ಕೋಪ ಬರುತ್ತದೆ ಬೇಜಾರು ಆಗುತ್ತದೆ ಮರೆತು ಹೋಗುತ್ತದೆ ಭಯ ಆಗುತ್ತದೆ ಎಂದು ನಾವು ಪದೇಪದೇ ಈ ‘ಆಗುತ್ತದೆ’ ಎನ್ನುವ ಪದ ಬಳಸುತ್ತೇವೆ. ಒಂದು ದಿನದಲ್ಲಿ ಎಷ್ಟು ಬಾರಿ ಈ ಪದ ಬಳಕೆಯಾಗುತ್ತದೆ ಎಂದು ಎಣಿಸಿ ನೋಡಿ.ನಮಗೆ ಆಶ್ಚರ್ಯವಾಗುತ್ತದೆ, ಈ ಎಲ್ಲಾ ಹೇಳಿಕೆಗಳು ಅದು ಆಗುತ್ತದೆ ಇದು ಆಗುತ್ತದೆ ಎಂದು ನಾವು ನಮ್ಮದಲ್ಲದ ಮನೋಭಾವವನ್ನು ಇಟ್ಟುಕೊಂಡಿರುತ್ತೇವೆ. ಹಾಗೆ ಆಗುತ್ತದೆ ಎನ್ನುವುದು ನಮಗೆ ಗೊತ್ತು ಆದರೆ ಅದು ನಮ್ಮಿಂದಲೇ ಆಗ್ತಾ ಇರುವುದು ಎಂದು ತಿಳಿಯುವುದಿಲ್ಲವಷ್ಟೇ.
ಮೇಲೆ ಹೇಳಿದ ಭಾವನೆಗಳು ನಮ್ಮಿಂದಲೇ ಹುಟ್ಟುತ್ತಿರುವುದೆಂದು ಗಮನಿಸಬೇಕು. ಬೇಜಾರು ಆಗುತ್ತದೆ ಬದಲು ಬೇಜಾರು ನಾನು ಮಾಡಿಕೊಂಡಿರುವುದು, ಕೋಪ ಬರುತ್ತದೆ ಎನ್ನುವುದು ಆಗುವುದಲ್ಲ ಕೋಪ ನಾನು ಮಾಡಿಕೊಳ್ಳುತ್ತಿರುವುದು ಎಂದು ಅರಿಯಬೇಕು. ಯಾವಾಗ ಅರಿಯಲು ಶುರು ಮಾಡಿದೆವೋ, ತನ್ನಿಂದ ತಾನೇ ಸರಿಯಾಗುತ್ತದೆ. ನಮ್ಮಲ್ಲಿ ಒಂದಲ್ಲ ಒಂದು ಮನೋಭಾವನೆ ಇದ್ದೇ ಇರುತ್ತದೆ. ಆ ಭಾವನೆಯು ನಕಾರಾತ್ಮಕವಾಗಿದ್ದರೆ ದೂರ ಮಾಡಲು ಪ್ರಯತ್ನಿಸುವುದು ಹಿತಕರ.
ಹಾಗಾದರೆ ನಾವೇನು ಮಾಡಬೇಕು? ನಾವು ಮಾಡುವ ಕೆಲಸವನ್ನು ಗಮನಿಸಬೇಕಾಗುತ್ತದೆ. ಹೇಗೆ ಗಮನಿಸುವುದು? ನಾವು ಮಾಡುವ ಕೆಲಸದ ಬಗ್ಗೆ ಯೋಚಿಸುತ್ತಿರುವಾಗ ನಮ್ಮ ಭಾವನೆಯನ್ನು ಕೂಡ ಗಮನಿಸುವುದು ಮುಖ್ಯ. ನಾವು ಕೆಲಸ ಮಾಡುವಾಗ ನಮ್ಮ ಅನುಭವ ಹಾಗು ಮನಸ್ಥಿತಿಯ ಬಗ್ಗೆ ಗಮನಿಸುವುದು. ನನಗೆ ಭಯವಾಗುತ್ತದೆ ಎಂದು ಗೊತ್ತಿದ್ದರೂ ಆ ಭಯದ ಹುಟ್ಟುವಿಕೆ ನನ್ನಿಂದಲೇ ಆಗುತ್ತಿದೆ ಎಂಬ ಅರಿವು ಮುಖ್ಯ. ಇದು ಎಲ್ಲಾ ಭಾವನೆಗಳಿಗೂ ಅನ್ವಯವಾಗುತ್ತದೆ. ಭಯ ಅಥವಾ ಯಾವುದೇ ಭಾವನೆ ಇರಲಿ ನಿಜವಾಗಿಯೂ ಇರುವುದಿಲ್ಲ.
ಭಾವನೆಗಳು ಹೊರಗಿನಿಂದ ಬಂದಿರುವುದಿಲ್ಲ. ಬೇರೆಯವರು ನಮಗೆ ಭಯ ಹುಟ್ಟಿಸುವುದಿಲ್ಲ. ನಾವು ಭಯ ಪಡುತ್ತಿರುತ್ತೇವೆ. ಯಾರಾದರೂ ಗದರಿದರೆ ನಾವು ಭಯಪಡ ಬೇಕೆಂದಿಲ್ಲ. ಭಯ ಎಂಬ ಭಾವನೆಯ ಒಡೆಯ ನಾವು. ಅದನ್ನು ಹಿಡಿತದಲ್ಲಿಟ್ಟುಕೊಂಡರೆ ಬೇರೆಯವರು ಏನು ಮಾಡಲು ಸಾಧ್ಯವಿಲ್ಲ. ನೀರಿನ ಭಯ, ಎತ್ತರದ ಭಯ, ನೀರು ನಿಮಗೆ ಭಯ ಪಡಿಸುವುದಿಲ್ಲ ನೀರನ್ನು ಕಂಡು ನೀವು ಹೆದರುವುದು ಅಷ್ಟೇ. ಅದು ಅರಿಯುವುದು ಮುಖ್ಯ. ಭಾವನೆಗಳ ಮೇಲೆ ಹಿಡಿತವು, ಮುಂದೆ ಹೀಗೆ ಆಗುತ್ತದೆ ಎನ್ನುವ ಆತಂಕ, ಎಲ್ಲವೂ ನಮ್ಮ ಕೈಯಲ್ಲಿದೆ. ಧ್ಯಾನದಿಂದ ಅರಿವು ಮೂಡುವುದು. ಮಾನಸಿಕ ಕ್ರಿಯೆಯನ್ನು ಬಲಪಡಿಸಲು ಧ್ಯಾನವೇ ಮಾರ್ಗ. ಜೀವನದಲ್ಲಿ ಆಗುತ್ತಿರುವುದು ಎಲ್ಲವೂ ನಮ್ಮ ಭಾವನೆಗಳಿಂದಲೇ ಎನ್ನುವ ಸತ್ಯ ತಿಳಿಯುವುದು ಹಾಗೂ ಇತರರು ಅದಕ್ಕೆ ಹೊಣೆಯಲ್ಲ ಎನ್ನುವ ನಿಜಾಂಶ ತಿಳಿಯಬೇಕಿದೆ.
ಡಾ. ಹರ್ಷಾ ಕಾಮತ್