Sunday, January 19, 2025
Sunday, January 19, 2025

ಕಾನನಗಳ ಜೋಳಿಗೆಯಲ್ಲಿ ಶ್ರೀ ಕ್ಷೇತ್ರ ಕೈಯಾರ್ಲ

ಕಾನನಗಳ ಜೋಳಿಗೆಯಲ್ಲಿ ಶ್ರೀ ಕ್ಷೇತ್ರ ಕೈಯಾರ್ಲ

Date:

ಕಾರ್ಕಳ ತಾಲೂಕಿನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೈಯಾರ್ಲ ಹಿಂದೆ ಕೈಯಂಗಿ ಮಠವೆಂದೇ ಪ್ರಸಿದ್ಧಿ ಪಡೆದಿತ್ತು. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಬೃಹತ್ ಶಿಲಾಯುಗದ 2 ಗುಹಾ ಸಮಾಧಿಗಳು ಪತ್ತೆಯಾಗಿವೆ. ಹಿಸ್ಟರಿಗೆ ಸಂಬಂಧಪಟ್ಟಂತೆ ಈ ಪ್ರದೇಶದಲ್ಲಿ 14 ನೇ ಶತಮಾನದ ನಾಗಶಿಲ್ಪವು ಪತ್ತೆಯಾಗಿದ್ದು, ಪ್ರಾಗೈತಿಹಾಸಿಕ ಕಾಲದಿಂದ ಈ ಪ್ರದೇಶದಲ್ಲಿ ಜನವಸತಿ ಇತ್ತೆಂದು ಹೇಳಲು ಸಾಕ್ಷಿಯನ್ನು ಒದಗಿಸುತ್ತದೆ.

ಕ್ಷೇತ್ರದ ಪೌರಾಣಿಕ ಹಿನ್ನಲೆ: ನಂದನವನ ರಾಜ್ಯದ ಅರಸ ನಂದರಾಜನಿಗೆ ಮಕ್ಕಳಿರಲಿಲ್ಲ, ಅವನ ಪತ್ನಿ ಸುನಂದೆ ದೇವಸ್ಥಾನಕ್ಕೆ ಹೋಗಿದ್ದಾಗ ಬಂಜೆಯೆಂಬ ಕಾರಣಕ್ಕೆ ಊರಿನವರಿಂದ ಅವಮಾನಿತಳಾದಳು, ದುಃಖಿತಳಾದ ಸುನಂದೆಯನ್ನು ನಂದರಾಜ ಸಮಾಧಾನಿಸಿ ರಾಜಗುರುವಾಗಿದ್ದ ಕೈಯೆಂಗಿ (ಕೈಯಾರ್ಲ) ಬನ್ನಾಯರನ್ನು ಅರಮನೆಗೆ ಕರೆಸಿ ಪರಿಹಾರ ಕೇಳಿದನು. ರಾಜಕುಟುಂಬದ ಹಿರಿಯರು ಗರುಡಯಾಗವನ್ನು ಪ್ರಾರಂಭಿಸಿ ಅಪೂರ್ಣಗೊಳಿಸಿದ್ದರಿಂದ ಹೀಗಾಗಿದೆ ಎಂದ ಬನ್ನಾಯರು ಇದಕ್ಕೆ ಪರಿಹಾರವಾಗಿ ನಂದರಾಜ ಹನ್ನೆರಡು ದಿನ ವೃತವನ್ನು ಕೈಗೊಂಡು, ನಂತರ ಗರುಡಯಾಗವನ್ನು ಪೂರ್ಣಗೊಳಿಸಿದರೆ ಸಂತಾನಪ್ರಾಪ್ತಿಯಾಗುವುದು ಎಂದರು. ಇದಕ್ಕೆ ಒಪ್ಪಿದ ನಂದರಾಜ ಗರುಡಯಾಗದ ಜವಾಬ್ದಾರಿಯನ್ನು ಬನ್ನಾಯರಿಗೆ ವಹಿಸಿ ವೃತಾಚರಣೆಗೆ ಕಾಡಿಗೆ ಹೋದನು. ಭಾಗೀರಥಿ ನದಿಯ ತಟದಲ್ಲಿದ್ದ ಕೊಂಡೋಜಿ ಎಂಬ ಮುನಿವರ್ಯರಿಗೆ ವಿಷ್ಣುಭಕ್ತ ನಂದರಾಜನ ವೃತವನ್ನು ಕೆಡಿಸುವಂತೆ ಶಿವನ ಪ್ರೇರಣೆಯಾಯಿತು. ಕೊಂಡೋಜಿ ಮುನಿಗಳ ಮಗಳು ಭಾಗೀರಥಿ ಮತ್ತು ಕೈಯೆಂಗಿ ಬನ್ನಾಯರ ಪತ್ನಿ ಈ ಸಮಯದಲ್ಲಿ ಕೈಯಂಗಿ ಮಠಕ್ಕೆ ಆಗಮಿಸಿದ ಕೊಂಡೋಜಿ ಮುನಿಗಳನ್ನು ಈ ಬನ್ನಾಯರು ನಂದರಾಜನ ಗರುಡಯಾಗವನ್ನು ನಡೆಸಿಕೊಡುವಂತೆ ಕೇಳಿಕೊಂಡರು. ಒಪ್ಪಿದ ಕೊಂಡೋಜಿ ಗರುಡಯಾಗ ನಡೆಸುವಾಗ ನಂದರಾಜನ ಹನ್ನೆರಡು ದಿನಗಳ ಕಠಿಣ ವೃತ ಭಂಗವಾಗಿರುವುದು ತಿಳಿದು ಕೋಪಗೊಂಡ ಕೊಂಡೋಜಿ ನಂದರಾಜನು ದೇಶಭ್ರಷ್ಟನಾಗುವಂತೆ ಮತ್ತು ಕೈಯಂಗಿ ಬನ್ನಾಯರು ಕ್ಷತ್ರಿಯ ಸ್ತ್ರೀಸಂಗವಾಗಿ ಮರಣಿಸುವ ಶಾಪ ನೀಡಿದರು. ಬನ್ನಾಯರ ಪತ್ನಿ ಭಾಗೀರಥಿಗೆ ನಂದನೆಂಬ ಪುತ್ರ ಜನಿಸಿದನು. ಆಕಸ್ಮಿಕವಾಗಿ ಭಾಗೀರಥಿಗೆ ಕಾಡಿನಲ್ಲಿ ಸಿಕ್ಕಿದ ಕ್ಷತ್ರಿಯ ಕುಲದ ಅನಾಥ ಕನ್ಯೆ ಲಕ್ಕಮ್ಮ ಅಥವಾ ವನಜ ಗಂಧಿನಿ ಕೈಯಾರ್ಲದಲ್ಲಿ ಆಶ್ರಯ ಪಡೆದಳು. ಭಾಗೀರಥಿಯ ಎರಡನೆಯ ಪುತ್ರ ಲಕ್ಷ್ಮೀಶ (ಲಕ್ಷ್ಮೀನಾರಾಯಣ ಮುನಿ)ನ ಜನನವಾದ 16 ನೆಯ ದಿನ ಭಾಗೀರಥಿ ಮರಣ ಹೊಂದಿದಳು. ನಂತರ ಬನ್ನಾಯರು ಕ್ಷತ್ರಿಯಕನ್ಯೆ ವನಜ ಗಂಧಿನಿಯನ್ನು ವಿವಾಹವಾದರು. ಕೊಂಡೋಜಿಯ ಶಾಪ ನಿಜವಾಯಿತು. ವನಜಗಂಧಿನಿಯ ಅವಳಿ ಮಕ್ಕಳು ಕಲಾವತಿ ಮತ್ತು ಸುಮತಿ, ಮೂರನೆಯ ಮಗಳು ಲೀಲಾವತಿ. ಬನ್ನಾಯರು ತನ್ನ ಎರಡನೆಯ ಮಗ ಲಕ್ಷ್ಮೀಶನನ್ನು ಮಠಾಧಿಪತಿಯಾಗಿ ಮಾಡಿ ಮರಣ ಹೊಂದಿದರು, ಪತ್ನಿ ವನಜ ಗಂಧಿನಿ ಸಹಗಮನ ಮಾಡಿದಳು. ಲಕ್ಷ್ಮೀಶ ಪಟ್ಟವನ್ನು ಅಣ್ಣ ನಂದನಿಗೆ ವಹಿಸಿ ಉಗ್ರ ತಪಸ್ಸಿಗೆ ಕಾಡಿಗೆ ಹೋದನು. ದೇವಿಯ ವರ ಪಡೆದು ಮರಳುವಾಗ ಭೃಗು ಮಹರ್ಷಿ “ಸ್ತ್ರೀಯಿಂದ ನಿನಗೆ ಮರಣವಾಗಲಿ” ಎಂಬ ಶಾಪ ಕೊಡುತ್ತಾನೆ. ಮಠಕ್ಕೆ ಮರಳಿದಾಗ ಅಣ್ಣ ನಂದರಾಜ ವಿಧಿವಶನಾಗುತ್ತಾನೆ. ತನ್ನ ತಂದೆಯ 2ನೇ ಪತ್ನಿ ಕ್ಷತ್ರಿಯ ಕುಲದ ವನಜ ಗಂಧಿನಿ ಮಕ್ಕಳಾದ ಕಲಾವತಿ, ಸುಮತಿ ಮತ್ತು ಲೀಲಾವತಿಯನ್ನು ತನ್ನನ್ನು ಪರಿಗ್ರಹಿಸುವಂತೆ ಆಗ್ರಹಿಸಿದನು. ಆಗ ನಿರಾಕರಿಸಿದ ಕಲಾವತಿ ಸುಮತಿಯರನ್ನು ಅಗ್ನಿಮಂತ್ರದಿಂದ ಸುಟ್ಟನು. ಲೀಲಾವತಿ ಒಪ್ಪಿದಂತೆ ನಟಿಸಿ ಐದು ವರ್ಷ ವೃತದ ಕಾಲದಲ್ಲಿ ಕಾಯುವಂತೆ ಹೇಳಿದಾಗ ಲಕ್ಷ್ಮೀಶ ಒಪ್ಪಿದನು. ಅದೇ ಸಮಯದಲ್ಲಿ ಶಿವಮೊಗ್ಗದಿಂದ ಬಂದ ಜಕ್ಕಣನೆಂಬ ಶಿಲ್ಪಿ ತನ್ನ ಮಠದಲ್ಲಿ ಬ್ರಹ್ಮಕಲಶಾಭಿಷೇಕ ನಡೆಸಿಕೊಡುವಂತೆ ಕೇಳಿಕೊಂಡಂತೆ ಲೀಲಾವತಿಯ ಎಚ್ಚರಿಕೆಯನ್ನು ಮನ್ನಿಸದೆ ಅಲ್ಲಿಗೆ ಹೋದನು. ಅಲ್ಲಿ ಸ್ತ್ರೀ ಸಂಗ ಮಾಡಿ ರೋಗ ಪೀಡಿತನಾಗಿ ಕೈಯಂಗಿ ಮಠಕ್ಕೆ ಮರಳಿದನು. ಅವನಿಗೆ ಲೀಲಾವತಿ ಕೊನೆಗಾಲದ ತುಳಸಿ ಗಂಗೋದಕ ನೀಡುವ ಮೊದಲು ಅವರಿಗೆ ತನ್ನ ಬ್ರಹ್ಮವಿದ್ಯೆಯನ್ನು ಧಾರೆಯೆರೆದು ಕೊಟ್ಟನು. ಏಕಾಂಗಿಯಾದ ಲೀಲಾವತಿಯ ಜೊತೆಗೆ ಶ್ರೀದೇವಿ ಮಹಾಕಾಳಿ ಚಾಮುಂಡೇಶ್ವರೀ ಬಂದು ಅಭಯ ನೀಡಿದಳು, ಮಠಕ್ಕೆ ದಾಳಿಯಿಟ್ಟ ಗಜಾಸುರ, ಬಂಟಾಸುರ, ಬಾಣಾಸುರರನ್ನು ರಕ್ತಹೀರಿ ಕೊಂದು ಲೀಲಾವತಿಗೆ ಮುಕ್ತಿಯನ್ನು ಅನುಗ್ರಹಿಸಿದಳು. ತಾನು ಮಹಾಕಾಳಿಯಾಗಿ ಕೈಯಾರ್ಲ ಮಠದಲ್ಲಿ ಸಾನ್ನಿಧ್ಯ ಹೊಂದಿದಳು. ಈಗಲೂ ಕೈಯಾರ್ಲ ದೇಗುಲದಲ್ಲಿ ಶ್ರೀದೇವಿ ಮಹಾಕಾಳಿ ಚಾಮುಂಡೇಶ್ವರಿಯ ಸಾನ್ನಿಧ್ಯದ ಜೊತೆಗೆ ಲಕ್ಷ್ಮೀನಾರಾಯಣ ಮುನಿ, ನಂದೀಶ ಮತ್ತು ಲೀಲಾವತಿಯರ ಸಾನ್ನಿಧ್ಯವೂ ಇರುವುದನ್ನು ನೋಡಬಹುದು.

ದೇವಾಲಯದ ವಾಸ್ತುಶಿಲ್ಪ: ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗರ್ಭಗೃಹ, ತೀರ್ಥಮಂಟಪವನ್ನು ಒಳಗೊಂಡಿದ್ದು ದೇವಾಲಯದ ಹೊರಭಾಗದಲ್ಲಿ ಪ್ರಾಕಾರ ಗೋಡೆಯನ್ನು ಹೊಂದಿದೆ. ಗರ್ಭಗುಡಿಯು ಶಿಲಾಮಯವಾಗಿದ್ದು ಗರ್ಭಗುಡಿಯಲ್ಲಿರುವ ದೇವಿಯ ಪಂಚಲೋಹದ ವಿಗ್ರಹವು ಚತುರ್ಭುಜಧಾರಿಯಾಗಿದ್ದು ತನ್ನ ಮುಂಭಾಗದ ಕೈಗಳು ಅಭಯ ಹಸ್ತ ಮತ್ತು ವರದ ಮುದ್ರೆಯಲ್ಲಿದ್ದರೆ ಹಿಂಭಾಗದ ಕೈಗಳಲ್ಲಿ ಶಂಖ-ಚಕ್ರವನ್ನು ಹಿಡಿದುಕೊಂಡಿದ್ದಾಳೆ. ದೇವಿಯ ನಂತರದಲ್ಲಿ ಸಿಂಹವಾಹಿನಿಯಾದ ಚಾಮುಂಡೇಶ್ವರಿಯ ಬೆಳ್ಳಿಯ ವಿಗ್ರಹವಿದ್ದು ತನ್ನ ಮುಂಭಾಗದ ಕೈಗಳಲ್ಲಿ ಅಭಯ ಹಸ್ತ ಮತ್ತು ತ್ರಿಶೂಲ ಹಿಡಿದಿರುವಂತೆ ಹಿಂಭಾಗದ ಕೈಗಳಲ್ಲಿ ಶಂಖ ಚಕ್ರವನ್ನು ನೋಡಬಹುದು.
ಗರ್ಭಗುಡಿಗೆ ಅಭಿಮುಖವಾಗಿ ತೀರ್ಥ ಮಂಟಪವಿದ್ದು ಇಲ್ಲಿ ಕಲ್ಲಿನ ಪೀಠದ ಮೇಲೆ ಕುಳಿತಿರುವ ದೇವಿಯ ವಾಹನವಾಗಿರುವ ಸಿಂಹದ ಮರದ ವಿಗ್ರಹವನ್ನು ಕಾಣಬಹುದು.

ಹಬ್ಬ-ಹರಿದಿನಗಳು: ದೇವಾಲಯದಲ್ಲಿ ನಿತ್ಯ ಪೂಜೆಯ ಜೊತೆಗೆ ಕ್ಷೇತ್ರದ ವಾರ್ಷಿಕ ಉತ್ಸವವು ಮೇ ತಿಂಗಳಲ್ಲಿ 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಶರನ್ನವರಾತ್ರಿಯ ಗಳಿಗೆಯಲ್ಲಿ ದೇವಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗುತ್ತದೆ. ಸೆಪ್ಟಂಬರ್ ತಿಂಗಳಲ್ಲಿ ಲಕ್ಷ್ಮೀನಾರಾಯಣ ಗುರುಗಳ ವಾರ್ಷಿಕ ಸಮರ್ಧನೆ ನಡೆಯುತ್ತದೆ. ದೇವಾಲಯದ ಬಲಭಾಗದಲ್ಲಿ ನಾಗಬನವಿದ್ದು ದೇವಾಲಯದ 100 ಮೀ ದೂರದಲ್ಲಿ ನಾಂಜದ ಪಂಜುರ್ಲಿಯ ಸಾನವಿದೆ. ಕಾನನಗಳ ಮಧ್ಯೆಯೂ ದೇವಸ್ಥಾನ ಮರೆಮಾಚಿದರೂ ತನ್ನ ಸಂಸ್ಕೃತಿ, ಇತಿಹಾಸವನ್ನು ಜಗತ್ತಿಗೆ ಪಸರಿಸಿದೆ ಎನ್ನುವಲ್ಲಿ ಮತ್ತೊಂದು ಮಾತಿಲ್ಲ.

-ದಿಶಾಂತ್ ದೇವಾಡಿಗ, ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!