ನ್ಯೂಸ್ ಚಾನೆಲ್ ನಲ್ಲಿ ಒಬ್ಬ 23 ಹರೆಯದ ಮಗ ಕೌಟುಂಬಿಕ ಕಲಹದ ನಿಮಿತ್ತ ಪೋಲಿಸ್ ಸ್ಟೇಷನ್ ಎದುರು ಪೊಲೀಸರ ಎದುರುಗಡೆನೇ ತನ್ನ ತಾಯಿಯನ್ನು ಬೆಂಕಿ ಹಚ್ಚಿ ಬೆಂಕಿಯಲ್ಲಿ ಉರಿಯುತ್ತಿರುವ ತಾಯಿಯ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ಘಟನೆ ನೋಡುತ್ತಿದ್ದಂತೆ ಒಂದು ಕ್ಷಣ ದಂಗಾದೆ. ಈ ಅಮಾನುಷ ಕೃತ್ಯವನ್ನು ನೋಡಲು ನನ್ನ ಕಣ್ಣುಗಳು ನಿರಾಕರಿಸುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಅನೇಕ ಕಡೆ ಈ ರೀತಿಯ ಕ್ರೂರ ಕೃತ್ಯವನ್ನು ವೀಕ್ಷಿಸುತ್ತಿದ್ದೇವೆ. ಘೋರ ಕಲಿಯುಗ ಬಂದಿತೆಂದು ಅನಿಸಿತು. ಇದು ಮಾನಸಿಕ ವಿಕೃತಿಯ ಪರಮಾವಧಿ. ನೋಡಲು ಆರೋಗ್ಯವಂತ ಎನಿಸಿದರು ಇವರು ತಾಮಸಿಕ ಪ್ರವೃತ್ತಿಯವರು ಇರುತ್ತಾರೆ. ಪ್ರೀತಿಯ ಭಾವನೆ ಇಲ್ಲದ ಮನುಷ್ಯರಿವರು. ಹೀಗೇಕೆ ಆಗುತ್ತಿದೆ? ಇದಕ್ಕೆ ಹೊಣೆ ಯಾರು? ಇದಕ್ಕೆ ಉತ್ತರ ದೇವರೇ ಬಲ್ಲ.
ಮನುಷ್ಯ ಆಧುನಿಕವಾಗುತ್ತಿದ್ದಂತೆ ಭಾವನೆಗಳು ಇಲ್ಲವಾಗಿದೆ. ಬರ ಬರುತ್ತಾ ರೋಬೋಟ್ ಆಗುತ್ತಿದ್ದೇವೆ. ತನ್ನ ಸ್ವಾರ್ಥದ ಎದುರು ಇತರರ ಜೀವಕ್ಕೆ ಬೆಲೆ ಕೂಡ ಇಲ್ಲವೇ ಎಣಿಸುವುದು ನಿಜ. ಹಿಂದಿನ ಕಾಲದಲ್ಲಿ ದೈಹಿಕ ಆರೋಗ್ಯಕ್ಕೆ ಕೊಡುತ್ತಿರುವ ಪ್ರಾಮುಖ್ಯತೆ ಮಾನಸಿಕ ಆರೋಗ್ಯಕ್ಕೂ ಕೂಡ ನೀಡುತ್ತಿದ್ದರು. ಅದು ಈಗ ಇಲ್ಲವಾಗಿದೆ. ಶಾರೀರಿಕ ಆರೋಗ್ಯ ಕಣ್ಣಿಗೆ ಕಾಣುತ್ತದೆ ಆದರೆ ಮಾನಸಿಕ ಸ್ವಾಸ್ಥ್ಯ ಕಂಡುಹಿಡಿಯಲು ಕಷ್ಟ. ವಿಪರ್ಮಿತ ಮಾನಸಿಕ ಕಾಯಿಲೆ ಇದ್ದಾಗ ಮಾತ್ರ ಗೋಚರವಾಗುವುದು. ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕಾದ ಅವಶ್ಯಕತೆ ಇದೆ. ಸತ್ಯ, ಅಹಿಂಸೆ, ದ್ವೇಷ, ಹೆಮ್ಮೆ, ದುರಹಂಕಾರ, ಕೋಪ, ಈರ್ಶೆ ಇನ್ನಿತರ ಭಾವನೆಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ ಎಂದು ಆಯುರ್ವೇದವು ಹೇಳುತ್ತದೆ. ಇದನ್ನು ಚಿಕ್ಕಂದಿನಿಂದಲೂ ಮನೆಯಲ್ಲಿ ಕಲಿಸುವ ಅವಶ್ಯಕತೆ ಇದೆ. ಇದರಿಂದ ಮಾನಸಿಕ ಸ್ವಾಸ್ಥ್ಯ ಬೆಳೆಯುವುದರ ಜೊತೆಗೆ ವಿಕೃತ ಭಾವನೆಗಳನ್ನು ಹುಟ್ಟು ಹಾಕಲು ಬಿಡುವುದಿಲ್ಲ.
ಭಜನೆ, ಕೀರ್ತನೆ, ದೇವರ ಪೂಜೆ, ದೇವರ ಕಥೆಗಳು, ನೀತಿ ಕಥೆಗಳು, ಒಳ್ಳೆಯವರ ಒಡನಾಟ ಅಗತ್ಯವಿದೆ. ಇದು ನಮ್ಮ ಸ್ವಭಾವವನ್ನು ಬದಲಿಸುವುದಲ್ಲದೆ ನಕಾರಾತ್ಮಕ ಭಾವನೆಗಳು ಅಂಕುರಿಸುವುದಿಲ್ಲ. ಪೋಷಕರು ತಾನು ಪಾಲಿಸಿ ಮಕ್ಕಳಿಗೆ ಕಲಿಸಬೇಕು. ಮಕ್ಕಳು ನೋಡಿ ಕಲಿಯುತ್ತಾರೆ ಎಂಬುದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ, ಸಿನಿಮಾಗಳಲ್ಲಿ, ವಿಡಿಯೋ ಗೇಮ್ಸ್ ಗಳಲ್ಲಿ ಕ್ರೂರತನವನ್ನು ವೈಭವೀಕರಿಸಬಾರದು. ಇದರಿಂದ ನಾವು ಹಾಳಾಗುವುದು ನಿಶ್ಚಿತ. ಜೊತೆಗೆ ಸಮಾಜವನ್ನು ವಿನಾಶಕ್ಕೆ ತಳ್ಳುತ್ತೇವೆ. ನಮ್ಮ ವಾತಾವರಣ ಶುದ್ಧ ಮನಸ್ಸಿನಿಂದ ತುಂಬಿದರೆ ನಾವು ಅದರಿಂದ ಪ್ರಭಾವಿತರಾಗುತ್ತೇವೆ. ನಮ್ಮಲ್ಲಿ ಒಳ್ಳೆಯ ಗುಣಗಳು ಚಿಗುರುತ್ತವೆ. ಮಾನಸಿಕ ಸ್ವಾಸ್ಥ್ಯ ನಮ್ಮ ಜವಾಬ್ದಾರಿ. ನಿಜ ಅಲ್ಲವೇ?
-ಡಾ. ಹರ್ಷಾ ಕಾಮತ್