ಎರಡು ವರ್ಷದ ಮಗು ಮನೆಯ ಕೋಣೆಯಲ್ಲಿ ಆಡುತ್ತಾ ಅಟಾಚ್ಡ್ ಬಾತ್ ರೂಂಗೆ ಹೋಗಿ ನೀರಿನ ಟಬ್ ನಲ್ಲಿ ಬಿದ್ದು ಮೃತಪಟ್ಟಿತು. ಅಡುಗೆ ಮಾಡುತ್ತಿದ್ದ ತಾಯಿ ಮಗಳೆಲ್ಲಿ ಎಂದು ಹುಡುಕುತ್ತಾ ಹೋದಾಗ ನಿಜ ತಿಳಿದ ತಾಯಿ ತಲೆ ತಿರುಗಿ ಬಿದ್ದಳು. ಮನೆಯವರು ತಾಯಿಯನ್ನೇ ಇದಕ್ಕೆ ಕಾರಣವೆಂದರು. ರಸ್ತೆಯ ಬದಿಯಲ್ಲಿ ನಿಂತಿದ್ದ ಅಪ್ಪ ಬೈಕ್ ನಲ್ಲಿ ಹೋಗುತ್ತಿದ್ದ ಮಗನನ್ನು ಕರೆದಾಗ ಮಗ ಹಿಂದೆ ಲಾರಿ ಬರುವುದನ್ನು ನೋಡದೆ ರೋಡ್ ಕ್ರಾಸ್ ಮಾಡಿ ಲಾರಿಯ ಕೆಳಗಡೆ ಬಿದ್ದು ಮೃತಪಟ್ಟನು. ಅವನ ತಾಯಿ ತಂದೆಯನ್ನೇ ದೂಷಿಸಿದರು. ಇದೆಲ್ಲಾ ಘಟನೆ ಕೇಳುತ್ತಿದ್ದಂತೆ ಹೃದಯ ಬಡಿತ ನಿಂತು ಹೋದಂತೆ ಆಬಾಸವಾಗುತ್ತದೆ. ಅಯ್ಯೋ ದೈವವೇ ಹೀಗೇಕೆ ಆಯಿತು ಎನಿಸುತ್ತದೆ. ಇಲ್ಲಿ ಮೂರು ವಿಷಯಗಳ ಬಗ್ಗೆ ವಿಶ್ಲೇಷಿಸೋಣ.
ಒಂದೆಡೆ, ಈ ಎರಡು ಘಟನೆಯಲ್ಲಿ ತಂದೆ ಅಥವಾ ತಾಯಿಯೇ ಕಾರಣ ಎಂದು ದೂಷಿಸಿರುವವರು ಎಲ್ಲರು. ಹಾಗೆ ಮಾಡಬಾರದಿತ್ತು, ಹೀಗೆ ಮಾಡಬಾರದಿತ್ತು ಎಂದು ಕೊಲೆ ಮಾಡಿದಂತೆ ಆಪಾದನೆ ಹಾಕುತ್ತಾರೆ. ಆ ಆಪಾದನೆ ಮಾಡಿದವರು ಅತ್ಯಂತ ನೋವಲ್ಲಿ ಆ ರೀತಿಯ ಹೇಳಬಹುದು. ಅವರಿಗೆ ತನ್ನ ಮಗ ಅಥವಾ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಆಪಾದನೆ ಹಾಕಲುಬಹುದು. ಅವರ ನಡವಳಿಕೆಯು ಕೂಡ ಸಹಜವಾದದ್ದೆ. ಮತ್ತೊಂದೆಡೆ ಆಪಾದನೆಗೆ ಒಳಗೊಂಡ ಪೋಷಕನಿಗೆ ಆ ಘಟನೆಯಿಂದ ಆದ ಆಘಾತ ಎಷ್ಟರಮಟ್ಟಿಗೆ ಇರಬಹುದು? ತನ್ನಿಂದ ತನ್ನ ಮಗುವನ್ನು ಕಳೆದುಕೊಂಡೆ ಎಂಬ ಕೊರುಗು ಜೀವನವಿಡೀ ಇದ್ದೇ ಇರುತ್ತದೆ. ಅಲ್ಲವೇ? ಅದರ ಜೊತೆಗೆ ಎಲ್ಲರ ಬಾಯಿ ಮಾತಿನಿಂದ ಆಪಾದನೆಗೆ ಒಳಪಟ್ಟು ನೋವನ್ನು ಅನುಭವಿಸುತ್ತಿರುತ್ತಾರೆ.
ಮೂರನೆಯ ವಿಷಯ ಈ ರೀತಿಯ ಘಟನೆ ನಡೆದಾಗ ಇಲ್ಲಿ ಯಾರು ಕೂಡ ಬೇಕೆಂದೇ ಮಾಡಿದವರಲ್ಲ ಆದರೆ ಆ ಘಟನೆ ಆಗಿ ಹೋಗಿದೆ. ಇಲ್ಲಿ ತಿಳಿಯಬೇಕಾದ ವಿಷಯವೇನೆಂದರೆ ಆಪಾದನೆಗೆ ಒಳಗೊಂಡವರು ಕೂಡ ತನ್ನ ಮಗುವನ್ನು ಕಳೆದುಕೊಂಡವರೆ, ಬೇಕೆಂದೆ ಮಾಡಿದವರಲ್ಲ. ಅವರಿಗೆ ಪದೇ ಪದೇ ಆ ಘಟನೆಯು ಹೇಳಿ, ನೀವೇ ಇದಕ್ಕೆ ಜವಾಬ್ದಾರರು ಎಂದು ಹಿಂಸಿಸಬೇಡಿ. ಆಗ ಅವರ ನೋವು ಸ್ವಲ್ಪಮಟ್ಟಿಗೆಯಾದರೂ ಕಡಿಮೆಯಾಗಬಹುದು. ಮೊದಲೇ ಹೀಗೆ ಆಗುತ್ತದೆ ಎಂದು ಗೊತ್ತಿದ್ದರೆ ಜಾಗೃತೆ ವಹಿಸಬಹುದಿತ್ತು ಅನಿಸುತ್ತದೆ. ಆದರೆ ಕೆಲವೊಂದು ವಿಷಯದಲ್ಲಿ ನಾವು ಹೀಗೆ ಆಗುತ್ತೆ ಎಂದು ಅನಿಸಿರುವುದಿಲ್ಲ. ಯಾವ ಸಮಯದಲ್ಲೂ ಏನೂ ಕೂಡ ಆಗಬಹುದು. ನಮ್ಮ ಮನಸ್ಸು ಒಂದು ಘಟನೆ ನಡೆದ ನಂತರ ಅದು ಹೀಗೆ ಆಯಿತು ಹಾಗೆ ಮಾಡಿದರೆ ಆಗುತ್ತಿರಲಿಲ್ಲ, ಇವರು ನೋಡಬೇಕಿತ್ತು, ಅದು ಇದು ಎಂದು ಆಲೋಚಿಸುತ್ತದೆ. ಆದರೆ ಜಸ್ಟ್ ಯೋಚಿಸಿ ನೋಡಿ ಹೀಗೆ ದಿನದ 24 ಗಂಟೆಗಳಲ್ಲಿ ನಾವು ಎಷ್ಟು ಜಾಗೃತರಾಗಿರುತ್ತೇವೆ. ತಾಯಿಯು ಅಡುಗೆ ಮಾಡುವಾಗ ಮಗಳು ಬಾತ್ ರೂಂಮಿಗೆ ಹೋಗಿ ಮುಳುಗುತ್ತಾಳೆ ಎಂದು ಯೋಚಿಸಿರುವುದಿಲ್ಲ. ಮಗನಿಗೆ ಮನೆಗೆ ಬಾ ಎಂದು ಹೇಳಿದ ಅಪ್ಪನಿಗೆ ಮಗ ಕೂಡಲೇ ಆ ಕಡೆ ನೋಡದೆ ಬೈಕನ್ನು ತಿರುಗಿಸುತ್ತಾನೆ ಎಂದು ಯೋಚಿಸಿರಲಿಲ್ಲ. ಅಲ್ಲವೇ? ಹೀಗಾಗುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಕೆಲವೊಂದು ಘಟನೆಗಳು ಅಕಸ್ಮಾತಾಗಿ ಆಗಿರುತ್ತೆ. ಅದಕ್ಕೆ ಯಾರೂ ಹೊಣೆಯಲ್ಲ. ಅದು ವಿಧಿಲಿಖಿತ ಅಷ್ಟೇ. ಮುಂದೆ ಹೀಗಾಗುತ್ತೆ ಎಂದು ಮೊದಲೇ ಗೊತ್ತಿದ್ದರೆ?
-ಡಾ. ಹರ್ಷಾ ಕಾಮತ್