ಜಗತ್ತು ಇರುವುದು ಒಂದೇ. ಆದರೆ ಆ ಜಗತ್ತನ್ನು ನೋಡುವ ಕಣ್ಣುಗಳು ಅನೇಕ. ಅನೇಕ ಹೇಳುವುದಕ್ಕಿಂತ ಪ್ರತಿಯೊಬ್ಬರು ಜಗತ್ತನ್ನು ನೋಡುವ ರೀತಿಯೇ ಬೇರೆ. ಹಾಗಾದರೆ ಪ್ರತಿಯೊಬ್ಬರ ದೃಷ್ಟಿಯು ಬೇರೆ, ಜಗತ್ತೇ ಬೇರೆ. ಪ್ರತಿ ಮನುಷ್ಯನಿಗೆ ಅವರದೇ ಆದ ಜಗತ್ತಿದೆ ಅಲ್ಲವೇ.. ಹೌದು, ಇದು ಏಕೆ ಹೇಳುತ್ತಿದ್ದೇನೆ ಅಂದರೆ ನಾವು ನೋಡುವ ಜಗತ್ತೇ ಸತ್ಯ ಎಂಬುದು ನಾವು ನಂಬುತ್ತೇವೆ. ಪ್ರತಿಯೊಬ್ಬರೂ ಹಾಗೆಯೇ ಯೋಚಿಸುತ್ತಾರೆ. ಹಾಗಾದರೆ ಯಾವುದು ಸತ್ಯ, ಇಲ್ಲಿ ಅಥವಾ ಮನುಷ್ಯನು ನೋಡುವ ಜಗತ್ತೇ ಬೇರೆ…ನಿಜವಾಗಿ ಇರುವ ಜಗತ್ತೇ ಬೇರೆಯೇ?
ಜ್ಞಾನಿಗಳು ಜಗತ್ತು ಮಿಥ್ಯ ಎಂದು ಹೇಳಿದ್ದು ಇದಕ್ಕೆ ಇರಬಹುದು. ಆಗ ನನಗೆ ಅರ್ಥವಾಗುತ್ತಿರಲಿಲ್ಲ. ಈಗ ಸ್ವಲ್ಪಮಟ್ಟಿಗೆ ತಿಳುವಳಿಕೆ ಬಂದಿದೆ ಎಂದು ಅಂದುಕೊಳ್ಳುತ್ತೇನೆ ನಿಜವೋ ಗೊತ್ತಿಲ್ಲ. ಪ್ರತಿಯೊಬ್ಬರು ಅವರದ್ದೇ ದೃಷ್ಟಿಯಿಂದ ಜಗತ್ತನ್ನ ನೋಡಿದಾಗ ಅವರ ಅವರ ಅಭಿಪ್ರಾಯ, ಆಲೋಚನೆ, ಮಾತುಗಳು ವಿಭಿನ್ನವಾಗಿರುತ್ತದೆ. ಆದ್ದರಿಂದ ಯಾರೂ ಕೂಡ ಸಮಾನರಲ್ಲ. ಯಾರು ಕೂಡ ಸಮಾನರಲ್ಲ ಎಂದು ಹೇಳಿದಾಗ ಪ್ರತಿಯೊಬ್ಬರನ್ನು ನಾವು ನೋಡುವ ದೃಷ್ಟಿ ಬದಲಾಗಬೇಕು. ಪ್ರತಿಯೊಬ್ಬರಿಗೆ ಅವರ ಜಗತ್ತನ್ನು ನೋಡುವ ಸ್ವಾತಂತ್ರ್ಯ ನೀಡಬೇಕು. ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದರೆ ನಮ್ಮ ಸಂಬಂಧಗಳಲ್ಲಿ ನಾವು ಇತರರನ್ನು ನಮ್ಮ ಹಾಗೆ ಇರಬೇಕು ಎಂದು ಬಯಸುತ್ತೇವೆ. ಅದು ಸಾಧ್ಯವೇ ಇಲ್ಲ. ಅವರ ಸ್ವಾತಂತ್ರ್ಯ ಅವರಿಗೆ ನೀಡಿ ನಿಮ್ಮ ಸ್ವಾತಂತ್ರ್ಯ ನೀವು ಇಟ್ಟುಕೊಳ್ಳಿ. ಬೇರೆಯವರು ನಿಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಬಿಡಬೇಡಿ. ಅದೂ ಮುಖ್ಯ. ಬೇರೆಯವರು ಹೇಗಿದ್ದಾರೆ ಹಾಗೆ ಒಪ್ಪಿಕೊಳ್ಳಿ. ನಿಮ್ಮನ್ನು ಹಾಗೆ ಅವರು ಒಪ್ಪಿಕೊಳ್ಳಲು ತಿಳಿಹೇಳಿ.
-ಡಾ. ಹರ್ಷಾ ಕಾಮತ್