ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ ಈಗಾಗಲೇ 65 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸಿದೆ. ಮಹಾ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಬೆಳಗಿನ ಜಾವ 2 ಗಂಟೆಯಿಂದಲೇ ಹಲವಾರು ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಬುಧವಾರ ಸಂಜೆ 4 ಗಂಟೆಗೆ ಭಕ್ತರ ಸಂಖ್ಯೆ 1.32 ಕೋಟಿಗೂ ಹೆಚ್ಚು ದಾಖಲಾಗಿದ್ದು, ಒಟ್ಟಾರೆ ಅಂಕಿಅಂಶಗಳು ಈಗಾಗಲೇ 65 ಕೋಟಿಯನ್ನು ದಾಟಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
3 ಲಕ್ಷ ಕೋಟಿ ಆದಾಯ: 45 ದಿನಗಳ ಈ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶ ಸರ್ಕಾರ 7,500 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಮಹಾಕುಂಭದಿಂದ ಉತ್ತರ ಪ್ರದೇಶದ ಆರ್ಥಿಕತೆಯು 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಬೆಳೆಯಲು ಸಹಾಯ ಮಾಡಲಿದೆ ಎಂದು ಸಮಾಜವಾದಿ ಪಕ್ಷದ ಶಾಸಕಿ ರಾಗಿಣಿ ಸೋಂಕರ್ ಅವರ ಪ್ರಶ್ನೆಗೆ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.