ಅಂದು ರಾತ್ರಿ ನನ್ನ ಹೊಸ ಗಾಡಿಯಲ್ಲಿ ಮನೆಗೆ ಹೋಗುತ್ತಿದ್ದೆ. ಎದುರಿಗೆ ಬಂದ ಗಾಡಿಯ ಬೆಳಕು ಕಣ್ಣು ಕುಕ್ಕುತ್ತಿತ್ತು. ಮನೆಗೆ ಬರುವವರೆಗೆ ಎಲ್ಲರನ್ನು ಮನದಲ್ಲಿ ಬಯ್ಯುತ್ತಿದ್ದೆ. ಗಾಡಿಯ ಹೆಡ್ ಲೈಟ್ ಅನ್ನು ಸ್ವಲ್ಪ ಆದ್ರೂ ಡಿಮ್ ಮಾಡಲು ಆಗುವುದಿಲ್ಲವೇ ಅವರಿಗೆ ಎಂದು. ಹೀಗೆ ಎಲ್ಲರನ್ನು ಬೈದು ಮನೆಗೆ ಬಂದು ನನ್ನ ಗಾಡಿ ಬಂದ್ ಮಾಡಿ ನನ್ನ ಗಾಡಿ ಹೆಡ್ಲೈಟ್ ಅನ್ನು ಆಫ್ ಮಾಡುವಾಗ ಇಷ್ಟರವರೆಗೆ ಎಲ್ಲರನ್ನು ಬಯ್ಯುತ್ತಿದ್ದ ನನಗೆ ಅರಿವಾದದ್ದು ಏನು ಎಂದರೆ ನಾನು ನನ್ನ ಗಾಡಿಯ ಹೆಡ್ಲೈಟ್ ಫುಲ್ ಬೀಮ್ ಅಲ್ಲಿ ಇದ್ದದ್ದು. ಆಗ ನನಗೆ ನನ್ನ ಮೇಲೆಯೇ ಸಿಟ್ಟು ಬಂದಿತ್ತು. ಎಷ್ಟು ಸುಲಭವಾಗಿ ಬೇರೆಯವರನ್ನು ಬಯ್ಯುತ್ತಿದ್ದೆ. ಅದೇ ತಪ್ಪು ನಾನು ಕೂಡ ಮಾಡಿದ್ದೆ ಅಲ್ಲವೇ? ನಾನು ಕೂಡ ಯಾರೇ ಎದುರಿಗೆ ಬಂದರೂ ನನ್ನ ಗಾಡಿಯ ಲೈಟನ್ನು ಡಿಮ್ ಮಾಡಿರಲೇ ಇಲ್ಲ. ಅವರನ್ನು ಬಯ್ಯುವಾಗ ಅದೇ ತಪ್ಪನ್ನು ನಾನು ಕೂಡ ಮಾಡುತ್ತ ಇದ್ದೆ ಅಲ್ಲವೇ?
ಹೀಗೆಯೇ ಜೀವನದಲ್ಲಿ ನಮಗೆ ಇತರರ ತಪ್ಪು ಬೇಗ ಕಣ್ಣಿಗೆ ಕಾಣುತ್ತದೆ. ಆದರೆ ನಮ್ಮ ತಪ್ಪುಗಳು ಅರಿವಾಗುವುದಿಲ್ಲ. ಅರಿವಾದರೂ ಬಹುಬೇಗನೆ ಆಗುವುದಿಲ್ಲ. ಬದುಕೆಂಬುದು ಭಾವನೆಗಳ ಖಜಾನೆ ಇದ್ದಂತೆ. ಆ ಖಜಾನೆಯ ಜೊತೆ ನಮ್ಮ ಬಗ್ಗೆ ಜಾಗೃತವಾಗುವುದು ಅತ್ಯಗತ್ಯ. ಇಲ್ಲವಾದಲ್ಲಿ ಇತರರ ತಪ್ಪು ಮಾತ್ರ ಎದುರಿಗೆ ಕಾಣುವುದು. ನಮ್ಮ ದೋಷವನ್ನು ತಿದ್ದುವಾಗ ಇನ್ನೊಂದು ಜನ್ಮ ದಾಟಿರುತ್ತೇವೆ. ಆದ್ದರಿಂದ ಆದಷ್ಟು ನಮ್ಮ ಬಗ್ಗೆ ಅರಿಯುವುದು ಮುಖ್ಯ. ನಮ್ಮ ನಡವಳಿಕೆಯ ಬಗ್ಗೆ, ಮಾತಿನ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು.
ಧ್ಯಾನವು ಅರಿವಿಗೆ ಸುಲಭದ ದಾರಿ. ನಮ್ಮನ್ನು ನಾವೇ ಪ್ರಶ್ನಿಸುವುದು ವಿವೇಕಿಗಳ ಲಕ್ಷಣ. ಹಿಂದೆ ಅನೇಕ ಋಷಿಮುನಿಗಳು ಧ್ಯಾನದಿಂದ ಆತ್ಮಸಾಕ್ಷಾತ್ಕಾರ ಪಡೆದುಕೊಂಡರು. ನಾವು ಧ್ಯಾನದಿಂದ ಸ್ವಲ್ಪವಾದರೂ ನಮ್ಮನ್ನು ಅರಿಯಲು ಪ್ರಯತ್ನ ಪಡೋಣ.ಆಗ ನಾವು ಮಾಡುವ ತಪ್ಪಿನ ಜ್ಞಾನೋದಯವಾಗುವುದು. ನಮ್ಮನ್ನು ತಿದ್ದಲು ಎಷ್ಟು ಜನ್ಮಗಳು ಬೇಕು ಗೊತ್ತಿಲ್ಲ. ಈ ಜನ್ಮದಲ್ಲಿ ಶುರುವಾದರೂ ಮಾಡೋಣ. ಇತರರಿಗೆ ಬಯ್ಯುವ ಮನಸ್ಸು ಬಂದಾಗ ನಮ್ಮ ತಪ್ಪನ್ನು ನೆನಪಿಸಿಕೊಳ್ಳೋಣ. ಇತರರ ಮೇಲೆ ಸಿಟ್ಟಾದಾಗ ನಮ್ಮ ತಪ್ಪನ್ನು ತಿದ್ದೋಣ.
-ಡಾ.ಹರ್ಷಾ ಕಾಮತ್