ಸೇವಿಸಿದ ಆಹಾರ ಜೀರ್ಣವಾದರೆ ಅದರಷ್ಟು ಸುಖ ಬೇರೊಂದಿಲ್ಲ. ಎಲ್ಲಾ ಅನಾರೋಗ್ಯಕ್ಕೆ ಮೂಲ ಕಾರಣ ಅಜೀರ್ಣವೆಂದು ಆಯುರ್ವೇದದಲ್ಲಿ ಹೇಳಿದೆ. ಆದರೆ ಪ್ರಸ್ತುತ 10 ಮಂದಿಗಳಲ್ಲಿ ಎಂಟು ಮಂದಿಗೆ ಅಜೀರ್ಣದ ಸಮಸ್ಯೆ ಕಾಣಬಹುದಾಗಿದೆ. ಇದಕ್ಕೆ ಮುಖ್ಯ ಕಾರಣ ಬದಲಾದ ಆಹಾರ ಪದ್ಧತಿ ಹಾಗೂ ಜೀವನ ಶೈಲಿ. ಆಯುರ್ವೇದದಲ್ಲಿ ಋತುಗಳ ತಕ್ಕಂತೆ ಆಹಾರ ಕ್ರಮವನ್ನು ಹೇಳಲಾಗಿದೆ. ಬೇರೆ ಬೇರೆ ಋತುಗಳಲ್ಲಿ ಸಿಗುವಂತಹ ತರಕಾರಿ ಹಣ್ಣುಗಳನ್ನು ಸೇವಿಸುವುದು ಉತ್ತಮ. ಆದರೆ ಇತ್ತಿಚಿನ ದಿನಗಳಲ್ಲಿ ಜಂಕ್ ಫುಡ್, ಐಸ್ ಕ್ರೀಮ್, ಕರಿದ ಪದಾರ್ಥ ಸೇವನೆ ಜಾಸ್ತಿಯಾಗಿದೆ. ಅಪರೂಪಕ್ಕೆ ಸೇವಿಸಿದರೆ ತೊಂದರೆ ಇಲ್ಲ, ಆದರೆ ದಿನಾಲು ಸೇವಿಸುವುದು ಸೂಕ್ತವಲ್ಲ. ಇದು ಕ್ರಮೇಣ ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಮುಂದೆ ಇದನ್ನು ಸರಿಪಡಿಸುವುದು ಕಷ್ಟ. ಆದ್ದರಿಂದ ಮನೆಯಲ್ಲಿ ತಯಾರಿಸಿದ ಶುದ್ಧವಾದ, ಬಿಸಿಯಾದ, ಪೌಷ್ಠಿಕ ಭರಿತ, ಶುಚಿಯಾದ ಆಹಾರ ಸೇವನೆಗೆ ಪ್ರಾಮುಖ್ಯತೆ ನೀಡಿ. ದಿನಾಲು ಮಸಾಲೆಯುಕ್ತ ಆಹಾರ ಸೇವನೆ ಹಿತಕರವಲ್ಲ.
ದೇಹಭಾರ, ನಿರುತ್ಸಾಹ, ಮಲಬದ್ಧತೆ, ಬಾಯಿ ದುರ್ವಾಸನೆ, ಹೊಟ್ಟೆ ಉಬ್ಬರ ಇದು ಅಜೀರ್ಣದ ಲಕ್ಷಣಗಳು. ನಮ್ಮ ದೇಹ ಪ್ರಕೃತಿಗೆ ತಕ್ಕಂತೆ ಆಹಾರ ಸೇವನೆ ಒಳ್ಳೆಯದು. ವ್ಯಕ್ತಿಯಿಂದ ವ್ಯಕ್ತಿಗೆ ಜೀರ್ಣಶಕ್ತಿಯು ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಆಹಾರ ಸೇವನೆ ಒಳ್ಳೆಯದು. ಬೇಸಿಗೆಯಲ್ಲಿ ನಮ್ಮ ಜೀರ್ಣ ಶಕ್ತಿ ಕುಂದುವುದು. ಆದ್ದರಿಂದ ಬೇಸಿಗೆಯಲ್ಲಿ ಕಮ್ಮಿ ಸೇವಿಸಿ ದ್ರವ ಆಹಾರ ಜಾಸ್ತಿ ಸೇವಿಸಬಹುದು. ಮಳೆಗಾಲದಲ್ಲಿ ಜೀರ್ಣ ಶಕ್ತಿ ಮಧ್ಯಮವಿರುವುದರಿಂದ ಸಾಮಾನ್ಯ ಪ್ರಮಾಣದಲ್ಲಿ ಊಟ ಮಾಡಬಹುದು. ಚಳಿಗಾಲದಲ್ಲಿ ನಮ್ಮ ಜೀರ್ಣ ಶಕ್ತಿ ಅಧಿಕವಿರುವುದರಿಂದ ಸ್ವಲ್ಪ ಜಾಸ್ತಿ ಆಹಾರ ಸೇವನೆ ಮಾಡಬಹುದು. ಆದರೆ ವಿಪರ್ಮಿತ ಬೇಡ.
ವಯಸ್ಸಾದಂತೆ ಜೀವನ ಶಕ್ತಿ ಕಮ್ಮಿಯಾಗುವುದು ಸಹಜ. ಕೆಲವರಿಗೆ ಅಜೀರ್ಣದ ಸಮಸ್ಯೆ ಯಾವಾಗಲೂ ಕಾಡುವುದು ಹಾಗಾದರೆ ಇದನ್ನು ಸರಿಪಡಿಸಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ:
•ಮೊದಲಿಗೆ ನಮ್ಮ ಆಹಾರ ಕ್ರಮ ಹಾಗೂ ಜೀವನ ಶೈಲಿಯನ್ನು ಬದಲಿಸಬೇಕು.
•ದಿನಾಲು ವ್ಯಾಯಾಮ, ಪ್ರಾಣಾಯಾಮ, ಯೋಗಾಸನ, ನಡೆಗೆ ಯಾವುದಾದರೂ ಸರಿ 30 ನಿಮಿಷಗಳ ಕಾಲ ಮಾಡಿರಿ. ಇದರಿಂದ ಜೀರ್ಣ ಶಕ್ತಿ ಹೆಚ್ಚುವುದು.
•ಊಟವಾದ ಬಳಿಕ ಸೋಂಪು ಅಥವಾ ಶುಂಠಿ ತುಂಡನ್ನು ಸೇವಿಸಿ.
•ಎರಡು ಆಹಾರ ಸೇವನೆಯ ಮಧ್ಯೆ 4 ಗಂಟೆಗಳ ಅಂತರವಿರಲಿ.
•ಹಸಿವಾದಾಗ ಮಾತ್ರ ಆಹಾರ ಸೇವಿಸಿ.
•ಹಿಂದಿನ ಆಹಾರ ಜೀರ್ಣವಾಗದೆ ಮತ್ತೊಮ್ಮೆ ಸೇವಿಸಬೇಡಿ.
•ಸರಿಯಾಗಿ ಅಗಿದು ತಿನ್ನಿ.
•ಕೋಪ, ದುಃಖದಲ್ಲಿದ್ದಾಗ ಆಹಾರ ಸೇವನೆ ಒಳ್ಳೆಯದಲ್ಲ.
•ದೇವರನ್ನು ಸ್ಮರಿಸುತ್ತಾ ಆಹಾರವನ್ನು ದೇವರ ಪ್ರಸಾದವೆಂದು ಸ್ವೀಕರಿಸಿ.
•ಅಡುಗೆ ಮಾಡಿದ ನಾಲ್ಕು ಗಂಟೆಗಳ ಒಳಗೆ ಸೇವಿಸಿದರೆ ಉತ್ತಮ.
•ಸೂರ್ಯಸ್ತ ಆಗೋದರೊಳಗೆ ರಾತ್ರಿಯ ಊಟ ಸೇವಿಸುವುದು ಸೂಕ್ತ.
•ಊಟ ಮಾಡುವ ಅರ್ಧ ಗಂಟೆ ಮುಂಚೆ ನೀರನ್ನು ಕುಡಿಯಬೇಕು ಅಥವಾ ಊಟವಾದ ಎರಡು ಗಂಟೆಯ ಬಳಿಕ ನೀರನ್ನು ಕುಡಿಯಬಹುದು. ಊಟ ಮಾಡುವಾಗ ಅಧಿಕ ನೀರನ್ನು ಸೇವಿಸಬೇಡಿ.
•ಅರ್ಧ ಲೋಟ ನೀರಿಗೆ ಅರ್ಧ ಚಮಚ ಸೋಂಪಿನ ಹುಡಿ ಹಾಕಿ 10 ನಿಮಿಷ ಕುದಿಸಿ ಸೋಸಿ ನೀರನ್ನು ಸೇವಿಸಿ.ಅಜೀರ್ಣಕ್ಕೆ ಒಳ್ಳೆಯದು . ಇದೇ ರೀತಿ ಜೀರಿಗೆಯನ್ನು ಉಪಯೋಗಿಸಿ ಮಾಡಬಹುದು.
•ಸ್ವಲ್ಪ ಹಿಂಗನ್ನು ನೀರಿನಲ್ಲಿ ಹಾಕಿ ಕುಡಿಯಿರಿ.
•ಒಂದು ಚಮಚ ಶುಂಠಿಯ ರಸವನ್ನು ಒಂದು ಚಮಚ ಜೇನುತುಪ್ಪ ಒಂದು ಲೋಟ ನೀರಿನಲ್ಲಿ ಹಾಕಿ ಕುಡಿಯಬಹುದು.
•ಮೊಸರನ್ನ ಅಜೀರ್ಣಕ್ಕೆ ಒಳ್ಳೆಯದು.
•ಯೋಗಾಸನಗಳಲ್ಲಿ ನೌಕಾಸನ, ಹಸ್ತಪಾದಾಸನ, ಪವನಮುಕ್ತಾಸನ ಒಳ್ಳೆಯದು.
•ಅಜೀರ್ಣಕ್ಕೆ ಕಷಾಯ. ಒಂದು ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಶುಂಠಿ ಪುಡಿ, ಅರ್ಧ ಚಮಚ ಕರಿಮೆಣಸು, ಸ್ವಲ್ಪ ಏಲಕ್ಕಿ ಎಲ್ಲ ಸೇರಿಸಿ ಪುಡಿ ಮಾಡಿ. ಒಂದು ಗ್ಲಾಸ್ ನೀರಿಗೆ ಅರ್ಧ ಚಮಚ ಹುಡಿಯನ್ನು ಹಾಕಿ ಕುದಿಸಿ ಸೋಸಿ ಸೇವಿಸಿರಿ.
-ಡಾ. ಹರ್ಷಾ ಕಾಮತ್