2025ಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷದ ಸಿಹಿ ಕಹಿ ನೆನಪು ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಈ ವರ್ಷದಲ್ಲಿ ಅನುಭವಿಸಿದ ಹಾಗೂ ಕಲಿತ ಪಾಠವನ್ನು ಹಿಡಿದು ಮುಂದಿನ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಮುಂದಿನ ವರ್ಷ ಸುಖವಾಗಿರಲಿ ಯಾವುದೇ ಆತಂಕವಿಲ್ಲದೆ ಸಮಯ ಕಳೆಯಬೇಕೆಂದು ಆಶಿಸುತ್ತೇವೆ.
ನಾವು ಪ್ರತಿ ವರ್ಷ ಹಲವು ಕನಸುಗಳನ್ನು ಕಾಣುತ್ತೇವೆ. ಆದರೆ ನನಸಾಗುವ ಸಮಯ ಬಂದಿಲ್ಲವೆಂದು ಗೋಳಾಡುತ್ತೇವೆ. ಎಲ್ಲರಿಗೆ ಇರುವುದು 24 ಗಂಟೆ, ಆದರೆ ಕೆಲವರು ಅದನ್ನು ಸದುಪಯೋಗಿಸಿ ಯಶಸ್ಸನ್ನು ಕಾಣುತ್ತಾರೆ. ಇನ್ನು ಕೆಲವರಿಗೆ ಸಮಯ ಎಲ್ಲಿ ಕಳೆಯುತ್ತೇವೆ ಎಂಬುದು ಅರಿವು ಕೂಡ ಇರುವುದಿಲ್ಲ. ಹಾಗಾದರೆ ನಮಗೆ ಜೀವನದಲ್ಲಿ ಬೇಕಾದದ್ದು ಸಿಗುವುದಿಲ್ಲವೇ? ಖಂಡಿತವಾಗಿಯೂ ಸಿಗುತ್ತದೆ. ನಮ್ಮ ಬದುಕನ್ನು ರೂಪಿಸಲು ಒಂದು ಪುಸ್ತಕ ಮತ್ತು ಪೆನ್ನು ಇದ್ದರೆ ಸಾಕು. ಹೇಗೆಂದು ನೋಡೋಣ.
ಯಶಸ್ಸನ್ನು ಕಾಣಲು ಬರೀ ಶ್ರಮ ಪಟ್ಟರೆ ಸಾಲದು. ಅದಕ್ಕೆ ಪ್ಲಾನಿಂಗ್ ಅಥವಾ ತಯಾರಿ ಬಹಳ ಮುಖ್ಯ. ಜೀವನದ ಪ್ರತಿಯೊಂದು ವರ್ಗದಲ್ಲಿ ನಾವು ಸಮರ್ಥಕವಾಗಿ ಬೆಳೆಯಲು ಪುರ್ವ ಯೋಜನೆಯ ಪಾತ್ರ ಬಹಳ ಮುಖ್ಯ. ನಾವು ಕಂಡಂತಹ ಮಹಾ ವ್ಯಕ್ತಿಗಳು ಪ್ಲಾನಿಂಗ್ ಇಲ್ಲದೆ ಬದುಕನ್ನು ಯಶಸ್ವಿಗೊಳಿಸಲಿಲ್ಲ. ಪ್ಲಾನಿಂಗ್ ಹೇಗೆ ಮಾಡುವುದು ಕಲಿಯೋಣ. ಒಂದು ನೋಟ್ ಬುಕ್ ಅಥವಾ ಡೈರಿ ಯಾವುದೇ ಪುಸ್ತಕವಿರಲಿ ಆದರೆ ನೆನಪಿರಲಿ ಆ ಪುಸ್ತಕ ಬೇರೆ ಯಾವುದಕ್ಕೂ ಉಪಯೋಗಿಸಬಾರದು. ಅದು ನಿಮ್ಮ ಪ್ಲಾನಿಂಗ್ ಗೆ ಸೀಮಿತವಾಗಿರಲಿ.
ಮೊದಲನೆಯ ಪುಟದಲ್ಲಿ 2024 ವರ್ಷದ ಹಿನ್ನೋಟದ ಬಗ್ಗೆ ಚಿಕ್ಕ ಬರಹ ಬರೆಯಿರಿ. ಅದರಲ್ಲಿ ನಿಮ್ಮ ಸಾಧನೆಗಳ ಬಗ್ಗೆ, ನಿಮ್ಮಿಂದಾದ ತಪ್ಪುಗಳ ಬಗ್ಗೆ, ಅದರ ಕಾರಣಗಳು, ನೀವು ಕಲಿತಂತಹ ಪಾಠ ಇನ್ನಿತರ ವಿಷಯದ ಬಗ್ಗೆ ಬರೆಯಿರಿ. ಮುಂದಿನ ವರ್ಷಕ್ಕೆ ಕಾಲಿಡುವ ಮುಂಚೆ ಇದು ಮುಖ್ಯ. ನಂತರ 2025 ರಲ್ಲಿ ಮಾಡಬೇಕಾದ ಪ್ರಮುಖ ಕೆಲಸಗಳು, ನಿಮ್ಮ ಕನಸುಗಳ ಪಟ್ಟಿ ಮಾಡಿರಿ. ಅದರಲ್ಲಿ ಕೌಟುಂಬಿಕ, ವೈಯಕ್ತಿಕ, ಸಾಮಾಜಿಕ, ನಿಮ್ಮ ವೃತ್ತಿಯಲ್ಲಿ ಮಾಡಬೇಕಾದ ಗುರಿಗಳನ್ನು ಬರೆಯಿರಿ. ಪ್ರತಿಯೊಂದು ಭಾಗದಲ್ಲಿ ಒಂದು ಅಥವಾ ಎರಡು ಗುರಿಗಳನ್ನು ಆರಿಸಿರಿ. ಅದನ್ನು ಎಷ್ಟು ತಿಂಗಳೊಳಗೆ ಮುಗಿಸಬೇಕೆಂದು ಬರೆಯಿರಿ. ಮೊದಲಿಗೆ ಚಿಕ್ಕಪುಟ್ಟ ಗುರಿಗಳನ್ನು ಇಟ್ಟು ಅದನ್ನು ಬರೆದಿಟ್ಟ ಸಮಯದೊಳಗೆ ಮುಗಿಸಲು ಪ್ರಯತ್ನಿಸಿ. ಹೀಗೆ ಚಿಕ್ಕ ಪುಟ್ಟ ಯಶಸ್ಸಿನಿಂದ ಮುಂದೆ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸಲು ಖಂಡಿತವಾಗಿಯೂ ನಿಮ್ಮಿಂದ ಸಾಧ್ಯವೆಂದು ಅರಿತುಕೊಳ್ಳುವಿರಿ. ಹೀಗೆ ಮಾಡುತ್ತಾ ಬಂದರೆ ಮುಂದೆ ಅದು ರೂಢಿಯಾಗುತ್ತದೆ.
ಪ್ರತಿಯೊಂದು ವಿಷಯವನ್ನು ಪುಸ್ತಕದಲ್ಲಿ ಬರೆಯಿರಿ. ಸಮಯ ಎಲ್ಲಿ ಪೋಲಾಗುತ್ತದೆ ಎಂದು ಹುಡುಕಿ. ಬೆಳಿಗ್ಗೆ 15 ನಿಮಿಷ ಮುಂಚಿತವಾಗಿ ಏಳಿ. ಮುಂಜಾನೆ ಬೇಗ ಎದ್ದರೆ ಆರೋಗ್ಯವಂತ ಹಾಗು ಉಲ್ಲಸಿತರಾಗಿರುತ್ತೀರಿ. ನಿಮ್ಮ ಕನಸಿಗೆ ಪ್ರತಿದಿನ ಅಥವಾ ವಾರಕ್ಕೆ ನಾಲ್ಕು ದಿನಗಳ ಕಾಲ ದಿವಸಕ್ಕೆ 15 ನಿಮಿಷ ಕೊಡಿ ನಂತರ ಚಮತ್ಕಾರ ನೋಡಿ. ಹನಿಗೂಡಿ ಹಳ್ಳವಾಗುವುದೆಂದು ಮರೆಯದಿರಿ. ಪ್ರಯತ್ನ ನಿರಂತರವಾಗಿರಲಿ. ಪ್ರತಿಯೊಂದು ಗುರಿ ಸಾಧನೆಯ ಪಯಣವನ್ನು ಆ ಪುಸ್ತಕದಲ್ಲಿ ಬರೆಯಿರಿ. ತಪ್ಪಾದರೆ ಅದಕ್ಕೆ ಕಾರಣವನ್ನು ಹುಡುಕಿ. ಕೆಲಸಗಳು ಸರಿಯಾದರೆ ಮುಂದುವರಿಸಿ.
ಬರೆಯುವುದರಿಂದ ನಮ್ಮ ಆಲೋಚನೆಗಳು ಸ್ಪಷ್ಟವಾಗುತ್ತದೆ. ಹೊಸ ಹೊಸ ಐಡಿಯಾಗಳು ಹೊಳೆಯುತ್ತದೆ. ಪುಸ್ತಕ ಮತ್ತು ಪೆನ್ನು ನಮ್ಮ ಆಪ್ತಮಿತ್ರರಾಗುತ್ತಾರೆ. ನಮ್ಮ ಕನಸಿನ ಪಯಣದಲ್ಲಿ ಪುಸ್ತಕ ಪೆನ್ನುಗಳು ಭಾಗಿಯಾಗುತ್ತಾರೆ. ಯಾರಿಗೂ ತಿಳಿಯದ ವಿಷಯವನ್ನು ನಮ್ಮ ಪುಸ್ತಕ ತಿಳಿಯುತ್ತದೆ. ಪುಸ್ತಕ ನಮ್ಮ ಮನಸ್ಸಿನ ಕನ್ನಡಿ ಇದ್ದಂತೆ, ಪೆನ್ ನಮ್ಮ ಯಶಸ್ಸಿಗೆ ಕಾರಣವಾದ ಉಪಕರಣವಿದ್ದಂತೆ. ನಿಮ್ಮ ಕನಸಿನತ್ತ ಇಟ್ಟ ಒಂದು ಪುಟ್ಟ ಹೆಜ್ಜೆ ಚಮತ್ಕಾರವನ್ನು ಮಾಡಬಲ್ಲದು.
-ಡಾ. ಹರ್ಷಾ ಕಾಮತ್