‘ಮಗು ನೀನು ಮುಂದೆ ದೊಡ್ಡವನಾಗಿ ಏನಾಗುತ್ತಿ?’ ಎಂದು ಹಿರಿಯರು ಕೇಳೋದು ಸರ್ವೇ ಸಾಮಾನ್ಯ. ಭವಿಷ್ಯದ ಬಗ್ಗೆ ಆಲೋಚನೆಯೂ ಕೂಡ ಮಾಡದ ಆ ಮುಗ್ಧ ಮಗು ತಾನು ಏನಾಗಬೇಕೆಂದು ಆ ಕ್ಷಣದಲ್ಲಿ ತೋಚದೆ ಉತ್ತರ ನೀಡುತ್ತದೆ. ತನ್ನ ಗುಂಗಿನಲ್ಲಿ ಈ ಕ್ಷಣದಲ್ಲಿ ಆಗುತ್ತಿರುವುದನ್ನು ಆನಂದಿಸುತ್ತಿದ್ದ ಆ ಮಗುವಿಗೆ ಬುದ್ಧಿವಂತರಾದ ನಾವು ಮಗುವಿನ ತಲೆಗೆ ಭವಿಷ್ಯದಲ್ಲಿ ತಾನೇನಾಗಬೇಕೆನ್ನುವ ಆಲೋಚನೆಯ ಬೀಜವನ್ನು ಬಿತ್ತುತ್ತೇವೆ. ಇದು ಎಷ್ಟು ಸರಿ ಎಂದು ನೀವೇ ಯೋಚಿಸಿ. ಚಿಕ್ಕ ಮಗು ತನ್ನ ಬಾಲ್ಯದ ಆಟದಲ್ಲಿ ಮಗ್ನವಾಗಿರುತ್ತ ಕುತೂಹಲದಿಂದ ಎಲ್ಲವನ್ನು ವೀಕ್ಷಿಸುತ್ತದೆ. ಅದು ಪ್ರತಿ ಕ್ಷಣವನ್ನು ಆಸ್ವಾದಿಸುತ್ತದೆ. ನೋಡಿ, ಹೇಳಿ, ಕೇಳಿ ಎಲ್ಲವನ್ನು ತಿಳಿಯುವ ತವಕ ಆ ಮಗುವಿಗೆ. ಅದರಷ್ಟಕ್ಕೆ ಸಂತೋಷವಾಗಿರಲು ಬಿಡಿ. ನಾವು ತಮಾಷೆಗೆ ಕೇಳಬಹುದು, ಆದರೆ ಪದೇ ಪದೇ ಕೇಳಿದಾಗ ಆ ಬಗ್ಗೆ ಯೋಚನೆ ಮಾಡಲು ಆ ಮಗು ಶುರು ಮಾಡಬಹುದು.
ಚಿಕ್ಕ ಮಕ್ಕಳು ತಾನು ನೋಡಿದ ಟೀಚರ್ ಆಗಬೇಕು ಎಂದು ಹೇಳುತ್ತದೆ. ಇನ್ನೊಂದು ದಿನ ಆಟವಾಡುವಾಗ ನಾನು ವಿಮಾನ ಓಡಿಸುತ್ತೇನೆ, ಪೈಲೆಟ್ ಆಗುತ್ತೇನೆ. ಕಾರ್ ಡ್ರೈವರ್ ಆಗುತ್ತೇನೆ ಎಂದು ಹೇಳುತ್ತದೆ. ಆಗ ನಾವು ‘ಅದು ಬೇಡ ಇದು ಮಾಡು’ ಎಂದು ಯಾವತ್ತೂ ಹೇಳಬಾರದು. ಏಕೆಂದರೆ ಹಾಗೆ ಹೇಳಿದರೆ ಮಗು ಇದು ಒಳ್ಳೆಯದಲ್ಲ ಇದು ಒಳ್ಳೆಯದು ಎಂದು ತಾರತಮ್ಯ ಮಾಡಲು ಶುರು ಮಾಡಬಹುದು. ನಮಗೆ ನಮ್ಮ ಸ್ಟೇಟಸ್ ಗೆ ಅದು ಸರಿಯಲ್ಲವೆಂದು ಅದರಿಂದ ಹಣ ಗಳಿಸಲು ಆಗುವುದಿಲ್ಲವೆಂದು ನಿಮ್ಮ ಅನಿಸಿಕೆಯನ್ನು ಅದಕ್ಕೆ ಹೇಳಬೇಡಿ. ಆ ಮುಗ್ಧ ಮನಸ್ಸು ಅದನ್ನು ನಂಬಿ ಬಿಡುತ್ತದೆ. ದೊಡ್ಡವರಾದ ಮೇಲೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನಮಗೆ ನಮ್ಮ ಸ್ಟೇಟಸ್ ಗೆ ಆ ಕೆಲಸ ಸರಿ ಅಲ್ಲ ಎಂದನಿಸಬಹುದು, ಆದರೆ ಮಗು ಎಲ್ಲರನ್ನು ಒಂದೇ ರೀತಿ ಗೌರವ ಕೊಡುತ್ತದೆ. ಅದರ ಮನಸ್ಸಿನಲ್ಲಿ ನಾವು ವಿಷ ತುಂಬಿದ ಹಾಗೆ ಆಗುತ್ತದೆ. ಮೊದಲು ನಮ್ಮ ಆಲೋಚನೆಗಳು ಬದಲಾಗಬೇಕು. ಮೇಲು, ಕೀಳು, ಜಾತಿ ಯಾವುದೇ ವೃತ್ತಿಯವರನ್ನು ಗೌರವಿಸಬೇಕು. ಯಾವ ಕೆಲಸವೂ ಕೀಳಲ್ಲ. ನಾವು ಶ್ರದ್ದೆಯಿಂದ ಮಾಡಿದ ಯಾವುದೇ ಕೆಲಸವಿರಲಿ ನಮಗೆ ಹಿತ ನೀಡಬೇಕು ಅಷ್ಟೆ. ನಮ್ಮ ಕೆಟ್ಟ ಆಲೋಚನೆಗಳನ್ನು ನಮ್ಮ ಮಕ್ಕಳಿಗೆ ಹಂಚುವುದು ಬೇಡ. ಒಳ್ಳೆಯ ಗುಣಗಳನ್ನು ಬೆಳೆಸಿ, ಪೋಷಿಸಿ ನಡೆದು ನಮ್ಮ ಮಕ್ಕಳು ಕೂಡ ಅದನ್ನು ಪಾಲಿಸುವಂತೆ ಮಾಡಿದರೆ ಸಾಕು. ಯಾವುದೇ ರೀತಿಯ ಒತ್ತಾಯ ಬೇಡ ನಾವು ಮಾಡಿದ್ದನ್ನು ಮಗು ನೋಡಿ ಕಲಿಯುತ್ತದೆ ಅನುಸರಿಸುತ್ತದೆ.
ನಮ್ಮ ಮಕ್ಕಳು ನಮ್ಮ ಹಾಗೆಯೇ ಇರಬೇಕು, ನಾವು ಹೇಳಿದ್ದೇ ಕೇಳಬೇಕು, ನಮ್ಮ ಆಲೋಚನೆಯ ಹಾಗೆ ಯೋಚಿಸಬೇಕು, ನಾವು ನಂಬಿದ, ನಾವು ಹಿಡಿದ ದಾರಿಯಲ್ಲಿ ನಡೆಯಬೇಕು ಎಂದು ನಾವು ಇಚ್ಛಿಸುತ್ತೇವೆ. ಜಸ್ಟ್ ಯೋಚಿಸಿ ನೋಡಿ, ನಮ್ಮ ತಂದೆ ತಾಯಿ ನಮಗೆ ಹೀಗೆ ಮಾಡಿದರೆ ಹೇಗೆ ಆಗುತ್ತಿತ್ತು ಎಂದು? ನಮಗೆ ಒತ್ತಡ ಬೀಳುತ್ತಿರಲಿಲ್ಲವೇ? ಅದೇ ರೀತಿ ಅಲ್ಲವೇ ನಮ್ಮ ಮಕ್ಕಳಿಗೆ? ಪ್ರತಿಯೊಬ್ಬರಿಗೆ ಅವರದ್ದೇ ಆದ ಆಲೋಚನೆಗಳು ಕನಸುಗಳು ಇರುತ್ತದೆ. ಮಕ್ಕಳ ಮನಸ್ಸಿಗೆ ಹಿತ ನೀಡುವ ಕೆಲಸಕ್ಕೆ ನಾವು ಬೆಂಬಲ ನೀಡೋಣ. ತಪ್ಪು ದಾರಿ ಹಿಡಿದರೆ ಅವರಿಗೆ ಸಮಾಧಾನದಿಂದ ತಿಳಿ ಹೇಳೋಣ, ಒತ್ತಡ ಹೇರಬೇಡಿ ಅಷ್ಟೇ. ಭವಿಷ್ಯದಲ್ಲಿ ನಮ್ಮ ಮಕ್ಕಳು ಏನೇ ಆಗಲಿ ಯಾವುದೇ ವೃತ್ತಿಯನ್ನು ಸ್ವೀಕರಿಸಲಿ ಮೊದಲು ಒಳ್ಳೆಯ ಮನುಷ್ಯನಾಗಲು ಕಲಿಯಲಿ. ಜೀವನದಲ್ಲಿ ಎಲ್ಲರನ್ನೂ ಗೌರವಿಸಲು ಕಲಿಯಬೇಕು. ನಮ್ಮ ಮನಸ್ಥಿತಿ ಬದಲಾಗಬೇಕು. ಪ್ರತಿ ವ್ಯಕ್ತಿಗೂ ಅವರವರ ಸ್ವಾತಂತ್ರ್ಯವನ್ನು ನೀಡಬೇಕು. ಒಳ್ಳೆಯ ಮನುಷ್ಯನಾಗಿ ಬೆಳೆಯಬೇಕು.
-ಡಾ. ಹರ್ಷಾ ಕಾಮತ್