Home ಅಂಕಣ ಕೃತಜ್ಞತೆಯ ಭಾವ

ಕೃತಜ್ಞತೆಯ ಭಾವ

271
0

ಚಿಕ್ಕ ಹುಡುಗಿ ಹೂ ಮಾರುವವನಿಂದ ಬಣ್ಣದ ಹೂವನ್ನು ತೆಗೆದುಕೊಂಡು ಹೂ ಮಾರುವವನಿಗೆ ಧನ್ಯವಾದಗಳು ಹೇಳಿ ಹೊರಟಳು. ‘ಈ ಹೂವು ಮಾರುವ ಮಾಮ ಇಲ್ಲದಿದ್ದರೆ ಏನು ಮಾಡುವುದಿತ್ತು’ ಎಂದು ಮನಸ್ಸಿನಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ಹರಸಿದಳು. ಇನ್ನೊಬ್ಬ ವ್ಯಕ್ತಿ ತನ್ನ ಗಾಡಿಯಿಂದ ಇಳಿದು ಅಹಂಕಾರದ ಮುಖದಿಂದ ಹಣ ಕೊಟ್ಟು ಹೂವನ್ನು ತಗೆದುಕೊಂಡು, ತಾನು ಹಣ ಕೊಡುವದರಿಂದ ಇವನಿಗೆ ಲಾಭವಾಗುತ್ತಿದೆ ಎಂಬ ಭಾವ. ಒಬ್ಬ ವೃದ್ಧ ದೇವರನ್ನು ನೆನೆಸುತ್ತಾ ದೇವರಿಗೆ ಪೂಜಿಸಲು ಎಂದು ಹೂಮಾಲೆಯನ್ನು ತೆಗೆದುಕೊಂಡು ಹೊರಟನು. ಅವನ ಆಲೋಚನೆಯಲ್ಲಿ ಬರಿ ದೇವರ ಸ್ಮರಣೆ ಇದ್ದಿತು. ಹೂ ಮಾರುವವನ ಬಗ್ಗೆ ತನ್ನ ಅಭಿಪ್ರಾಯವನ್ನು ಯೋಚಿಸಲಿಲ್ಲ. ಅದು ತಲೆಗೆ ಹೋಗಲೂ ಇಲ್ಲ. ತಮ್ಮ ಕಾರ್ಯ ಮಾಡಿದರು ಅಷ್ಟೇ. ಒಬ್ಬ ಹೆಂಗಸು ಬಂದು ತರತರದ ಗುಲಾಬಿಯನ್ನು ಮುಟ್ಟಿ ಯಾವುದೇ ಇಷ್ಟವಾಗದೆ ತಾನು ಮುಟ್ಟಿದ ಹೂವು ಹಾಳಾಗಿದ್ದರೂ ಮುಲಾಜಿಲ್ಲದೆ ಯಾವುದೇ ಹೂವನ್ನು ಖರೀದಿಸದೆ ಹೊರಟಳು. ಅವರಿಗೆ ಅನೇಕ ಗಿರಾಕಿಗಳು ಬರ್ತಾರೆ ನನ್ನಿಂದಲೇ ವ್ಯಾಪಾರ ಆಗಬೇಕೆಂದಿಲ್ಲ ಎಂದು ಯೋಚಿಸಿ ಹೊರಟೆ ಬಿಟ್ಟಳು.

ಹೂವಿನ ಬದುಕು ಒಂದು ದಿನ ಮಾತ್ರ. ಅದನ್ನು ನಾವು ದೇವರಿಗೆ, ಕೇಶ ಶೃಂಗಾರಕ್ಕೆ, ಪೂಜೆಗೆ ಬಳಸುವುದುಂಟು. ಕೆಲವರಿಗೆ ಹೂವಿನ ಮೇಲೆ ಪ್ರೀತಿ ಇದ್ದರೆ, ಕೆಲವರಿಗೆ ದೇವರಿಗೆ ಅರ್ಪಿಸುವ ತವಕ. ಹೂವಿನ ಅಂದಕ್ಕೆ ಮಾರು ಹೋಗದವರು ಯಾರು ಇಲ್ಲ. ಹೂವು ಒಂದೇ ಆದರೂ ಜನರು ಅದನ್ನು ಸ್ವೀಕರಿಸುವ ಪರಿ ಬೇರೆ. ಪ್ರತಿಯೊಬ್ಬರ ಮನಸ್ಥಿತಿ ಭಿನ್ನವಾಗಿರುತ್ತದೆ. ಇಷ್ಟೆಲ್ಲಾ ಉದಾಹರಣೆ ಏಕೆ ನೀಡಿದೆನೆಂದರೆ ಹೂವಿನ ಬಗ್ಗೆ, ಹೂ ಮಾರುವವನ ಬಗ್ಗೆ ಇರುವ ಅಭಿಪ್ರಾಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ಖುಷಿಯಿಂದ, ಕೆಲವರು ಅಹಂಕಾರದಿಂದ, ಕೆಲವರು ಏನು ಯೋಚಿಸದೆಯೇ, ಕೆಲವರು ಹೂವು ಹಾಳು ಮಾಡಿದರೂ ಕೂಡ ಕೊಂಡು ಹೊಗುವುದಿಲ್ಲ. ಇಲ್ಲಿ ಹೂ ಮಾರುವವನು ಒಂದು ಉದಾಹರಣೆ ಅಷ್ಟೇ. ಜಗತ್ತಿನಲ್ಲಿ ಕೆಲಸ ಮಾಡುವ ಎಲ್ಲಾ ವ್ಯಕ್ತಿಗಳಿಗೆ ಇದು ಅನ್ವಯಿಸುತ್ತದೆ. ಎಲ್ಲರೂ ತಮ್ಮ ಕೆಲಸದಿಂದ ಇತರರಿಗೆ ಸಹಾಯ ಮಾಡುತ್ತಿರುತ್ತಾರೆ. ಸಮಾಜದಲ್ಲಿ ಒಬ್ಬರಿಗೊಬ್ಬರು ಬೇಕೇ ಬೇಕು. ಇಲ್ಲದಿದ್ದರೆ ಜೀವಿಸುವುದಾದರು ಹೇಗೆ?

ಯಾವುದೇ ವೃತ್ತಿ ಇರಲಿ ಡಾಕ್ಟರ್, ಲಾಯರ್, ಬಿಜಿನೆಸ್, ವೇಟರ್, ಕೂಲಿ, ರೈತ ಎಲ್ಲರೂ ತಮ್ಮ ತಮ್ಮ ವೃತ್ತಿಯಿಂದ ಜನರಿಗೆ ಸರ್ವಿಸ್ ನೀಡುತ್ತಿರುತ್ತಾರೆ. ಅವರ ವೃತ್ತಿಗೆ ಒಂದು ಕೃತಜ್ಞತೆ ನಮ್ಮ ಮನಸ್ಸಿನಲ್ಲಿರಲಿ. ಅಹಂಕಾರ ಬಿಟ್ಟು ಅವರಿಂದ ನಮಗೆ ಸಹಾಯವಾಗಿದೆ ಎಂದು ತಿಳಿದುಕೊಳ್ಳಿ. ಹಣ ಸಂಪಾದನೆಗೆ ಎಲ್ಲರೂ ಕೆಲಸ ಮಾಡಿದರೂ ಕೂಡ ಆ ಕೆಲಸದ ಬಗ್ಗೆ ಶ್ರದ್ಧೆ ಇಟ್ಟುಕೊಂಡಿರುತ್ತಾರೆ. ಶ್ರದ್ಧೆ ಇಲ್ಲದಿದ್ದರೂ ಕೂಡ ಅವರಿಂದ ನಮಗೆ ಸಹಾಯವಾಗಿರುವುದು ನಿಜವಲ್ಲವೇ. ಆದ್ದರಿಂದ ಮುಂಜಾನೆಯಿಂದ ರಾತ್ರಿಯವರೆಗೆ ಭೇಟಿಯಾಗುವ ಎಲ್ಲಾ ಜನರಿಗೆ ಅಥವಾ ಸಹಾಯ ಮಾಡಿದ ವ್ಯಕ್ತಿಗಳಿಗೆ ನಮ್ಮ ಮನಸ್ಸು ಸ್ಮರಿಸಲಿ. ಕೊನೆಗೆ ನಮಗೆ ಎಲ್ಲವನ್ನೂ ನೀಡಿರುವ ದೇವರನ್ನು ಕೂಡ ಮರೆಯದಿರಿ.

ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.