ನೋಡಿದ್ದಷ್ಟು ನೋಡಬೇಕು ಅನಿಸುವುದು ಲ್ಯಾಂಡ್ ಆಫ್ ಟೆಂಪಲ್ಸ್ ಎಂದೇ ಹೆಸರುವಾಸಿಯಾದ ತಮಿಳ್ನಾಡಿನ ದೇವಸ್ಥಾನಗಳು. 2017 ಅಕ್ಟೋಬರ್ ನಲ್ಲಿ ನಾವು ತಮಿಳುನಾಡಿಗೆ ಮಂಗಳೂರಿನಿಂದ ರೈಲಿನಲ್ಲಿ ಹೊರಟೆವು. ನಮ್ಮದು ಒಟ್ಟಿಗೆ 15 ದಿವಸದ ಟೂರ್ ಆಗಿತ್ತು. ಎಂತಹ ಅದ್ಭುತ ಬೃಹತ್ ದೇವಸ್ಥಾನಗಳು. ಎತ್ತರ ಚಾವಣಿ, ರಮಣೀಯ ಶಿಲ್ಪಕಲೆಯಿಂದ ಕೂಡಿದ ಈ ದೇವಸ್ಥಾನಗಳನ್ನು ನೋಡಲು ಎರಡು ಕಣ್ಣು ಸಾಲದು. ಜೀವನದಲ್ಲಿ ಮತ್ತೆ ಮತ್ತೆ ನೋಡಲೇ ಬೇಕೆನಿಸುವ ಸ್ಥಳವೆಂದರೆ ನನಗೆ ತಮಿಳ್ನಾಡಿನ ದೇವಸ್ಥಾನಗಳು. ದೇವಸ್ಥಾನಗಳು ಮಾತ್ರವಲ್ಲ ಅಲ್ಲಿನ ಹೋಟೆಲ್ ತಿಂಡಿ ಬಲೂರುಚಿ. ಮಸಾಲ್ ದೋಸೆಗೆ ಮಸಾಲೆಯ ಜೊತೆಗೆ ಮೂರು ತರಹದ ರುಚಿಯಾದ ಚಟ್ನಿ. ಇಡ್ಲಿ ಸಾಂಬಾರ್, ವಡೆ, ಹಾಲಿನಿಂದಲೇ ತಯಾರಿಸಿದ ಕಾಫಿ ಟೀ ಹೇಳುವಷ್ಟು ರುಚಿಯಾಗಿತ್ತು. ಮಧ್ಯಾಹ್ನದ ಊಟ ಕೂಡ ಅಷ್ಟೇ ರುಚಿ. ಯಾವುದೇ ಹೋಟೆಲಿಗೆ ಹೋದರು ರುಚಿಗೆ ಮಾತ್ರ ಕಮ್ಮಿ ಇರ್ತಾಯಿರಲಿಲ್ಲ. ರಾತ್ರಿ ಮಾತ್ರ ಊಟ ಯಾವ ಹೋಟೆಲ್ಗಲ್ಲು ಸಿಗೋದಿಲ್ಲ. ಆದರೆ ಬಿಸಿ ಬಿಸಿ ರುಚಿಯಾದ ದೋಸೆ, ಬೇರೆ ಬೇರೆ ತಿಂಡಿ ಸಿಗುತ್ತದೆ.
ನಾವು ನಾಲ್ಕು ಜನ ಅಂದರೆ ನಾನು, ನನ್ನ ಯಜಮಾನರು ಮಗ ಮಗಳು ಎಲ್ಲರಿಗೂ ಬಾಯಿ ರುಚಿ ಜಾಸ್ತಿ. ತಮಿಳುನಾಡಿನಲ್ಲಿ ಅಷ್ಟು ಖುಷಿ ಅಂದ್ರೆ ಅಷ್ಟು ಖುಷಿ ಆಯ್ತು ನಮಗೆ. ಈಗ ಬರೆಯುವಾಗಲು ಕೂಡ ಬಾಯಲ್ಲಿ ನೀರು ಬರುತ್ತಿದೆ. ಚಿಕ್ಕಂದಿನಿಂದಲೂ ತಮಿಳುನಾಡಿಗೆ ಹೋಗುತ್ತಿದ್ದೆ. ಅಜ್ಜ ಅಜ್ಜಿಯರ ಜೊತೆ ಅಪ್ಪ-ಅಮ್ಮನ ಜೊತೆ ಮದುವೆಗಿಂತ ಮುಂಚೆ ಅನೇಕ ಸಲ ಹೋಗಿ ಬಂದಿದ್ದೇನೆ. ಆದರೂ ಮತ್ತೆ ಹೋಗಬೇಕು ಅನಿಸುತ್ತದೆ. ತಮಿಳುನಾಡಿನಲ್ಲಿ ಅನೇಕ ಸ್ಥಳಗಳನ್ನು ಭೇಟಿ ನೀಡಿದೆವು. ಆದರೆ ನೋಡಲೇಬೇಕಾದ ದೇವಸ್ಥಾನಗಳು ಮಧುರೈಯಲ್ಲಿರುವ ಮೀನಾಕ್ಷಿ ದೇವಸ್ಥಾನ, ತಾಂಜಾವುರಿನಲ್ಲಿರುವ ಬೃಹದೀಶ್ವರ ದೇವಸ್ಥಾನ, ಆದಿಕುಂಬೇಶ್ವರ ದೇವಸ್ಥಾನ, ಶ್ರೀರಂಗನಾಥ ದೇವಸ್ಥಾನ, ರಾಮನಾಥ ಸ್ವಾಮಿ ದೇವಸ್ಥಾನ.
1. ಮೀನಾಕ್ಷಿ ದೇವಸ್ಥಾನ: ಇಲ್ಲಿ ದೇವಿ ಪಾರ್ವತಿಯನ್ನು ಮೀನಾಕ್ಷಿಯ ರೂಪದಲ್ಲಿ ಕಾಣಬಹುದು. ಆರನೇ ಶತಮಾನದಲ್ಲಿ ಕಟ್ಟಲಾಗಿದ್ದು 14ನೇ ಶತಮಾನದಲ್ಲಿ ಮುಸಲ್ಮಾನರ ದಾಳಿಯಿಂದ ಅನೇಕ ಹಾನಿಗಳು ಉಂಟಾದವು. ಇದನ್ನು 16ನೆಯ
ಶತಮಾನದಲ್ಲಿ ಪುನಃ ಕಟ್ಟಲಾಯಿತು. ದ್ರವಿಡಿಯನ್ ಶೈಲಿಯಲ್ಲಿ ಕಟ್ಟಲಾಗಿದೆ. ಶಿಲ್ಪಕಲೆಯಿಂದ ಕೂಡಿರುವ ಗೋಪುರ ಇದರ ಆಕರ್ಷಣೆಯ ಕೇಂದ್ರವಾಗಿದೆ.
2. ಆದಿಕುಂಬೇಶ್ವರ ದೇವಸ್ಥಾನ: ಇದು ದ್ರವಿಡಿಯನ ಶೈಲಿಯಲ್ಲಿ ಕಟ್ಟಲಾಗಿದೆ. ಹದಿನಾರನೆಯ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾಗಿತ್ತು. ಇದು ಈಶ್ವರನ ದೇವಸ್ಥಾನವಾಗಿದ್ದು ಇಲ್ಲಿ ಮುರುಗನ್ ಗಣೇಶ ದೇವರ ಕೂಡ ದೇವಸ್ಥಾನ
ಇದೆ.
3. ಬೃಹದೀಶ್ವರ ದೇವಸ್ಥಾನ: ಇದು ಈಶ್ವರ ದೇವಸ್ಥಾನ ತಾಂಜಾವುರಿನಲ್ಲಿ ಸ್ಥಿತವಾಗಿದೆ. ಹೆಸರಿಗೆ ತಕ್ಕಂತೆ ಭಾರತದಲ್ಲಿ ಬೃಹತ್ ದೇವಸ್ಥಾನವಿದು. ಇದು ಪುರಾತನ ದೇವಸ್ಥಾನ ಚೋಲರ ಕಾಲದಲ್ಲಿ 11ನೆಯ ಶತಮಾನದಲ್ಲಿ ಗ್ರಾನೈಟ್ನಲ್ಲಿ ಕಟ್ಟಲಾದ ಮೊದಲ ದೇವಸ್ಥಾನ ವೆಂದು ಗುರುತಿಸಲಾಗಿದೆ. ದೇವಸ್ಥಾನದ ಟವರ್ 216 ಫೀಟ್. ಇದು ವಿಶ್ವದಲ್ಲೇ ಉದ್ದದ ದೇವಸ್ಥಾನ ವೆಂದು ಪ್ರಖ್ಯಾತ ಪಡೆದಿದೆ.
4. ಶ್ರೀರಂಗನಾಥ ಸ್ವಾಮಿ ದೇವಸ್ಥಾನ: ಇದು ನೋಡಲು ಅತ್ಯಂತ ಆಕರ್ಷಕವಾಗಿರುವಂತಹ ದೇವಸ್ಥಾನ. ಇದನ್ನು ನೋಡಲೇಬೇಕು. ವಿಷ್ಣು ದೇವರ ದೇವಸ್ಥಾನವಿದು. ಇದು ಶ್ರೀರಂಗಂ ನಲ್ಲಿದೆ. ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಸಾವಿರ ಕಂಬದ ಹಾಲ್ ನೋಡಬಹುದು. ಅತಿ ಸುಂದರ ಶಿಲ್ಪಕಲೆಯಿಂದ ಕೂಡಿದ ದೇವಸ್ಥಾನವಿದು.
5. ಶ್ರೀ ರಾಮನಾಥ ಸ್ವಾಮಿ ದೇವಸ್ಥಾನ: ಇದು 12 ನೆಯ ಶತಮಾನದಲ್ಲಿ ಕಟ್ಟಿರುವಂತದ್ದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವಂತಹ ದೇವಸ್ಥಾನವಿದು. ಇಲ್ಲಿ ಎರಡು ಲಿಂಗವನ್ನು ಕಾಣಬಹುದು ಒಂದು ಶ್ರೀ ರಾಮನು ಮಾಡಿದ ಉಸುಕಿನ ಲಿಂಗ ಇನ್ನೊಂದು ಹನುಮಂತನು ಕೈಲಾಸದಿಂದ ತಂದಂತಹ ಲಿಂಗ. ಎರಡರಲ್ಲಿ ಪೂಜೆ ನಡೆಯುತ್ತದೆ.. ಇದು ರಾಮೇಶ್ವರದಲ್ಲಿ ಇದೆ. ಇವೆಲ್ಲ ದೇವಸ್ಥಾನಗಳನ್ನು ಮತ್ತೊಮ್ಮೆ ಕಣ್ತುಂಬ ನೋಡಬೇಕೆನ್ನುವ ಆಸೆ ಇದೆ.
-ಡಾ. ಹರ್ಷಾ ಕಾಮತ್