ಶಾಲೆಯಲ್ಲಿ ಕಾಂಪಿಟಿಷನ್ ಗೆ ಮನೆಯಲ್ಲಿ ತಯಾರಿ ನಡೆಯುತ್ತಿತ್ತು. ಮಗುವಿಗೆ ಭಾಷಣವನ್ನು ಬಾಯಿಪಾಠ ಮಾಡಿಸುತ್ತಿದ್ದಳು. ಮಗು ಅರ್ಥ ಕೇಳಿದರೆ ಅದೆಲ್ಲಾ ಬೇಡ ಇದನ್ನು ಬಾಯಿಪಾಠ ಮಾಡು ಸಾಕು ಎನ್ನುತ್ತಿದ್ದಳು ತಾಯಿ. ಈ ವಿಷಯಕ್ಕೆ ಕೆಲವು ವಿಷಯಗಳು ಸೇರಿಸಬಹುದು ಎಂದು ಮಗು ಹೇಳಿದಾಗ ಅದಲ್ಲ ಬೇಡ ನಾನು ಹೇಳಿಕೊಟ್ಟ ಹಾಗೆ ಅದೇ ಭಾಷೆಯಲ್ಲಿ ಹೇಳಿದರೆ ಬಹುಮಾನ ಸಿಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದಳು. ತನ್ನ ಸ್ವಂತ ವಾಕ್ಯದಲ್ಲಿ ಹೇಳುತ್ತೇನೆ ಎಂದು ಮಗು ಹೇಳಿದಾಗ ನಿರಾಕರಿಸಿದಳು. ಮಗು ಎಲ್ಲದಕ್ಕೂ ಒಪ್ಪಿತು. ಹೋಗಿ ಬಾಯಿ ಪಾಠ ಮಾಡಿ ಬಹುಮಾನ ಸಿಕ್ಕಿತು. ಆದರೆ ಮಗುವಿಗೆ ಸಮಾಧಾನವಿರಲಿಲ್ಲ. ಇದೇ ರೀತಿ ಹತ್ತನೇ ಕ್ಲಾಸ್ ವರೆಗೆ ಬಾಯ್ ಪಾಠ ಮಾಡಿ ರೂಢಿಯಾಗಿತ್ತು. ಕಾಲೇಜ್ ಸೇರಿದಾಗ ಬಾಯಿ ಪಾಠ ಮಾಡಿ ಅಭ್ಯಾಸವಿರುವ ಆ ಮಗುವಿಗೆ ಕಷ್ಟವಾಗಿದ್ದು ಸುಳ್ಳಲ್ಲ.
ಇನ್ನೊಂದೆಡೆ ತಾಯಿ ಮಗು ಸೇರಿ ವಿಷಯವನ್ನು ಚರ್ಚಿಸಿ ಪಾಯಿಂಟ್ಸ್ ಗಳನ್ನು ಬರೆದಿಟ್ಟು ನಿನ್ನ ಸ್ವಂತ ವಾಕ್ಯದಲ್ಲಿ ಹೇಳು ಎಂದು ಪ್ರೋತ್ಸಾಹಿಸಿದಳು. ಆ ಮಗು ಖುಷಿಯಿಂದ ಭಾಷಣ ಮಾಡಿ ಬಹುಮಾನ ಗಿಟ್ಟಿಸಿತು. ತನ್ನ ಚಿಕ್ಕ ಯಶಸ್ಸನ್ನು ಕೊಂಡಾಡಿದಳು. ಮುಂದೆ ಪ್ರಖ್ಯಾತ ವಾಗ್ಮಿ ಕೂಡ ಆದಳು. ಇಬ್ಬರ ಬೆಳವಣಿಗೆಯ ರೀತಿ ಬೇರೆ ಬೇರೆ. ಮೊದಲನೆಯ ತಾಯಿ ತನ್ನ ಆಲೋಚನೆಗೆ ತಕ್ಕಂತೆ ಮಗುವನ್ನು ಬೆಳೆಸಿದಳು. ಎರಡನೆಯ ತಾಯಿ ತನ್ನ ಮಗುವನ್ನು ಆಲೋಚಿಸಲು ಮಗುವಿನ ಕೌಶಲ್ಯವನ್ನು ಪ್ರೋತ್ಸಾಹಿಸಿ ತಯಾರಿ ಮಾಡಿದಳು. ಹೀಗೆ ಪೋಷಕರಾದ ನಾವು ಮಗುವಿನ ಬೆಳವಣಿಗೆಯಲ್ಲಿ ಆಧಾರವಾಗಬೇಕೆ ವಿನಹ ಬೆಳವಣಿಗೆಯನ್ನು ಕುಂಟಿತಗೊಳಿಸಬಾರದು.
ಅನೇಕರಿಗೆ ಇದು ತಿಳಿದಿಲ್ಲ. ಮಗುವಿಗೆ ಬುದ್ಧಿ ಇಲ್ಲ ತಾವೇ ಕಲಿಸಬೇಕೆಂದು ನಂಬುತ್ತಾರೆ. ಒಮ್ಮೆ ಮಗುವಿನ ಹತ್ತಿರ ಮಾತಾಡಿ ನೋಡಿ ಅವರ ಆಲೋಚನೆಗಳು ಅವರ ಕೆಲಸ ಮಾಡುವ ರೀತಿಯನ್ನು ಗಮನಿಸಿ ಪ್ರೋತ್ಸಾಹಿಸಿ. ಅವರಿಗೆ ನಮ್ಮಗಿಂತ ಜಾಸ್ತಿ ಬುದ್ಧಿ ಇರುತ್ತದೆ. ಅವರಿಗೆ ಸ್ವತಂತ್ರರಾಗಲು ಬಿಡಿ. ಜೀವನದ ವಿಷಯಗಳನ್ನು ಮನಸ್ಸು ಬಿಚ್ಚಿ ಮಾತಾಡಿ. ವಿವಿಧ ಕ್ಷೇತ್ರದಲ್ಲಿ ಮಗುವನ್ನು ತೊಡಗಿಸಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸಿ.
ಮಗುವಿನ ವ್ಯಕ್ತಿತ್ವ ಅನುವಂಶಿಕತೆ ಹಾಗೂ ಪರಿಸರ ರೂಪಿಸುತ್ತದೆ. ಅದರ ಜೊತೆಗೆ ಮಗುವಿನ ತನ್ನ ತನವು ಬೆಳೆಯಲು ನೀವು ಸಹಾಯ ಮಾಡಿ. ಚಿಕ್ಕ ಪೆಟ್ಟಾದರೂ ಅಯ್ಯೋ ಎಂದು ಕೂಗದೆ ಸಮಾಧಾನದಿಂದ ಮಗುವಿಗೆ ಜೀವನದಲ್ಲಾಗುವ ಕಷ್ಟಗಳನ್ನು ಅನುಭವಿಸಲು ಬಿಡಿ. ಜೀವನದಲ್ಲಿ ಕಷ್ಟಗಳು ನಮಗೆ ಪಾಠ ಕಲಿಸುತ್ತದೆ ಸವಾಲುಗಳನ್ನು ಎದುರಿಸಲು ಕಲಿಸುತ್ತದೆ. ಸುಖವಾಗಿರಲಿ ಎಂದು ಬಯಸುವುದಕ್ಕಿಂತ ಕಷ್ಟಗಳನ್ನು ಸವಾಲುಗಳನ್ನು ಎದುರಿಸಲು ಬಿಡಿರಿ. ಎಲ್ಲದರಲ್ಲಿಯೂ ಮೂಗು ತೂರಿಸಬೇಡಿ.
ಚಿಕ್ಕ ಗಿಡಕ್ಕೆ ಅಗತ್ಯವಿರುವ ನೀರು ಗೊಬ್ಬರ ಹಾಕಿ ಬೆಳೆಸಬೇಕು. ಬೇರುಗಳನ್ನು ತನ್ನಷ್ಟಕ್ಕೆ ಬೆಳೆಯಲು ಬಿಡಿ. ಬೇರುಗಳನ್ನು ನಾವು ಸೃಷ್ಟಿಸಲಾಗುವುದಿಲ್ಲ. ಗಿಡದ ಒಳಗಿನಿಂದ ಪ್ರೇರಣೆಗೊಂಡು ಬೇರುಗಳು ಶಕ್ತಿಯುತವಾಗಿ ಆಳವಾಗಿ ಹರಡಬೇಕು. ತಳಹದಿ ಗಟ್ಟಿಯಾಗಿದ್ದರೆ ಮಾತ್ರ ಮರವು ಸದೃಢವಾಗಿ ಬೆಳೆಯುತ್ತದೆ, ಫಲಿಸುತ್ತದೆ ಅಲ್ಲವೇ? ಅಧಿಕ ನೀರು ಗೊಬ್ಬರ ಹಾಕಿದರೆ ಗಿಡವು ಸಾಯುತ್ತದೆ. ಅದೇ ರೀತಿ ಮಕ್ಕಳು ಕೂಡ.
-ಡಾ. ಹರ್ಷಾ ಕಾಮತ್