ಬದುಕಿನ ಪಯಣದಲ್ಲಿ ಮುಂದುವರಿಯುತ್ತಾ ಹೋದಂತೆ ನಮಗೆ ಅರಿವಾಗುವುದೇನೆಂದರೆ, ಈ ಜೀವನದಲ್ಲಿ ನಡೆಯುವುದೆಲ್ಲವೂ ನಮ್ಮ ಮನಸ್ಸಿನಿಂದ ಎಂದು. ನಮ್ಮ ಮನಸ್ಸಿಗೆ ಅಘಾದ ಶಕ್ತಿ ಇದೆ. ಈ ಶಕ್ತಿಯನ್ನು ಅರಿಯುವುದು ಮುಖ್ಯ. ಅದು ಎಡವಿದರೆ ನರಕಯಾತನೆ ಆಗುವುದಂತೂ ಖಚಿತ. ನಮ್ಮ ಆಲೋಚನೆಗಳಿಗೆ ಎಷ್ಟು ಶಕ್ತಿ ಇರುತ್ತದೆ ಎಂದರೆ ನಾವು ಅದರಿಂದ ಗೆಲ್ಲಬಹುದು ಸೋಲಲೂಬಹುದು. ಅದು ನಮ್ಮ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ, “ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸುತ್ತದೆ, ಆದ್ದರಿಂದ ನಿಮ್ಮ ಅನಿಸಿಕೆಗಳ ಬಗ್ಗೆ ಕಾಳಜಿ ವಹಿಸಿ”. ಮನಸ್ಸನ್ನು ಅರಿಯುವುದು ಸುಲಭದ ಮಾತಲ್ಲ. ನಮ್ಮ ಅನುಭವಗಳಿಂದ, ಅದರ ಬಗ್ಗೆ ಪುಸ್ತಕ ಓದುವುದರಿಂದ, ಇತರರ ಬೋಧನೆಗಳಿಂದ ಸ್ವಲ್ಪ ಮಟ್ಟಿಗೆ ಅರಿವು ಮೂಡಿಸಬಹುದು. ಆದರೆ ಮುಖ್ಯವಾಗಿ ನಮಗೆ ಮನಸ್ಸನ್ನು ಅರಿಯುವ ಕುತೂಹಲವಿರಬೇಕು.
ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ತಪಸ್ಸು ಮಾಡಿ ಗಳಿಸಿರುವ ಶಕ್ತಿ ಈ ಮನಸ್ಸಿನಿಂದಲೇ. ಜಗತ್ತಿನಲ್ಲಿ ಬೇರೆಲ್ಲೂ ಪಡೆಯದ ಅಪಾರ ಜ್ಞಾನವನ್ನು ಅವರೆಲ್ಲರೂ ಪಡೆದುಕೊಂಡಿದ್ದರು. ಇದೆಲ್ಲದಕ್ಕೂ ಕಾರಣ ನಮ್ಮ ಒಳ ಮನಸ್ಸು. ಅದರಲ್ಲಿ ಶಕ್ತಿಯ ಬಂಢಾರವಿದೆ. ಆ ಶಕ್ತಿಯನ್ನು ಹೊರ ತೆಗೆಯುವ ಪ್ರಯತ್ನ ನಮ್ಮದಾಗಬೇಕು. ಇದೆಲ್ಲವೂ ಕಷ್ಟವೆಂದು ಅನಿಸಿದರೆ, ಈ ಜನ್ಮದಲ್ಲಿ ಸ್ವಲ್ಪ ಮಟ್ಟಿಗೆ ಆದರೂ ನಮ್ಮ ಸಮಯವನ್ನು ಮನಸ್ಸನ್ನು ಅರಿಯಲು ಉಪಯೋಗಿಸೋಣ. ನಮ್ಮ ಭಾವನೆಗಳ ಅರಿವು, ಸಂಬಂಧಗಳಲ್ಲಿ ಆಗುವ ಏರುಪೇರು, ಇವೆಲ್ಲವೂ ನಮ್ಮ ಆಲೋಚನೆ, ನಮ್ಮ ನಂಬಿಕೆ, ನಾವು ಬೆಳೆದು ಬಂದ ರೀತಿ, ಸಾಮಾಜಿಕ ಪರಿಸರ, ನಾವು ಬೆರೆಯುವ ವ್ಯಕ್ತಿಗಳಿಂದ ಬಂದಿರುವಂಥಹದ್ದು. ಮನಸ್ಸಿನ ಸಮಸ್ಯೆಗಳಿಂದ ಅನೇಕ ರೋಗಗಳು ಬರುವ ಸಂಭವವಿರುತ್ತದೆ. ನಾವು ದೈಹಿಕವಾಗಿ ಆರೋಗ್ಯವಂತರಾಗಿ ಕಂಡರೂ, ಅನೇಕ ಮಾನಸಿಕ ತೊಂದರೆಗಳಿರುತ್ತವೆ. ನಮಗೆ ಅದರ ಅರಿವು ಇರುವುದಿಲ್ಲ ಅಷ್ಟೇ.
ನಮ್ಮ ಮನಸ್ಸನ್ನು ಅರಿತರೆ ಇತರರನ್ನು ಅರಿಯುವುದು ಸುಲಭವಾಗುತ್ತದೆ. ಉದಾಹರಣೆಗೆ- “ನಾನು ಇಷ್ಟು ಕಾಳಜಿ ಮಾಡಿದ್ರು ಅವರು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲವೆಂದು” ಹೆಂಡತಿ ತಿಳಿಯೋದು. ಇಲ್ಲಿ ನಾವು ಮಾಡಿದ್ದನ್ನು ನಮಗೆ ನೆನಪಿನಲ್ಲಿ ಇರುತ್ತದೆ. ಆದರೆ ಆ ವ್ಯಕ್ತಿ ನಮಗೆ ತೋರಿಸಿದ ಪ್ರೀತಿ ನೆನಪಿಗೆ ಬರುವುದಿಲ್ಲ. ನಾವು ಮಾಡಿದ್ದನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಂಡಿರುತ್ತೇವೆ. ಇತರರು ಮಾಡದೆ ಇರುವುದನ್ನು ಮನಸ್ಸಿಗೆ ತೆಗೆದುಕೊಂಡು ಸಂತಾಪಡುತ್ತೇವೆ. ಇಲ್ಲಿ ವಿಷಯವೇನೆಂದರೆ, ಆ ವ್ಯಕ್ತಿಯು ಕೂಡ ಅನೇಕ ರೀತಿಯ ಕಾಳಜಿ ತೋರಿಸಿರುತ್ತಾರೆ. ಆದರೆ ನಮಗೆ ಅದು ಮುಖ್ಯವಲ್ಲವಾದ್ದರಿಂದ ನಮಗೆ ಅದು ಕಾಣಿಸುವುದಿಲ್ಲ. ಗಿಫ್ಟ್ ಕೊಟ್ಟರೆ ಮಾತ್ರ ಗಂಡನಿಗೆ ನನ್ನ ಮೇಲೆ ಪ್ರೀತಿ ಎಂದು ನಂಬಿದ ಹೆಂಡತಿ. ಆದರೆ ಗಂಡನ ಪ್ರಕಾರ ಮನೆಯ ಕೆಲಸಗಳಲ್ಲಿ ಸಹಾಯ ಮಾಡೋದು ಪ್ರೀತಿ ಎಂದು ಅವನು ತಿಳಿದುಕೊಂಡಿರುತ್ತಾನೆ. ಇಲ್ಲಿ ಕಾಳಜಿಯ ವಿಷಯದಲ್ಲಿ ಎಷ್ಟು ಭಿನ್ನಾಭಿಪ್ರಾಯವಿದೆ ಅಲ್ಲವೇ? ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿ ತೋರಿಸಿರುತ್ತಾರೆ, ಆದರೆ ಭಿನ್ನ ರೀತಿಯಲ್ಲಿ. ಅದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ ಅಷ್ಟೇ. ಹೀಗೆ ಹಲವು ರೀತಿಯಲ್ಲಿ ನಮ್ಮ ಮನಸ್ಸನ್ನು ಅರಿಯುವುದು, ಮನಸ್ಸನ್ನು ಪಕ್ವ ಮಾಡುವುದು ಮುಖ್ಯ. ಇದು ಹಂತ ಹಂತವಾಗಿ ಬೆಳೆಯಬೇಕು, ಸಮಯ ನೀಡಬೇಕು.
-ಡಾ. ಹರ್ಷಾ ಕಾಮತ್