“ನನ್ನ ಮಗ ಯಾವಾಗ ನೋಡಿದರೂ ಸುಳ್ಳು ಹೇಳುತ್ತಿರುತ್ತಾನೆ, ನನಗೆ ಸಾಕಾಗಿ ಹೋಗಿದೆ, ಅಪ್ಪನ ಎದುರು ಸುಳ್ಳು, ಶಾಲೆಯಲ್ಲಿ ಸುಳ್ಳು ಬರಿ ಸುಳ್ಳು ಹೇಳೋದೇ ಆಗಿದೆ ಇವನಿಗೆ” ಎಂದು ತಾಯಿ ಗೋಳಾಡಿದಳು. ಶಾಲೆಗೆ ಹೋಗಿ ಇದನ್ನೆಲ್ಲ ಕಲಿತಿಯಾ? ಮುಂದೆ ಹೇಗೆ ನಿನಗೆ ನಂಬೋದು? ಎಂದು ಮಗನಿಗೆ ಪ್ರತಿದಿನ ಮನೆಯಲ್ಲಿ ಬೈಗಳ ಸುರಿಮಳೆ. ಇದನ್ನು ಕೇಳಿ ಕೇಳಿ ಮಗ ಕೋಪಗೊಂಡು ತಾನು ಸುಳ್ಳೇ ಹೇಳೋದು ಏನು ಮಾಡ್ತೀಯಾ ಎಂದು ಎದುರು ಉತ್ತರ ಕೊಟ್ಟನು. ತಾಯಿಗೆ ಇವನ ವರ್ತನೆ ದೊಡ್ಡ ತಲೆ ನೋವಾಗಿತ್ತು. “ಶಾಲೆಯಲ್ಲಿ ದೂರು ಕೊಟ್ಟರೆ ಇನ್ನೂ ನಾನು ಬರುವುದಿಲ್ಲ” ಎಂದು ಹೇಳಿದಳು. ಇದನ್ನೆಲ್ಲಾ ತನ್ನ ಗೆಳತಿಗೆ ಹೇಳಿದಾಗ ಮಗನ ಜೊತೆ ಮಾತನಾಡಿ ನೋಡುತ್ತೇನೆ ಎಂದು ಅವಳ ಗೆಳತಿ ಹೇಳಿದಳು. ಮಗನನ್ನು ಕರೆಸಿ ಆಂಟಿಗೆ ನಿನ್ನ ಜೊತೆ ಮಾತಾಡಬೇಕಂತೆ ಎಂದು ಹೇಳಿದಾಗ ಮಗ ಒಪ್ಪಿಕೊಂಡನು. ತಾಯಿಗೆ ಹೊರಗೆ ಹೋಗಲು ಹೇಳಿ ಮಗನ ಜೊತೆ ಸಂವಾದ ಶುರು ಮಾಡಿದಳು.
ಶಾಲೆ, ಹವ್ಯಾಸ, ಆಟ, ಸ್ನೇಹಿತರ ಬಗ್ಗೆ ಕೇಳಿದಳು. ನಗುಮುಖದಿಂದ ಆಕೆಯನ್ನು ನೋಡಿ ಆಂಟಿ ನಿಮ್ಮತ್ರ ಮಾತಾಡಲು ಖುಷಿಯಾಗುತ್ತೆ ಅಮ್ಮ ಯಾವಾಗಲೂ ನನ್ನನ್ನು ಬೈಯುತ್ತಿರುತ್ತಾರೆ ಬರೀ ಸುಳ್ಳು ಹೇಳೋದು ಎಂದು ಕೋಪಿಸುತ್ತಿರುತ್ತಾರೆ. ನಿಮ್ಮ ಹಾಗೆ ನನ್ನ ಆಸೆ, ಇಷ್ಟ, ಕಷ್ಟಗಳ ಬಗ್ಗೆ ಕೇಳೋದೇ ಇಲ್ಲ. ಊಟ ಪಾಠ ಅಷ್ಟೇ. ನನಗೇನು ಇಷ್ಟ ಕೇಳೋದೇ ಇಲ್ಲ. ಹೌದಾ! ನಿನ್ನ ಅಮ್ಮನಿಗೆ ನಾನು ಹೇಳುತ್ತೇನೆ ಆಯ್ತಾ. ಅದು ಹೌದು ನಿನಗೆ ಸುಳ್ಳು ಹೇಳುವ ಚಟ ಹೇಗೆ ಆಯ್ತು ನಿನಗೆ ಗೊತ್ತೇ? ಅದು ಅದು ಅಪ್ಪನ ಹತ್ತಿರ ಮಾತನಾಡುವಾಗ ಅಮ್ಮ ಸುಳ್ಳು ಹೇಳುತ್ತಿರುತ್ತಾರೆ. ಹಾಗೆ ನಾನು ಸುಳ್ಳು ಹೇಳುತ್ತೇನೆ ಎನೊ ಮಾಜಾ ಆಗುತ್ತೆ. ಅವರು ಹೇಳುಬಹುದು ನಾನು ಮಾತ್ರ ಸುಳ್ಳು ಹೇಳಬಾರದು ಯಾಕೆ.
ಸುಳ್ಳು ಯಾಕೆ ಹೇಳ್ತೀಯಾ? ನಿಜ ಹೇಳಿದರೆ ನಾನು ಬೈಸ್ಕೊತಿನಿ ಅದಕ್ಕೆ. ಫ್ರೆಂಡ್ಸ್ ಜೊತೆ ಚಾಕಲೇಟ್ ತಿಂದು ಮನೇಲಿ ಹೇಳಿದಕ್ಕೆ, ಯಾಕೆ ತಿಂತಿಯಾ ಹಲ್ಲೆಲ್ಲ ಹಾಳಾಗುತ್ತೆ ಇನ್ನೊಮ್ಮೆ ತಿನ್ನಬೇಡ ಹೇಳಿದರು. ಈಗ ಚಾಕ್ಲೇಟ್ ತಿಂತೇನೆ ಆದರೆ ಅಮ್ಮನಿಗೆ ಹೇಳುವುದಿಲ್ಲ. ಹಣ ಎಲ್ಲಿಂದ ಸಿಕ್ತದೆ ನಿನಗೆ? ಅಮ್ಮನ ಪರ್ಸ್ ನಿಂದ ಕದಿಯೋದು, ಅದು ತಪ್ಪು ಅಂತ ಅನಿಸಲಿಲ್ಲವಾ? ಅನಿಸಿತು ಆದರೆ ಯಾವಾಗಲಾದರೂ ಒಮ್ಮೆ ಚಾಕ್ಲೇಟ್ ತಿನ್ನಬೇಕು ಅನ್ನುವಾಗ ಹಣ ಸ್ವಲ್ಪ ತೆಗಿತೇನೆ ಅಷ್ಟೇ. ಕೇಳಿದ್ರೆ ಕೊಡುವುದಿಲ್ಲ ಅಲ್ವಾ, ಅದಕ್ಕೆ. ನಿನಗೆ ಹಣ ಕೊಟ್ರೆ ಕದಿಯೋದಿಲ್ಲ ತಾನೇ?? ಇಲ್ಲ ಆಂಟಿ ನಾನು ಕಳ್ಳನಲ್ಲ. ಅಮ್ಮ ನಿನಗೆ ಚಾಕ್ಲೇಟ್ ತಿನ್ನೋಕೆ ತಿಂಗಳಿಗೆ ಒಮ್ಮೆ ಬಿಟ್ಟರೆ ಸುಳ್ಳು ಹೇಳೋದು ಬಿಡ್ತೀಯ? ನಿಜ ಹೇಳಿದರೆ ಬಯ್ಯೋದಿಲ್ಲ ಅಂತಾದ್ರೆ ಸುಳ್ಳು ಹೇಳೋದಿಲ್ಲ. ಆಯ್ತು ನಾನು ನಿನ್ನ ಅಮ್ಮನ ಹತ್ರ ಮಾತಾಡ್ತೀನಿ. ಪ್ರಾಮಿಸ್ ಮಾಡು ಸುಳ್ಳು ಹೇಳುವುದಿಲ್ಲ ಕದಿಯೋದಿಲ್ಲ ಎಂದು. ಅಮ್ಮ ಬೈಯುವುದಿಲ್ಲ ಅಂತಾದರೆ ಅದರ ಅಗತ್ಯ ಬೀಳೋದಿಲ್ಲ ಆಂಟಿ. ಗುಡ್ ಬಾಯ್ ಆಟ ಆಡು ಹೋಗು. ತಾಯಿಗೆ ಇರುವ ವಿಷಯವನ್ನು ಸರಿಯಾಗಿ ತಿಳಿಸಿ ಇನ್ಮೇಲೆ ಈ ರೀತಿ ಆಗದಂತೆ ನೋಡಿಕೋ ಎಂದು ಹೇಳಿ ಮನೆಗೆ ಹೋದಳು.
ಮಕ್ಕಳು ನೋಡಿ ಕಲಿಯುತ್ತಾರೆ. ಮಕ್ಕಳು ಸುಳ್ಳು ಹೇಳಬಾರದು ಆದರೆ ನಾವು ಸುಳ್ಳು ಹೇಳೋದನ್ನ ಬಿಡಬೇಕು. ಮಕ್ಕಳು ನಿಜ ವಿಷಯವನ್ನು ಹೇಳಿದಾಗ ಸಿಟ್ಟಿಗೇರದೆ ಸಮಾಧಾನದಿಂದ ಕೇಳಿ. ನಿಜ ಹೇಳಿರುವ ವಿಷಯ ಖುಷಿಯಾಯಿತು ಎಂದು ಹೇಳಿ. ಬೈದರೆ ಮಗು ಮುಂದೆ ನಿಜ ಹೇಳಲು ಭಯಪಡುತ್ತಾನೆ. ನಿಮ್ಮ ಮೇಲೆ ಮಗುವಿಗೆ ನಂಬಿಕೆ ಇರಲಿ. ಆದರೆ ಕೆಲವೊಂದು ವಿಷಯದಲ್ಲಿ ಮಕ್ಕಳು ತಪ್ಪು ಮಾಡಿರುತ್ತಾರೆ ಆಗ ನಿಜ ಹೇಳಿದರೆ ಅವರನ್ನು ನಿಜ ಹೇಳಿದ್ದಕ್ಕೆ ಪ್ರಶಂಸಿಸಿ ಆದರೆ ಆ ಕ್ಷಣದಲ್ಲಿ ನೀವು ಮಾಡಿದ್ದು ತಪ್ಪು ಎಂದು ಗದರಿಸಬೇಡಿ. ಉದಾಹರಣೆಗೆ ತಾನು ಗೆಳೆಯನ ಪೆನ್ಸಿಲ್ ಬಾಕ್ಸ್ ಕದ್ದಿದ್ದೇನೆ ಎಂದು ವಿಷ ಹೇಳಿದಾಗ ನೀನು ನನಗೆ ನಿಜ ಹೇಳಿದ ವಿಷಯ ಖುಷಿಯಾಯಿತು ಆದರೆ ಗೆಳೆಯನ ಬಾಕ್ಸ್ ಕದಿಯೋದು ಸರಿಯಲ್ಲ ಅಲ್ವಾ? ನನಗಂತೂ ಸರಿ ಅನಿಸಲಿಲ್ಲ ನಿನಗೆ ಹಾಗೆ ಅನಿಸುತ್ತದೆ ಯೋಚಿಸಿ ನೋಡು ಎಂದು ಮೃದುವಾಗಿ ಹೇಳಿ. ನೆನಪಿರಲಿ ಬೈಯಬೇಡಿ. ಆಗ ಮಗುವಿಗೆ ಸರಿ ತಪ್ಪಿನ ಅರಿವಾಗುತ್ತದೆ. ಪೆನ್ಸಿಲ್ ಬಾಕ್ಸ ನಾವು ತೆಗೆದು ಕೊಡಿಸುತ್ತೇವೆ. ಅದರ ಅಗತ್ಯ ಇದ್ದರೆ ಆದಷ್ಟು ನಾವು ತೆಗೆಸಿಕೊಡುತ್ತೇವೆ. ಬೆಲೆಬಾಳುವ ವಸ್ತು ಅದರೆ ನಮಗೆ ತೆಗೆಸಿಕೊಡಲು ಆಗದಿದ್ದರೆ ಮುಂದೆ ನೀನು ಕೆಲಸಕ್ಕೆ ಸೇರಿ ನೀನು ತೊಗೋಬಹುದು. ಆದರೆ ಬೇರೆಯವರ ಸಮಾನು ತರುವುದು ಹಿತವಲ್ಲ ನಿನಗೇನು ಅನಿಸುತ್ತದೆ ನೋಡು ಎಂದು ಹೇಳಿ. ನಿನ್ನ ಸಾಮಾನು ಬೇರೆಯವರು ತೆಗೆದುಕೊಂಡರೆ ನಿನಗೆ ಏನು ಅನಿಸುತ್ತದೆ ಎಂದು ಅವಲೋಕಿಸಲು ಬಿಡಿ.
ಮಕ್ಕಳ ವರ್ತನೆ ಪರಿಸರದಿಂದ ಪ್ರೇರಿತವಾಗಿರುತ್ತದೆಯೇ ವಿನಹ ಹುಟ್ಟಿನಿಂದ ಬಂದಿರುವುದಿಲ್ಲ. ನೆನಪಿರಲಿ ಕೆಟ್ಟದ್ದನ್ನು ಸರಿಪಡಿಸುವುದಕ್ಕೆ ಶಾಂತ ಮಾರ್ಗವನ್ನು ಆರಿಸಿರಿ. ನಾವು ಮೃದುವಾಗಿದ್ದರೆ ಅವರು ಮೃದುವಾಗಿರುತ್ತಾರೆ. ಮೊದಿಲಿಗೆ ನಮ್ಮ ವರ್ತನೆ ಬದಲಾಗಲಿ.
ಡಾ. ಹರ್ಷಾ ಕಾಮತ್