ನೈಋತ್ಯ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮುಂದಿನ ಚುನಾವಣೆಗೆ ಸರಿ ಸುಮಾರು ಒಂದು ವರ್ಷದ ಮೊದಲೇ ರಣರಂಗ ಸಜ್ಜುಗೊಳಿಸಲು ರಾಜಕೀಯ ಪಕ್ಷಗಳು ಪೂರ್ವ ತಯಾರಿಯಲ್ಲಿ ಹೆಜ್ಜೆ ಇಡಲು ಮುಂದಾಗಿವೆ. ಅದರಲ್ಲೂ ಈ ಬಾರಿ ಕಾಂಗ್ರೆಸ್ ಪಕ್ಷ ಎಲ್ಲಾ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದಿದೆ ಅನ್ನುವುದು ಅಷ್ಟೇ ನಿಜ. ಈ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಎರಡು ಲಕ್ಷ ರೂಪಾಯಿಯೊಂದಿಗೆ ಅರ್ಜಿ ಸಲ್ಲಿಸಲು ಕಾಂಗ್ರೆಸ್ ದಿನಾಂಕವನ್ನು ಪ್ರಕಟಿಸಿಯಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಿದ ಕಾಂಗ್ರೆಸ್ ಈ ಬಾರಿ ಬಹು ಪ್ರತಿಷ್ಠಿತ ನೈಋತ್ಯ ಕ್ಷೇತ್ರದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಎಲ್ಲಾ ಲೆಕ್ಕಾಚಾರದಲ್ಲಿ ಬಿದ್ದಿದೆ. ಇದು ಸುಲಭ ಸಾಧ್ಯವಾ?
ಹಾಗಾದರೆ ಈ ಬಾರಿ ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರವೇನು? ಒಂದು ರೀತಿಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಪಾರಂಪರಿಕವಾಗಿ ತನ್ನದಾಗಿಸಿಕೊಂಡ ಬಿಜೆಪಿಯ ಪರಿಸ್ಥಿತಿ ಏನಾಗಬಹುದು? ಹಿಂದಿನ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯನ್ನು ಮಣಿಸಿ ಜೆಡಿಎಸ್ ಗೆದ್ದ ಉದಾಹರಣೆ ನಮ್ಮ ಮುಂದಿದೆ. ಹಾಗಾದರೆ ಈ ಬಾರಿಯ ಚುನಾವಣೆಯ ಭವಿಷ್ಯ ಬರೆಯುವ ಮತದಾರರನ ಅಭಿಪ್ರಾಯ ಹೇಗಿರಬಹುದು? ಈ ಎಲ್ಲಾ ವಿಚಾರಗಳನ್ನು ವಿಶ್ಲೇಷಣೆ ಮಾಡುವ ಕಾಲ ಕೂಡಿ ಬಂದಿದೆ.
1. ಬಹುಕಾಲದಿಂದಲ್ಲೂ ನೈಋತ್ಯದ ಈ ಎರಡು ಕ್ಷೇತ್ರಗಳು ಬಿಜೆಪಿಗೆ ಸುಲಭವಾಗಿ ಜಯ ತಂದುಕೊಡುವ ಕ್ಷೇತ್ರಗಳೆಂದೇ ಬಹುಪ್ರಚಲಿತ. ಆದರೆ ನಿಧಾನವಾಗಿ ಇದು ತನ್ನ ಮಗ್ಗುಲನ್ನು ಬದಲಾಯಿಸಿಕೊಂಡು ಬರುತ್ತಿರುವ ರಾಜಕೀಯ ಸ್ಥಿತಿ ಗತಿಯನ್ನು ನಾವು ಗಮನಿಸಿದ್ದೇವೆ.
2. ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬಂದ ಅಭ್ಯರ್ಥಿಗಳ ಉದಾಸೀನ ಭಾವವೇ ಅವರ ಸೇೂಲಿಗೂ ಕಾರಣವಾಯಿತು ಅಂದರೂ ತಪ್ಪಾಗಲಾರದು. ಹಾಗಾಗಿ ಕಳೆದ ಬಾರಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿದೆ ಅನ್ನುವುದು ಅಷ್ಟೇ ಸತ್ಯ.
3. ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಶಂಕರಮೂರ್ತಿ ಅವರು ಸೇೂಲನ್ನು ಕಾಣದ ಸರದಾರ ಅನ್ನಿಸಿಕೊಂಡಿದ್ದರು. ಮತ್ತೆ ಇದೇ ಕ್ಷೇತ್ರವನ್ನು ಅದೇ ಪಕ್ಷದ ಆಯನೂರು ಮಂಜುನಾಥ್ ಪ್ರತಿನಿಧಿಸಿಕೊಂಡು ಬಂದರು. ಆದರೆ ಈ ಬಾರಿ ಅವರು ಈ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೇೂಲುಂಡರು. ಅವರು ಮತ್ತೆ ಇದೇ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಾರಾ ಅನ್ನುವುದನ್ನು ಕಾದು ನೇೂಡಬೇಕು.
4. ಈ ಎರಡು ಕ್ಷೇತ್ರಗಳಲ್ಲಿ ಹಿಂದೆ ಜಯ ಯಾರಿಗೆ ಬರುತ್ತಿತ್ತು ಅಂದರೆ ಯಾವ ಪಕ್ಷದವರು ಹೆಚ್ಚು ಮತದಾರರನ್ನು ನೊಂದಾಯಿಸಿಕೊಳ್ಳುತ್ತಾರೆ ಅವರಿಗೆ ಸುಲಭ ಜಯ ಅನ್ನುವುದು ಸರಳ ಲೆಕ್ಕಾಚಾರ. ಆದರೆ ಅದೇ ಮತದಾರನ ಮನಸ್ಥಿತಿ ಇಂದು ಬದಲಾಯಿಸಿಕೊಂಡಿದ್ದಾನೆ. ಬಹುಮುಖ್ಯವಾಗಿ ಈ ಪದವೀಧರ ಕ್ಷೇತ್ರದಲ್ಲಿ ಬರುವ ಮತದಾರರು ಬಹುಮುಖ್ಯವಾಗಿ ಅಸಂಘಟಿತ ವರ್ಗದ ಮತದಾರರು. ಶಾಸಕರು ಅನ್ನಿಸಿಕೊಂಡವರಿಗೆ ಗೆಲುವುದೊಂದೇ ಕೆಲಸ ಬಿಟ್ಟರೆ ಗೆದ್ದ ಮೇಲೆ ಕೆಲಸವೇ ಇಲ್ಲ. ಯಾಕೆಂದರೆ ಈ ವರ್ಗದಲ್ಲಿ ಬರುವ ಮತದಾರರೇ ಹಾಗೇ? ಆದರೆ ಛಾಯೆ ಬದಲಾಗಬೇಕು.
ಪದವೀಧರರು ಗೆಲ್ಲಿಸಿದ ಅನಂತರ ತಮ್ಮ ನಿರುದ್ಯೋಗ ಸಮಸ್ಯೆ ಇರಬಹುದು; ತಮ್ಮ ಸಾಧನೆ ಪ್ರತಿಭೆಯ ಮೂಲಕ ಪದವಿ ಅರ್ಹತೆಯ ಮೇಲೆ ಸರಕಾರಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಮತದಾರರು ತಮ್ಮ ಸಂಧ್ಯಾ ಕಾಲದ ಪಿಂಚಣಿಗಾಗಿ ವೋಟ್ ಫಾರ್ ಓಪಿಎಸ್ ಪರವಾಗಿ ಧ್ವನಿ ಮೊಳಗಿಸುವುದರ ಮೂಲಕ ನಮ್ಮ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಘಂಟೆ ಬಾರಿಸಬೇಕು. ಈ ಎಲ್ಲಾ ಸಮಸ್ಯೆ ಪರಿಸ್ಥಿತಿ ಬದಲು ಮಾಡುವ ಹೊಸ ರಕ್ತದ ಯುವ ಶಾಸಕರು ಆಯ್ಕೆಯಾಗಿ ಬರಬೇಕು. ಈ ನಿಟ್ಟಿನಲ್ಲಿ ಪದವಿ ಗಳಿಸಿ ಮೂರು ವರ್ಷಗಳು ಮುಗಿಸಿರುವ ಹೊಸ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು.
ಅತ್ಯಂತ ಕಡಿಮೆ ಸಂಖ್ಯೆಯ ಮತದಾರರನ್ನು ಪ್ರತಿನಿಧಿಸಿಕೊಂಡು ಶಾಸಕರಾಗುವ ಅವಕಾಶವಿರುವುದು ಪದವೀಧರ ಕ್ಷೇತ್ರ ಅನ್ನುವ ಕಪ್ಪು ಚುಕ್ಕೆ ಹೇೂಗಲಾಡಿಸುವ ವಾತಾವರಣ ಸೃಷ್ಟಿಯಾಗಬೇಕು.
5. ಇನ್ನು ಶಿಕ್ಷಕರ ಕ್ಷೇತ್ರ ಇಲ್ಲಿ ಕೂಡ ಅಷ್ಟೇ ತಮ್ಮ ಸಮಸ್ಯೆಗಳಿಗೆ ಸ್ಪಂದಿಸದ ಶಾಸಕರನ್ನು ಸರ್ಕಾರವನ್ನು ಬೆಂಬಲಿಸಲೇಬಾರದು. ಈ ಬಾರಿ ಅದೆಷ್ಟೋ ಸಂಖ್ಯೆಯಲ್ಲಿ ಪ್ರೌಢಶಾಲಾ ಪದವಿಪೂರ್ವ ಕಾಲೇಜು ಪ್ರಥಮ ದರ್ಜೆ ಕಾಲೇಜುಗಳಲ್ಲಿ 2006ರ ಅನಂತರ ನೇಮಕಗೊಂಡ ಶಿಕ್ಷಕರಿದ್ದಾರೆ. ಅವರ ಮೂಲಭೂತ ಬೇಡಿಕೆಯೇ ಹಳೆ ಪಿಂಚಣಿ ಇದನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ಮತ ಅನ್ನುವ “ವೋಟ್ ಫಾರ್ ಓಪಿಎಸ್” ಅನ್ನುವ ಸ್ಲೇೂಗನ್ ಮುಂದಿಡುವ ಎಲ್ಲಾ ವಾತಾವರಣ ಸೃಷ್ಟಿಯಾಗಿರುವುದಂತೂ ಸತ್ಯ.
ಅಂತೂ ಈ ಬಾರಿಯ ನೈಋತ್ಯ ವಿಧಾನಪರಿಷತ್ ಚುನಾವಣೆ ಯಾವ ಪಕ್ಷಗಳಿಗೂ ಸುಲಭದ ಜಯ ಅಲ್ಲ. ಯಾಕೆಂದರೆ ಈ ಎರಡು ಕ್ಷೇತ್ರದಲ್ಲಿನ ಮತದಾರರು ತಮ್ಮ ಸುಖ ಕಷ್ಟಗಳಿಗೆ ಸ್ಪಂದಿಸುವ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದಂತೂ ಗ್ಯಾರಂಟಿ.
– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.