Saturday, January 18, 2025
Saturday, January 18, 2025

ಭಾವ ಬಂಧನ

ಭಾವ ಬಂಧನ

Date:

ವಿತ್ರ ಹಾಗೂ ಸಾಗರ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅವನ ಮತ್ತು ಅವಳ ಅನೇಕ ಆಲೋಚನೆಗಳು ಒಂದೇ ತರಹ ಇದ್ದವು. ಅವರಿಬ್ಬರು ಒಂದೇ ರೀತಿಯ ಆಲೋಚನೆ ಮಾಡುತ್ತಿದ್ದರೆ ಮುಂದೆ ಎಲ್ಲವೂ ಸರಿ ಹೋಗುತ್ತೆ ತೊಂದರೆ ಆಗುವುದಿಲ್ಲವೆಂದು ಅವರ ಅನಿಸಿಕೆ. ತಮ್ಮ ಇಷ್ಟಗಳು ಹವ್ಯಾಸ ಹೀಗೆ ಅನೇಕ ರೀತಿಯಲ್ಲಿ ಸಮಾನವಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವೇ ಇಲ್ಲದಷ್ಟು ಪ್ರೀತಿ. ಒಂದೇ ಆಗಿಬಿಟ್ಟಿದ್ದೇವೆ ಎಂದುಕೊಂಡಿದ್ದರು. ಅವಳು ಹೇಳಿದ್ದು ಎಲ್ಲವೂ ಅವನಿಗೆ ಅರ್ಥವಾಗುತ್ತಿತ್ತು ಅವಳಿಗೂ ಅವನ ಭಾವನೆಗಳು ಅರ್ಥ ಮಾಡಲಿಕ್ಕೆ ಕಷ್ಟವಾಗುತ್ತಿರಲಿಲ್ಲ.

ಆದರೆ ಒಂದು ದಿನ ರಾಜಕಾರಣದ ವಿಷಯದಲ್ಲಿ ಇಬ್ಬರ ಅನಿಸಿಕೆ ಯೋಚನೆಗಳು ವಿರುದ್ಧವಾಗಿತ್ತು. ಇಬ್ಬರ ಮಧ್ಯೆ ದೊಡ್ಡ ಜಗಳವಾಗಿ ಇನ್ನು ಒಟ್ಟಿಗೆ ಇರಲು ಸಾಧ್ಯವೇ ಇಲ್ಲವೆಂದು, ಪುಣ್ಯಕ್ಕೆ ಮದುವೆ ಆಗದಿದ್ದದ್ದು ಒಳ್ಳೆಯದಾಯಿತು ಎಂದುಕೊಂಡರು. ದೂರ ಹೋದರು. ಈ ವಿಷಯದಲ್ಲಿ ನಮ್ಮ ಆಲೋಚನೆಗಳು ವಿರುದ್ಧವಾಗಿದೆ ಮುಂದೆ ಇದು ಹೊಂದಿಕೊಳ್ಳಲು ಕಷ್ಟವಾಗಬಹುದು ಒಟ್ಟಿಗೆ ಇರುವುದು ಬೇಡವೇ ಬೇಡವೆಂದು ನಾಲ್ಕು ವರ್ಷಗಳ ಪ್ರೇಮ ಕ್ಷಣಮಾತ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ದೂರವಾದರು.

ಇಲ್ಲಿ ಏನಾಗಿತ್ತು ಆಲೋಚಿಸೋಣ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಇಬ್ಬರ ಆಲೋಚನೆಗಳು ಬೇರೆ ಬೇರೆ ಇಲ್ಲದ್ದರಿಂದ ತಮಗೆ ಮುಂದೆ ಸಮಸ್ಯೆಯಾಗುವುದಿಲ್ಲವೆಂದು ನಂಬಿದ್ದರು. ಆದರೆ ಇಲ್ಲಿ ಒಂದು ಮರೆತಿದ್ದರು. ಅವರಿಬ್ಬರು ಬೇರೆ ಬೇರೆ ವ್ಯಕ್ತಿಗಳು ಅನೇಕ ಭಾವನೆಗಳು, ಯೋಚಿಸುವ ರೀತಿ ಸದೃಶವಾಗಿದ್ದರೂ ತಮ್ಮ ತಮ್ಮ ವ್ಯಕ್ತಿತ್ವ ಬೇರೆಯೇ ಎಂದು ಶತಪ್ರತಿಶತ ಸಮಾನರಾಗಲು ಸಾಧ್ಯವೇ ಇಲ್ಲವೆಂದು ಅವರಿಗೆ ತಿಳಿದಿರಲಿಲ್ಲ. ನಾವು ಇನ್ನೊಬ್ಬರನ್ನು ಪ್ರೀತಿಸುವುದು ನಮ್ಮಂತಹ ವ್ಯಕ್ತಿಗಳನ್ನು. ಇಲ್ಲಿ ನಮ್ಮಂತಹವೆಂದರೆ ನಮ್ಮ ರೀತಿ ಆಲೋಚಿಸುವ ವ್ಯಕ್ತಿಗಳನ್ನು. ನಮ್ಮ ವಿರುದ್ಧವಿರುವ ಅಥವಾ ಬೇರೆಯ ವ್ಯಕ್ತಿತ್ವವಿರುವ ವ್ಯಕ್ತಿಗಳನ್ನು ಇಷ್ಟಪಡುವುದು ಕಮ್ಮಿ. ಆದರೆ ಈ ಜಗತ್ತಿನಲ್ಲಿ ಒಬ್ಬರ ಹಾಗೆ ಇನ್ನೊಬ್ಬರು ಶೇ. 100 ರಷ್ಟು ಎಲ್ಲಾ ರೀತಿಯಲ್ಲಿ ಸಮಾನವಾಗಿ ಆಲೋಚಿಸುವವರು ಇರುವುದು ಸಾಧ್ಯವೇ ಇಲ್ಲ. ಇದು ನಮಗೆ ಗೊತ್ತಿರಬೇಕು.

ಪ್ರತಿಯೊಬ್ಬರಿಗೆ ಅವರದ್ದೇ ಆದ ನಂಬಿಕೆ ಇರುತ್ತದೆ. ಚಿಕ್ಕಂದಿನಿಂದ ಬೆಳೆದ ಪರಿಸರ ಭಿನ್ನವಾಗಿರುತ್ತದೆ. ಪ್ರತಿಯೊಂದು ವಿಷಯ ಅಂದರೆ ಕೌಟುಂಬಿಕ, ನಂಬಿಕೆಗಳು, ಸಾಮಾಜಿಕ, ದೇಶ, ಧಾರ್ಮಿಕ ವಿಚಾರ ಇವೆಲ್ಲದರ ಬಗ್ಗೆ ಆಲೋಚನೆಗಳು ಭಿನ್ನವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೆ ಅವರವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೌರವಿಸೋಣ. ಅದು ಅವರ ವ್ಯಕ್ತಿತ್ವ. ಇಲ್ಲಿ ಯಾರು ಶ್ರೇಷ್ಠರು ಅಲ್ಲ ಕೀಳು ಅಲ್ಲ. ಆದ್ದರಿಂದ ಇನ್ನೊಬ್ಬರ ಭಾವನೆಗೆ ಬೆಲೆ ಕೊಡಬೇಕಾಗುತ್ತದೆ. ಆಗ ನಮ್ಮ ಭಾವನೆಗೂ ಬೆಲೆ ಸಿಗುತ್ತದೆ.

ಪ್ರೀತಿ ಪ್ರೇಮ ಏನೇ ಇರಲಿ ಮೊದಲು ನಾವು ಮನುಷ್ಯರು. ಮನುಷ್ಯನಿಗೆ ತನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಇನ್ನೊಬ್ಬರು ಬೇಕೇ ಬೇಕು. ಆಗ ಪ್ರೀತಿ ಅಂಕುರಿಸುತ್ತದೆ. ಮೊದಲಿಗೆ ಮಾನಸಿಕವಾಗಿ ಬೆರೆತು ಬಿಡುತ್ತೇವೆ. ನಂತರ ಪ್ರತಿಯೊಂದು ವಿಷಯದಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇರುವುದು ತಿಳಿಯುತ್ತದೆ. ಆಗ ನಾವು ಅದನ್ನು ಗೌರವಿಸಿ ಸ್ವೀಕರಿಸಬೇಕಾಗುತ್ತದೆ. ಆಗ ಮಾತ್ರ ಬದುಕಲು ಸಾಧ್ಯ. ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ವ್ಯಕ್ತಿತ್ವವಿರುತ್ತದೆ. ಎಲ್ಲರಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಅದನ್ನು ನಾವು ಮೊದಲಿಗೆ ಅರ್ಥ ಮಾಡಿಕೊಂಡರೆ ಒಳಿತು. ಇನ್ನೊಬ್ಬರು ನಮ್ಮಂತೆ ಆಗಲು ಸಾಧ್ಯವಿಲ್ಲ ಎನ್ನುವ ಅರಿವು ಇರಬೇಕು. ಆಗ ಸಂಬಂಧಗಳು ಉಳಿಯುತ್ತವೆ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!