ಈ ವರ್ಷದ 4 ಸೂಪರ್ ಮೂನ್ ಗಳಲ್ಲಿ ಆಗಸ್ಟ್ 31 ರ ಸೂಪರ್ ಮೂನ್ ಅತ್ಯಂತ ಹೆಚ್ಚಿನ ಮಹತ್ವದ್ದು. ಈ ವರ್ಷದ ನಾಲ್ಕು ಸೂಪರ್ಮೂನ್ ಗಳು , ಜುಲೈ 3, ಆಗಸ್ಟ್ 1, ಆಗಸ್ಟ್31 ಹಾಗೂ ಸಪ್ಟಂಬರ್ 29. ಜುಲೈ 3ರಂದು ಚಂದ್ರ ಭೂಮಿಯಿಂದ 3,61800 ಕಿಮೀ, ಆಗಸ್ಟ್ 1 ರಂದು 3,57530 ಕಿಮೀ, ಆಗಸ್ಟ್ 31 ರಂದು 3,57 344 ಕಿಮೀ ಹಾಗೂ ಸೆಪ್ಟೆಂಬರ್ 29 ರಂದು 3,61552 ಕಿಮೀ. ಇವುಗಳಲ್ಲಿ ಶ್ರಾವಣದ ಈ ಹುಣ್ಣಿಮೆಯ ಚಂದ್ರನ ಸೂಪರ್ ಮೂನ್ ಹೆಚ್ಚಿನ ಪ್ರಭೆಯದು. ಕಾರಣ ಈ ನಾಲ್ಕರಲ್ಲಿ ಇದು ಭೂಮಿಗಿ ಹೆಚ್ಚು ಸಮೀಪ. ಹಾಗಾಗಿ ಈ ಹುಣ್ಣಿಮೆ ಚಂದಿರ ಸುಮಾರು 14 ಅಂಶ ದೊಡ್ಡದಾಗಿ ಕಾಣುತ್ತದೆ. ಅಂತೆಯೇ 25 ಅಂಶ ಮಾಮೂಲಿ ಹುಣ್ಣಿಮೆಗಿಂತ ಹೆಚ್ಚು ಪ್ರಭೆ.
ಈ ಸಂದರ್ಭದಲ್ಲಿ ಭಾರತದ ಚಂದ್ರಯಾನ 3 ಸಂಪೂರ್ಣ ಯಶಸ್ಸಿನಲ್ಲಿ ಮುಂದುವರಿಯುತ್ತಿದೆ. ರೋವರ್ ಚಂದ್ರನಲ್ಲಿಗೆ ಕಳುಹಿಸಿ , ವಿಕ್ರಮ್ ಲ್ಯಾಂಡರ್ ಇಳಿಸಿ ಪ್ರಜ್ಞಾನನ ಪುಟ್ಟ ಪುಟ್ಟ ಹೆಜ್ಜೆಗಳ ತಿರುಗಾಟ ಪ್ರಯೋಗಗಳ ಯಶಸ್ಸು ಕಾಣುತ್ತಿರುವ ಈ ಸಂತೋಷದ ಸಮಯದಲ್ಲಿ ಹುಣ್ಣಿಮೆ ಹೋಳಿಗೆ ಊಟದೊಂದಿಗೆ ಭಾರತೀಯರಿಗೆ ಸಂಭ್ರಮ. ಈ ಸೂಪರ್ಮೂನ್ ಬಂದಿದೆಯೋ ಎನ್ನುವಂತಿದೆ ಈ ಆಗಸ್ಟ್ 31ರ ಸೂಪರ್ ಮೂನ್.
ಇನ್ನೂ ಒಂದು ವಿಶೇಷ ತಿಂಗಳೊಂದರಲ್ಲಿ ಎರಡು ಹುಣ್ಣಿಮೆಗಳು, ಅದರಲ್ಲೂ ಇವೆರಡೂ ಸೂಪರ್ಮೂನ್. ಇವೆಲ್ಲವೂ ಭಾರತೀಯರು ಖುಷಿಪಡಲು ಪೂರಕವಾಗಿದೆ. ಚಂದ್ರನ ಅಧ್ಯಯನದೊಂದಿಗೆ ಸೂರ್ಯ ಅಧ್ಯಯನಕ್ಕಾಗಿ ಆದಿತ್ಯ ಎಲ್1 ಹಾರಿಸಿ ಸಾಹಸ ತೋರಲು ಅಣಿಯಾಗಿದೆ ಇಸ್ರೋ. ಹಾಗಾಗಿ ಸೂಪರ್ಮೂನಿನ ಬೆಳ್ಳಂಬೆಳೆದಿಂಗಳಲ್ಲಿ ಮಿಂದು ನಮ್ಮ ಭಾರತೀಯ ವಿಜ್ಞಾನಿಗಳ ಯಶೋಗಾಥೆಯಲ್ಲಿ ನಾವೆಲ್ಲಾ ಸಂಭ್ರಮ ಪಡೋಣ.
-ಡಾ. ಎ.ಪಿ. ಭಟ್ ಉಡುಪಿ.