ಸರಕಾರದ ಕಾರ್ಯಕ್ರಮವೆಂದಾಗ ವೇದಿಕೆಯಲ್ಲಿ ಚುನಾಯಿತ ಸದಸ್ಯರು; ಸರ್ಕಾರದ ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು; ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇರಬೇಕು ಅನ್ನುವುದು ಒಂದು ಸಾಮಾನ್ಯ ಸರಕಾರಿ ಕಾರ್ಯಕ್ರಮದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರ. ಈ ಶಿಷ್ಟಾಚಾರ ಅನುಷ್ಠಾನ ಮಾಡಬೇಕಾದವರು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು. ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸಚಿವರು ತಾವು ಮಾತ್ರ ವೇದಿಕೆಗೆ ಹೇೂಗುವುದಲ್ಲ ತಮ್ಮ ಜೊತೆಗೆ ತಮ್ಮ ಪಕ್ಷದ ಆಪ್ತ ನಾಯಕರನ್ನು ತಮ್ಮ ಜೊತೆ ವೇದಿಕೆಗೆ ಬೆನ್ನು ತಟ್ಟಿಗೊಂಡು ಬನ್ನಿ ಬನ್ನಿ ಎಂದು ಕರೆದುಕೊಂಡು ವೇದಿಕೆಗೆ ಎಳೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳು ಅಸಹಾಯಕರಾಗಿ ಬಿಡುತ್ತಾರೆ.
ವಿಷಯ ಹೇಗಿದೆ ಅಂದರೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಇರುವುದಿಲ್ಲ. ಕಾರ್ಯಕ್ರಮ ನಿರೂಪಣೆ ಮಾಡುವವರು ಅವರ ಹೆಸರನ್ನು ಕರೆಯುವುದಿಲ್ಲ, ಆದರೂ ಪ್ರಚಾರಕ್ಕಾಗಿ ಸಚಿವರ ಜೊತೆ ನಿಂತು ಫೇೂಟೋಗೆ ಹಂಬಲಿಸುವವರಿಗೇನು ಕೊರತೆ ಇಲ್ಲ. ಅವರ ಉದ್ದೇಶ ನಾಳೆ ಪತ್ರಿಕೆಗಳಲ್ಲಿ ಹೆಸರು ಫೇೂಟೋ ಬರಬೇಕು. ಇಷ್ಟೇ ಅವರ ಆಸೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯವರು ಮಾಡಬೇಕಾದದ್ದು ಅಂದರೆ ಸ್ವಲ್ಪ ಜಾಗೃತಿ ವಹಿಸಿ ಸುದ್ದಿ ಪ್ರಕಟಿಸಬೇಕು. ಮತ್ತೆ ಇದು ಮುಂದುವರಿಯುವುದಿಲ್ಲ. ಇಂತಹ ಸರಕಾರಿ ಶಿಷ್ಟಾಚಾರ ಮುರಿಯುವ ಕೆಲಸ ಎಲ್ಲಾ ಪಕ್ಷಗಳಲ್ಲಿಯೂ ನಡೆಯುತ್ತದೆ. ಒಂದು ವೇಳೆ ನ್ಯಾಯಾಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮವಾದರೆ ಅಲ್ಲಿ ಸಂಬಂಧಿಸಿದ ನ್ಯಾಯಾಲಯದ ಮುಖ್ಯಸ್ಥರೇ ಅಧ್ಯಕ್ಷತೆ ವಹಿಸಬೇಕು. ಮಾತ್ರವಲ್ಲ ಬೇಕಾಬಿಟ್ಟಿಯಾಗಿ ಜನಪ್ರತಿನಿಧಿಗಳಾಗಲಿ ಸಚಿವರಾಗಲಿ ವೇದಿಕೆಯನ್ನು ಅಲಂಕರಿಸಲು ಆಗುವುದಿಲ್ಲ.
ಯಾವುದೇ ಸಚಿವರ ವಿರುದ್ಧ ಕ್ರಿಮಿನಲ್ ಕೇಸು ಇದ್ದು ತನಿಖೆಯನ್ನು ಎದುರಿಸುತ್ತಿದ್ದರೆ ಅವರು ನ್ಯಾಯಧೀಶರ ಜೊತೆ ವೇದಿಕೆ ಹಂಚಿಕೊಳ್ಳುವ ಹಾಗಿಲ್ಲ. ಆದರೆ ಇಂದಿನ ಪರಿಸ್ಥಿತಿ ಹೇಗಾಗಿದೆ ಅಂದರೆ ಕ್ರಿಮಿನಲ್ ಕೇಸು ಎದುರಿಸದ ಸಚಿವರೇ ಇಲ್ಲದ ದುರಂತ ಸ್ಥಿತಿ. ಸಚಿವರಾಗಲು ಇದೊಂದು ಪ್ರಮುಖ ಅರ್ಹತೆ ಅನ್ನುವ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಎಂತಹ ಶಿಷ್ಟಾಚಾರ ನಾವು ಪಾಲಿಸಬಹುದು ನೀವೇ ಹೇಳಿ?
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ