ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ ಅನುಸರಿಸುತ್ತಾರೆ. ಹಲವರು ಬಾರ್‌ಗೆ ಹೋಗುತ್ತಾರೆ. ಅದರಿಂದ ಹಣ ವ್ಯರ್ಥವಾಗುತ್ತದೆಯೇ ಹೊರತು ಬೇರೇನೂ ಸಿಗದು. ಆದರೆ, ನಾಟಕಗಳ ವೀಕ್ಷಣೆಯಿಂದ, ಅಲ್ಲಿನ ಧನಾತ್ಮಕ ಹಾಗೂ ಹಾಸ್ಯ ದೃಶ್ಯಗಳಿಂದ ಮನಸ್ಸಿಗೆ ಅಂಟಿಕೊಂಡ ಒತ್ತಡ ನಿವಾರಣೆಯಾಗಲು ಸಾಧ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ತುಳು ನಾಟಕ ಮತ್ತು ಚಲನಚಿತ್ರ ಕಲಾವಿದ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ 1 ಲಕ್ಷ ರೂ. ಮೊತ್ತದ ಪ್ರತಿಷ್ಠಿತ ವಿಶ್ವಪ್ರಭಾ ಪುರಸ್ಕಾರ ನೀಡಿ ಮಾತನಾಡಿದರು.
ಯಾವುದೇ ಪಾತ್ರವನ್ನು ಅಭಿನಯಿಸಬಲ್ಲ ನಿಪುಣ: ಶಶಿರಾಜ್ ಕಾವೂರು
ಮಂಗಳೂರಿನ ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾ ಮಾತುಗಳನ್ನಾಡಿ, ನವೀನ್ ಅವರು 10ನೇ ತರಗತಿಯಲ್ಲಿದ್ದಾಗಲೇ ಬಣ್ಣ ಹಚ್ಚಿ ರಂಗಭೂಮಿಗೆ ಬಂದವರು. 40 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಅವರು 25-30ರ ಪ್ರಾಯದಲ್ಲಿದ್ದಾಗ ವೃದ್ಧನ ಪಾತ್ರವನ್ನೇ ನಿರ್ವಹಿಸಿದ್ದರು. 40-45ರ ಪ್ರಾಯದ ಬಳಿಕ ನಾಯಕನ ಪಾತ್ರ ಮಾಡತೊಡಗಿದರು. ಹೀಗೆ ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ಅಭಿನಯಿಸಬಲ್ಲ ಪರಿಪೂರ್ಣ ಹಾಗೂ ನೈಪುಣ್ಯತೆಯ ಕಲಾವಿದರಾಗಿದ್ದಾರೆ ಎಂದರು.
ವಿಶ್ವಪ್ರಭಾ ಎಂದರೆ ಪ್ರಪಂಚಕ್ಕೆ ಬೆಳಕು: ನವೀನ್ ಡಿ ಪಡೀಲ್
ಪ್ರಶಸ್ತಿ ಸ್ವೀಕರಿದ ನವೀನ್ ಡಿ ಪಡೀಲ್ ಮಾತನಾಡಿ, ವಿಶ್ವಪ್ರಭಾ ಎಂದರೆ ಪ್ರಪಂಚಕ್ಕೆ ಬೆಳಕು ನೀಡುವುದು ಎಂದರ್ಥ. ಸೂರ್ಯದೇವನು ಹೇಗೆ ಸಮಸ್ತ ವಿಶ್ವಕ್ಕೆ ಬೆಳಕು ನೀಡುತ್ತಾನೆಯೋ ಅದರಂತೆ ಇಂತಹ ಪ್ರಶಸ್ತಿಗಳು ಕಲಾವಿದರ ಬಾಳಿಗೆ ಬೆಳಕು ನೀಡುತ್ತಾರೆ. ವಿಶ್ವಪ್ರಭಾ ಪ್ರಶಸ್ತಿಯು ಉಡುಪಿಯಿಂದ ನನಗೆ ಲಭಿಸುತ್ತಿರುವ ನೊಬೆಲ್ ಪ್ರಶಸ್ತಿ ಇದಾಗಿದೆ.
ಅಪಾರ ಕಷ್ಟ-ನಷ್ಟ, ದು:ಖ-ದುಗುಡ ಅನುಭವಿಸಿದವ ಮಾತ್ರ ಉತ್ತಮ ಕಲಾವಿದನಾಗಬಲ್ಲ. ನಾನಿಂದು ಯಶಸ್ವಿ ಕಲಾವಿದನಾಗಲು ಅಭಿಮಾನಿಗಳ ಪ್ರೋತ್ಸಾಹ, ಸಹಕಾರವೇ ಕಾರಣ. ಭಜನೆ ಬಸಪ್ಪ ಎಂಬ ಪಾತ್ರ ನನಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ನಾನೀಗ ಹಾಸ್ಯಕ್ಕಿಂತ ಗಂಭೀರ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದೇನೆ ಎಂದರು.
ತುಳು ರಂಗಭೂಮಿಯಿಂದಾಗಿ ತುಳು ಭಾಷೆಯ ಅಭಿವೃದ್ಧಿ: ಪೂರ್ಣಿಮಾ
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ತುಳು ರಂಗಭೂಮಿಯಿಂದಾಗಿ ತುಳು ಭಾಷೆಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪೂರಕವಾಯಿತು. ಪಡೀಲ್ ಅವರಂತಹ ಅನೇಕ ತುಳು ಕಲಾವಿದರು ರಂಗಭೂಮಿಯ ಶ್ರೇಷ್ಠತೆ ಹೆಚ್ಚಿಸಿದರು. ಹಾಸ್ಯದ ಪಾತ್ರ ನಿಭಾಯಿಸುವುದು, ಜನರನ್ನು ನಗೆಗಡಲಲ್ಲಿ ತೇಲಿಸುವುದು ಅಷ್ಟು ಸುಲಭವಲ್ಲ.
ಆದರೆ, ಕಲಾವಿದ ಪಡೀಲ್ ಅವರು ಹಾಸ್ಯ ಪಾತ್ರ ನಿಭಾಯಿಸುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಕುಡುಕನ ಪಾತ್ರವನ್ನು ಮನೋಜ್ಞನವಾಗಿ ಅಭಿನಯಿಸಿ ಜನರ ಮನ ಸೆಳೆಯುತ್ತಾರೆ ಎಂದರು.
ತುಳು ನಾಟಕಗಳ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ಮಧುಸೂದನ್ ಹೇರೂರು, ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ, ಜನಾರ್ದನ್ ಕೊಡವೂರ್, ರಾಘವೇಂದ್ರ ಪ್ರಭು ಕರ್ವಾಲ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಪುರಸ್ಕಾರದ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಸಾಧನೆಗೈದ ಸದಸ್ಯರನ್ನು ಗುರುತಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಿಘ್ನೇಶ್ವರ ಅಡಿಗ ಅಭಿನಂದನಾ ಪತ್ರ ವಾಚಿಸಿದರು.