Saturday, January 18, 2025
Saturday, January 18, 2025

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು

Date:

ಗೆಲ್ಲುವ ಪ್ರಕರಣಗಳ ಸಂಖ್ಯೆಯ ಆಧಾರದಲ್ಲಿ ವಕೀಲರ ಯಶಸ್ಸನ್ನು ಅಳೆಯಲಾಗುವುದಿಲ್ಲ. ಅವರುಗಳು ಸಮಾಜಕ್ಕೆ ನೀಡಿದ ಕೊಡುಗೆಯು ಮುಖ್ಯ. ಬಡವರು, ದಮನಿತರ ಪರವಾಗಿ ನ್ಯಾಯಕ್ಕಾಗಿ ಸ್ವಾರ್ಥವಿಲ್ಲದೇ ಹೋರಾಡಿದವನೇ ನಿಜವಾಗಿಯೂ ಯಶ್ವಸಿ ವಕೀಲ. ಈ ಮಾತುಗಳನ್ನು ಕರಿಕೋಟು ಹಾಕಿದ ಆರಂಭದ ದಿನಗಳಲ್ಲಿ ನನ್ನ ಗುರುಗಳು ನನಗೆ ಹೇಳುತ್ತಿದ್ದ ನೆನಪು.

ಅನೇಕರಿಗೆ ಇಂದಿಗೂ ನ್ಯಾಯವಾದಿ ಹಾಗು ವಕೀಲ ವೃತ್ತಿಯ ಬಗೆಗೆ ತಪ್ಪು ಕಲ್ಪನೆಗಳಿರುವುದು ನಗ್ನ ಸತ್ಯ. ಇವೆಲ್ಲದರ ಜೊತೆಗೆ ಕಾನೂನು ಕ್ಷೇತ್ರದ ಆಳ, ಅಗಲ, ಅವಕಾಶಗಳ ಬಗೆಗೆ ಸಾರ್ವಜನಿಕರಿಗೆ, ಯುವಪೀಳಿಗೆಯ ವಕೀಲರಿಗೆ, ವಕೀಲರಾಗಲು ಕನಸು ಕಾಣುತ್ತಿರುವ ಹೊಸ ಪ್ರತಿಭೆಗಳಿಗೆ ಒಂದಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸುವ ಪ್ರಯತ್ನ ನನ್ನದು…ಅರ್ಪಿಸಿಕೊಳ್ಳಿ…

ತಾನು ಮಾಡುವ ವೃತ್ತಿಯನ್ನು ಪ್ರೀತಿಸಿ, ಶ್ರದ್ದೆ, ಭಕ್ತಿಯಿಂದ ಪರಿಪಕ್ವತೆಯೊಂದಿಗೆ ದುಡಿದರೇ ವೃತ್ತಿಗೆ ನೀಡುವ ಗೌರವ. ಅಂತೆಯೇ ವೃತ್ತಿ ಧರ್ಮವನ್ನು ಯಥಾವತ್ ಪಾಲಿಸಬೇಕು. ನ್ಯಾಯವಾದಿಗಳು
ವೃತ್ತಿ ಧರ್ಮವನ್ನು ಪಾಲಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ತೋರುತ್ತಾರೆ. ಅನೇಕ ಸಂದರ್ಭಗಳಲ್ಲಿ ವಕೀಲರು ಮಾಡುವ ಸೇವೆಯೂ ಸಮಾಜದ ಕಣ್ಣಿಗೆ ಕಾಣುವುದಿಲ್ಲ. ಆದರೆ ಈ ದೇಶವನ್ನು ಕಟ್ಟಲು ಶ್ರಮಪಟ್ಟವರಲ್ಲಿ ಅನೇಕರು ಕಾನೂನು ಪದವಿ ಪಡೆದವರು ಎಂಬುದು ಉಲ್ಲೇಖಾರ್ಹ.

“ಜಗತ್ತಿನ ಎಲ್ಲಾ ಭಾಷೆಗಳನ್ನೂ ಮೀರಿದ ಸಂಗತಿಯನ್ನು ಅದು ಮಾತನಾಡುತ್ತದೆ. ಅದರ ಹೆಸರು ದುಡ್ಡು” ಎಂದು ಹಿರಿಯ ಸಾಹಿತಿಯೊಬ್ಬರು ಬರೆದಿದ್ದಾರೆ. ವಕೀಲರು ಕೇವಲ ದುಡ್ಡಿಗಾಗಿ ವೃತ್ತಿಯನ್ನು ನಡೆಸುತ್ತಾರೆ ಎಂಬುದು ಅನೇಕರ ಆರೋಪ. ವಾಸ್ತವದಲ್ಲಿ ಬದುಕಲು ದುಡ್ಡು ಬೇಕು ನಿಜ, ಆದರೆ ಹಣವೇ ಬದುಕಲ್ಲ. ನ್ಯಾಯವಾದಿಗಳಿಗೂ ಕುಟುಂಬ, ಬದ್ದತೆ ಇರುತ್ತದೆ. 99% ವಕೀಲರು ಮಾನವೀಯತೆಗೆ ಬೆಲೆಕೊಟ್ಟು ಜನರ ಭಾವನೆಗಳಿಗೆ ಸ್ಪಂದಿಸುವವರೇ ಆಗಿದ್ದಾರೆ.

ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಕಲಾಪ ಆರಂಭವಾದರೂ ವಕೀಲರಿಗೆ ಮಾತ್ರ ಪತ್ರಿ ನಿಮಿಷವೂ ಅಮೂಲ್ಯ. ತಡ ರಾತ್ರಿಯವರೆಗೆ ಓದಿ, ಬೆಳಗ್ಗೆ ಕಚೇರಿಯಲ್ಲಿ ಅಂದಿನ ಪ್ರಕರಣಕ್ಕೆ ಸಂಬಂಧಿಸಿದ ಕಕ್ಷಿಗಾರರೊಂದಿಗೆ ಮಾತನಾಡಿ ಅವರಿಗೆ ಮನೋ ಧೈರ್ಯವನ್ನು ನೀಡಬೇಕು. ಸಂಜೆ 5.30 ಕ್ಕೆ ನ್ಯಾಯಾಲಯದ ಕಲಾಪ ಮುಗಿಸಿ ಕಚೇರಿ ಆಗಮಿಸುತ್ತಿದ್ದಂತೆ ಕಚೇರಿಯಲ್ಲಿ ಕಾಯುತ್ತಿರುವ ಕಕ್ಷಿಗಾರರನ್ನು ಮಾತಾಡಿಸಬೇಕು. ನಂತರ ಮತ್ತೇ ಮರುದಿನದ ಪ್ರಕರಣಕ್ಕೆ ತಯಾರಿ ನಡೆಸಬೇಕು. ಎಷ್ಟೇ ಒತ್ತಡದಿಂದ ಇದ್ದರೂ ಅವರ ಕಾರ್ಯ ಮುಗಿದ ನಂತರ ಸಿಗುವ ತೃಪ್ತಿ, ಸಮಾಧಾನ ಬೇರೆ ಯಾವ ವೃತ್ತಿಯಲ್ಲಿಯೂ ಸಿಗಲಾರದು. ವಕೀಲರಾದವರು ಅನೇಕ ಸಂದರ್ಭಗಳಲ್ಲಿ ತನ್ನ ಕಕ್ಷಿಗಾರರಿಗೆ ತಂದೆ, ತಾಯಿ, ಸಹೋದರ, ಗೆಳೆಯ, ಮನೋ ವೈದ್ಯನಾಗಿಯೂ ಆತ್ಮಸ್ಥೈರ್ಯ ತುಂಬಿದ ಉದಾಹರಣೆಗಳು ಸಾವಿರ.

ಹಿಂದಿನ ಋಷಿಗಳೂ ಮಾನವರೆ ನಮ್ಮಂತೆ, ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ. ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ ಎಂದು ಕುವೆಂಪು ಅವರು ಬರೆದಿದ್ದಾರೆ. ಒಮ್ಮೆ ಕಾನೂನು ಪದವಿ ಪಡೆದರೇ ಸಾಕು. ಅವರಿಗೆ ಅವರೇ ಬಾಸ್. ಕೆಲವು ತಿಂಗಳು ಹಿರಿಯರ ಬಳಿ ಕೆಲಸ ಕಲಿತರೇ ಶೂನ್ಯ ಹೂಡಿಕೆಯೊಂದಿಕೆ ವಕೀಲ ವೃತ್ತಿಯನ್ನು ಆರಂಭಿಸಬಹುದು. ಯುವಪೀಳಿಗೆ ಕಾನೂನು ಪದವಿಯನ್ನು ಪಡೆದು, ಈ ಕ್ಷೇತ್ರದಲ್ಲಿನ ವಿವಿಧ ಸ್ತರಗಳ ಹುದ್ದೆಗಳನ್ನು ಅಲಂಕರಿಸಬೇಕು.

ವಾದ ಪ್ರತಿವಾದದ ಮಾತ್ರವಲ್ಲ.. ಕರಿಕೋಟುಧಾರಿಗಳಿಗೆ ವಿಫುಲ ಅವಕಾಶ

ಇಂದಿನ ಪೀಳಿಗೆಯ ವಕೀಲರಿಗೆ ವಿಫುಲವಾದ ಅವಕಾಶವಿದ್ದು, ವೈಯಕ್ತಿಕ ವಕಾಲತ್ತು ಮಾಡುವುದನ್ನು ಹೊರತು ಪಡಿಸಿಯೂ ಕಾನೂನು ಕ್ಷೇತ್ರದ ವ್ಯಾಪ್ತಿಯೂ ಚಾಚಿಕೊಂಡಿದೆ. ಕಾನೂನು ಸೇವಾ ಪ್ರಾಧಿಕಾರದಲ್ಲಿ ವಕೀಲರಾಗಿ, ಸರಕಾರಿ ಅಭಿಯೋಜಕರಾಗಿ, ನ್ಯಾಯಧೀಶರಾಗಿ ಸೇವೆ ಸಲ್ಲಿಸಬಹುದು. ಖಾಸಗಿ ಬ್ಯಾಂಕ್, ಸಂಘ, ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ ವೃತ್ತಿ ನಿರ್ವಹಿಸುವ ಅವಕಾಶಗಳು ಇವೆ. ಈ ಕ್ಷೇತ್ರದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ, ಶ್ರದ್ದೆ ನಿಷ್ಠೆಯಿಂದ ಕೆಲಸ ಮಾಡಿದ್ದಲ್ಲಿ ಎಲ್ಲವೂ ಸಾಧ್ಯ.

ಕಾನೂನು ಮಹಾವಿದ್ಯಾಲಯದಲ್ಲಿ ಗೋಲ್ಡ್ ಮೆಡಲ್ ಪಡೆದವರು ನ್ಯಾಯಾಲಯಗಳಲ್ಲಿ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಕಾಲೇಜ್ ನಲ್ಲಿ ಕಲಿಯುವ ಪಾಠಗಳು ಕೇವಲ ಪರೀಕ್ಷೆ ಬರೆದು ಪದವಿ ಪಡೆಯಲು ಮಾತ್ರ. ನ್ಯಾಯಾಲಯ ಎಂಬುದು ವಿಶ್ವವಿದ್ಯಾಲಯ. ಇಲ್ಲಿ ಪ್ರತಿನಿತ್ಯ ಹೊಸ ಅಲೆಗಳು ಏಳುತ್ತಿರುತ್ತವೆ. ಈ ಅಲೆಗಳಿಗೆ ಮೈಯೊಡ್ಡಿ ಈಜುತ್ತಾ, ಈಜುತ್ತಾ ಮುಂದೆ ಸಾಗಬೇಕು. ಕಲಿಯುವಿಕೆಗೆ ಕೊನೆ ಇರದ ಕ್ಷೇತ್ರದಲ್ಲಿ ಈಸಬೇಕು, ಇದ್ದು ಜಯಿಸಬೇಕು.

-ಆರೂರು ಸುಕೇಶ್ ಶೆಟ್ಟಿ
ನ್ಯಾಯವಾದಿ, ಉಡುಪಿ.

 

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...

ಗಾನ ಸಂಭ್ರಮ 2025 ಸಂಪನ್ನ

ಕುಂದಾಪುರ, ಜ.18: ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ಗುಜ್ಜಾಡಿಯ ಸುವರ್ಣ...
error: Content is protected !!