ಒಬ್ಬಳು ಯೂಟ್ಯೂಬರ್ ತನ್ನ ಯುಟ್ಯೂಬ್ ಚ್ಯಾನಲ್ ನಲ್ಲಿ ತನ್ನ ದಿನನಿತ್ಯದ ಅಡುಗೆ ಹಾಗೂ ದೇವರ ಪೂಜೆ ಮಾಡುವ ವ್ಲಾಗ್ ಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ. ಒಂದು ತಿಂಗಳ ಹಿಂದೆ ಅವರ ಹೊಸ ಮನೆಯ ಗೃಹಪ್ರವೇಶವಾಯಿತು. ಅದರಲ್ಲಿ ಅವರ ಗಂಡ ಕಾಣಿಸಲಿಲ್ಲ, ಪೂಜೆಗೂ ಆ ಹೆಂಗಸೊಬ್ಬಳೇ ಇದ್ದದ್ದು ಕಾಣಿಸಿತು. ಆ ವ್ಲಾಗ್ ನೋಡುತ್ತಿದ್ದಾಗ ಕೆಲವು ಕಮೆಂಟ್ಸ್ ಕಣ್ಣಿಗೆ ಬಿತ್ತು, ಈ ಹೆಂಗಸು ಸರಿಯಿಲ್ಲ, ತನ್ನ ಪತಿಯನ್ನು ಬಿಟ್ಟು ಇಲ್ಲಿ ಒಬ್ಬಳೇ ಬಂದಿದ್ದಾಳೆ. ಇಷ್ಟು ವರ್ಷ ಗಂಡನ ಜೊತೆ ಇದ್ದು ಈಗ ಅವರನ್ನು ಬಿಟ್ಟು ಬಂದಿದ್ದಾಳೆ ಎಂದು ಬೇರೆ ಬೇರೆ ರೀತಿಯಲ್ಲಿ ನೋವು ಕೊಡುವಂತಹ ಕಮೆಂಟ್ಸ್ ಗಳು. ಎರಡು ಮೂರು ದಿನಗಳ ಬಳಿಕ ಅವರ ಬ್ಲಾಗನಲ್ಲಿ ಅವರು ತಮ್ಮ ನೋವನ್ನು ಗಂಡನನ್ನು ಬಿಟ್ಟು ಬಂದ ಕಾರಣವನ್ನು ಹೇಳಿದಾಗ ಬೇಸರ ತಂದಿತು. ಗಂಡ ಇರುವುದು ಬೇರೆ ಹೆಂಗಸನೊಟ್ಟಿಗೆ. ಮಕ್ಕಳನ್ನು ಚಿಕ್ಕನಿಂದ ಇವರೇ ನೋಡಿಕೊಂಡು ಬಂದಿದ್ದು ಈ ತಾಯಿ. ಗಂಡನಿಂದ ಹಣದ ನೆರವು ಕೂಡ ಇರಲಿಲ್ಲ. ಸತ್ಯ ತಿಳಿಯದೆ ಎಷ್ಟೋ ಜನ ಕಮೆಂಟ್ಸ್ ಮಾಡಿದ್ದು ಅಲ್ಲದೆ ‘ಅನ್ ಸಬ್ಸ್ ಕ್ರೈಬ್ ಮಾಡುತ್ತೇವೆ ನಿಮ್ಮ ಚಾನಲ್’ ಎಂದು ಹೇಳಿದ್ದರು.
ಒಂದು ಕೆಟ್ಟ ಕಮೆಂಟ್ ನ ಕೆಳಗಡೆ ಅದನ್ನು ಒಪ್ಪುತ್ತಾ ಇನ್ನಿತರ ಕಮೆಂಟ್ಸ್ ಗಳ ಸರಪಳಿ ಇದ್ದೆ ಇರುತ್ತದೆ. ಇದು ಒಂದು ಉದಾಹರಣೆ ಅಷ್ಟೇ. ಯಾವುದೇ ವೈರಲ್ ಆದ ವಿಡಿಯೋವನ್ನು ನೋಡಿ ಎಷ್ಟು ನೆಗೆಟಿವ್ ಕಾಮೆಂಟ್ಸ್ ಗಳು ಇರುತ್ತದೆ. ಸತ್ಯವನ್ನೇ ತಿಳಿಯದೆ ಕಮೆಂಟ್ಸ್ ಬರುತ್ತದೆ. ಟ್ರೋಲ್ ಮಾಡೋದು ಈಗಿನ ಟ್ರೆಂಡ್ ಆಗಿ ಬಿಟ್ಟಿದೆ. ಈ ಜನರಿಗೆ ಆಲೋಚನಾ ಶಕ್ತಿ ಕಳೆದಿದೆಯೆಂದೆನಿಸುತ್ತದೆ. ಬೇರೆಯವರನ್ನು ಬೈದು ಅಭ್ಯಾಸವಾಗಿದೆಯೇ ಅಥವಾ ಈರ್ಶೆಯೇ? ಕಾರಣಗಳು ಬೇರೆ ಬೇರೆ ಇರಬಹುದು. ಆದರೆ ಆ ಕೆಟ್ಟ ಕಮೆಂಟ್ ನಿಂದ ಪರಿಣಾಮ ಆ ವಿಡಿಯೋ ಅಪ್ಲೋಡ್ ಮಾಡಿರುವವರ ಮೇಲೆ ಬೀಳುತ್ತದೆ. ಕೈಯಲ್ಲಿ ಮೊಬೈಲ್ ಇದ್ದ ತಕ್ಷಣ ನಾವು ಯಾರಿಗೆ ಏನು ಬೇಕಾದರೂ ಹೇಳಬಹುದು ಎಂದೆನಿಸುವುದು ತಪ್ಪು ಎಂದು ನನ್ನ ಅನಿಸಿಕೆ.
ಯೂಟ್ಯೂಬ್ ವ್ಲಾಗ್ಸ್ ನೋಡುವುದು ಹೆಂಗಸರ ಅಭ್ಯಾಸ. ಮೇಲೆ ಹೇಳಿದ ಯೂಟ್ಯೂಬರ್ ಅವರ ಅಡಿಗೆ, ಪೂಜೆ ವಿಧಿ ನೋಡಿ ಸಬ್ಸ್ಕ್ರೈಬ್ ಮಾಡಿದವರು ಅನೇಕರು. ಈಗ ಗೃಹಪ್ರವೇಶದ ವೀಡಿಯೋ ನೋಡಿ ಕೆಟ್ಟ ಅಭಿಪ್ರಾಯಪಟ್ಟದ್ದು ಏಕೆ?. ಪಟ್ಟವರು ಅದರ ಉತ್ತರ ಕೊಡುವ ಮುಂಚೆಯೇ ಅನವಶ್ಯಕವಾಗಿ ಬೈದದ್ದು ಏಕೆ? ಅಡುಗೆ, ಪೂಜೆ ಇಷ್ಟವಿದ್ದರೆ ನೋಡಿ ಕಲಿಯಬಹುದು. ಅವರ ಪರ್ಸನಲ್ ಲೈಫ್ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಇದರ ತಾತ್ಪರ್ಯವಿಷ್ಟೇ ನಾವು ಎಷ್ಟು ದ್ವೇಷವನ್ನು ನಮ್ಮೊಟ್ಟಿಗೆ ಇಟ್ಟುಕೊಂಡಿದ್ದೇವೆ ಎಂದು. ಜನರಿಗೆ ತಮ್ಮ ಕೆಲಸ ಬಿಟ್ಟು ಇತರರ ಪರ್ಸನಲ್ ಲೈಫ್ ಬಗ್ಗೆ ಕುತೂಹಲ ಅಧಿಕವೆನಿಸುತ್ತದೆ. ಇಷ್ಟವಿಲ್ಲದಿದ್ದರೆ ನೋಡದಿರಿ, ನಕಾರಾತ್ಮಕ ಅಭಿಪ್ರಾಯವನ್ನು ಇಟ್ಟುಕೊಂಡವರು ಅಲ್ಲಿ ಹೇಳಿ ನೋವಿಸುವುದೇಕೆ?
ಪ್ರಸ್ತುತ ಈ ತರಹದ ಮನಸ್ಥಿತಿ ಬೆಳೆಯಲು ಕಾರಣ ಈ ಸಾಮಾಜಿಕ ಜಾಲತಾಣ. ಸೋಶಿಯಲ್ ಮೀಡಿಯಾದಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಕೆಟ್ಟ ಪರಿಣಾಮ ಕೂಡ ಇದೆ. ಒಳ್ಳೆಯದಕ್ಕೆ ಉಪಯೋಗಿಸಿದರೆ ಹಿತಕರ. ಅದೇ ದ್ವೇಷಕ್ಕಾಗಿ ಇತರರನ್ನು ನೋವು ಕೊಡುವ ಉದ್ದೇಶದಿಂದ ಜಾಲತಾಣವನ್ನು ಉಪಯೋಗಿಸಬೇಡಿ. ಈ ನಮ್ಮ ಮನಸ್ಥಿತಿ ಬದಲಾಗಬೇಕು. ನಮ್ಮಲ್ಲಿರುವಂತಹ ದ್ವೇಷ ಕಡಿಮೆಯಾಗಬೇಕು. ಎಲ್ಲರಿಗೆ ಒಳ್ಳೆಯದಾಗಲಿ ಎಂಬ ಮನಸ್ಥಿತಿ ನಮ್ಮದಾಗಬೇಕು. ಸರ್ವೇ ಜನಾಃ ಸುಖಿನೋ ಭವಂತು ಎನ್ನುವಂತಹ ವೇದ ವಾಕ್ಯ ನಮ್ಮಲ್ಲಿ ಬೆಳೆಯಬೇಕು.
-ಡಾ.ಹರ್ಷಾ ಕಾಮತ್