ಕಾಪು ತಾಲೂಕಿನ ಶಿರ್ವ ಗ್ರಾಮವು ಜಿಲ್ಲಾ ಕೇಂದ್ರವಾದ ಉಡುಪಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಗ್ರಾಮವು ಹೊಂದಿರಬೇಕಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಶಿರ್ವ ಗ್ರಾಮವು ತನ್ನದೇ ಆದ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಪಟ್ಟಂತೆ ಶಿರ್ವದ ಮಾಣಿಬೆಟ್ಟು ಪ್ರದೇಶದಲ್ಲಿ ನೂತನ ಶಿಲಾಯುಗದ ಕಲ್ಲಿನ ಕೊಡಲಿ ಪತ್ತೆಯಾಗಿದ್ದು, ಪ್ರಾಚೀನ ಕಾಲದಲ್ಲಿ ಈ ಪ್ರದೇಶವು ಜನವಸತಿ ನೆಲೆಯಾಗಿತ್ತು ಎಂದು ಹೇಳಬಹುದು. ಶಿರ್ವದಲ್ಲಿ ಅನೇಕ ದೇವಾಲಯಗಳಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ;
ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಈ ದೇವಾಲಯವು ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ದಂತಕಥೆಯ ಪ್ರಕಾರ ನಡಿಬೆಟ್ಟು ಅರಸರ ಕನಸಿನಲ್ಲಿ ದೇವರು ಬಂದು ಇಲ್ಲಿ ಒಂದು ದೇವಾಲಯವನ್ನು ಕಟ್ಟಿಸಬೇಕೆಂದು ಹೇಳಿದರಂತೆ, ಆಗ ನಡಿಬೆಟ್ಟಿನ ಅರಸರು ಭಾರ್ಗವ ಋಷಿಗಳ ಹತ್ತಿರ ಕೇಳಿಕೊಂಡಾಗ, ಅವರ ನೇತೃತ್ವದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ 14 ನೇ ಶತಮಾನಕ್ಕೆ ಸಂಬಂಧಿಸಿದ ತುಳು ಶಾಸನವನ್ನು ನೋಡಬಹುದಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟ ವಿಷ್ಣುವಿನ ವಿಗ್ರಹವಿದ್ದು, ದೇವಾಲಯದ ಪ್ರವೇಶ ದ್ವಾರದಲ್ಲಿ ವಿಷ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ದೇವಾಲಯದ ಒಳಗಿನ ಕಂಬಗಳಲ್ಲಿ ವಿವಿಧ ರೀತಿಯ ಕೆತ್ತನೆಗಳನ್ನು ಹಾಗೂ ಮೇಲ್ಛಾವಣಿಯಲ್ಲಿಯೂ ಸಹ ಕೆತ್ತನೆಗಳನ್ನು ಕಾಣಬಹುದು. ದೇವಾಲಯದ ಒಳಭಾಗದಲ್ಲಿ ಒಂದು ಹುತ್ತವಿದ್ದು, ದೇವಾಲಯದಲ್ಲಿ ಏನಾದರು ಮೈಲಿಗೆಯಾದರೆ ಹಾವು ಬಂದು ಎಚ್ಚರಿಸುತ್ತದೆ ಎಂಬುದು ಇಲ್ಲಿನ ನಂಬಿಕೆ. ಪ್ರಸ್ತುತ ಈ ದೇವಾಲಯದ ಆಡಳಿತವು ನಡಿಬೆಟ್ಟು ಅರಸು ಮನೆತನಕ್ಕೆ ಸೇರಿದ್ದಾಗಿದೆ.
ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನ: ಶಿರ್ವ ಗ್ರಾಮದಿಂದ 3-4 ಕಿ.ಮೀ. ದೂರದಲ್ಲಿನ ಪಿಲಾರ್ಖಾನದಲ್ಲಿರುವ ಈ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂದು ಹೇಳುತ್ತಾರೆ. ದಂತಕಥೆಯ ಪ್ರಕಾರ ಭಾರ್ಗವ ಋಷಿಗಳು ಇಲ್ಲಿ ಮಹಾಲಿಂಗೇಶ್ವರ ದೇವಾಲಯವನ್ನು ನಿರ್ಮಿಸಿದರು ಎಂಬ ಪ್ರತೀತಿ. ಶಿಲಾಮಯವಾಗಿರುವ ಈ ದೇವಾಲಯದಲ್ಲಿ ಕಲ್ಲಿನ ದೀಪ ಮತ್ತು ನಂದಿಯ ವಿಗ್ರಹವಿದೆ. ಈ ದೇವಾಲಯದಲ್ಲಿ ತೆರೆದ ವಸಂತ ಮಂಟಪವಿದ್ದು, ಹಾಗೆಯೇ ಮರದಿಂದ ಮಾಡಲ್ಪಟ್ಟ ರಥವಿದೆ ಹಾಗೂ ಕಲ್ಕುಡ ದೈವದ ಸಾನಿಧ್ಯವನ್ನು ಕೂಡ ನೋಡಬಹುದು.
ಶಿರ್ವ ಮಾಣಿಬೆಟ್ಟು: ಶಿರ್ವ ಪಂಚಾಯಿತಿ ವ್ಯಾಪ್ತಿಗೆ ಸೇರುವ ಮಾಣಿಬೆಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದ್ದು, ಇಲ್ಲಿನ ಪಡುಮಠ ಸ್ಥಳದಲ್ಲಿ 14-15 ನೇ ಶತಮಾನಕ್ಕೆ ಸೇರಿದ ದೇವಾಲಯದ ತಳಪಾಯ, ಪುಷ್ಕರಣೆ ಹಾಗೂ ಈ ದೇವಾಲಯಕ್ಕೆ ಸೇರಿದ ಒಂದು ಅಪೂರ್ಣ ಶಾಸನವಿದೆ. ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಶಿರ್ವದ ನ್ಯಾರ್ಮದಲ್ಲಿ ಜಾರಂದಾಯ ದೈವಸ್ಥಾನವಿದ್ದು, ಈ ದೈವವು ಪಂಜುರ್ಲಿ, ಜುಮಾಧಿ, ಕೊಡಮಂದಾಯ ಮುಂತಾದ ಕೆಲವು ‘ರಾಜನ್’ ದೈವಗಳ ಪಟ್ಟಿಗೆ ಸೇರುತ್ತದೆ. ಈ ದೈವದ ಜೊತೆಗೆ ಬಾಯಿ ಬರದ ಬಂಟ ದೈವದ ಆರಾಧನೆಯನ್ನು ಮಾಡುತ್ತಾರೆ.
ಪ್ರಾಚೀನ ಐತಿಹ್ಯ ಮತ್ತು ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಉಳಿಸಿ ಬೆಳೆಸಿಕೊಂಡಿರುವ ಶಿರ್ವ ಗ್ರಾಮವು ಸರ್ವಧರ್ಮೀಯರಿರುವ ನೆಲೆಯಾಗಿದ್ದು, ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಪ್ರದೇಶವಾಗಿದೆ.
ಸಂಗ್ರಹ- ವನಿತಾ, ದ್ವಿತೀಯ ಬಿ.ಎ. ವಿದ್ಯಾರ್ಥಿನಿ, ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ