ನಾವು ನಮ್ಮ ಹಾಗೂ ನಮ್ಮವರ ದೈಹಿಕ ಆರೋಗ್ಯದ ಬಗ್ಗೆ ಎಷ್ಟೊಂದು ಕಾಳಜಿ ತೋರಿಸ್ತೇವೆ, ಅಲ್ವಾ? ಸಮಯಕ್ಕೆ ಸರಿಯಾಗಿ ಊಟ, ವ್ಯಾಯಾಮ, ನಿದ್ರೆ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುತ್ತೇವೆ.
ಇವೆಲ್ಲವುದರ ನಡುವೆ ದಿನ ಬೆಳಗಾದರೆ ಕೆಲಸ, ದುಡಿಮೆ ಅಂಥ ನಮ್ಮನ್ನು ನಾವೇ ಮರೆತು ಬಿಡುತ್ತೇವೆ. ಬರಬರುತ್ತ ಮನುಷ್ಯ ಯಂತ್ರವಾಗುತ್ತ ಇದ್ದಾನೆ ಅಂತ ಹೇಳಿದ್ರೆ ತಪ್ಪಾಗಲಾರದು. ಜೀವನದ ಜಂಜಾಟದ ನಡುವೆ ಕಳೆದು ಹೋಗ್ತಾ ನಾವು ನಮ್ಮ ಹಾಗೂ ನಮ್ಮವರ ಮಾನಸಿಕ ಆರೋಗ್ಯದ ಬಗ್ಗೆ ಗಮನವಹಿಸೋದೆ ಇಲ್ಲ.
ನಮ್ಮ ನಡುವೆ ಎಷ್ಟೋ ಜನ ಮಾನಸಿಕವಾಗಿ ಕುಗ್ಗಿ ಹೋದವರು ಇರ್ತಾರೆ, ಗೊತ್ತೇ ಆಗಲ್ಲ. ಅಥವಾ ನಮ್ಮೊಳಗೇ ಎಷ್ಟೊಂದು ದುಗುಡ ದುಮ್ಮಾನಗಳನ್ನು ಬಚ್ಚಿಟ್ಟುಕೊಂಡು ಪ್ರತಿದಿನ ಕೊರಗುತ್ತ ಇರುತ್ತೇವೆ. ಇದಕ್ಕೆಲ ಪರಿಹಾರ ಏನು? ಮಾತು, ಹೌದು ಮಾತೇ ಪರಿಹಾರ.
ಮೇಲ್ನೋಟ್ಟಕ್ಕೆ ಖುಷಿಯಿಂದ ಇರೋ ನಟನೆ ಮಾಡುತ್ತಾರೆ ಕೆಲವರು. ಆದರೆ ಆ ನಗುವಿನ ಹಿಂದೆ ಹೇಳತೀರದ ನೋವು ಅಡಗಿರುತ್ತದೆ. ಏನಾದ್ರು ವಿಷಯ ನಮ್ಮನ್ನು ಬಹಳ ಕಾಡುತ್ತ ಇದ್ದಾಗ ಅದನ್ನು ಮನಸಿನ್ನಲ್ಲೇ ಇಟ್ಟುಕೊಂಡಾಗ ದುಃಖ ಇಮ್ಮಡಿಯಾಗುತ್ತದೆ.
ಹಾಗಾಗಿ ಆದಷ್ಟು ನಮ್ಮ ಆಪ್ತರ ಬಳಿ ಅದರ ಬಗ್ಗೆ ಹೇಳಿಕೊಂಡು, ಚರ್ಚೆ ಮಾಡಿ ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳೋದು ಉತ್ತಮ. ಅಥವಾ ನಮ್ಮವರ ವರ್ತನೆಗಳಲ್ಲಿ ತುಂಬಾ ಬದಲಾವಣೆ ಬಂದಾಗ, ಅವರ ಜೊತೆ ಏನಾಯ್ತು ಅಂತ ಕೇಳಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು.
ಕಷ್ಟಕ್ಕೆ ಪರಿಹಾರ ಸಿಗುತ್ತದೋ ಇಲ್ಲವೋ, ಅದು ಅನಂತರ ಆದರೆ ಮನಸ್ಸು ಹಗುರ ಆಗೋದಂತೂ ನಿಜ. ನಾವು ಹೆಚ್ಚೇನು ಮಾಡಬೇಕಿಲ್ಲ, ಆಗೋ ಇಗೋ ಒಮ್ಮೆ ನಮ್ಮವರನ್ನ ವಿಚಾರಿಸಿಕೊಳ್ಳಬೇಕು “ಹೇಗಿದ್ದೀರಿ, ಹೇಗಿದೆ ಜೀವನ, ಎಲ್ಲಾ ಚೆನ್ನಾಗಿದೆ ತಾನೇ” ಈ ಮಾತುಗಳು ಸಾಕು. ಇಷ್ಟನ್ನೂ ಕೇಳಲು ಆಗದೆ ಇರುವಷ್ಟು ನಿರತ ನಾವ್ಯಾರು ಇಲ್ಲ ಅಂದುಕೊಳ್ಳುತ್ತೇನೆ.
‘ಮಾತು ಬೆಳ್ಳಿ, ಮೌನ ಬಂಗಾರ’ ಅಂತ ಹೇಳ್ತಾರೆ, ಆದರೆ ಎಲ್ಲಾ ಸನ್ನಿವೇಶದಲ್ಲಿ ಮೌನವಾಗಿರೋದು ಸರಿಯಲ್ಲ. ಆ ನಿಶಭ್ಧತೆ ಮನಸ್ಸಿಗೆ ಬಹಳ ಘಾಸಿಯುಂಟುಮಾಡುತ್ತದೆ. ಹಾಗಾಗಿ ಈ ಕ್ಷಣದಿಂದಲೇ ನಾವು ನಮ್ಮ ಹಾಗೂ ನಮ್ಮವರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸೋಣ. ನಮ್ಮ ವಿಷಯಗಳನ್ನು ಹೇಳೋಣ, ಅವರ ವಿಚಾರಗಳನ್ನು ಕೇಳಿಸಿಕೊಳ್ಳೋಣ.
-ಭಾಗ್ಯಶ್ರೀ ವಾಸು