ಹೆಣ್ಣು ಈ ಭೂಮಿಗೆ ದೇವರ ಅನರ್ಘ್ಯ ಕೊಡುಗೆ. ಭೂಮಿ ಮತ್ತು ಹೆಣ್ಣನ್ನು ಸಮಾನವಾಗಿ ಕಾಣುತ್ತದೆ ನಮ್ಮ ಸಂಸ್ಕೃತಿ. ಏಕೆಂದರೆ ಇಬ್ಬರಿಗೂ ಸೃಷ್ಟಿಸುವ ಶಕ್ತಿ ಇದೆ. ಜಗತ್ತಿನ ಎಲ್ಲಾ ಜೀವರಾಶಿಗಳಿಗೆ ಜನ್ಮ ಕೋಡೊಳು ಹೆಣ್ಣು (ಪ್ರಕೃತಿ), ಜಗತ್ತಿನ ಅತಿರಥಮಹಾರಥರಿಗೆಲ್ಲಾ ಜನ್ಮ ಕೊಟ್ಟಿರೋಳು ಹೆಣ್ಣು. ಆದರೆ, ಈ ಸೃಷ್ಟಿಸುವ ಶಕ್ತಿಯೇ ಹೆಣ್ಣಿಗೂ ಭೂಮಿಗೂ ಅನನುಕೂಲವಾಗಿ ಪರಿಣಮಿಸಿರುವುದು ಇತಿಹಾಸಗಳುದ್ದಕ್ಕೂ ಕಾಣುತ್ತೇವೆ.
ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ , ಅಂದರೆ ಮಹಿಳೆಯರನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಸ್ತ್ರೀಯನ್ನು ಶಕ್ತಿ ಸ್ವರೂಪಿಣಿಯಾಗಿ ಆರಾಧಿಸಿದ ದೇಶ ನಮ್ಮದು. ಸ್ತ್ರೀಯನ್ನು ಕತೃಥ್ವ, ನೇತೃಥ್ವ, ತಾಯತ್ವ ಎಂಬ ಮೂರು ದೃಷ್ಟಿಯಿಂದ ನೋಡುತ್ತೇವೆ.
ಖ್ಯಾತ ವಾಕ್ಯವೊಂದಿದೆ. ನಾನು ಹುಟ್ಟಿದಾಗ ಒಬ್ಬ ಹೆಂಗಸು ನನ್ನ ಕೈ ಹಿಡಿದುಕೊಂಡಳು, ಅವಳೇ ತಾಯಿ. ನಾನು ಮಗುವಾಗಿ ಆಟವಾಡುತಿದ್ದಾಗ ಒಬ್ಬ ಹೆಂಗಸು ನನ್ನ ಜೋಪಾನ ಮಾಡಿ ನನ್ನ ಜತೆ ಆಟವಾಡುತಿದ್ದಳು, ಅವಳೇ ಅಕ್ಕ. ಪ್ರತಿಯೊಂದಕ್ಕೂ ತರಲೆ ಮಾಡುತ್ತಾ ಪೀಡಿಸಿದರೂ ಇಷ್ಟ ಪಡುವವಳೇ ತಂಗಿ. ನಾನು ಶಾಲೆಗೆ ಹೋಗುವಾಗ ಒಬ್ಬ ಹೆಂಗಸು ನನಗೆ ಪಾಠ ಹೇಳಿ ಕೊಡುತ್ತಿದ್ದಳು ಅವಳೇ ಶಿಕ್ಷಕಿ. ಸದಾ ಸಹಾಯ ಮಾಡುತ್ತಾ ಗಂಡನ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ, ಪ್ರೀತಿ ಮಾಡುತ್ತಾ, ಬಂದವಳು ಅವಳೇ ಹೆಂಡತಿ. ಅಪ್ಪನಿಗೆ ಕಷ್ಟ ಬಂದಾಗ ಕಣ್ಣೀರು ಹಾಕಿದವಳು ಅವಳೇ ಮಗಳು. ಕಟ್ಟ ಕಡೆಗೆ ಸತ್ತು ಚಟ್ಟವೇರಿದಾಗ ಮಲಗಲು ಜಾಗ ಕೊಟ್ಟ ಭೂಮಿಯೂ ಒಂದು ಹೆಣ್ಣು. ಹೀಗೆ ಸರ್ವ ಪಾತ್ರಗಳನ್ನು ನಿಭಾಯಿಸುವ ಆಧಾರಸ್ತಂಭ ಹೆಣ್ಣಾಗಿದ್ದಾಳೆ.
ಆದರೆ ಇಂದಿನ ಜಾಗತಿಕ ಜಗತ್ತಿನಲ್ಲಿ ಸ್ತ್ರೀ ಮೇಲೆ ನಡೆಯುತ್ತಿರುವ ಹತ್ತಾರು ರೀತಿಯ ಶೋಷಣೆಗಳಿಂದ ಇಂತಹ ಅಮೂಲ್ಯ ಸಂಪತ್ತನ್ನು ಅರ್ಥೈಸುವಲ್ಲಿ, ಗೌರವಿಸುವಲ್ಲಿ ನಾವು ಎಡವಿದ ಬಗ್ಗೆ ಕಳವಳವಿದೆ. ಬಣ್ಣ ಬಣ್ಣದ ಕನಸು ಕಟ್ಟಿದ ಹೆಣ್ಣಿಗೆ ಮಸಿ ಬಳಿಯುವವರೇ ಬಹಳ. ಹೆಣ್ಣಿನ ಮೇಲೆ ಪುರುಷ ವರ್ಗದ ಪೌರುಷ ಅಗಣಿತ. ವಿಶ್ವದಾದ್ಯಂತ ಹೆಣ್ಣು ಮಕ್ಕಳ ಮೇಲೆ ವಿವಿಧ ರೀತಿಯಲ್ಲಿ ದಾಳಿಗಳಾಗುತ್ತಿವೆ. ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿರುವ ಭಾರತದಲ್ಲೂ ಆಕೆ ಅಸುರಕ್ಷಿತ ಭಾವ ಎದುರಿಸುತ್ತಿದ್ದಾಳೆ.
2021ರಲ್ಲಿ 31,677 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯ ಮೇಲಿನ ಸಾಮೂಹಿಕ ಅತ್ಯಾಚಾರ, 2018 ರಲ್ಲಿ ನಡೆದ 8 ವರ್ಷದ ಬಾಲಕಿ ಆಸಿಫಾ ಮೇಲಿನ ಅತ್ಯಾಚಾರ, 2019ರಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿ ದಿಶಾ ಮೇಲಿನ ಅತ್ಯಾಚಾರ, ಸೌಜನ್ಯಾಳ ಮೇಲಿನ ಅತ್ಯಾಚಾರ, ಇದೇ ವರ್ಷದಲ್ಲಿ ನಡೆದ ಕೊಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೌಮಿತ ಮೇಲಿನ ಸಾಮೂಹಿಕ ಅತ್ಯಾಚಾರ, ಕಾರ್ಕಳದ ಯುವತಿಯ ಮೇಲಿನ ಅತ್ಯಾಚಾರ ಹೀಗೆ ಸಾಲು ಸಾಲು ಅತ್ಯಾಚಾರಗಳು ಭಾರತ ದೇಶದಲ್ಲಿ ನಡೆಯುತ್ತಿದ್ದರು ಕೂಡ ನಮ್ಮ ದೇಶದ ಕಾನೂನು ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸುವಲ್ಲಿ ಯಾಕೆ ಮೌನವಾಗಿದೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಕಾನೂನು ಕಟ್ಟಡಗಳಲ್ಲಿ ಸ್ತ್ರೀಪರವಾದ ವಿಚಾರಗಳಿವೆ, ಸಾಮಾಜಿಕವಾಗಿ ಮಹಿಳಾ ಆಯೋಗಗಳ ನೆರಳಿದೆ, ಇವೇನೇ ಇರಲಿ ಸ್ತ್ರೀಶೋಷಣೆ ಮುಕ್ತವಾಗಿಲ್ಲ ಎಂಬುದಂತೂ ಕಟುಸತ್ಯ.
ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಧರ್ಮವಿಲ್ಲವಾಗಿದೆ. ‘ಕಾಮಕ್ಕೆ ಕಣ್ಣಿಲ್ಲ’ ಎನ್ನುತ್ತಲೇ ಆಕೆಯ ಮೇಲೆ ಮೃಗಗಳಂತೆ ಎರಗುತ್ತಿದ್ದೇವೆ. ಅಸಹಾಯಕಳಾಗಿ ಬಳಿಗೆ ಬಂದ ಹೆಣ್ಣು ಗಂಡಿನ ಕಾಮಕ್ಕೆ ಸಮ್ಮತಿಯೆಂಬ ಭಾವನೆಯಲ್ಲಿ ಬದುಕುವ ಸಮೂಹ ನಮ್ಮದು. ಅದನ್ನು ತಡೆಯುವ ಸಾಮರ್ಥ್ಯವಿದ್ದರೂ ಮೌನಕ್ಕೆ ಜಾರಿರುವ ವ್ಯವಸ್ಥೆ ನಮ್ಮದು.
ಜನ್ಮಕೊಟ್ಟ ತಾಯಿಯೂ ಒಂದು ಹೆಣ್ಣೇ. ಹೆಣ್ಣಿಗೆ ಮಾನವೇ ಭೂಷಣ. ಹೆಣ್ಣನ್ನು ಗೌರವಿಸದ ಸಮಾಜ ಸಭ್ಯವೆನಿಸಿಕೊಳ್ಳದು. ಆಕೆಗೆ ಕೆಲವೊಂದು ಇತಿಮಿತಿಗಳಿವೆ. ಆದರೆ ಅವುಗಳೇ ಆಕೆಯ ಶೋಷಣೆಗೆ ಸಕಾರಣವಾಗದು. ಹೆಣ್ಣಿನ ತ್ಯಾಗ ಅದೆಷ್ಟೋ ಸಂಸಾರದ ಸಂತಸಕ್ಕೆ ಕಾರಣವಾಗಿವೆ. ತನ್ನೆಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮಾಡುವ ಅವಳ ಗುಣಕ್ಕೆ ಇರಬಹುದು ಕ್ಷಮಯಾಧರಿತ್ರಿ ಎಂದು ಸಂಬೋಧಿಸಿರುವುದು. ಮನುಕುಲದ ಮುನ್ನಡೆಯುವಿಕೆಗೆ ಪ್ರಕೃತಿ ಮತ್ತು ಹೆಣ್ಣು ಅನಿವಾರ್ಯ. ಹೆಣ್ಣಿನ ಸಹನಾಶೀಲತೆಯೇ ನಮಗೆ ಶ್ರೀರಕ್ಷೆ ಎಂಬುವುದನ್ನು ಅರಿತುಕೊಂಡು, ಆಕೆಗೆ ಗೌರವ ನೀಡಿದಾಗಲೇ ಪ್ರಕೃತಿ ನಮ್ಮನ್ನು ಕ್ಷಮಿಸಬಲ್ಲದು.
ಅಪ್ಸಾನಾ ಬಿ.ಎನ್.