ಅಕ್ಟೋಬರ್ 2019 ರಲ್ಲಿ ನಮ್ಮ ಪಯಣ ವಾರಣಾಸಿಯತ್ತ ಇದ್ದಿತು. ಚಿಕ್ಕವಳಿರುವಾಗ ಅಪ್ಪ ಅಮ್ಮನ ಜೊತೆ ವಾರಣಾಸಿ ಹಾಗು ರಿಷಿಕೇಶಿಗೆ ಹೋಗಿದ್ದೆ. ಆಗ ನೋಡಿದ ಗಂಗಾ ಆರತಿಯ ಸುಂದರ ದೃಶ್ಯ ಮನಪಟಲದಲ್ಲಿ ಹಾದುಹೋಯಿತು. ಅದೇ ಉತ್ಸಾಹದಿಂದ ಗಂಗಾ ಆರತಿಯನ್ನು ಕಣ್ತುಂಬಿ ನೋಡಬೇಕೆಂದು ಆಶಿಸಿದೆ. ಆದರೆ ನಾವು ಹೋಗಿದ್ದು ಅಕ್ಟೋಬರ್ ಆಗಿದ್ದರಿಂದ ಅಲ್ಲಿ ಎಲ್ಲಾ ಘಾಟ್ಗಳಲ್ಲಿ ನೀರು ತುಂಬಿತ್ತು. ದೂರದಿಂದ ಆರತಿ ಮಾಡಿ ಹೋಗುತ್ತಾರೆ ಎಂದು ತಿಳಿಯಿತು. ಅದು ಕೂಡ ನನಗೆ ನೋಡಲು ಸಾಧ್ಯವಾಗಲಿಲ್ಲ ಏಕೆಂದರೆ ಅದೇ ದಿನ ಮಧ್ಯಾಹ್ನ ಮೆಟ್ಟಲು ಇಳುವಾಗ ಜಾರಿ ಬಿದ್ದಿದೆ. ಕಾಲು ಊದಿತ್ತು. ವಿಪರಮಿತ ನೋವಿತ್ತು. ನಡೆಯಲು ಕಷ್ಟವಾಗಿತ್ತು. ಆದ್ದರಿಂದ ಸಂಜೆ ನಾನು ಮತ್ತು ಮಕ್ಕಳು ಕಾಶಿಮಠದಲ್ಲಿ ಉಳಿದೆವು. ಯಜಮಾನರು ಮಾತ್ರ ಗಂಗಾ ಆರತಿ ದೂರದಿಂದ ನೋಡಿ ಬಂದರು. ನನಗೆ ತುಂಬಾ ಬೇಸರ ಗಂಗಾ ಆರತಿ ನೋಡಲೆಂದೇ ಆಸೆಯಿಂದ ಬಂದಿದ್ದೆ ಅಲ್ಲವೇ. ಈಗ ಕಾಲು ನೋವು ಕೂಡ ಇದೆ. ಇನ್ನೂ ಐದು ದಿನದ ಟೂರ್ ಬಾಕಿ ಇದೆ ಕಾಲು ನೋಡಿದರೆ ಅಯ್ಯೋ ಅನಿಸಿತು. ದೇವರ ಇಚ್ಛೆ ಏನಿದೆ ಯಾರಿಗೊತ್ತು ಎಂದು ಸುಮ್ಮನಾದೆ. ಕಾಲು ನೋವಿಗೆ ನನ್ನ ಮೆಡಿಕಲ್ ಕಿಟ್ನಿಂದ ನೋವಿನ ಗುಳಿಗೆ ತಗೊಂಡೆ. ನೋವು ಕಮ್ಮಿ ಆಯಿತು. ನಾನು ಊರಿಗೆ ಹೋಗುವಾಗ ಮೆಡಿಕಲ್ ಕಿಟ್ಟನ್ನು ತೆಗೆದುಕೊಂಡು ಹೋಗುವುದು ರೂಡಿ. ಅದರಲ್ಲಿ ಜ್ವರಕ್ಕೆ ಪ್ಯಾರಿಸಿಟಮಾಲ್, ಶೀತ, ಕೆಮ್ಮು, ಅತಿಸಾರ ಇದಕ್ಕೆಲ್ಲ ಆಯುರ್ವೇದ ಮದ್ದು ತೆಗೆದುಕೊಂಡು ಹೊಗುತ್ತೇನೆ.
ಎಷ್ಟು ದಿನ ಹೀಗೆ ಇರುವುದು ಗೊತ್ತಿಲ್ಲ ಮರುದಿನ ನಡೆಯಲಿಕ್ಕೆ ಆಗದಿದ್ದರೆ ಎನ್ನುವ ಚಿಂತೆ ಕಾಡಿತು. ದೇವರೇ.. ಎಂದು ನನ್ನ ಪ್ರೀತಿಯ ಲಲೀತಾ ದೇವಿಯನ್ನು ನೆನೆದು ನಿದ್ದೆಗೆ ಜಾರಿದೆ. ಮರುದಿನ ಬೆಳಿಗ್ಗೆ ಎದ್ದಾಗ ನೋವು ಮಾಯವಾಗಿತ್ತು. ನನಗೆ ಆಶ್ಚರ್ಯ ಇದು ಚಮತ್ಕಾರವೇ ಸರಿ ಎಂದು ದೇವರಿಗೆ ಧನ್ಯವಾದ ಹೇಳಿ ನೀನೇ ನನ್ನನ್ನು ಕಾಪಾಡಿದೆ ಇಲ್ಲದಿದ್ದರೆ ನನಗೆ ನಡೆಯಲಿಕ್ಕೆ ಆಗದಿದ್ದರೆ ನನಗೂ ತೊಂದರೆ ನನ್ನ ಕುಟುಂಬದವರಿಗೂ ತೊಂದರೆ ಆಗುತ್ತಿತ್ತು. ಈ ರೀತಿ ಯಾಗಿದ್ದು ನನ್ನ ಜೀವನದಲ್ಲಿ ಮೊದಲನೆಯ ಸಲ ಸಾಮಾನ್ಯವಾಗಿ ಉಳುಕಾದರೆ ಆದರೆ ಎರಡು ಮೂರು ದಿನ ಊತ ಹಾಗೂ ನೋವು ಇರುತ್ತದೆ. ನನಗೆ ಬೇಜಾರು ಆದದ್ದು ದೇವರಿಗೆ ಕೇಳಿಸಿತೋ ಏನೋ. ಗಂಗಾ ಆರತಿ ನೋಡಲಿಕ್ಕೆ ಆಗಲಿಲ್ಲವೆನ್ನುವ ದುಃಖ ತಕ್ಷಣ ಮಾಯವಾಯಿತು. ಮರುದಿನ ವಾರಣಾಸಿಯಿಂದ ನಾವು ಪ್ರಯಾಗರಾಜಿಗೆ ತೆರಳಿದೆವು. ವಾರಣಾಸಿಯಿಂದ ನೂರಿಪ್ಪತ್ತು ಕಿಲೋಮೀಟರ್ ರಲ್ಲಿ ಪ್ರಯಾಗ್ ರಾಜವಿದೆ.
ಪ್ರಯಾಗರಾಜ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಸ್ಥಿತವಾಗಿದೆ. ಇಲ್ಲಿ ತ್ರೀ ಎಂದರೆ ಮೂರು ನದಿಗಳು ಗಂಗಾ ಯಮುನಾ ಮತ್ತು ಸರಸ್ವತಿ. ವೇಣಿ ಎಂದರೆ ಜಡೆ ಎಂದರ್ಥ. ಕೂದಲಿನ ಮೂರು ಭಾಗವನ್ನು ಮಾಡಿ ನಾವು ಜಡೆ ಹಾಕುವಾಗ ನಮ್ಮ ಕಣ್ಣಿಗೆ ಹೇಗೆ ಬರೀ ಎರಡು ಭಾಗ ಮಾತ್ರ ಕಾಣಿಸುತ್ತದೆಯೋ ಹಾಗೆಯೇ ಇಲ್ಲಿ ಗಂಗಾ ಮತ್ತು ಯಮುನ ಮಾತ್ರ ಕಣ್ಣಿಗೆ ಕಾಣಿಸುತ್ತದೆ ಸರಸ್ವತಿಯು ಭೂಮಿಯ ಕೆಳಗೆ ಗುಪ್ತಗಾಮಿಣಿಯಾಗಿ ಹರಿಯುತ್ತಾಳೆ. ಪುರಾಣದ ಪ್ರಕಾರ ಸರಸ್ವತಿ ದೇವಿಯು ಗಂಗಾ ಹಾಗೂ ಯಮುನಾಳ ಜೊತೆ ಇರಲು ಇಚ್ಚಿಸುತ್ತಾಳೆ. ಆದರೆ ಅವರಿಬ್ಬರು ನಿನಗೆ ಇಲ್ಲಿ ಜಾಗವಿಲ್ಲ ನೀನು ಹೋಗಿ ಮಾಧವನನ್ನು ಕೇಳು ಎಂದು ಹೇಳುತ್ತಾರೆ. ಆಗ ಮಾಧವ ಸರಸ್ವತಿಗೆ ನೀನು ಅವರ ಜೊತೆಯೇ ಹರಿಯಬಹುದು ಆದರೆ ಕಣ್ಣಿಗೆ ಯಾರಿಗೂ ಕಾಣಿಸುವುದಿಲ್ಲವೆಂದು ವರವನ್ನು ನೀಡುತ್ತಾನೆ.
ಇಲ್ಲಿ ನಾವು ವೇಣಿ ದಾನ ಎಂಬ ವಿಧಿಯನ್ನು ಆಚರಿಸಿದವು. ಇದನ್ನು ಪ್ರಯಾಗರಾಜದಲ್ಲಿ ಮಾತ್ರ ಹಾಗೂ ಜೀವನದಲ್ಲಿ ಒಂದು ಸಲ ಮಾತ್ರ ಮಾಡಲಾಗುವುದು ಎಂದು ನಮ್ಮ ಭಟ್ಟರು ಹೇಳಿದರು. ಇದು ಅರ್ಧ ಗಂಟೆಯ ವಿಧಿ. ದಂಪತಿಯ ಸುಖ ಜೀವನಕ್ಕಾಗಿ ಈ ವಿಧಿಯನ್ನು ಆಚರಿಸಲಾಗುವುದು. ಒಬ್ಬರಿಗೊಬ್ಬರು ಮಾಲೆಯನ್ನು ಹಾಕಿ ಹೆಂಡತಿಯು ಗಂಡನ ಪಾದ ಪೂಜೆ ಮಾಡಿದ ನಂತರ ಗಂಡನು ತನ್ನ ಹೆಂಡತಿಯ ಕೂದಲನ್ನು ಬಾಚಿ ಜಡೆ ಹಾಕಿ ಸ್ವಲ್ಪ ಕೂದಲನ್ನು ಕತ್ತರಿಸುವ ಕ್ರಮವಿದು. ಕತ್ತರಿಸಿದ ಕೂದಲಿಗೆ ಅರಿಶಿಣ, ಕುಂಕುಮ, ಚಂದನ, ಹೂವು ಇಟ್ಟು ಪೂಜೆ ಮಾಡಿ ತದನಂತರ ತ್ರಿವೇಣಿ ಸಂಗಮದಲ್ಲಿ ಬಿಡಲಾಗುವುದು. ಇದು ಪ್ರಯಾಗ್ ರಾಜ್ ದಲ್ಲಿ ಮಾಡುವಂತಹ ವಿಶೇಷ ವಿಧಿ. ಹಿಂದಿನ ಕಾಲದಲ್ಲಿ ಹೆಂಗಸರು ಕ್ಷೌರ ಕರ್ಮವನ್ನು ಮಾಡುತ್ತಿರಲಿಲ್ಲ ಗಂಡಸರು ಮಾತ್ರ ಮಾಡುತ್ತಿದ್ದರು. ಆದ್ದರಿಂದ ಹೆಂಗಸರು ಕೂದಲನ್ನು ಕತ್ತರಿಸಿದಾಗ ಅದನ್ನು ಶ್ರೇಷ್ಠವೆಂದು ಪರಿಗಣಿಸಲಾಗುತ್ತಿತ್ತು ಎಂದು ಪಂಡಿತರು ನಮಗೆ ಹೇಳಿದರು. ಈ ವಿಧಿಯನ್ನು ಆಚರಿಸಿದ ಮೇಲೆ ನಮಗೆ ಏನೋ ಖುಷಿ.
-ಡಾ. ಹರ್ಷಾ ಕಾಮತ್