ಅಮ್ಮ ಬೈದಳು ಎಂದು ದುಃಖದಲ್ಲಿದ್ದ ಅಖಿಲ ತನ್ನ ರ್‍ಯಾಂಕ್ ಸುದ್ದಿ ಕೇಳಿ ಒಮ್ಮೆಗೆ ಸಂತೋಷದಿಂದ ಹಿಗ್ಗಿದಳು. ದುಃಖವೆಲ್ಲ ಮಾಯವಾಯಿತು. ಇನ್ನೊಂದೆಡೆ ಸ್ಕೂಲ್ ನಲ್ಲಿ ಪ್ರೈಜ್ ಸಿಕ್ಕಿದೆ ಎಂದು ಸಂಭ್ರಮ ಪಡುತ್ತಿದ್ದ ಅನಿಲ್ ತನ್ನ ಆಪ್ತ ಗೆಳೆಯನ ಪಘಾತದ ಸುದ್ದಿ ಕೇಳಿ ಒಮ್ಮೆಗೆ ದುಃಖ ಆವರಿಸಿತು.
ಈ ಎರಡು ಘಟನೆಗಳಲ್ಲಿ ಮನಸ್ಸು ಕ್ಷಣ ಮಾತ್ರದಲ್ಲಿ ತನ್ನ ವೃತ್ತಿಯನ್ನು ಬದಲಿಸಿತು. ಇದು ಹೇಗೆ ಆಯ್ತು? ಬೇರೆ ಸುದ್ದಿ ಕೇಳಿದ ಪರಿಣಾಮ ನಮ್ಮ ಮನಸ್ಸು ಬೇರೆ ದಾರಿ ಹುಡುಕಿತು ಅಲ್ಲವೇ? ಮನಸೆಂಬುದು ದೇವರ ಅದ್ಭುತ ಸೃಷ್ಟಿ. ದೇಹವು ಹೊರ ಜಗತ್ತನ್ನು ಅರೆದರೆ ಮನಸ್ಸು ಒಳ ಜಗತ್ತನ್ನು ಅನ್ವೇಷಿಸುತ್ತದೆ. ಆದರೆ ನಮ್ಮ ಅಂತರಾಳವನ್ನು ತಿಳಿಯಬೇಕಾದರೆ ಪ್ರಯತ್ನ ಪಡಬೇಕು. ಇಲ್ಲದಿದ್ದರೆ ಹೊರ ಜಗತ್ತೇ ಜೀವನವಾಗಿ ಒಳ ಜಗತ್ತಿನ ಸುಂದರ ಸೃಷ್ಟಿಯನ್ನು ಕಳೆದುಕೊಳ್ಳುತ್ತೇವೆ. ಮೇಲಿನ ಎರಡು ಉದಾಹರಣೆ ತೆಗೆದುಕೊಂಡರೆ ಏನು ಅರ್ಥವಾಗುತ್ತದೆ ಎಂದರೆ ನಮ್ಮ ಮನಸ್ಸನ್ನು ಹೇಗೆ ಬೇಕಾದರೂ ತಿರುಚಬಹುದು ಎಂದು. ಹೊರಗಿನ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಿ ಹೇಗೆ ಮನಸ್ಸು ಬದಲಾಯಿತೋ ಹಾಗೆ ನಮ್ಮ ಮನಸ್ಸನ್ನು ನಮಗೆ ಬೇಕಾದ ಹಾಗೆ ಪಳಗಿಸಬಹುದು. ನಮಗೆ ಬೇಕಾದ ಹಾಗೆ ಉಪಯೋಗಿಸಬಹುದು.
ಮನಸ್ಸೆಂಬುದು ಒಂದು ವಿಸ್ಮಯಕಾರಿ ಯಂತ್ರ. ಇಡೀ ದಿನ ಎಡಬಿಡದೆ ಆಲೋಚನೆಯಲ್ಲಿ ತೊಡಗಿರುತ್ತದೆ. ನಿದ್ದೆಯಲ್ಲೂ ಕನಸನ್ನು ಕಾಣುತ್ತೇವೆ. ಆಳ ನಿದ್ದೆಯಲ್ಲಿ ಮಾತ್ರ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಡೀಪ್ ಸ್ಲೀಪಿನಲ್ಲಿ ನಮ್ಮ ಮನಸು ತಾಜ ವಾಗುತ್ತದೆ. ಈ ರೀತಿಯ ವಿಶ್ರಾಮ ಅತ್ಯಗತ್ಯ ದೇಹಕ್ಕೂ ಮನಸ್ಸಿಗೂ ಕೂಡ.
ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರಲು ಸಾಧ್ಯ. ಸದಾ ಆನಂದದಿಂದಿರಲು ಮನಸ್ಸು ಶಾಂತವಾಗಿರಬೇಕು. ಈ ಶಾಂತತೆ ಕೆಡುವುದು ದ್ವೇಷ, ಈರ್ಷೇ, ಅಪೇಕ್ಷೆ, ಅತ್ಯಧಿಕ ಇಚ್ಛೆಯಿಂದ. ಅರಿಷಡ್ ವರ್ಗಗಳಿಂದ ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗದಿದ್ದರೂ ಸ್ವಲ್ಪವಾದರೂ ಪ್ರಯತ್ನ ಪಡಬೇಕು. ಆಗ ಬದುಕು ಹಸನಗೊಳ್ಳುತ್ತದೆ. ದುಃಖ ಬಂದಾಗ ಅತ್ತು ನಂತರ ಸಮಾಧಾನ ಮಾಡಿ ನಮ್ಮ ಮನಸ್ಸಿಗೆ ಸಮಜಾಯಿಸಿ ಆ ದುಃಖದಿಂದ ಪಾರಾಗಬಹುದು. ಯಾವುದೇ ಭಾವನೆಗಳನ್ನು ಸ್ವಲ್ಪ ಸ್ವಲ್ಪವಾಗಿ ಬದಲಾಯಿಸಲು ಸಾಧ್ಯವಾಗುತ್ತದೆ.
ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ- ನಮ್ಮ ಮನಸ್ಸೇ ನಮ್ಮ ಶತ್ರು ನಮ್ಮ ಮನಸ್ಸೇ ಮಿತ್ರವೆಂದು. ನಮ್ಮ ವಾತಾವರಣ ನಮ್ಮ ಭಾವನೆಗಳನ್ನು ಪ್ರಭಾವಿಸಬಹುದು. ಆದರೆ ಅದರಿಂದ ಬೇಗನೆ ಚೇತರಿಸಿಕೊಳ್ಳಬೇಕು. ಇಲ್ಲದಿದ್ದರೆ ಅದು ವಿಷವಾಗಿ ಪರಿವರ್ತಿತಗೊಳ್ಳುತ್ತದೆ. ಇತರರು ದುಃಖ ಕೊಟ್ಟಾಗ ಅದನ್ನು ಸ್ವೀಕರಿಸಬೇಕೆಂದೆನೂ ಇಲ್ಲ. ಇಲ್ಲಿ ಇತರರು ದುಃಖ ಕೊಡುತ್ತಿಲ್ಲ ನಾವೇ ದುಃಖವನ್ನು ಅನುಭವಿಸುತ್ತೇವೆ ಅಷ್ಟೇ. ಇತರರು ಬೇಕೆಂದೇ ದುಃಖ ಕೊಟ್ಟಿರಲು ಬಹುದು ಅಥವಾ ಗೊತ್ತಿಲ್ಲದೇ ಕೊಟ್ಟಿರಬಹುದು ಆದರೆ ಅದನ್ನು ಸ್ವೀಕರಿಸುವುದು ಬಿಡುವುದು ನಮ್ಮ ಕೈಯಲ್ಲಿದೆ.
ಮನಸ್ಸಿನ ಅದ್ಭುತ ಶಕ್ತಿಯಿಂದ ನಾವು ಬೆಳೆಯಬೇಕೆ ವಿನಹ ಕೆಳಕ್ಕೆ ಇಳಿಯಬಾರದು. ಯಾಕೆಂದರೆ ನಮ್ಮ ಮನಸ್ಸು ಮಿತ್ರವಾಗಲುಬಹುದು ನಮ್ಮ ಶತ್ರು ಶತ್ರುವಾಗಲೂಬಹುದು. ಮನಸ್ಸನ್ನು ಬೆಸ್ಟ್ ಫ್ರೆಂಡ್ ಆಗಿ ಮಾಡಿಸುವುದು ನಮ್ಮ ಕೈಯಲ್ಲಿದೆ.
-ಡಾ. ಹರ್ಷಾ ಕಾಮತ್