Saturday, January 18, 2025
Saturday, January 18, 2025

ವೃದ್ಧಾಶ್ರಮ ನಮಗೆ ಬೇಕೆ?

ವೃದ್ಧಾಶ್ರಮ ನಮಗೆ ಬೇಕೆ?

Date:

ಈ ಪ್ರಪಂಚದಲ್ಲಿಯೇ ಅದ್ಭುತ ಬುದ್ಧಿಶಕ್ತಿ ಹೊಂದಿರುವ ಏಕೈಕ ಜೀವಿ ಮಾನವ. ಉಳಿದ ಎಲ್ಲ ಪ್ರಾಣಿಗಳಿಗಿಂತ ನಿಧಾನವಾಗಿ ಮೇಲೇಳುವ ಈತನ ಮನೋಪ್ರವೃತ್ತಿಗಳು ಒಂದು ದೃಷ್ಟಿಯಲ್ಲಿ ವಿಚಿತ್ರವೇ ಸರಿ. ತಾನು ಬಯಸಿದ್ದು, ಬೇಡಿದ್ದು ಪಡೆಯುವ ಹಠ ತೊಟ್ಟಿದ್ದು ನನ್ನದಾಗಬೇಕೆಂದು. ಸಾಧಿಸುವ ಛಲ ಸಮಗಟ್ಟಲು ಬೇರಾರಿಂದಲೂ ಸಾಧ್ಯವಿಲ್ಲ. ಮನುಷ್ಯನ ಜೀವನದಲ್ಲಿ ನಾಲ್ಕು ಹಂತಗಳು ಬಾಲ್ಯ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ. ಈ ಜೀವನ ಪದ್ಧತಿಯನ್ನು ಅನುಸರಿಸಬೇಕೆಂಬ ಚಿಂತನೆ ಬಹಳ ಹಳೆಯದು. ಇಂದಿನ ಜೀವನಶೈಲಿಯಲ್ಲಿ ವೃದ್ಯಾಪ್ಯ ಎಂಬುವುದು ಒಂದು ಶಾಪ! ‌ವಿಚಿತ್ರವೆಂದರೆ ತನ್ನ ಮಕ್ಕಳನ್ನು, ಹೆತ್ತು, ಹೊತ್ತು, ಬೆಳೆಸಿ ಪೋಷಿಸಿ ಲಾಲಿಸಿದ ತಂದೆ-ತಾಯಿಗಳು ಇಂದು ಬೀದಿ ಪಾಲಾಗುತ್ತಿರುವುದು ಕಟು ಸತ್ಯ. ತನ್ನ ಮುದ್ದಿನ ಮಕ್ಕಳಿಗೆ ಬೇಡದ ಹೊರೆಯಾಗಿ ಒಳಗಿದ್ದು ಹೊರಗಿನವನಾಗಿ ಅಥವಾ ಮನೆ-ಮನದಿಂದ ದೂರವಾಗಿ ಬಾಳುವ ದುಸ್ಥಿತಿ ಯಾರಿಗೂ ಬರಬಾರದು. ಇಂದಿನ ಸಮಾಜದಲ್ಲಿ ಕಂಡುಬರುವುದು ಕಾಲದ ಮಹಿಮೆ ಎಂದರೆ ಅತಿಶಯೋಕ್ತಿಯಲ್ಲ. ಇದರ ಬಗ್ಗೆ ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದಿರುವ ಮಂದಿ ಚಿಂತಿಸಬೇಕಾದದ್ದು ತೀರಾ ಅಗತ್ಯ.

ಯೌವ್ವನದಲ್ಲಿ ಅಧಿಕಾರ, ಧನ-ಕನಕಾದಿಗಳು ನೆರೆಕರೆಯವರು, ನೆಂಟರಿಷ್ಟರು ಬಂಧು-ಬಾಂಧವರು ಪತಿ, ಪತ್ನಿ ,ಮಕ್ಕಳು ಎಲ್ಲರೂ ನಮ್ಮನ್ನು ಓಲೈಸುವವರು ಎಂದರೆ ತಪ್ಪಲ್ಲ. ಆದರೆ ಮುಂದೊಂದು ದಿನ ನಮ್ಮಲ್ಲಿ ಹರಿಯುವ ಬಿಸಿ ನೆತ್ತರು ತಣಿಯುತಿದ್ದಂತೆ ನಿಧಾನವಾಗಿ ನಮ್ಮ ಸುತ್ತಮುತ್ತಲಿನಿಂದ ಬರುವ ಪ್ರತಿಕ್ರಿಯೆಗಳು ನಮ್ಮನ್ನು ದೈಹಿಕವಾಗಿ ಮಾನಸಿಕವಾಗಿ ಮುಪ್ಪಿನೆಡೆಗೆ ಸಾಗಿಸುವ ಸಂಗತಿ ಅನಿವಾರ್ಯವಾಗಿ ನಾವು ಒಪ್ಪಿಕೊಳ್ಳಬೇಕು.                                              

ಒಂದೊಮ್ಮೆ ಕೂಡು ಕುಟುಂಬ ಎಂದರೆ ಅವಿಭಕ್ತ ಕುಟುಂಬವಾಗಿದ್ದ ನಮ್ಮ ಮನೆತನಗಳು ಇಂದು ಒಡೆದ ಕನ್ನಡಿಯಾಗಿದೆ. ಆಧುನಿಕತೆ ಕುಟುಂಬ ವಿಭಜನೆಯಾಗಿ ವಿಭಕ್ತ ಕುಟುಂಬ ವ್ಯವಸ್ಥೆ ಕಾರಣ ಮುಂದೊಂದು ದಿನ ಮನೆಯಲ್ಲಿ ಒಬ್ಬಂಟಿಯಾಗಿ  ಇರಬೇಕಾಗಬಹುದು. ಮೈಕ್ರೋ ಕುಟುಂಬಕ್ಕೆ ಹೊಸ ಅರ್ಥ ಬರುವುದು ಖಂಡಿತ‌. ಇದಕ್ಕೆ ಬೇರಾರು ಕಾರಣರಲ್ಲ ಇದಕ್ಕೆ ನಾವೇ ಹೊಣೆಗಾರರು. ಎಷ್ಟು ವಿಚಿತ್ರ ಸಂಬಂಧಗಳು dad ,mom, uncle, aunt ಎಂದು ತನ್ನ ಸಂಬಂಧಿಕರನ್ನು ಕೆಲಸದವರನ್ನು ಏಕ ಪದದಲ್ಲಿ ಕರೆದುಕೊಳ್ಳುವ ನಮ್ಮ ಕುಟುಂಬ ಜೀವನ ವಿಷಮ ಸ್ಥಿತಿಯನ್ನು ತಲುಪಿದೆ. ಅಳಿವು ಉಳಿವಿನ ವ್ಯವಸ್ಥೆ ಇಂದಿನ ಯುವ ಜನಾಂಗದ ಕೈಯಲ್ಲಿ ಇದೆ ಎಂದರೆ ಆಶ್ಚರ್ಯವಲ್ಲ. ‌ ಪ್ರಪಂಚದ ನಾಗರಿಕತೆಗಳಲ್ಲಿ ಉಚ್ಚ ಸ್ಥಿತಿಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಂಡವರು ನಾವು.

ಆದರೆ ಕಾಲದ ಕೈವಶವಾದ ನಾವು ಏನು ಮಾಡಬಲ್ಲೆವೆಂಬುದರ ಬಗ್ಗೆ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಕ್ಷಣ ನಮಗೆ ಬರಲೇಬಾರದು. ಅದಕ್ಕಾಗಿ ಒಂದಿಷ್ಟು ನಮ್ಮ ಹಿಂದು ಮುಂದು ಪರಾಮರ್ಶಿಸಬೇಕು. ಕೂಡುಕುಟುಂಬಗಳಿಗೆ ಕೊಡಲಿ ಏಟಿನ ಪಾಶ್ಚಾತ್ಯ ಸಂಸ್ಕೃತಿ, ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆ ಔದ್ಯೋಗಿಕ ಮತ್ತು ಆರ್ಥಿಕ ಪ್ರಗತಿಗಳು ಸಂಸಾರಿಕ ಸುಖದ ಕಲ್ಪನೆಯಲ್ಲಿ ಇಡೀ ವ್ಯವಸ್ಥೆಯನ್ನೇ ನುಂಗಿಹಾಕಿದೆ. ಭಾವನಾತ್ಮಕವಾಗಿ ಯುವ ಜನಾಂಗದವರು ಬೇರೆಯಾಗುತ್ತಿದ್ದಾರೆ ಎಂದರೆ ತಪ್ಪಿಲ್ಲ. ಕೌಟುಂಬಿಕ ವಿಚಾರಧಾರೆಗಳಾದ ಸ್ವಾವಲಂಬನೆಗೆ ಉದ್ಯೋಗ ಬೇಟೆ, ಉನ್ನತ ಶಿಕ್ಷಣ ಹಾಗೂ ಮೇಲ್ ಸ್ತರದ ಜೀವನ ಮಟ್ಟ ನಮ್ಮ ಬದುಕಿನ ಹೊಸ ಅಧ್ಯಾಯ ತೆರೆದಿದೆ. ಆದರೆ ಅದರ ಅಡಿಪಾಯವಾದ   ನಮ್ಮ ಹಿರಿಯರ ಭಾವನೆ ನೋವು-ನಲಿವು, ಅನಿಸಿಕೆ, ಬೇಡಿಕೆ, ಬಳಲಿಕೆಗಳ ಬಗ್ಗೆ ತಾಳ್ಮೆಯಿಂದ ಕೇಳಿಸಿಕೊಳ್ಳಲು ನಮಗೆ ಸಮಯವೆಲ್ಲಿದೆ? ಈ ಹೊಂದಾಣಿಕೆ ಶಿಥಿಲಗೊಂಡು ನಮ್ಮ ಸಮಾಜದ ವಯೋವೃದ್ಧರನ್ನು ಹಳೇ ಪೀಠೋಪಕರಣಗಳ ಸಾಲಿಗೆ ತಳ್ಳಿದೆ ಎಂಬುದು ಸತ್ಯ.

ಜನರೇಷನ್ ಗ್ಯಾಪ್, ಅಂತಸ್ತು, ಪ್ರತಿಷ್ಠೆ, ಜೀವನಶೈಲಿ, ಸಾಮಾನ್ಯ ಜ್ಞಾನ ಎಂದು ಕರೆಯಲ್ಪಡುವ ಸಣ್ಣ ಪುಟ್ಟ ಕಾರಣಗಳು ಮನೆಗಳನ್ನು ಕೆಡಿಸುತ್ತದೆ. ತಂದೆ-ತಾಯಿಗಳ ಜೊತೆ ಕೂಡಿ ಆಡುತ್ತಿದ್ದ ಮಕ್ಕಳು ಅಜ್ಜ-ಅಜ್ಜಿಯರ ಮಡಿಲಲ್ಲಿ ನಿದ್ರಿಸುತ್ತಿದ್ದ ಮೊಮ್ಮಕ್ಕಳು ಇಂದು ಬೆಳಗ್ಗಿನಿಂದ ರಾತ್ರಿ ತನಕ ಎಜುಕೇಶನ್, ಟಿವಿ, ಮೊಬೈಲ್, ಫೇಸ್ಬುಕ್ ಮೆಸೇಜ್, ವಾಟ್ಸಾಪ್ ಇಂಟರ್ನೆಟ್ ಗಳಲ್ಲಿ ಕರಗಿ ಹೋಗುತ್ತಾರೆ. ತಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ.

ನಾವು ಇವುಗಳ ದಾಸರಾಗುತ್ತಿದ್ದೇವೆ. ಎಳವೆಯಲ್ಲಿ ನಮ್ಮ ಲಾಲನೆ-ಪಾಲನೆ ಸ್ನಾನಾ, ಶೌಚಾದಿಗಳನ್ನು ನಡೆಸಿ ನಮ್ಮನ್ನು ಉದ್ಧರಿಸಿದ ಹಿರಿಯ ಚೇತನಗಳ ಅರ್ಧಗಂಟೆ ಮಾತನಾಡುವ ಸಮಯ ನಮ್ಮಲ್ಲಿಲ್ಲ. ಸದಾ ಟೆನ್ಶನ್ ಕಿರಿಯರಾದ ನಾವು ಹಿರಿಯರ ಜೊತೆ ನಗುಮುಖದಿಂದ ಮಾತನಾಡಲು ಹಿಂಜರಿಯುತ್ತೇವೆ. ಯಾಕೆ ಹೀಗೆ? ಇದರ ಪ್ರಭಾವ ಯಾರ ಮೇಲಾದೀತು. ತನ್ನ ಮನದ ಚಿಂತೆ, ನೋವು, ಖುಷಿಗಳನ್ನು ಹೇಳಿಕೊಳ್ಳಲಾಗದೆ ನಮ್ಮ ಹಿರಿಯರು ಸಂಕಟಪಡುತ್ತಿದ್ದಾರೆ. ವಯಸ್ಸಾದ ಕಾಲದಲ್ಲಿ ದೈಹಿಕ ಅನಾರೋಗ್ಯ ಕಾಡುತ್ತಿರುವ ಸಂಕ್ರಮಣ ಕಾಲದಲ್ಲಿ ಅಪ್ರಯೋಜಕರು ಎಂಬ ಹಣೆಪಟ್ಟಿಯೂಂದಿಗೆ ದೂರವಿಡುವ ಮಕ್ಕಳಿಗೆ ಮುಂದೊಂದು ದಿನ ತಾವು ವಯೋವೃದ್ಧರಾಗಿ ಬದುಕಿನಲ್ಲಿ ತಾವು ನಡೆದುಬಂದ ರೀತಿ ತಮಗಾಗುತ್ತಿರುವ  ಅನುಭವಗಳ ಸತ್ಯ ಅರಿವಾಗಲು ಬಹಳ ಸಮಯ  ಬೇಕಾಗಲಾರದು.

ಹಿರಿಯರ ಸೇವೆಯ ಭಾಗ್ಯ ಎಲ್ಲರಿಗೆ ದಕ್ಕದು. ಅವು ನಮ್ಮ ಮಕ್ಕಳಿಗೆ ದಾರಿದೀಪ ನಮ್ಮ ಹಿರಿಯರ ಜೊತೆಯ ಪ್ರತಿ ವರ್ತನೆ ನಮ್ಮ ಮಕ್ಕಳಿಂದ ಪುನರಾವರ್ತನೆಗೊಳ್ಳುತ್ತದೆ ಎಂಬದಂತೂ ಸತ್ಯ. ನಾವು ಹಿರಿಯರೊಂದಿಗೆ ನಡೆದುಕೊಳ್ಳುವ ಸಕರಾತ್ಮಕ ಮತ್ತು ನಕಾರಾತ್ಮಕ ವರ್ತನೆಗಳು ನಮ್ಮ ಮುಂದಿನ ಬದುಕಿನಲ್ಲಿ ಪರಿಣಾಮ ಬೀರಬಹುದೆಂಬ ಭಯದಿಂದಾದರೂ ನಾವು ಹಿರಿಯರನ್ನು ಪ್ರೀತಿಸೋಣ. 

ಹಿರಿಯ ಜೀವಗಳ ಬದುಕಿನ ಹಂತಗಳ ಬಗ್ಗೆ ನಾವು ಸ್ವಲ್ಪ ತಿಳಿದುಕೊಂಡರೆ ಒಳ್ಳೆಯದು. 70 ರಿಂದ 80ರ ವಯೋಮಾನ ಅತಿ ತೀವ್ರ ಪೂರ್ಣ ಪರಾವಲಂಬಿಗಳು. ಹಾಸಿಗೆ ಹಿಡಿದ ಸ್ಥಿತಿ ಇವರು ತಮ್ಮ ನಿತ್ಯ ಕರ್ಮಗಳಿಂದ ಆಹಾರ ಸೇವನೆಗಳ ತನಕ ಅವಲಂಬಿತರು. ಇವರ ವರ್ಣನೆಗಳು ಹಾಗೂ ವಯೋಮಾನಕ್ಕೆ ತಕ್ಕಂತೆ ಇರದೆ ಬಾಲಿಶವಾಗಿರಬಹುದು. 80ರಿಂದ ಮುಂದೆ ಅಥವಾ ಆಕಸ್ಮಿಕ ಘಟನೆಗಳಿಂದ ಇವರು ಇಂತಹ ತೀವ್ರ ಮಾನಸಿಕ ಆಘಾತ ಹಾಗೂ ದೈಹಿಕ ದುಸ್ಥಿತಿ ತಲುಪಿದ್ದ ಇದರ ಹಿಂದೆ ಯಾವುದೇ ಪೂರ್ವಾಗ್ರಹಗಳಿಲ್ಲವೆಂದೇ ತಿಳಿಯಬೇಕು. ಇವರ ಜೊತೆ ವಿಶೇಷವಾಗಿ ಪುಟ್ಟ ಮಕ್ಕಳ ಜೊತೆ ವರ್ತಿಸುವಂತೆ ನಾವು ವ್ಯವಹರಿಸಿ ನಗುಮುಖದಿಂದ ಅವರ ಸೇವೆಯಲ್ಲಿ ತೊಡಗಬೇಕು.

ಕನಿಷ್ಠ ನಮ್ಮ ಹೆತ್ತವರನ್ನು ಬದುಕಿರುವಾಗ ಚೆನ್ನಾಗಿ ನೋಡಿಕೊಳ್ಳೋಣ, ಸತ್ತಮೇಲೆ ಸಾವಿರ ಮಂದಿಗೆ ಊಟ ಹಾಕಿ ಉಪಚಾರ ಮಾಡಿ ಭೇಷ್ ಅನ್ನಿಸಿಕೊಳ್ಳುದಕ್ಕಿಂತ ಬದುಕಿರುವಾಗ ಅವರೊಡನೆ ನಗುನಗುತಾ ಬಾಳೋಣ. ಅದರಿಂದ ನಮ್ಮ ಮುಂದಿನ ಪೀಳಿಗೆಯವರು ಚೆನ್ನಾಗಿ ಬದುಕಲು ಬೇಕಾದ ಆಶೀರ್ವಾದ ಪಡೆಯೋಣ. ತಾವು ಹೆತ್ತ ಮಕ್ಕಳನ್ನು ಬಾಲ್ಯದಲ್ಲಿ ಅಂಗನವಾಡಿ ಶಾಲೆಗೆ ಕಳುಹಿಸುವಾಗ ಮಗು ಅಪ್ಪ ಅಮ್ಮ ಯಾವಾಗ ಕರೆದುಕೊಂಡು ಹೋಗುವಿರಿ ಎಂಬ ಮುಗ್ಧ ಮಾತಿಗೆ ಸಂಜೆ  ಎನ್ನುವ ಹೆತ್ತವರು, ಕರುಳ ಕುಡಿಗಳ ಒತ್ತಡದಿಂದ ತಾವೇ ಕಟ್ಟಿದ ಮನೆಯಿಂದ ಹೊರ ಹೋಗಲೇಬೇಕಾದ ಪರಿಸ್ಥಿತಿ  ಬಂದು ವೃದ್ಧಾಶ್ರಮ ಸೇರುವ ಹೆತ್ತವರು ಹೊತ್ತಿಗೆ ಕೇಳುವ ಪ್ರಶ್ನೆ ಯಾವಾಗ ಮತ್ತೆ ಮನೆಗೆ ಕರೆದುಕೊಂಡು ಹೋಗುವಿರಿ? ಎಂಬುದಕ್ಕೆ ಅವರ ಉತ್ತರಾಧಿಕಾರಿಗಳು ಉತ್ತರವನ್ನು ನೀಡಿದೆ ಮೌನವಾಗಿ ಬಿಡುತ್ತಾರೆ. ಇಂಥವರಿಗೆ ಛೀಮಾರಿ ಹಾಕಲು ಪದಗಳೇ ಇಲ್ಲ. ಮಾನವೀಯತೆ ಎಲ್ಲಿದೆ ಎಂಬ ಕಹಿಸತ್ಯ ನಮ್ಮನ್ನು ಪದೇಪದೇ ಕಾಡುತ್ತಿದೆ ಅಲ್ಲವೇ? ಈಗ ನಮಗೆ “ವೃದ್ಧಾಶ್ರಮ ನಮಗೇಕೆ ಬೇಕು ಎಂಬ ಚಿಂತನೆಯನ್ನು ತಮ್ಮ ಚಿತ್ತಕ್ಕೆ ರವಾನಿಸಿ ನನ್ನ ಲೇಖನವನ್ನು ಸಂಪನ್ನಗೋಳಿಸುತ್ತೇನೆ.

-ಷಣ್ಮುಖ ಅತ್ರಿ ಎಲ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಗತ್ಯ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು, ಜ.17: ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ...

ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ- ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ತುರ್ತು ಸಭೆ

ಮಂಗಳೂರು, ಜ.17: ಕೋಟೆಕಾರ್ ಉಳ್ಳಾಲದ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ...

ಸಾಲಿಗ್ರಾಮ: ಯುವ ವೇದಿಕೆ 8ನೇ ವಾರ್ಷಿಕೋತ್ಸವ

ಕೋಟ, ಜ.17: ಯುವ ವೇದಿಕೆಯ ಸಮಾಜಮುಖಿ ಕಾರ್ಯಗಳು ಅತ್ಯಂತ ಪ್ರಶಂಸನೀಯ ಎಂದು...

ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ ಚೇರ್ ಸೌಲಭ್ಯ: ಅರ್ಜಿ ಆಹ್ವಾನ

ಉಡುಪಿ, ಜ.17: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...
error: Content is protected !!