ಐತಿಹಾಸಿಕ ಸಾರಂಗಧರನ ಚರಿತ್ರೆ ಅಥವಾ ಬ್ರಹ್ಮಣ್ಯತೀರ್ಥರ ಮಹತ್ವ ಅಥವಾ ಅಬ್ಬೂರಪ್ಪನ ಹಿನ್ನೆಲೆ ಸಾರುವ ಕುರುಹುಗಳಿಲ್ಲ ಎಂದು ಕೊರಗುವಾಗ 3 ಶಾಸನ ಕಲ್ಲುಗಳು ಕಣ್ಣಿಗೆ ಸಿಕ್ಕಿ ಅಬ್ಬೂರಿನ ಸಾಹಿತ್ಯ ಚರಿತ್ರೆಯನ್ನು ಬರಿದಿವೆ ಎಂದೆನಿಸಿತ್ತು..
ಅಬ್ಬೂರಪ್ಪನ ಬೈಲು ಎಂದು ಕರೆಯಲ್ಪಡುವ ದೇವಸ್ಥಾನದ ಪೂರ್ವಾಭಿಮುಖವಾಗಿ ಅಬ್ಬೂರು ದೊಡ್ಡಿ ಗ್ರಾಮದ ಕೆಂಚೇಗೌಡರ ಮಗ ಚಿಕ್ಕಲಿಂಗಣ್ಣ ಅವರ ಜಮೀನಿನಲ್ಲಿ ಸಿಕ್ಕ ಅಪರೂಪದ ಐತಿಹಾಸಿಕ ಶಾಸನಕಲ್ಲು ಇಂದು ಪೂಜನೀಯ ಸ್ಥಾನದಲ್ಲಿ ಇರುವುದನ್ನ ಕಂಡು ತುಂಬಾ ಖುಷಿಯಾಯಿತು. ಇದು ಸುಮಾರು ನಾಲ್ಕೈದು ಅಡಿ ಉದ್ದವಿದ್ದು ಮೂರೂವರೆ ಅಡಿ ಅಗಲವಿದ್ದು ಇದರ ಮೇಲೆ ಡಮರುಗ, ತ್ರಿಶೂಲ, ಚಕ್ರ ಹಾಗೂ ಅಕ್ಷರಗಳಲ್ಲಿ ಕೆತ್ತನೆಯನ್ನು ಉಲ್ಲೇಖಿಸಲಾಗಿದೆ.
ಅದೇ ರೀತಿ ಶಿವಲಿಂಗಯ್ಯರ ಮಗ ರವಿ ಕುಮಾರ್ ಅವರ ಜಮೀನಿನಲ್ಲಿ ಮತ್ತು ಬಸವೇಗೌಡರ ಮಗ ಶಿವಣ್ಣ ಅವರ ಜಮೀನುನಲ್ಲೂ ಕೂಡ ನಾಲ್ಕೈದು ಅಡಿ ಎತ್ತರದ ಶಾಸನ ಕಲ್ಲುಗಳಿದ್ದು, ಅಬ್ಬೂರು ಗುಡ್ಡದ ತಪ್ಪಲಿನ ಒoದು ಬಂಡೆಯಲ್ಲಿ ಪುರಾತನ ಕಾಲದ ಒಳ್ಕಲ್ಲನ್ನು ಕೂಡ ನೋಡಬಹುದು. ಪವಿತ್ರವಾದ ‘ಅಬ್ಬೂರಪ್ಪನ ಬಯಲು ರಂಗಮಂದಿರ’ ಇತ್ತು ಎಂಬುದನ್ನು ಮಲ್ಲಿಕಟ್ಟೆಯ ಸಮೀಪದಲ್ಲೇ ಇರುವ ಅಬ್ಬೂರು ದೊಡ್ಡಿ ಗ್ರಾಮದ ಅಂಕಪ್ಪರ ರಾಜಣ್ಣ ಅವರ ಜಮೀನಿನಲ್ಲಿ ಕುರುಹುವನ್ನು ನೋಡಬಹುದು.
ಅಬ್ಬೂರು ದೊಡ್ಡಿ ಗ್ರಾಮದ ಇತಿಹಾಸಗರ್ಭದಲ್ಲಿ ಹುದುಗಿ ಹೋಗಿರುವ ಗ್ರಾಮದ ಸೀನಯ್ಯನ ತೋಪು ಎಂದೇ ಖ್ಯಾತಿ ವುಳ್ಳ 7 ಎಕರೆ ಜಾಗದ ಅಂಕಣದಲ್ಲಿ 1 ಕಲ್ಯಾಣಿ ಇತ್ತು ಆ ಕಲ್ಯಾಣಿಯನ್ನ ಶುಚಿಗೊಳಿಸಲು ಗ್ರಾಮಸ್ಥರು ಮುಂದಾದಾಗ ಪುರಾತನ ಕಾಲದ 2 ವಿಗ್ರಹ ಕಂಬಗಳು ಸಿಕ್ಕಿ ಅವುಗಳನ್ನ ಇಂದೂ ಕೂಡ ಪೂಜನೀಯವಾಗಿ ಗ್ರಾಮದ ಕುಲದವರು ನೋಡಿಕೊಳ್ಳುತ್ತಿದ್ದಾರೆ, ಇಲ್ಲಿ ಶಿವನ ಆಲಯವಿತ್ತು ಎಂಬುದನ್ನ ಗ್ರಾಮದ ಹಿರಿಯರು ಈಗಲೂ ಹೇಳುತ್ತಾರೆ.
ಸಾರಂಗಧಾರ ಈ ಕಲ್ಯಾಣಿಗೆ ಬಂದು ಹೋಗಿರಬಹುದು, ಈ ಜಾಗದಲ್ಲಿ ಶಿವನ ಆಲಯ ಇತ್ತೇನೋ ಎಂಬ ಸಂಶಯ ಹಿರಿಯರಲ್ಲಿ, ಕೇಳುಗರಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಿವೆ. ಅದೇನೇ ಇರಲಿ, ಗ್ರಾಮಸ್ಥರು ಇಂತಹ ಅಪರೂಪದ ಕುರುಹುಗಳನ್ನ ಕಾಪಾಡಿಕೊಂಡು ಪೂಜನೀಯ ಸ್ಥಾನದಲ್ಲಿ ಪೂಜಿಸಿಕೊಂಡು ಬರುತ್ತಿರುವುದು ಗ್ರಾಮಕ್ಕೆ ಶ್ರೇಯಸ್ಸು ಮತ್ತು ಒಳಿತು ಎನ್ನುತ್ತಾ, ಈ ಲೇಖನದ ವಿಚಾರವಾಗಿ ಸಂಶೋಧಕರು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ಇವತ್ತಿನ ಯುವಪೀಳಿಗೆಗೆ ಮಾರ್ಗದರ್ಶನ ನೀಡಬೇಕು.
-ಅಬ್ಬೂರು ಶ್ರೀನಿವಾಸ್