ಒಬ್ಬ ವ್ಯಕ್ತಿಯನ್ನು ನೋಡಿದಾಗ ನಿಮಗೆ ಏನು ಆಲೋಚನೆಗಳು ಉದ್ಭವಿಸುತ್ತವೆ? ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸ್ವಲ್ಪ ಆಲೋಚನೆ ಮಾಡಿ ನೋಡಿ. ಇದರಿಂದ ನಿಮ್ಮ ಬಗ್ಗೆ ನೀವು ಬೇರೆ ವ್ಯಕ್ತಿಯನ್ನು ಹೇಗೆ ಗಮನಿಸುತ್ತೀರಿ ಎನ್ನುವುದರ ಬಗ್ಗೆ ಹಾಗೂ ನೀವು ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತಿರಿ ಎಂಬುದರ ಬಗ್ಗೆ ತಿಳಿಯುತ್ತದೆ. ಉದಾಹರಣೆಗೆ ಮಹಿಳೆ ನಿಮ್ಮ ಎದುರಿಗೆ ಬಂದರೆ ನೀವು ಅವಳನ್ನು ನೋಡಿ ಅವಳ ಅಂದ ಚಂದವನ್ನು ಗಮನಿಸುತ್ತೀರಾ ಅಥವಾ ಅವರ ಸ್ವಭಾವವನ್ನು ಗಮನಿಸುತ್ತೀರಾ ಅಥವಾ ಅವಳು ಉಟ್ಟ ಬಟ್ಟೆ ಯಾವ ರೀತಿ ಇದೆ ಎಂದು ನೋಡುತ್ತಿರಾ ಅಥವಾ ಅವಳು ಧರಿಸಿದ ಆಭರಣಗಳ ಮೇಲೆ ದೃಷ್ಟಿ ಹಾಯಿಸುತ್ತೀರಾ, ಅವಳ ಬಗ್ಗೆ ಅವರ ಕುಟುಂಬದವರ ಬಗ್ಗೆ ಅರಿಯಲು ಪ್ರಯತ್ನಿಸುತ್ತೀರಾ, ಅವಳು ಗ್ರಹಿಣೀಯೆ ಅಥವಾ ವರ್ಕಿಂಗ್ ವುಮೆನ್ ಎಂಬುದನ್ನು ಕೇಳುತ್ತೀರಾ? ನೋಡುವುದಕ್ಕೆ, ತಿಳಿಯುವುದಕ್ಕೆ ಹೋದರೆ ಅದಕ್ಕೆ ಕೊನೆಯೆಂಬುದೇ ಇಲ್ಲ. ನಮ್ಮ ಮನಸ್ಸು ಏನೆಲ್ಲಾ ಆಲೋಚನೆ ಮಾಡುತ್ತದೆ ಎಂಬುದರ ಅರಿವಾಗುತ್ತದೆ. ಮೊದಲಿಗೆ ಏನನ್ನು ಗಮನಿಸುತ್ತೀರಿ ಎಂದು ನೋಡಿ. ಅಂದ ಚಂದ ಕಾಣಿದರೆ ನೀವು ರೂಪಕ್ಕೆ ಅಧಿಕ ಮಹತ್ವ ನೀಡುತ್ತಿರಿ ಎಂದರ್ಥ. ಆಭರಣಗಳು ನಿಮ್ಮನ್ನು ಆಕರ್ಷಿಸುತ್ತದೆ ಅಂದರೆ ನಿಮಗೆ ಚಿನ್ನದ ಮೋಹ ಇದೆ ಎಂದರ್ಥ. ಕೆಲವರು ಕುತೂಹಲದಿಂದ ಕೂಡ ನೋಡಬಹುದು. ಆದರೆ ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಕುತೂಹಲವಿರುವುದಿಲ್ಲ ಅಲ್ಲವೇ?
ಗಂಡಸರಿಗೆ ಸಾಮಾನ್ಯವಾಗಿ ಮನೆ, ಕಾರು, ವೃತ್ತಿಯ ಬಗ್ಗೆ ಆಸಕ್ತಿ ಇರುತ್ತದೆ. ಹೆಂಗಸರಲ್ಲಿಯೂ ಕೂಡ ಇರಬಹುದು. ನಮ್ಮ ಆಸಕ್ತಿಯು ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಸಕ್ತಿವಿರುವುದು. ಅದೇ ನಮಗೆ ಎದುರಿಗೆ ತೋರುವುದು ಕೂಡ. ಉದಾಹರಣೆಗೆ ಚಿನ್ನದ ಆಭರಣಗಳಲ್ಲಿ ಆಸಕ್ತಿ ಇದ್ದ ಮಹಿಳೆ, ಎದುರಿನವಳ ಚಿನ್ನವನ್ನೆ ಗಮನಿಸುತ್ತಾಳೆ. ಅವಳ ಸ್ವಭಾವ ತಿಳಿಯುವುದರ ಬಗ್ಗೆ ಆಸಕ್ತಿ ಇರುವುದಿಲ್ಲ. ಇದನ್ನೆಲ್ಲಾ ಪ್ರತಿನಿತ್ಯ ಗಮನಿಸುತ್ತಾ ಹೋಗಿ. ಅಗತ್ಯ ಅನಿಸಿದರೆ ಬರೆದಿಟ್ಟುಕೊಳ್ಳಿ. ನಮ್ಮ ಸ್ವಭಾವವನ್ನು ಅರಿಯಲು ಇತರರ ಸ್ವಭಾವವನ್ನು, ಗುಣವನ್ನು ಅರಿಯಲು ಇದು ಸಹಾಯವಾಗುತ್ತದೆ.
ನಮಗೆ ಬೇಕಾದದ್ದು ದೇವರು ಕೊಟ್ಟೇ ಕೊಡುತ್ತಾನೆ, ಅದು ಜಗತ್ತಿನಲ್ಲಿ ಇದ್ದೇ ಇರುತ್ತದೆ. ಅದನ್ನು ಗಮನವಿಟ್ಟು ನೋಡಬೇಕು ಅಷ್ಟೇ. ನಮಗೆ ಅದರ ಬಗ್ಗೆ ಆಸಕ್ತಿ ಇದ್ದರೆ ಖಂಡಿತವಾಗಿಯೂ ಅದು ನಮಗೆ ಎದುರಿಗೆ ತೋರುತ್ತದೆ. ನಮ್ಮನ್ನು ತಿಳಿದಷ್ಟು ಬೇರೆಯವರನ್ನು ತಿಳಿಯಲು ಸುಲಭವಾಗುತ್ತದೆ. ಹೀಗೆ ನಮ್ಮನ್ನು ಅರಿಯಲು ಪ್ರಯತ್ನಿಸೋಣ. ನಮ್ಮ ಜೀವನವನ್ನು ಹಸನಗೊಳಿಸೋಣ.
-ಡಾ.ಹರ್ಷಾ ಕಾಮತ್