ದೇವರು ಎಲ್ಲಾ ಕಡೆ ಇದ್ದಾನೆ ಎಂದು ಎಲ್ಲರಿಗೂ ಗೊತ್ತು. ಅದರ ಅರ್ಥ ನಮ್ಮಲ್ಲಿಯೂ ದೇವರಿದ್ದಾನೆ. ಈ ‘ನಮ್ಮಲ್ಲಿ ಇರುವ ದೇವರು’ ನಾವು ನಂಬಿದ ತಿಳಿದ ವಿಷಯವನ್ನು ತೋರಿಸುತ್ತಾನೆ. ನಾವು ನಂಬಿದ ದೇವರಿಂದ ನಮಗೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ನಮ್ಮಲ್ಲಿ ದೇವರಿದ್ದಾನೆ ಎಂದಾದರೆ ನಮಗೆ ದೇವರಿಗಿರುವಷ್ಟು ಶಕ್ತಿ ಇದೆ ಎಂದರ್ಥ. ಈ ಸಿದ್ದಿಗಳನ್ನು ಹಿಂದಿನ ಕಾಲದಲ್ಲಿ ಪಡೆದಿದ್ದರು. ಹಾಗಾದರೆ ನಾವು ಜಗತ್ತನ್ನು ಸೃಷ್ಟಿಸಬಹುದಾ ಹೌದು ಎಂದು ಹೇಳುತ್ತಾರೆ ಬಲ್ಲವರು. ಹಾಗಾದರೆ ನಾವು ದೇವರಾಗಲು ಸಾಧ್ಯವೇ? ಇಲ್ಲಿ ವಿಷಯವನ್ನು ತಿಳಿದುಕೊಳ್ಳೋಣ.
ದೇವರಿಗಿರುವಷ್ಟು ಅದ್ಭುತ ಶಕ್ತಿ ನಮ್ಮಲ್ಲಿಯೂ ಇದೆ. ಅದನ್ನು ನಾವು ಅರಿತರೆ ದೇವರಷ್ಟು ಶಕ್ತಿಶಾಲಿಯಾಗಬಹುದು. ಅದನ್ನು ಪಡೆದುಕೊಳ್ಳಲು ಸಹಸ್ರಾರು ವರ್ಷ ತಪವನ್ನು ಮಾಡಬೇಕು. ಅಷ್ಟು ಮಾಡಿದ ಮೇಲೂ ಕೆಲವೊಮ್ಮೆ ಶಕ್ತಿ ಸಿಗುವುದಿಲ್ಲ. ಕೆಲವರಿಗೆ ಸಿಕ್ಕಿದೆ. ಹಾಗಾದರೆ ಅವರು ದೇವರು ಆಗಿದ್ದಾರೆಯೇ?
ದೇವರ ಶಕ್ತಿಯನ್ನು ಪಡೆದ ವ್ಯಕ್ತಿ ತನಗೆ ಶಕ್ತಿ ಸಿಕ್ಕಿದೆ ಎಂದು ಅಹಂಕಾರದಿಂದ ಬೀಗುತ್ತಾನೆ. ಆಗ ದೇವರಾಗಲು ಸಾಧ್ಯವಿಲ್ಲ. ಯಾವಾಗ ಅಹಂಕಾರದಿಂದ ಹೊರ ಬರುತ್ತಾನೋ ದೇವರ ಶಕ್ತಿ ನಮಗೆ ಖಂಡಿತವಾಗಿಯೂ ದೊರೆಯುತ್ತದೆ. ಯಾವ ಮನುಷ್ಯನು ಶಕ್ತಿ ಪಡೆದು ಸತ್ಯ ತಿಳಿದು ದೇವರಲ್ಲಿ ಲೀಲವಾಗುತ್ತಾನೋ ಅವನು ದೇವರಲ್ಲಿ ಒಂದಾಗಿಬಿಡುತ್ತಾನೆ. ಅಲ್ಲಿ ಅಹಂಕಾರಕ್ಕೆ ಜಾಗವಿರುವುದಿಲ್ಲ. ದೇವರೊಳಗೆ ಒಂದಾದ ಮೇಲೆ ತಾನು ಬೇರೆ ದೇವರು ಬೇರೆ ಅಲ್ಲದ ಸ್ಥಿತಿ. ಅದೇ ಯಾವಾಗ ಮನುಷ್ಯ ಶಕ್ತಿ ಪಡೆದು ಅಹಂಕಾರ ಪಡುತ್ತಾನೆ ತನಗೆ ಶಕ್ತಿ ಸಿಕ್ಕಿದೆ, ಏನು ಬೇಕಾದರೂ ಮಾಡಬಲ್ಲೆನು ಎಂದು ತಿಳಿಯುತ್ತಾನೋ ಅಲ್ಲಿ ದೇವರು ಮತ್ತು ಅವನ ನಡುವೆ ಗೋಡೆಯನ್ನು ಸೃಷ್ಟಿಸುತ್ತಾನೆ. ಆಗ ಅವನ ತಪಸ್ಸಿನಿಂದ ಶಕ್ತಿ ಮಾತ್ರ ದೊರೆಯುತ್ತದೆ ವಿನಹ ದೇವರಾಗುವುದಿಲ್ಲ. ಅದಕ್ಕೆ ನಾವು ಮಾಡಿದ ಕೆಲಸಕ್ಕೆ ಅಹಂಕಾರ ಪಡದೆ ಕರ್ಮವನ್ನು ಮಾಡಬೇಕು. ಇದನ್ನೇ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಕೃಷ್ಣನಲ್ಲಿ ಅಂದರೆ ದೇವರಲ್ಲಿ ಸೇರಬೇಕಾದರೆ ಅಹಂಕಾರ ತೊರೆಯಬೇಕು.
ಮನುಷ್ಯನು ಅಹಂಕಾರದಿಂದ ನಾಶವಾಗುವನು. ಆದ್ದರಿಂದ ಅಹಂಕಾರವನ್ನು ದೂರ ಸರಿಸಲು ನಾವು ನಮಗಿಂತ ಶಕ್ತಿಯುತವಾದ ದೇವರನ್ನು ಸೃಷ್ಟಿಸಿದ್ದೇವೆ. ನಾವೇ ದೊಡ್ಡವರಲ್ಲ ನಮ್ಮಿಂದ ಏನೂ ಸಾಧ್ಯವಿಲ್ಲ ಎಲ್ಲವೂ ದೇವರ ಮಹಿಮೆ ಎಂದು ಸಾರುವೆವು. ಆಗ ಅಹಂಕಾರ ಬೆಳೆಯುವುದಿಲ್ಲ. ಯಾವಾಗ ಅಹಂ ಬೆಳೆಯುವುದಿಲ್ಲವೋ ಆಗ ನಾವು ದೇವರಲ್ಲಿ ಒಂದಾಗುತ್ತೇವೆ, ಸೃಷ್ಟಿಯಲ್ಲಿ ಒಂದಾಗುತ್ತೇವೆ. ಸೃಷ್ಟಿಯಲ್ಲಿ ಒಂದಾದಾಗ ಮನಸ್ಸು ಪವಿತ್ರವಾಗುತ್ತದೆ. ಈ ಪವಿತ್ರ ಸ್ಥಿತಿಯೇ ದೇವರು. ಆಗ ನಮ್ಮ ಮನಸ್ಸು ಯೋಚನೆಗಳ ಸ್ಥಿತಿಯಿಂದ ಹೊರಬರುತ್ತದೆ. ದೇವರು ಬೇರೆ ಅಲ್ಲ ನಾವು ಬೇರೆಯಲ್ಲ. ನಮ್ಮೊಳಗೆ ದೇವರು ದೇವರೊಳಗೆ ನಾವು ಇದ್ದೇವೆ. ಮನಸ್ಸಿನ ಶೂನ್ಯ ಸ್ಥಿತಿಯೇ ದೇವರು.
ಡಾ. ಹರ್ಷಾ ಕಾಮತ್