ಏಳು ವರ್ಷದ ಹಿಂದೆ ಮುಂಬೈ ಟೂರಿಗೆ ಹೋದಾಗಿನ ಅನುಭವವಿದು. ಐದು ದಿನದ ಮುಂಬೈ ಟೂರ್ ನಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೆವು. ಇಮ್ಯಾಜಿಕಾ ಥೀಮ್ ಪಾರ್ಕ್, ಸ್ನೋ ಪಾರ್ಕ್, ವಾಟರ್ ಪಾರ್ಕ್, ಜುವು ಬೀಚ್, ಮರೈನ ಡ್ರೈವ್, ಗೇಟ್ ವೇ ಆಫ್ ಇಂಡಿಯಾ, ಸಿದ್ಧಿವಿನಾಯಕ ದೇವಸ್ಥಾನ,ಮಹಾಲಕ್ಷ್ಮಿ ದೇವಸ್ಥಾನ, ದಾದಾಸಾಹೇಬ್ ಫಾಲ್ಕೆ ಫಿಲಂ ಸಿಟಿ, ಓಬಿರಾಯ್ ಮಾಲ್. ಇವೆಲ್ಲ ಸ್ಥಳಗಳಲ್ಲಿ ಐತಿಹಾಸಿಕ ಸ್ಥಳಗಳು ಯಾವುದೇ ಇರದ ಕಾರಣ ನೋಡಲು ಖುಷಿ ಕೊಟ್ಟರು ನನಗೆ ಯಾವುದೇ ತೃಪ್ತಿ ಕೊಡಲಿಲ್ಲ. ಆದರೆ ಮಕ್ಕಳಿಗೆ ಬಹಳ ಖುಷಿಯೋ ಖುಷಿ. ಮುಂಬೈಯಲ್ಲಿ ನನಗೆ ಇಷ್ಟವಾದದ್ದು ಒಂದೇ ಒಂದು ಸ್ಥಳವೆಂದರೆ ಶಿವಾಜಿ ಆರ್ಟ್ ಮ್ಯೂಸಿಯಂ. ನನ್ನ ಯಜಮಾನರಿಗೆ ಹಾಗೂ ನನ್ನ ಮಕ್ಕಳಿಗೆ ವಸ್ತು ಸಂಗ್ರಹಾಲಯ ನೋಡುದೆಂದರೆ ಎಲ್ಲಿಲ್ಲದ ಉತ್ಸಾಹ. ಬೆಳಿಗ್ಗೆ 9:00ಗೆ ಅಲ್ಲಿದ್ದೆವು. ಅನೇಕ ಶಾಲೆಯ ಮಕ್ಕಳು, ವಿದೇಶಿಯರು ಬಹಳ ಜನ ಇದ್ದರು. ನಾವು ಗೇಟ್ ಓಪನ್ ಆಗುವ 20 ನಿಮಿಷ ಮುಂಚಿತವಾಗಿ ಹೋಗಿದ್ದರಿಂದ ಗೇಟ್ ನ ಹೊರಗೆ ನಿಂತಿದ್ದೆವು. ನಮ್ಮ ಪಕ್ಕದಲ್ಲಿ ವಿದೇಶಿ ಪ್ರವಾಸಿಗರ ಗುಂಪು ನಿಂತಿತ್ತು. ಅದರಲ್ಲಿ ಒಬ್ಬ ಮಹಿಳೆ ನನ್ನ ಮಕ್ಕಳನ್ನು ನೋಡಿ ಮಂದಹಾಸ ಬೀರಿದರು. ಅವರನ್ನು ನೋಡಿ ಖುಷಿಯಾಗಿ ನಾನು ಅವರ ಹತ್ತಿರ ಮಾತನಾಡ ಬಯಸಿದೆ. ಯಾವ ದೇಶದಿಂದ ಬಂದಿರಬಹುದು ಎಂದು ಆಲೋಚಿಸುತ್ತ ನಿಮಗೆ ಇಂಗ್ಲಿಷ್ ಬರುತ್ತದೆಯೇ ಎಂದು ಕೇಳಿದೆ.
ಹೌದು ಎಂದು ಉತ್ತರ ಬಂತು. ಯಾವ ದೇಶದಿಂದ ಎಂದು ಕೇಳಿದಾಗ ಫ್ರಾನ್ಸ್ ದೇಶದಿಂದ ಬಂದಿರುವುದಾಗಿ ತಿಳಿಸಿದರು. ನನ್ನ ಮಕ್ಕಳ ಸ್ಕೂಲಿನ ಬಗ್ಗೆ ವಿಚಾರಿಸಿದರು. ನಾನು ಅವರ ಪ್ರವಾಸದ ಬಗ್ಗೆ ವಿಚಾರಿಸಿದಾಗ 11 ದಿವಸದ ಪ್ರವಾಸ ಮುಗಿದಿದೆ ಇನ್ನು 11 ದಿನದ ಪ್ರವಾಸ ಬಾಕಿ ಇದೆ ಎಂದರು. ಯಾವ ಯಾವ ಸ್ಥಳಗಳನ್ನು ನೋಡಿದ್ದೀರಿ ಎಂದದ್ದಕ್ಕೆ ಡೆಲ್ಲಿ, ಆಗ್ರ, ಮಥುರಾ, ತಮಿಳುನಾಡು ಈಗ ಮಹಾರಾಷ್ಟ್ರದಲ್ಲಿದ್ದೇವೆ ಎಂದರು. ಅದೇ ಸಮಯದಲ್ಲಿ ನನ್ನ ಪಕ್ಕದಲ್ಲಿದ್ದ ನನ್ನ ಯಜಮಾನರು ಕರ್ನಾಟಕಕ್ಕೆ ಬೇರೆ ಭೇಟಿ ನೀಡಲಿಲ್ಲವೇ ಎಂದು ಕೇಳಿದಾಗ ಇಲ್ಲ ಎಂದು ಉತ್ತರಿಸಿದರು. ಕರ್ನಾಟಕದಲ್ಲಿ ನೋಡಲೇಬೇಕಾದ ಸ್ಥಳಗಳು ಬಹಳ ಇದೆ . ಹಂಪಿ, ಮೈಸೂರು, ಬೇಲೂರು ಹಳೇಬೀಡು, ಚಿತ್ರದುರ್ಗ, ಮೈಸೂರು ಭೇಟಿ ನೀಡಿ ಎಂದರು.ಆಗ ಅವರು ನಮ್ಮ ಟೂರ್ ಮ್ಯಾನೇಜರ್ ಎಲ್ಲಿ ಕರೆದುಕೊಂಡು ಹೋಗುತ್ತಾರೋ ಆ ಸ್ಥಳಗಳಿಗೆ ಭೇಟಿ ನೀಡುವುದಾಗಿ ತಿಳಿಸಿದರು. ಕರ್ನಾಟಕ ನಮ್ಮ ಪಟ್ಟಿಯಲ್ಲಿ ಇಲ್ಲ ಎಂದು ನುಡಿದರು.
ಅದೇ ಸಮಯದಲ್ಲಿ ಗೇಟ್ ತೆರೆದ ಕಾರಣ ಅವರ ಟೂರ್ ಮ್ಯಾನೇಜರ್ ಅವರನ್ನು ಕರೆದರು. ಆಗ ನಾನು ಒಂದು ಸೆಲ್ಫಿ ತಗೊಂಡೆ ಅವರಿಗೆ ಖುಷಿಯಾಯಿತು. ನಮಗೆ ವಿದಾಯ ಹೇಳಿ ಅವರ ಗುಂಪಿನೊಟ್ಟಿಗೆ ಸೇರಿಕೊಂಡರು. ವಸ್ತು ಸಂಗ್ರಹಾಲಯ ವಿಶಾಲವಾಗಿತ್ತು. ಭಾರತದ ಪ್ರತಿಯೊಂದು ರಾಜ್ಯದ ವಿಶೇಷತೆಗಳನ್ನು ದೊಡ್ಡ ದೊಡ್ಡ ಕೋಣೆಯಲ್ಲಿ ಒಂದೊಂದು ರಾಜ್ಯದ ವಿಶೇಷತೆಯನ್ನು ಪ್ರದರ್ಶಿಸಿ ಅದರ ಜೊತೆ ವಿಡಿಯೋದಲ್ಲಿ ಆ ರಾಜ್ಯದ ಬಗ್ಗೆ ತೋರಿಸುತ್ತಿದ್ದರು. ನೋಡಲೇ ಬೇಕಾದ ಸ್ಥಳವಿದು. ನಾವು ಎರಡನೇ ಮಹಡಿಯಲ್ಲಿರುವಾಗ ಆ ಫ್ರೆಂಚ್ ಮಹಿಳೆ ನನ್ನನ್ನು ದೂರದಿಂದ ನೋಡಿ ನನ್ನ ಹತ್ತಿರ ಬಂದು ಕರ್ನಾಟಕದ ಶಿಲ್ಪಕಲೆ ಬ್ಯೂಟಿಫುಲ್ ಟು ಬ್ಯೂಟಿಫುಲ್ ಎಂದು ಎರಡೆರಡು ಸಲ ಹೇಳಿ ಸಂತೋಷ ವ್ಯಕ್ತಪಡಿಸಿದರು. ನನಗೆ ಸಂತೋಷದ ಜೊತೆಗೆ ಆಶ್ಚರ್ಯವೂ ಆಯಿತು. ನಾವು ಹೇಳಿದ್ದು ನೆನಪಿನಲ್ಲಿ ಇಟ್ಟುಕೊಂಡು ಅಲ್ಲಿ ಇರಿಸಿದ ಕರ್ನಾಟಕದ ಶಿಲ್ಪ ಕಲೆಯನ್ನು ನೋಡಿ ನನ್ನನ್ನು ದೂರದಿಂದ ನೋಡಿದ ತಕ್ಷಣ ಅಷ್ಟು ದೂರದಿಂದ ನನ್ನ ಹತ್ತಿರ ಬಂದು ತಿಳಿಸಿದ್ದನ್ನು ಕಂಡು ಬೆರಗಾದೆ. ಹಾಗೆ ನೋಡಿದರೆ ಅವರು ಯಾರೋ ನಾವು ಯಾರೋ. ನನಗೆ ಬಂದು ಹೇಳುವ ಅವಶ್ಯಕತೆ ಇರಲಿಲ್ಲ ಅಲ್ಲವೇ .
ಅವರ ಬಗ್ಗೆ ಗೌರವ ಹುಟ್ಟಿದ್ದು ನಾನು ಧನ್ಯವಾದ ಹೇಳಿ ಅವರ ಹೆಸರು ಕೇಳಿದಾಗ ಭಯಾತಲೀಸಾ ಎಂದು ಹೇಳಿದರು . ಕೆಲವು ವ್ಯಕ್ತಿಗಳು ನಮ್ಮ ಮನದಲ್ಲಿ ಸದಾ ಉಳಿಯುತ್ತಾರೆ. ಅವರ ಸೌಮ್ಯ ಸ್ವಭಾವ ಹಾಗೂ ಅವರ ನಗುಮೊಗ ನನಗೆ ಆಕರ್ಷಿಸಿತು. ದಿನಚರಿ ಬರೆಯುವ ಅಭ್ಯಾಸವಿರುವ ಕಾರಣ ಈ ವಿಷಯವನ್ನು ಡೈರಿಯಲ್ಲಿ ಬರೆದಿಟ್ಟಿದ್ದೆ. ಮೊಬೈಲ್ನಲ್ಲಿ ಫೋಟೋ ನೋಡಿದ ತಕ್ಷಣ ನನ್ನ ಡೈರಿಯನ್ನು ಓದಿದೆ ಎಲ್ಲವೂ ನೆನಪು ಬಂತು. ಫ್ರಾನ್ಸ್ ದೇಶದ ಜನರು ಎಲ್ಲರೂ ಹೀಗೆ ಇರಬಹುದೇ. ಅವರ ನಡೆ, ಗಡಿಬಿಡಿ ಮಾಡದೆ ಶಾಂತ ರೀತಿಯಲ್ಲಿ ಕ್ಯೂನಲ್ಲಿ ನಿಂತು ಎಲ್ಲರಿಗೆ ನೋಡಿ ನಗುವ ಅವರ ವ್ಯಕ್ತಿತ್ವ ನೋಡಿ ಪ್ರೇರಿತಳಾದೆ. ನಾವು ಬೇರೆ ದೇಶದಿಂದ ಬಂದ ವ್ಯಕ್ತಿಗಳ ನಡವಳಿಕೆಯನ್ನು ನೋಡಿ ಆ ದೇಶದ ವ್ಯಕ್ತಿಗಳೆಲ್ಲ ಹಾಗೆ ಇರಬಹುದು ಎಂದು ಅಳಿಯುತ್ತೇವೆ. ಹಾಗೆಯೆ ನಾವು ಬೇರೆ ದೇಶಕ್ಕೆ ಹೋದಾಗ ಭಾರತೀಯರಾದ ನಮ್ಮ ನಡೆ ನುಡಿ ಇಂದ ನಾವು ನಮ್ಮ ದೇಶದ ಸಂಸ್ಕೃತಿಯನ್ನು ವ್ಯಕ್ತಪಡಿಸಬೇಕು ಎಂದೆನಿಸಿತು.. ಅವರಿಗೆ ನಮ್ಮನ್ನು ನೋಡಿ ಭಾರತೀಯರ ಬಗ್ಗೆ ಗೌರವ ಹುಟ್ಟಬೇಕು. ಅಲ್ಲವೇ?
-ಡಾ. ಹರ್ಷಾ ಕಾಮತ್