಿಂತುಬಿಟ್ಟರೆ ಹೆದರಿ ಬೆವರಿ ಹೇೂಗುವ ನಾವು, ನಲ್ವತ್ತೊಂದು ಮಂದಿ ಹದಿನೇಳು ದಿನ ಗಾಳಿ ಆಡದ ಬೆಳಕು ಕಾಣದ ಸುರಂಗದೊಳಗೆ ಕೂತು ಜೀವ ಉಳಿಸಿಕೊಂಡಿದ್ದಾರೆ ಅಂದರೆ ಅವರ ಮನಸ್ಸಿನಲ್ಲಿ ಎಂತೆಂತಹ ಪರಿಸ್ಥಿತಿ ಭಯಾನಕ ಚಿಂತೆಗಳು ಆಲೇೂಚನೆಗಳು ಹಾದು ಹೇೂಗಿರಬಹುದು.ನಾವು ಒಮ್ಮೆಲೆ ಸಾಯುವುದು, ಸಾಯುತ್ತೇವೆ ಅನ್ನುವ ಪರಿಸ್ಥಿತಿಯಲ್ಲಿ ಒಬ್ಬರ ಮುಖ ಇನ್ನೊಬ್ಬರು ಕಾಣದ ಕಾರ್ಗತ್ತಲಲ್ಲಿ ಕೂತ ಅವರ ಪರಿಸ್ಥಿತಿ ಹೇಗಿರಬಹುದು. ಆ ಪರಿಸ್ಥಿತಿಯನ್ನು ಕಣ್ಣು ಮುಚ್ಚಿ ಆಲೇೂಚಿಸಿ ನೇೂಡೇೂಣ.. ಒಮ್ಮೆಲೆ ನಮ್ಮ ಎದೆ ಒಡೆದು ಹೇೂಗುವ ಪರಿಸ್ಥಿತಿ… ಎಂತೆಂತಹ ಕೆಟ್ಟ ಆಲೇೂಚನೆಗಳು ಸುಳಿದು ಹೇೂಗುತ್ತದೆ ಅಲ್ವಾ?
ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಗಾಳಿ ಆಡಲು ರಂಧ್ರ ಮಾಡಿಕೊಟ್ಟು ಆಹಾರ ತಲುಪಿಸುವ ವ್ಯವಸ್ಥೆ ಮಾಡಿದ್ದು ನಿಮ್ಮನ್ನು ರಕ್ಷಣೆ ಮಾಡುತ್ತೇವೆ ಅನ್ನುವ ಸುದ್ದಿ ರವಾನಿಸಿದ್ದು ನಿಜಕ್ಕೂ ಅವರ ಜೀವ ಉಳಿಯಲು ಸಹಕಾರಿಯಾಗಿರಬಹುದು.. ಅವರೇ ಹೇಳಿರುವಂತೆ ಸುರಂಗದ ಒಳಗೆ ಅವರೆಲ್ಲರೂ ಒಟ್ಟಿಗೆ ಕೂತು ತಿನ್ನುತ್ತಿದ ಪರಿಸ್ಥಿತಿ. ಮನಸ್ಸಿನ ಒತ್ತಡ ಕಡಿಮೆ ಮಾಡಲು ಸುರಂಗದ ಒಳಗೆನೆ ಎರಡು ಕಿ.ಮಿ.ವಾಕ್ ಮಾಡುತ್ತಿದ್ದರಿಂದಾಗಿ ಮನಸ್ಸು ಕೆಟ್ಟ ಆಲೇೂಚನೆಗಳಿಂದ ದೂರವಾಗಲು ಕಾರಣವಾಯಿತು ಅನ್ನುವುದು ಅವರ ಅನುಭವದ ಮಾತು. ಒಂದು ವೇಳೆ ಒಬ್ಬರೊ ಇಬ್ಬರು ಸಿಕ್ಕಿಕೊಂಡಿದ್ದರೆ ಈ ಧೈರ್ಯದ ಮನಸ್ಸು ಅಲ್ಲಿ ಹುಟ್ಟಿಕೊಳ್ಳುತ್ತಿರಲಿಲ್ಲ, ಮಾತ್ರವಲ್ಲ ಅವರು ಕೆಲಸ ಮಾಡುವ ಕಠಿಣ ಬದುಕಿನ ಅನುಭವ ಕೂಡ ಅವರ ಧೈರ್ಯ ಮನಸ್ಥಿತಿಗೆ ಕಾರಣವಾಗಿರಬಹುದು.
ಅಂತೂ ಈ ನಲ್ವತ್ತೊಂದು ಮಂದಿ ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಹೊರಗೆ ಬಂದಿರುವುದು ಒಂದು ಪವಾಡವೇ ಸರಿ.. ಅವರನ್ನು ಹೊರಗೆ ತರಲು ಶ್ರಮಿಸಿದ ಸರ್ವರಿಗೂ ಭಾರತೀಯರಾದ ನಾವು ಎಷ್ಟು ಅಡ್ಡ ಬಿದ್ದು ನಮಸ್ಕರಿಸಿದರೂ ಸಾಲದು.. ಇಲ್ಲಿ ಜಾತಿ, ಧರ್ಮ, ಪಕ್ಷ ಯಾವುದೂ ಸುಳಿಯುವುದಿಲ್ಲ, ಸುಳಿಯಬಾರದು. ಮನುಷ್ಯ ಜೀವವೇ ಶ್ರೇಷ್ಠವಾದದ್ದು ಅನ್ನುವ ಉದಾತ್ತವಾದ ವೈಜ್ಞಾನಿಕ ಮನೇೂಭಾವವೇ ನಮಗೆ ಶ್ರೀರಕ್ಷೆ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ