ಅನೇಕ ಸಂದರ್ಭಗಳಲ್ಲಿ ನಾವು ಮಾಡಿದಂತಹ ಕಾರ್ಯಗಳಲ್ಲಿ ಹೀಗೇಕೆ ಮಾಡಿದ್ದೇವೆ ಎಂಬುದು ನಮಗೆ ಖಚಿತವಾಗಿ ಹೇಳಲು ಸಾಧ್ಯವಾಗದು. ಗಂಡನ ಮೇಲೆ ಅಷ್ಟು ಪ್ರೀತಿ ಇದ್ದ ಹೆಂಡತಿಗೆ, ಗಂಡ ಅವಳು ಸಂಪಾದಿಸಿದ ಹಣ ಕೇಳಿದಾಗ ಒಮ್ಮೆಲೆ ಸಿಟ್ಟಿಗೆ ಬೀಳುತ್ತಾಳೆ. ಏಕೆ ಎಂದು ಅವಳಿಗೆ ತಿಳಿಯದು. ಗಂಡನ ಮೇಲೆ ಪ್ರೀತಿ ಇಲ್ಲವೇ? ಇದೆ. ಗಂಡನಿಗೋಸ್ಕರ ರುಚಿ ರುಚಿಯಾದ ಅಡುಗೆ ಮಾಡುತ್ತಾಳೆ ಗಂಡನಿಗೆ ಅಗತ್ಯವಿರುವ ಇಷ್ಟವಿರುವ ಎಲ್ಲಾ ಕೆಲಸವನ್ನು ಮಾಡುತ್ತಾಳೆ ಆದರೆ ಹಣದ ವಿಷಯ ಬಂದಾಗ ಮಾತ್ರ ಸಿಟ್ಟು ತಾರಕಕ್ಕೆ ಏರುತ್ತದೆ ಏಕೆ? ಗಂಡನಿಗಿಂತ ಹಣದ ಮೇಲೆ ವ್ಯಾಮೋಹವೇ? ಇದ್ದಿರಬಹುದು ಇಲ್ಲದೆ ಇರಬಹುದು. ಅದು ಅವಳಿಗೆ ತಿಳಿದಿಲ್ಲ.
ಒಬ್ಬ ಹೆಂಗಸು ಎರಡು ಕಟ್ಟು ಹೂವನ್ನು ಇಬ್ಬರು ಹೆಂಗಸರಿಗೆ ನೀಡುತ್ತಾಳೆ. ಒಬ್ಬಳಿಗೆ ಕೊಡುವಾಗ ‘ನಿನಗೆ ಇಷ್ಟವಾದ ಹೂವಿದು ತಗೋ’ ಎಂದು ನೀಡಿದಾಗ ಇನ್ನೊಬ್ಬ ಹೆಂಗಸಿಗೆ ಏನೋ ಅನಿಸಿ ತನಗೆ ಕೊಟ್ಟ ಹೂವನ್ನು ನಿರಾಕರಿಸುತ್ತಾಳೆ. ಏಕೆ ಹಾಗೆ ಮಾಡಿದಳು ಅವಳಿಗೆ ಅರಿವಿಲ್ಲ. ಅಸೂಯೇ ಇರಬಹುದು ಇಲ್ಲದೆ ಇರಬಹುದು. ಅವಳಿಗೆ ಅವನ ಮೇಲೆ ಅಷ್ಟು ಪ್ರೀತಿ ಏಕೆ ತಿಳಿಯುವುದಿಲ್ಲ. ಅವನಲ್ಲಿ ಅನೇಕ ಕೆಟ್ಟ ಗುಣಗಳಿದ್ದರೂ ಅವನ ಮೇಲೆ ಅಪಾರ ಪ್ರೀತಿ ಏಕೆ ಗೊತ್ತಿಲ್ಲ. ಪ್ರೀತಿಯಲ್ಲಿ ಅಂಧವಾಗಿಬಿಟ್ಟಿದ್ದಾಳೆಯೇ?
ಹೀಗೆ ಜೀವನದಲ್ಲಿ ಪ್ರತಿಯೊಂದಕ್ಕೂ ಕಾರಣಗಳು ಇದ್ದೇ ಇರುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ ಅಥವಾ ಆ ಕಾರಣಗಳನ್ನು ಅರ್ಥಮಾಡಿಕೊಳ್ಳಲು ನಾವು ಸಮರ್ಥರಾಗಿ ಇರಲಿಕ್ಕಿಲ್ಲ ಅಥವಾ ಆ ಭಾವನೆಗಳನ್ನು ಪದಗಳ ರೂಪದಲ್ಲಿ ವ್ಯಕ್ತ ಮಾಡಲು ಸಾಧ್ಯವಾಗುವುದಿಲ್ಲ. ಕಾರಣಗಳು ಅನೇಕ ಅದನ್ನು ಹುಡುಕುತ್ತಾ ಹೋದರೆ ಅದು ಜಟಿಲವಾಗುತ್ತಾ ಹೋಗುತ್ತದೆ. ಕೆಲವೊಂದಕ್ಕೆ ಸರಿಯಾದ ಉತ್ತರ ಸಿಗಬಹುದು ಆದರೆ ಕೆಲವೊಂದು ನಿಗೂಢವಾಗಿ ಉಳಿಯುವುದು. ಅದನ್ನು ಹುಡುಕಿ ಪ್ರಯೋಜನವಾಗದು.
ನಮ್ಮ ನಡವಳಿಕೆಗೆ ಕಾರಣಗಳಿದ್ದರೂ ಕೆಲವು ಸಂದರ್ಭಗಳಲ್ಲಿ ನಾವು ಏಕೆ ಹಾಗೆ ಮಾಡುತ್ತೇವೆ ಎಂಬುದು ನಮ್ಮ ಸೂಕ್ಷ್ಮ ಮನಸ್ಸಿಗೆ ತಿಳಿದಿರಬಹುದು ಇಲ್ಲದೆ ಇರಬಹುದು ಆಗ ಇದ್ದದ್ದನ್ನು ಹಾಗೆ ಒಪ್ಪಿ ಬಿಡೋದು ಸೂಕ್ತ. ಪ್ರತಿಯೊಂದರ ಕಾರಣಗಳನ್ನು ಹುಡುಕುತ್ತ ಕೂತರೆ ಜೀವನವಿಡಿ ಏಕೆ ಹೀಗೆ ಮಾಡಿದೆ ಎಂಬ ಮಹಾ ಪ್ರಶ್ನೆಯಲ್ಲೇ ತಿರುಗುತ್ತಾ ಇರಬೇಕಾಗುತ್ತದೆ. ಆದ್ದರಿಂದ ಕಾರಣಗಳನ್ನು ಹುಡುಕಬೇಕು ನಿಜ, ತಿಳಿಯಬೇಕು ನಿಜ; ಆದರೆ ಎಲ್ಲದಕ್ಕೂ ಅಲ್ಲ ಎಂದು ಅರಿಯಬೇಕು ಅಷ್ಟೇ.
-ಡಾ. ಹರ್ಷಾ ಕಾಮತ್