ಒಬ್ಬ ವ್ಯಕ್ತಿ ಅವನ ತಾಯಿ ತಂದೆಗೆ ಒಳ್ಳೆಯ ಮಗ ಎಂದು ಅವರಿಗೆ ಅನಿಸುತ್ತದೆ. ತನ್ನ ಮಗ ಒಳ್ಳೆಯವನು ಎಂದು ಬೀಗುತ್ತಾರೆ. ಅದೇ ವ್ಯಕ್ತಿಗೆ ಅವನ ಸ್ನೇಹಿತರು ಅವನಿಗೆ ಜಂಬ ಎಂದೆಲ್ಲ ಹೇಳುತ್ತಾರೆ. ಅದೇ ವ್ಯಕ್ತಿ ಅವನ ಜೊತೆ ಕೆಲಸ ಮಾಡುವವರು ಅವನು ಕೆಲಸದಲ್ಲಿ ಚುರುಕಿದ್ದಾನೆ, ಆದರೆ ಹಣದ ಮೇಲೆ ವ್ಯಾಮೋಹ, ಹಣ ಪಡೆಯದೆ ಕೆಲಸ ಮಾಡಿಕೊಡುವುದಿಲ್ಲವೆಂದು ಹೇಳುತ್ತಾನೆ. ಮನೆಯಲ್ಲಿ ಅದೇ ವ್ಯಕ್ತಿಗೆ ‘ನನ್ನ ಗಂಡ ಬಹಳ ಒಳ್ಳೆಯವರು ನನ್ನನ್ನು ಮಕ್ಕಳನ್ನು ಚೆಂದ ಮಾಡಿ ನೋಡಿಕೊಳ್ಳುತ್ತಾರೆ’ ಎಂದು ಹೆಂಡತಿ ಹೇಳುತ್ತಾಳೆ.
ಇಲ್ಲಿ ವ್ಯಕ್ತಿ ಒಬ್ಬನೇ ಆದರೆ ಒಬ್ಬೊಬ್ಬರು ಆ ವ್ಯಕ್ತಿಯ ಬಗ್ಗೆ ಹೇಳಿದ್ದು ಭಿನ್ನವಾಗಿದೆ ಅಲ್ಲವೇ? ಯಾಕೆ ಹೀಗೆ? ಒಬ್ಬ ವ್ಯಕ್ತಿಯಲ್ಲಿ ಅನೇಕ ಗುಣಗಳು ಇರುವುದರಿಂದ ಹೀಗೆ ಆಗುವುದು. ಇಲ್ಲಿ ಹೇಳಿದ ವ್ಯಕ್ತಿಗೆ ಗೌರವ, ಪ್ರೀತಿ ಕೊಡಲು ಗೊತ್ತು ಆದರೆ ಹಣದ ಮೇಲೆ ಆಸೆ. ಬೇರೆ ಬೇರೆ ರೀತಿಯಲ್ಲಿ ಹಣವನ್ನು ತಪ್ಪು ದಾರಿಯಲ್ಲಿ ಗಳಿಸುತ್ತಾನೆ. ಆದರೆ ತಮ್ಮ ಸಂಬಂಧಗಳಲ್ಲಿ ಅಷ್ಟೇ ಪ್ರೀತಿಯಿಂದ ಗೌರವದಿಂದ ಕಾಣುತ್ತಾನೆ. ಅದೇ ವ್ಯಕ್ತಿ ತನಗೆ ಆಗದೇ ಇರುವ ವ್ಯಕ್ತಿಯನ್ನು ದೂಷಿಸುತ್ತಾನೆ. ಅದರ ಅರ್ಥ ಅವನು ದ್ವೇಷಿಸಿದ ವ್ಯಕ್ತಿ ಕೆಟ್ಟವನು ಅಂತ ಅಲ್ಲ ಇವನಿಗೆ ಆ ವ್ಯಕ್ತಿ ಕೆಟ್ಟವನು ಅಷ್ಟೇ. ಬೇರೆಯವರಿಗೆ ಅದೇ ವ್ಯಕ್ತಿ ಒಳ್ಳೆಯವನು ಇರಬಹುದು. ಅದು ಅವರವರು ಹೇಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ಮತ್ತು ಅವರವರ ಮನಸ್ಥಿತಿಗೆ ತಕ್ಕಂತೆ ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ. ಒಬ್ಬ ವ್ಯಕ್ತಿ ಒಬ್ಬರಿಗೆ ಒಳ್ಳೆಯವರು ಇರಬಹುದು ಅದೇ ವ್ಯಕ್ತಿ ಇನ್ನೊಬ್ಬರಿಗೆ ಕೆಟ್ಟವರು ಅನಿಸಿರಬಹುದು. ವ್ಯಕ್ತಿ ಒಬ್ಬನೇ ಆದರೆ ಆ ವ್ಯಕ್ತಿಯ ಮೇಲೆ ಅಭಿಪ್ರಾಯಗಳು ಬೇರೆ. ಉದಾಹರಣೆಗೆ ಎಲ್ಲರ ಹತ್ತಿರ ಮಾತನಾಡುವ ವ್ಯಕ್ತಿ ಕೆಲವರಿಗೆ ಇಷ್ಟವಾಗಬಹುದು. ‘ಎಷ್ಟು ಒಳ್ಳೆಯವರು, ಎಲ್ಲರ ಹತ್ತಿರ ಮಾತನಾಡುತ್ತಾನೆ’ ಎಂದು ಅದೇ ವ್ಯಕ್ತಿಗೆ ಕೆಲವರು ‘ಏನಪ್ಪ, ಇವನು ಇತರರ ಹಾಗಿಲ್ಲ, ಎಲ್ಲರ ಹತ್ತಿರ ಮಾತನಾಡುತ್ತಾನೆ’ ಎಂದು ಆ ವ್ಯಕ್ತಿ ಕಿರಿಕಿರಿ ಎಂದು ತಮ್ಮ ಅಭಿಪ್ರಾಯ ಹೇಳುತ್ತಾರೆ. ಅವರವರ ಭಾವಕ್ಕೆ ತಕ್ಕಂತೆ ಅವರವರ ಹಾಗೆ ಇದ್ದರೆ ಖುಷಿ ಪಡುತ್ತಾರೆ. ಅವರಂತೆ ಇಲ್ಲದಿದ್ದರೆ ಬೈಯುತ್ತಾರೆ. ಇದರ ಅರ್ಥ ಆ ವ್ಯಕ್ತಿ ಒಳ್ಳೆಯವನು ಅಲ್ಲ, ಕೆಟ್ಟವನೂ ಅಲ್ಲ. ಅದು ನೋಡುಗರ ಅಭಿಪ್ರಾಯವಷ್ಟೇ.
ಇದೆಲ್ಲವೂ ಇನ್ನೊಬ್ಬರ ಅನಿಸಿಕೆಗಳಾಯಿತು. ಇನ್ನು ನಮ್ಮ ಬಗ್ಗೆ ಹೇಳುವುದಾದರೆ ಬೇರೆಯವರ ಗೋಜಿಗೆ ಹೋಗದೆ ನಮಗೆ ಹಿತ ಅನಿಸಿರುವ, ನಮಗೆ ಇಷ್ಟವಾದ ಕೆಲಸ ಮಾಡಿದರೆ ಸಾಕು. ಜನರು ಏನಾದರೂ ಹೇಳಲಿ ಅದು ಅವರಿಗೆ ಬಿಟ್ಟದ್ದು. ಯಾರು ಹೇಗೇ ಇರಲಿ ಅದು ಅವರವರಿಗೆ ಬಿಟ್ಟದ್ದು. ನಾವು ನಮ್ಮ ಕೆಲಸ ಮಾಡೋಣ ಅಷ್ಟೇ. ಅಭಿಪ್ರಾಯಗಳು ನಮಗೂ ಇದೆ, ಬೇರೆಯವರಿಗೂ ಕೂಡ ತಮ್ಮ ತಮ್ಮ ಅಭಿಪ್ರಾಯವಿದೆ. ಅವರ ಅಭಿಪ್ರಾಯವೂ ನಿಜವಲ್ಲ, ನಮ್ಮ ಅಭಿಪ್ರಾಯವೂ ನಿಜವಲ್ಲ. ಅದು ಅವರವರ ಅಭಿಪ್ರಾಯವಷ್ಟೇ. ನಿಜ ಯಾವುದು ಅಲ್ಲ. ಯೋಚಿಸಿ ನೋಡಿ.
-ಡಾ.ಹರ್ಷಾ ಕಾಮತ್