ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ ವಿಕಾಸವಾಗುತ್ತದೆ. ಇವತ್ತು ಎಲ್ಲಾ ಲೌಕಿಕ ಶಿಕ್ಷಣಗಳೂ ಸರ್ಟಿಫಿಕೇಟ್ ನ ಆಕರ್ಷಣೆಯಲ್ಲಿ ನಿಂತಿವೆ.
ಇಂಥಹ ಹಂತದಲ್ಲಿ ನಮ್ಮ ಸಂಶೋಧನ ಪ್ರತಿಷ್ಠಾನದಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಲ್ಲಿ ಹೊಸ ಹೆಜ್ಜೆಯನ್ನು ಇಡಲಾಯಿತು. ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಹಾಗೂ ದಾಸಸಾಹಿತ್ಯ ಡಿಪ್ಲೊಮಾ ಕೋರ್ಸ್ ಗಳನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು. ಒಂದು ವರ್ಷದ ಅವಧಿಯ ಈ ಕೋರ್ಸ್ ಗಳ ಶಿಕ್ಷಣವನ್ನು ಆನ್ಲೈನ್ ಮೂಲಕ ವ್ಯವಸ್ಥೆ ಮಾಡಲಾಯಿತು. ಇದರಿಂದ ಅನೇಕರಿಗೆ ಉಪಯೋಗವಾಯಿತು. ಇದಕ್ಕೆ ಪ್ರೋತ್ಸಾಹ ಹಾಗೂ ಮಾನ್ಯತೆಯನ್ನು ನೀಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳನ್ನು ಅಭಿನಂದಿಸುತ್ತೇವೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಮತ್ತು ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಂಸ್ಥಾಪಕರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ತಿಳಿಸಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದಿಂದ ಕಳೆದ ವರ್ಷ ನಡೆದ ಡಿಪ್ಲೊಮಾ ಕೋರ್ಸ್ ಗಳ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ಸುಮಾರು 27 ಜನರಿಗೆ ಪ್ರಮಾಣಪತ್ರವನ್ನು ನೀಡಿ ಸನ್ಮಾನಿಸಿದರು.
ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹಿಸಿದರು. ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಂಚಾಲಕರಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದ ಡಾ. ಬಿ.ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.